ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮರಣೆ ಸಾಧನೆಗೆ ಪ್ರೇರಣೆಯಾಗಲಿ

ಶರಣ ಸಂಸ್ಕೃತಿ ಉತ್ಸವದ ಪೂರ್ವ ಸಿದ್ಧತಾ ಸಮಾಲೋಚನಾ ಸಭೆಯಲ್ಲಿ ಮುರುಘಾಶ್ರೀ
Last Updated 5 ಡಿಸೆಂಬರ್ 2019, 9:23 IST
ಅಕ್ಷರ ಗಾತ್ರ

ದಾವಣಗೆರೆ: ಶರಣರನ್ನು, ಸಂತರನ್ನು, ದಾರ್ಶನಿಕರನ್ನು, ಸಾಧಕರನ್ನು ಸ್ಮರಣೆ ಮಾಡುವುದು ಒಂದು ಹಂತ. ಈ ಸ್ಮರಣೆ ನಮ್ಮ ಬದುಕಿಗೆ ಪ್ರೇರಣೆಯಾಗಬೇಕು. ಪ್ರೇರಣೆಯು ಸಾಧನೆಗೆ ಮಾರ್ಗವಾಗಬೇಕು’ ಎಂದು ಚಿತ್ರದುರ್ಗ ಮುರುಘಾಮಠದ ಶಿವಮೂರ್ತಿ ಮುರುಘಾಶರಣರು ಹೇಳಿದರು.

ಇಲ್ಲಿನ ಬಸವಕೇಂದ್ರದ ಶಿವಯೋಗಾಶ್ರಮದಲ್ಲಿ ಬುಧವಾರ ನಡೆದ ಜಯದೇವ ಮುರುಘರಾಜೇಂದ್ರ ಸ್ವಾಮೀಜಿಯ 63ನೇ ಸ್ಮರಣೋತ್ಸವ ಹಾಗೂ ಶರಣ ಸಂಸ್ಕೃತಿ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಆಧುನಿಕ ಮನುಷ್ಯ ಸುಖದ ಅನ್ವೇಷಕ ಆಗಿದ್ದಾನೆ. ಆದರೆ ಶರಣರು, ದಾರ್ಶನಿಕರು ಹೊಸ ಮಾರ್ಗದ ಅನ್ವೇಷಕರು ಆಗಿದ್ದರು. ಹಾಗಾಗಿ ಅವರೆಲ್ಲ ಮಾರ್ಗದರ್ಶಕರು. ಸಾದಾ ಬದುಕು ಸಾಧನೆಯ ಬದುಕಾಗಿ ಮಾಡಿಕೊಂಡರೆ ವ್ಯಕ್ತಿತ್ವ ಉನ್ನತಗೊಳ್ಳುತ್ತದೆ. ಸಾಧನೆಯಿಂದ ಸಿದ್ಧಿ ಸಿದ್ಧಿಸುತ್ತದೆ ಎಂದು ವಿಶ್ಲೇಷಣೆ ಮಾಡಿದರು.

ಎಲ್ಲೋ ಒಬ್ಬರು ಸಾಧಕರಾದರೆ ಸಾಲದು. ಮನೆ ಮನೆಯಲ್ಲಿ ಸಾಧಕರು ಮೂಡಿಬರಬೇಕು ಎಂದು ಹಾರೈಸಿದರು.

ಶರಣ ಸಂಸ್ಕೃತಿಯ ಬಳಿಕ ಫೆ.16ರಂದು ಬೆಂಗಳೂರಿನ ನಂದಿ ಮೈದಾನದಲ್ಲಿ ಶಿವಯೋಗ ಸಂಭ್ರಮ, ಅಸಂಖ್ಯ ಪ್ರಮಥ ಗಣಮೇಳ ಹಾಗೂ ಸರ್ವ ಶರಣರ ಸಮ್ಮೇಳನ ನಡೆಯಲಿದೆ. ಎಲ್ಲರೂ ಭಾಗವಹಿಸಬೇಕು ಎಂದು ಕೋರಿದರು.

ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ‘ಮುಂದಿನ ಜನವರಿ 10, 11 ಮತ್ತು 12ರಂದು ಜಯದೇವಶ್ರೀಗಳ ಸ್ಮರಣೋತ್ಸವ, ಶರಣ ಸಂಸ್ಕೃತಿ ಉತ್ಸವ, ಸಹಜ ಶಿವಯೋಗ ಸಂಭ್ರಮವನ್ನು ದಾವಣಗೆರೆ ಬಸವಕೇಂದ್ರದ ಶಿವಯೋಗಾಶ್ರಮದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುವುದು’ ಎಂದು ಮಾಹಿತಿ ನೀಡಿದರು.

‘ಮನುಷ್ಯನಲ್ಲಿ ಹಣ, ಆಸ್ತಿ ಎಲ್ಲವೂ ಇದೆ. ಆದರೆ ಶಾಂತಿ, ನೆಮ್ಮದಿ ಇಲ್ಲ. ಮಹಾತ್ಮರ ಸ್ಮರಣೆಯಿಂದ, ಅವರ ಆದರ್ಶಗಳನ್ನು ಅಳವಡಿಸಿಕೊಳ್ಳುವುದರಿಂದ ಶಾಂತಿ ಪಡೆಯಲು ಸಾಧ್ಯ. ಆಲೋಚನೆಗಳನ್ನು ಶುದ್ಧೀಕರಿಸಿದರೆ, ಸತ್‌ಚಿಂತನೆ ಮಾಡಿದರೆ ಶರಣರಾಗುತ್ತೇವೆ’ ಎಂದರು.

ಮಾಜಿ ಶಾಸಕ ಯಜಮಾನ್‌ ಮೋತಿ ವೀರಣ್ಣ ಉಪಸ್ಥಿತರಿದ್ದರು. ಕಾರ್ಮಿಕ ಮುಖಂಡ ಎಚ್‌.ಕೆ. ರಾಮಚಂದ್ರಪ್ಪ ಉಪಸ್ಥಿತರಿದ್ದರು. ಅಂದನೂರು ಮುಪ್ಪಣ್ಣ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT