ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಶೋಧನೆಗಳು ಅನ್ನದಾತನಿಗೆ ನೆರವಾಗುವಂತಿರಲಿ

ದಾವಣಗೆರೆ ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ನಿರಂಜನಮೂರ್ತಿ
Last Updated 5 ಮಾರ್ಚ್ 2021, 4:05 IST
ಅಕ್ಷರ ಗಾತ್ರ

ದಾವಣಗೆರೆ: ‘ವಿಪರೀತವಾದ ರಸಗೊಬ್ಬರ ಮತ್ತು ಕೀಟನಾಶಕಗಳ ಬಳಕೆಗಳಿಂದ ಭೂಮಿ ಬರಡಾಗುತ್ತಿದೆ.ನಮ್ಮ ಬದುಕನ್ನು ದುರ್ಬಲಗೊಳಿಸುವಂತಹ ಯಾವುದೇ ಸಂಶೋಧನೆ ನಮಗೆ ಬೇಡ. ವಿಜ್ಞಾನದ ಸಂಶೋಧನೆಗಳು, ಆವಿಷ್ಕಾರಗಳು ಅನ್ನದಾತನಿಗೆ ನೆರವಾಗುವಂತಿರಬೇಕು’ ಎಂದು ದಾವಣಗೆರೆ ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ನಿರಂಜನಮೂರ್ತಿ ಹೇಳಿದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಗರದ ಸಿದ್ಧಗಂಗಾ ಪ್ರೌಢಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ದಾವಣಗೆರೆ ಜಿಲ್ಲಾ ಮಟ್ಟದ ಸರ್‌ ಸಿ.ವಿ. ರಾಮನ್‌ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಭೂಮಿಗೆ ಜ್ವರ ಬಂದರೆ ನಾವು ಉಳಿಯುವುದು ಹೇಗೆ? ಪರಿಸರದ ಉಳುವಿಗಾಗಿ ಅನ್ವೇಷಣೆ ಮಾಡುವ ವಿಜ್ಞಾನ ಸಾರ್ಥಕತೆ ಪಡೆಯುತ್ತದೆ. ನಮ್ಮ ದೇಶದ ವಿಜ್ಞಾನಿಗಳು ಕೋವಿಡ್‌ಗೆ ಲಸಿಕೆ ಸಂಶೋಧಿಸುವಲ್ಲಿ ಯಶಸ್ವಿಯಾಗಿದ್ದು, ಶೀಘ್ರ ಲಸಿಕೆ ಕಂಡುಹಿಡಿದ ರಾಷ್ಟ್ರಗಳಲ್ಲಿ ಭಾರತವು ಒಂದು ಎಂಬುದು ಹೆಮ್ಮೆ’ ಎಂದು ಹೇಳಿದರು.

‘ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಜನರು ಹಸಿವು, ಬಡತನದಿಂದ ನರಳುತ್ತಿದ್ದರು. ಸ್ವಾತಂತ್ರ್ಯಾ ನಂತರವೂ ಆಹಾರದ ಕೊರತೆ ಮುಂದುವರಿಯಿತು. ದೇಶದ ವಿಜ್ಞಾನಿಗಳ ಪರಿಶ್ರಮದಿಂದ, ಹಸಿರು ಕ್ರಾಂತಿಯ ಪರಿಣಾಮವಾಗಿ ಭಾರತ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿತು. ಇದರಿಂದ ದೇಶದ ಆಹಾರದ ಕೊರತೆ ನೀಗಿತು. ಪ್ರಪಂಚದ ಬೇರೆ ದೇಶಗಳಿಗೆ ಆಹಾರ ರಫ್ತು ಮಾಡುವ ಹಂತಕ್ಕೆ ಬಂದು ತಲುಪಿರುವುದು ನಮ್ಮ ವಿಜ್ಞಾನಿಗಳ ಸಾಧನೆ. ಹೈನುಗಾರಿಕೆಯಿಂದ ಹಾಲು ಉತ್ಪಾದನೆಯ ಪ್ರಮುಖ ರಾಷ್ಟ್ರಗಳಲ್ಲಿ ಭಾರತವು ಒಂದಾಗಿದೆ’ ಎಂದರು.

‘ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿಜ್ಞಾನ ರಸಪ್ರಶ್ನೆ ಮೂಲಕ ಅವರನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಈಗಿನಿಂದಲೇ ಅಣಿಗೊಳಿಸುವ ವಾತಾವರಣವನ್ನು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ನಿರ್ಮಾಣ ಮಾಡುತ್ತಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಖ್ಯಅತಿಥಿ ವಿಜ್ಞಾನ ವಿಷಯ ಪರಿವೀಕ್ಷಕಿ ಆರ್.ಬಿ. ವಸಂತಕುಮಾರಿ, ‘ವಿದ್ಯಾರ್ಥಿಗಳು ಮೂಲ ವಿಜ್ಞಾನವನ್ನು ಅಭ್ಯಾಸ ಮಾಡುವ ಕಡೆ ಗಮನಹರಿಸಬೇಕು. ಇಂದು ಹೊಸ ಕಾಯಿಲೆಗಳು ವೈದ್ಯ ವಿಜ್ಞಾನಿಗಳಿಗೆ ಸವಾಲಾಗಿವೆ. ಕೋವಿಡ್ ಜಗತ್ತನ್ನೇ ತಲ್ಲಣಗೊಳಿಸಿದೆ. ಇಂತಹ ಸನ್ನಿವೇಶದಲ್ಲಿ ವಿಜ್ಞಾನಿಗಳ ಮಾರ್ಗದರ್ಶನ ದೇಶಕ್ಕೆ ಅಗತ್ಯವಾಗಿದೆ. ನಮ್ಮ ವಿದ್ಯಾರ್ಥಿಗಳನ್ನು ಸಂಶೋಧನಾ ರಂಗದತ್ತ ಸೆಳೆಯಲು ಬೇಕಾದ ವಾತಾವರಣವನ್ನು ಶಾಲಾ, ಕಾಲೇಜು, ಶೈಕ್ಷಣಿಕ ಸಂಸ್ಥೆಗಳು, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನಂತಹ ಸಂಸ್ಥೆಗಳು ಕಲ್ಪಿಸಬೇಕು’ ಎಂದು ಸಲಹೆ ನೀಡಿದರು.

ಸಿ.ವಿ. ರಾಮನ್ ರಸಪ್ರಶ್ನೆ ಕಾರ್ಯಕ್ರಮದ ಜಿಲ್ಲಾ ಸಂಚಾಲಕ ಅಂಗಡಿ ಸಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ಧಗಂಗಾ ವಿದ್ಯಾಸಂಸ್ಥೆಯ ಶಿಕ್ಷಕಿ ಎಸ್. ಗಾಯತ್ರಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಕಾರ್ಯದರ್ಶಿ ಎಂ. ಗುರುಸಿದ್ಧಸ್ವಾಮಿ, ಶಿಕ್ಷಕರಾದ ಕೆ.ಸಿ. ಬಸವರಾಜು, ಎಂ. ಬಸವರಾಜಗೌಡ ಇದ್ದರು.

ರಸಪ್ರಶ್ನೆ ಕಾರ್ಯಕ್ರಮದಲ್ಲಿ ಜಿಲ್ಲೆಯ 81 ಪ್ರೌಢಶಾಲೆಗಳ ಮಕ್ಕಳು ಮತ್ತು ಶಿಕ್ಷಕರು ಭಾಗವಹಿಸಿದ್ದರು. ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ರಸಪ್ರಶ್ನೆ ವಿಜೇತರು

ಪ್ರಥಮ ಬಹುಮಾನ: ಪ್ರಥಮ್ ಪಿ. ಪಲ್ನಾಕರ್ ಮತ್ತು ನಿಖಿತ ಎಸ್.ರಾಜ್ (ಶಾಮನೂರು ಪುಷ್ಪ ಮಹಾಲಿಂಗಪ್ಪ ಪ್ರೌಢಶಾಲೆ).

ದ್ವಿತೀಯ ಬಹುಮಾನ: ಯೋಗಪ್ರಿಯ ವೈ.ಇ. ಮತ್ತು ವಿಶ್ವಾಸ ಎಚ್.ಎನ್. (ಕೇಂದ್ರಿಯ ವಿದ್ಯಾಲಯ, ಆವರಗೊಳ್ಳ).

ತೃತೀಯ ಬಹುಮಾನ: ಸೂರ್ಯ ಎಸ್. ಮತ್ತು ವಂಶಿತ ಎಲ್. (ತರಳಬಾಳು ಜಗದ್ಗುರು ಸೆಂಟ್ರಲ್ ಸ್ಕೂಲ್, ದಾವಣಗೆರೆ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT