ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿನಾಟಕ ಕಲಾವಿದರು ಮತ್ತೆ ಹೋರಾಟಕ್ಕೆ ಇಳಿಯಲಿ

ಭಾರತೀಯ ಜನಾಕಲಾ ಸಂಸ್ಥೆಯ ರಾಜ್ಯ ಸಂಸ್ಥಾಪಕ ಡಾ.ಸಿದ್ದನಗೌಡ ಪಾಟೀಲ
Last Updated 15 ಜುಲೈ 2019, 19:46 IST
ಅಕ್ಷರ ಗಾತ್ರ

ದಾವಣಗೆರೆ: ಸರ್ಕಾರದ ಯೋಜನೆಗಳ ಅರಿವನ್ನು ಜನರಿಗೆ ಮುಟ್ಟಿಸಲಷ್ಟೇ ಬೀದಿನಾಟಕ ಸೀಮಿತಗೊಳ್ಳಬಾರದು. ಪ್ರತಿಭಟನಾ ಧ್ವನಿಯಾಗಿ ಬೀದಿನಾಟಕ ಹುಟ್ಟಿಕೊಂಡಿತು ಎಂಬುದನ್ನು ಮರೆಯಬಾರದು. ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಮತ್ತು ತುರ್ತು ಪರಿಸ್ಥಿತಿಯ ಕಾಲದಲ್ಲಿ ಹಮ್ಮಿಕೊಂಡಿದ್ದ ವೈಚಾರಿಕ ಹೋರಾಟವನ್ನು ಈಗ ಮತ್ತೆ ನಡೆಸಬೇಕಾದ ಕಾಲ ಬಂದಿದೆ ಎಂದು ಭಾರತೀಯ ಜನಾಕಲಾ ಸಂಸ್ಥೆಯ ರಾಜ್ಯ ಸಂಸ್ಥಾಪಕ ಡಾ.ಸಿದ್ದನಗೌಡ ಪಾಟೀಲ ಹೇಳಿದರು.

ಇಲ್ಲಿನ ಪಾಲಿಕೆ ಆವರಣದಲ್ಲಿ ಕರ್ನಾಟಕ ರಾಜ್ಯ ಬೀದಿ ನಾಟಕ ಕಲಾ ತಂಡಗಳ ಒಕ್ಕೂಟದ ಜಿಲ್ಲಾ ಮಂಡಳಿಯಿಂದ ಹಮ್ಮಿಕೊಂಡಿದ್ದ ‘ಬೀದಿ ನಾಟಕ ಕಲಾವಿದರ ಸಮಸ್ಯೆಗಳು ಮತ್ತು ಪರಿಹಾರ’ ಅಧ್ಯಯನ ಶಿಬಿರದ ಸಮಾರೋಪದಲ್ಲಿ ಅವರು ಮಾತನಾಡಿದರು.

ದೇಶವು ಕಲ್ಯಾಣ ರಾಜ್ಯ ಹೋಗಿ ಕಂಪನಿ ರಾಜ್ಯವಾಗುತ್ತಿದೆ. ಸರ್ಕಾರಿ ಸಂಸ್ಥೆಗಳು ಖಾಸಗೀಕರಣಗೊಳ್ಳುತ್ತಿವೆ. ಇದರ ವಿರುದ್ಧ ಜನಜಾಗೃತಿ ಉಂಟು ಮಾಡಬೇಕಿದೆ ಎಂದು ಅವರು ತಿಳಿಸಿದರು.

ಅನಾಚಾರ, ಭ್ರಷ್ಟಾಚಾರ, ಅತ್ಯಾಚಾರಗಳ ವಿರುದ್ಧ ಧ್ವನಿ ಎತ್ತುತ್ತಾ, ಜನರ ನೋವಿನ ಧ್ವನಿಯಾಗಿ 45 ವರ್ಷಗಳಿಂದ ಬೀದಿನಾಟಕ ಕಲಾವಿದರು ಕೆಲಸ ಮಾಡಿಕೊಂಡು ಬಂದಿದ್ದಾರೆ. 1990ರ ಹೊತ್ತಿಗೆ ಸಾಕ್ಷರತಾ ಆಂದೋಲನದ ಸಂದರ್ಭದಲ್ಲಿ ಸರ್ಕಾರ ಜನರನ್ನು ತಲುಪಲು ಇದೇ ಮಾಧ್ಯಮವನ್ನು ಬಳಸಿಕೊಂಡಿತು ಎಂದು ನೆನಪಿಸಿಕೊಂಡರು.

ಹಿಂದಿನ ಕಾಲದಲ್ಲಿ ರಾಜರು ಕುಡಿಯುವ ನೀರಿಗಾಗಿ ಅರವಟ್ಟಿಗೆ ಕಟ್ಟಿಸಿ ಜನರಿಗೆ ಅನುಕೂಲ ಮಾಡುತ್ತಿದ್ದರು. ಈಗ ನಮ್ಮದೇ ನೆಲದ ನೀರನ್ನು ವಿದೇಶಿ ಕಂಪನಿಗಳ ಹೆಸರಲ್ಲಿ ನಮಗೇ ಮಾರಾಟ ಮಾಡಲಾಗುತ್ತಿದೆ. ಮುಂದೆ ನೀರನ್ನು ಚಮಚದ ಮೂಲಕ ನೀರು ಕುಡಿಯುವ ಪರಿಸ್ಥಿತಿ ಬರಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ದೇಶದ ಮಹಾ ನಗರಗಳಲ್ಲಿ ನೀರು, ಅಹಾರ, ಗಾಳಿ ಭೂಮಿ, ಆಕಾಶ ಕಲುಷಿತಗೊಂಡಿದ್ದು, ಮುಂದಿನ ದಿನಗಳಲ್ಲಿ ಆಮ್ಲಜನಕ ಖರೀದಿಸುವ ದಿನಗಳು ಎದುರಾಗಲಿದೆ ಎಂದು ಎಚ್ಚರಿಸಿದರು.

ಪಾಲಿಕೆ ಆಯುಕ್ತ ಮಂಜುನಾಥ ಬಳ್ಳಾರಿ ಮಾತನಾಡಿ, ‘ಬೀದಿನಾಟಕ ಎಲ್ಲರಿಗೂ ಇಷ್ಟ. ಗಾಳಿ, ನೀರು, ಪ್ರಕೃತಿ ಬಗ್ಗೆ ಬೀದಿ ನಾಟಕಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಎಲ್ಲರೂ ಮಳೆ ನೀರು ಸಂಗ್ರಹ ಮಾಡಬೇಕು. ನೀರಿನ ಕೊರತೆ ಉಂಟಾಗದಂತೆ ಮಾಡಬೇಕು’ ಎಂದು ಸಲಹೆ ನೀಡಿದರು.

ಕಲಾತಂಡದ ಸದಸ್ಯರು ಜಾಗೃತಿ ಗೀತೆ ಹಾಡಿದರು. ‘ಮಹಿಳಾ ಸಬಲೀಕರಣ’, ‘ನಮ್ಮ ನೆಲ’ ಬೀದಿ ನಾಟಕ ಪ್ರದರ್ಶಿಸಿದರು.

ನಾಟಕಕಾರ ಡಾ. ರಾಜಪ್ಪ ದಳವಾಯಿ, ಕಾರ್ಮಿಕ ಮುಖಂಡರಾದ ಎಚ್.ಕೆ. ರಾಮಚಂದ್ರಪ್ಪ, ಅವರಗೆರೆ ಎಚ್.ಜಿ. ಉಮೇಶ್, ಆರ್.ಟಿ. ಅರುಣ್‌ಕುಮಾರ್, ಕಗೆತ್ತೂರು ಮಲ್ಲೇಶಪ್ಪ, ರೇವಣ್ಣ ನಾಯ್ಕ್‌, ಕೆ. ಬಾನಪ್ಪ, ಲೋಕಿಕೆರೆ ಅಂಜಿನಪ್ಪ, ಐರಣಿ ಚಂದ್ರು, ಓಬಪ್ಪ, ಶಂಕರ್ ಅಲಗತ್ತಿ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT