ಬುಧವಾರ, ಫೆಬ್ರವರಿ 19, 2020
29 °C
ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಉಪ ಕಾರ್ಯದರ್ಶಿ ಸಲಹೆ

ನೇಮಕಗೊಂಡ ನೌಕರರೇ ಕೆಲಸ ಮಾಡಲಿ !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಡಿ ಗ್ರೂಪ್‌ ನೌಕರರಾಗಿ ನೇಮಕಗೊಂಡವರೇ ಕೆಲಸ ಮಾಡಬೇಕು. ಅವರ ಬದಲಿಯಾಗಿ ಮತ್ತೊಬ್ಬರು ಕೆಲಸ ಮಾಡಬಾರದು ಎಂದು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಆನಂದ್‌ ನೀಡಿದ ಸಲಹೆ ಸಂಶಯಕ್ಕೆಡೆ ಮಾಡಿಕೊಟ್ಟಿದೆ.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಯಶೋದಮ್ಮ ಮರುಳಪ್ಪ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಜಿಲ್ಲಾ ಆಯುಷ್‌ ಅಧಿಕಾರಿ ತಮ್ಮ ಇಲಾಖೆಯ ಮಾಹಿತಿ ನೀಡುವಾಗ ಉಪ ಕಾರ್ಯದರ್ಶಿ ಈ ಸಲಹೆ ನೀಡಿದರು. ಆದರೆ ಎಲ್ಲಿ ಈ ರೀತಿ ಬದಲಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಸಭೆಗೆ ಸ್ಪಷ್ಟಪಡಿಸಲಿಲ್ಲ. ‘ಆಯುಷ್‌ ಇಲಾಖೆಗೆಷ್ಟೇ ಸೀಮಿತವಲ್ಲ ಎಲ್ಲ ಇಲಾಖೆಯವರು ಇದನ್ನು ಪಾಲಿಸಬೇಕು’ ಎಂದು ಆನಂದ್‌ ತಿಳಿಸಿದರು.

‘ಜಿಲ್ಲೆಯಲ್ಲಿರುವ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ನಿಮ್ಮ ವೈದ್ಯರು ಅವರಿಗೆ ಸೂಚಿಸಿದ ಸಮಯದಲ್ಲಿ ಇರಬೇಕು. ನಾವು ಭೇಟಿ ನೀಡಿದಾಗ ಬಹುತೇಕ ಕಡೆಗಳಲ್ಲಿ ಇರಲಿಲ್ಲ’ ಎಂದು ಆಯುಷ್‌ ಅಧಿಕಾರಿಗೆ ಉಪಕಾರ್ಯದರ್ಶಿ ಸೂಚಿಸಿದರು.

ಎಲ್ಲಾ ಇಲಾಖೆಯವರು ತಮ್ಮ ಇಲಾಖೆಗೆ ಬಂದಿರುವ ಅನುದಾನವನ್ನು ಮಾರ್ಚ್‌ 15ರ ಒಳಗೆ ಖರ್ಚು ಮಾಡಬೇಕು. ಅನುದಾನ ವಾಪಸ್‌್ ಆಗದಂತೆ ಕೂಡಲೇ ಕ್ರಮ ವಹಿಸಬೇಕು. ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು ಎಂದು ಅಧ್ಯಕ್ಷೆ ಯಶೋದಮ್ಮ ಮರುಳಪ್ಪ ಅಧಿಕಾರಿಗಳಿಗೆ ಸೂಚಿಸಿದರು.

‘ವಸತಿನಿಲಯಗಳಿಗೆ ಭೇಟಿ ನೀಡಿದ್ದೇನೆ. ಕೆಲವೆಡೆ ಮಂಚವಿದ್ದರೆ ಹಾಸಿಗೆ ಇಲ್ಲ. ಸ್ವಚ್ಛತೆಯ ಕೊರತೆ ಕಂಡು ಬರುತ್ತದೆ. ಸಂಬಂಧಿಸಿದ ಅಧಿಕಾರಿಗಳು ವಾರ್ಡ್‌ನ್‌ಗಳಿಗೆ ಸೂಚಿಸಿ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಿಕೊಡಬೇಕು’ ಎಂದರು.

‘ನಮ್ಮಲ್ಲಿ 20 ಎಕರೆ ಗೋಮಾಳ, ಪಕ್ಕದ ಗ್ರಾಮದಲ್ಲಿ 10 ಎಕರೆ ಗೋಮಾಳ ಇದೆ. ಇಲ್ಲಿ ಗಿಡಗಳನ್ನು ನೆಡುವಂತೆ ಅರಣ್ಯ ಇಲಾಖೆಗೆ ಮೂರು ವರ್ಷಗಳಿಂದ ಸೂಚಿಸುತ್ತಾ ಬಂದರೂ ಅಧಿಕಾರಿಗಳು ಕಿವಿಗೆ ಹಾಕಿಕೊಳ್ಳುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಶೌಚಾಲಯ ನಿರ್ಮಿಸಿ: ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳು ಶೌಚಾಲಯ ಇಲ್ಲದ ಮನೆಗಳಿಗೆ ಭೇಟಿ ನೀಡಬೇಕು. ಶೌಚಾಲಯ ಕಟ್ಟಿಕೊಳ್ಳಲು ಮನವೊಲಿಸಬೇಕು. ಬಯಲು ಶೌಚಮುಕ್ತ ಜಿಲ್ಲೆ ಎಂಬ ಹೆಸರಿದೆ. ಜನಗಣತಿ ಮುಂದೆ ಇರುವುದರಿಂದ ಶೌಚಾಲಯ ಇಲ್ಲ ಎಂಬ ಮಾಹಿತಿ ಬಂದರೆ ತಪ್ಪು ಸಂದೇಶ ರವಾನೆಯಾಗುತ್ತದೆ. ಹಾಗಾಗಿ 15 ದಿವಸಕ್ಕೊಮ್ಮೆ ಭೇಟಿ ನೀಡಿ ಶೌಚಾಲಯ ನಿರ್ಮಿಸುವಂತೆ ಮಾಡಬೇಕು ಎಂದು ಸಿಇಒ ಪದ್ಮ ಬಸವಂತಪ್ಪ ತಿಳಿಸಿದರು.

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಬಹಳಷ್ಟು ಸೌಲಭ್ಯಗಳಿವೆ. ಆದರೆ ಸರಿಯಾದ ಮಾಹಿತಿ ಇಲ್ಲದೇ ಸೌಲಭ್ಯಗಳು ತಲುಪುತ್ತಿಲ್ಲ ಎಂದು ಸಿಇಒ ಬೇಸರ ವ್ಯಕ್ತಪಡಿಸಿದರು.

ಯಾವ ಪ್ರಶ್ನೆಗೂ ಸರಿಯಾಗಿ ಉತ್ತರಿಸದ ಬೇಜವಾಬ್ದಾರಿ ಇಲಾಖೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಲೋಕೇಶ್ವರ ಟೀಕಿಸಿದರು. ಮುಂದಿನ ಸಭೆಗೆ ಬರುವಾಗ ಸರಿಯಾದ ಮಾಹಿತಿಯೊಂದಿಗೆ ಬರುವಂತೆ ಉಪ ಕಾರ್ಯದರ್ಶಿ ಸೂಚಿಸಿದರು.

ಹರಪನಹಳ್ಳಿಯಲ್ಲಿ ಡೆಂಗಿ ಮತ್ತು ಚಿಕೂನ್‌ಗುನ್ಯ ಜಾಸ್ತಿಯಾಗಿರುವ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿದೆ. ಜಿಲ್ಲೆಯಲ್ಲಿ ಅವು ಬಾರದಂತೆ ಎಚ್ಚರವಹಿಸಬೇಕು ಎಂದು ಉಪಕಾರ್ಯದರ್ಶಿ ಅವರು ಡಿಎಚ್‌ಒಗೆ ತಿಳಿಸಿದರು. ನಿಂತ ನೀರಿನಲ್ಲಿ ಉತ್ಪತ್ತಿಯಾಗುವ ಸೊಳ್ಳೆಗಳಿಂದ ಡೆಂಗಿ, ಚಿಕೂನ್‌ಗುನ್ಯ ಬರುತ್ತಿದೆ. ನಿಂತ ನೀರಿನಲ್ಲಿ ಉತ್ಪತ್ತಿಯಾಗುವ ಲಾರ್ವಗಳನ್ನು ಗಪ್ಪಿ ಮೀನು ತಿನ್ನುತ್ತದೆ. ಅದಕ್ಕಾಗಿ ಟ್ಯಾಂಕ್‌ ನಿರ್ಮಿಸಿ ಚಾಲರಿ ಹಾಕಿಸಬೇಕು. ಒಂದು ಟ್ಯಾಂಕಿ ನಿರ್ಮಿಸಿ ಗಪ್ಪಿ ಮೀನು ಬಿಡಲು ಸುಮಾರು ₹25 ಸಾವಿರ ಬೇಕು. ಮೀನುಗಾರಿಕೆ ಇಲಾಖೆಯು ಮೀನು ನೀಡುತ್ತದೆ. ಟ್ಯಾಂಕಿಗೆ ಅನುದಾನ ಬೇಕಾಗಿದೆ ಎಂದು ಡಿಎಚ್‌ಒ ಡಾ. ರಾಘವೇಂದ್ರಸ್ವಾಮಿ ತಿಳಿಸಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್‌, ತೋಟಗಾರಿಕೆ ಉಪ ನರ್ದೇಶಕ ಲಕ್ಷ್ಮಿಕಾಂತ್ ಬೋಮ್ಮನ್ನರ್, ಡಿಡಿಪಿಐ ಪರಮೇಶ್ವರಪ್ಪ, ಜಿಲ್ಲಾ ಸರ್ಜನ್‌ ಡಾ. ನಾಗರಾಜ್‌ ಸಹಿತ ವಿವಿಧ ಇಲಾಖಾಧಿಕಾರಿಗಳು ಮಾಹಿತಿ ನೀಡಿದರು.

ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಫಕೀರಪ್ಪ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ವೀರಶೇಖರಪ್ಪ ಅವರೂ ಇದ್ದರು.

‘ಹೆಚ್ಚು ಡಿಮಾಂಡ್‌ ಮಾಡುತ್ತೀರಂತೆ !’
‘ನಿಮ್ಮ ನಿಗಮದಲ್ಲಿ ಸೌಲಭ್ಯ ಕಲ್ಪಿಸಲು ಫಲಾನುಭವಿಗಳಿಂದ ಹೆಚ್ಚು ಡಿಮಾಂಡ್‌ ಮಾಡಲಾಗುತ್ತಿದೆ ಎಂಬ ಆರೋಪ ಇದೆ’ ಎಂದು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಲೋಕೇಶ್ವರ ಅವರು ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಿಗೆ ನೇರವಾಗಿ ಹೇಳಿದರು.

‘ನಾಲ್ಕೈದು ನಿಗಮಗಳಿಗೆ ಪ್ರಭಾರ ಆಗಿದ್ದೇನೆ. ಯಾವ ನಿಗಮದಲ್ಲಿ’ ಎಂದು ಅಧಿಕಾರಿ ಪ್ರಶ್ನಿಸಿದಾಗ, ‘ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಸಹಿತ ಎಲ್ಲ ಕಡೆ ಇದೇ ಆರೋಪ ಕೇಳಿಬಂದಿದೆ’ ಎಂದು ಲೋಕೇಶ್ವರ ಹೇಳಿದರು. ಹೊರಗುತ್ತಿಗೆಯಲ್ಲಿ ಕೆಲಸ ಮಾಡುವವರು ಇದ್ದಾರೆ. ಯಾರು ಬೇಡಿಕೆ ಇಡುತ್ತಿದ್ದಾರೆ ಎಂಬುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿ ತಿಳಿಸಿದರು. ‘ಹಣಕ್ಕೆ ಹೊರಗುತ್ತಿಗೆ, ಒಳಗುತ್ತಿಗೆ ಎಂಬುದಿಲ್ಲ’ ಎಂದು ಲೋಕೇಶ್ವರ ಮಾರ್ಮಿಕವಾಗಿ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು