ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತತ್ವಜ್ಞಾನ ಬಾಯಲಲ್ಲ, ಬದುಕಲ್ಲಿರಲಿ: ವಿರಕ್ತಮಠದ ಬಸವಪ್ರಭು ಸ್ವಾಮೀಜಿ

Last Updated 4 ಮಾರ್ಚ್ 2021, 2:59 IST
ಅಕ್ಷರ ಗಾತ್ರ

ದಾವಣಗೆರೆ: ತತ್ವಜ್ಞಾನವನ್ನು ಬಾಯಲ್ಲಿ ಹೇಳುವ ಬದಲು ಬದುಕಲ್ಲಿ ಅಳವಡಿಸಿಕೊಳ್ಳಬೇಕು. ಆಗ ಆತ ಶರಣನಾಗುತ್ತಾನೆ. ಮಹಾತ್ಮನಾಗುತ್ತಾನೆ ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.

ದೈನಂದಿನ ಜೀವನ ಮತ್ತು ತತ್ವಜ್ಞಾನದ ಬಗ್ಗೆ ಇಲ್ಲಿನ ಬಸವಕೇಂದ್ರ ಶಿವಯೋಗಾಶ್ರಮದಲ್ಲಿ ಬುಧವಾರ ನಡೆದ ಶರಣ ಸಂಗಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಾತುಗಳಲ್ಲಿ ಆದರ್ಶ, ಆಚರಣೆಯಲ್ಲಿ ಇಲ್ಲದೇ ಇದ್ದರೆ ಅವರನ್ನು ಆಷಾಢಭೂತಿಗಳು ಎಂದು ಕರೆಯಲಾಗುತ್ತದೆ. ಬದುಕಿನಲ್ಲಿ ಆದರ್ಶಗಳನ್ನು ಅಳವಡಿಸಿಕೊಂಡು ದಾರ್ಶನಿಕರಾಗಿರುವ ಬಸವಣ್ಣ, ಬಸವಣ್ಣ, ಏಸು, ಪೈಗಂಬರ್‌ ಎಲ್ಲರೂ ತತ್ವನಿಷ್ಠರು ಎಂದರು.

ದಯೆ, ಪ್ರೀತಿ, ಪ್ರೇಮ, ಸತ್ಯ,ವಿನಯ, ತ್ಯಾಗ, ಭಕ್ತಿ, ದಾಸೋಹ,ಕಾಯಕ, ಸಮಾನತೆ ಇವು ಎಲ್ಲವೂಒಂದೊಂದು ತತ್ವಗಳು. ದೊಡ್ಡವರಾಗಬೇಕು ಎಂಬ ಹಂಬಲದಿಂದ ಯಾರೂ ದೊಡ್ಡವರಾಗುವುದಿಲ್ಲ. ತತ್ವಗಳನ್ನು, ಒಳ್ಳೆಯ ಗುಣಗಳನ್ನು ಅಳವಡಿಸಿಕೊಂಡವರು ದೊಡ್ಡವಾಗುತ್ತಾರೆ ಎಂದು ತಿಳಿಸಿದರು.

ಉಪನ್ಯಾಸ ನೀಡಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಸದಸ್ಯೆ ಜ್ಯೋತಿ ರಾಧೇಶ ಜಂಬಗಿ, ‘ದುಡಿದು ಉಣ್ಣುವವನೇ ಆ ಸಂಪತ್ತಿನ ಮಾಲೀಕ ಎಂದು 19ನೇ ಶತಮಾನದಲ್ಲಿ ಕಾರ್ಲ್‌ಮಾರ್ಕ್ಸ್‌ ಎಂಬ ತತ್ವಜ್ಞಾನಿ ಹೇಳಿದ್ದರು. ಅದನ್ನು 12ನೇ ಶತಮಾನದಲ್ಲಿಯೇ ಬಸವಾದಿ ಶರಣರು ತಿಳಿಸಿದ್ದರು. 770 ಮಂದಿ ಶರಣ, ಶರಣೆಯರು ಇದ್ದ ಅನುಭವ ಮಂಟಪವೇ ಮೊದಲ ಸಂಸತ್ತು. ಅದೇ ಮೊದಲ ಪ್ರಜಾಪ್ರಭುತ್ವವೂ ಆಗಿತ್ತು’ ಎಂದರು ಹೇಳಿದರು.

ಹೆಲ್ಪ್‌ಲೈನ್‌ ಸಂಸ್ಥೆಯ ಸುಭಾನ್‌ ಸಾಬ್‌ ನದಾಫ್‌ ಆರ್‌.ಡಿ., ‘ಶೇಂಗಾ ಮಾರುವವ, ಪಂಚರ್‌ ಹಾಕುವವನಿಂದ ಹಿಡಿದು ದೊಡ್ಡ ದೊಡ್ಡ ಕಂಪನಿಗಳವರೆಗೆ ಎಲ್ಲರೂ ತಮ್ಮ ತಮ್ಮ ಶಕ್ತ್ಯಾನುಸಾರ ಮೋಸ ಮಾಡುತ್ತಾರೆ. ಎಲ್ಲ ಕಡೆ ಭ್ರಷ್ಟಾಚಾರ ಇದೆ. ವ್ಯವಹಾರದಲ್ಲಿ ಸ್ವಲ್ಪ ಮೋಸ ಇರುತ್ತದೆ. ಮೋಸವೇ ವ್ಯವಹಾರವಾಗಬಾರದು’ ಎಂದು ಕಿವಿಮಾತು ಹೇಳಿದರು.

ತಹಶೀಲ್ದಾರ್‌ ಗಿರೀಶ್‌, ‘ನಮಗೆ ಏನು ಬೇಕೋ ಅದನ್ನು ಇಟ್ಟುಕೊಳ್ಳದೇ ಏನು ಬೇಡವೋ ಅದನ್ನೇ ತಲೆಗೆ ತುಂಬಿಕೊಂಡು ಜೀವನ ಹಾಳು ಮಾಡಿಕೊಳ್ಳುವವರ ಸಂಖ್ಯೆ ಜಾಸ್ತಿಯಾಗಿದೆ. ಸರಿಯಾದ ವಿಮರ್ಶೆಗಳಿಗೆ ಒಗ್ಗಿಕೊಳ್ಳಿ. ಅದನ್ನು ಬಿಟ್ಟು ಕಂಡವರ ಮಾತಿಗೆ ತಲೆಬಿಸಿ ಮಾಡಿಕೊಳ್ಳಬೇಡಿ. ಸುಂದರ ಜೀವನವನ್ನು, ಸಂತೋಷದ ಕ್ಷಣಗಳನ್ನು ಹಾಳು ಮಾಡಿಕೊಳ್ಳಬೇಡಿ’ ಎಂದು ಸಲಹೆ ನೀಡಿದರು.

ರುದ್ರಾಕ್ಷಿಬಾಯಿ, ರುಕ್ಮಬಾಯಿ ವಚನ ಗಾಯನ ಮಾಡಿದರು. ಬಸವ ಕಲಾಲೋಕದ ಸದಸ್ಯರಿಂದ ವಚನ ಸಂಗೀತ ನಡೆಯಿತು. ಶರಣಬಸವ ಸ್ವಾಗತಿಸಿದರು. ಟಿ. ಮಹಾಲಿಂಗೇಶ್ವರ ವಂದಿಸಿದರು. ರುಕ್ಮಿಣಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT