ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಲಾಕೃತಿಗಳಲ್ಲಿ ತಮ್ಮತನ ಇರಲಿ’

ದೃಶ್ಯಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ರವೀಂದ್ರ ಎಸ್‌. ಕಮ್ಮಾರ
Last Updated 18 ಡಿಸೆಂಬರ್ 2020, 13:29 IST
ಅಕ್ಷರ ಗಾತ್ರ

ದಾವಣಗೆರೆ: ಯಾವುದೇ ಕಲೆಯಲ್ಲಿ ಕಲಾವಿದರು ತಮ್ಮತನ ಅಳವಡಿಸಿಕೊಳ್ಳಬೇಕು. ಕಲಾಕೃತಿಗಳಲ್ಲಿ ಪ್ರತ್ಯೇಕವಾದ ಶೈಲಿ ಇರಬೇಕು. ಸ್ವಂತಿಕೆಯನ್ನು ಗುರುತಿಸುವುದನ್ನು ರೂಢಿಸಿಕೊಂಡರೆ ಯಶಸ್ಸು ಸಾಧ್ಯ ಎಂದು ದಾವಣಗೆರೆ ದೃಶ್ಯಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ರವೀಂದ್ರ ಎಸ್‌. ಕಮ್ಮಾರ ಹೇಳಿದರು.

ಇಲ್ಲಿನದೃಶ್ಯಕಲಾ ಮಹಾವಿದ್ಯಾಲಯದ ದೃಶ್ಯವಿಶ್ವ ಕಲಾ ಗ್ಯಾಲರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಲಾವಿದೆ ದಾಕ್ಷಾಯಿಣಿ ಕೆ. ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇಂದು ಕಲಾಕೃತಿಗಳಿಗೆ ಹೆಚ್ಚು ಬೇಡಿಕೆ ಇದೆ. ನಗರ ಪ್ರದೇಶಗಳಲ್ಲಿ ಉತ್ತಮ ಅಭಿರುಚಿಯ ಕಲಾಕೃತಿಗಳನ್ನು ಪ್ರೋತ್ಸಾಹಿಸುವ ವರ್ಗ ಇದೆ. ಈ ಬಗ್ಗೆ ಅರಿಯಬೇಕು. ಕಲಾ ಪ್ರಕಾರಗಳಿಗೆ ಮಾರುಕಟ್ಟೆಯಲ್ಲಿರುವ ಬೇಡಿಕೆ ಹಾಗೂ ಮೌಲ್ಯಗಳ ಬಗ್ಗೆಯೂ ಕಲಾವಿದರಿಗೆ ಚಿಂತನೆ ಅಗತ್ಯ ಎಂದು ಅವರು ಕಿವಿಮಾತು ಹೇಳಿದರು.

ಕಲಾ ಪ್ರದರ್ಶನಗಳನ್ನು ಹೆಚ್ಚು ಹೆಚ್ಚು ಆಯೋಜಿಸಲು ಮುಂದಾಗಬೇಕು. ಸಮಸ್ಯೆಗಳು ಇವೆ ಎಂದು ಒಂದು ಅಥವಾ ಎರಡು ಪ್ರದರ್ಶನಗಳಿಗೆ ಕಲಾವಿದರು ಸೀಮಿತವಾಗಬಾರದು ಎಂದು ಹೇಳಿದರು.

ದಾಕ್ಷಾಯಿಣಿ ಅವರ ಕಲಾಕೃತಿಗಳಲ್ಲಿ ವಿಭಿನ್ನವಾದ ಶೈಲಿ ಇದೆ. ಅದನ್ನು ಅವರು ಅರಿತು ಮುಂದುವರಿಸಿಕೊಂಡು ಹೋಗಲಿ. ಯಶಸ್ಸು ಸಿಗಲಿ ಎಂದು ಆಶಿಸಿದರು.

ಪ್ರದರ್ಶನ ಉದ್ಘಾಟಿಸಿದ ಬಿಜಾಪುರದ ಕಲಾವಿದೆ ಚೇತನಾ ರವಿ, ‘ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಒಂದು ವರ್ಷದ ಬಳಿಕ ಕಲಾ ಗ್ಯಾಲರಿಯಲ್ಲಿ ಚಿತ್ರಕಲಾ ಪ್ರದರ್ಶನ ನಡೆಯುತ್ತಿರುವುದು ಸಂತಸ ತಂದಿದೆ. ಕೊರೊನಾ ಕಾರಣ ಆನ್‌ಲೈನ್‌ನಲ್ಲಿ ಪ್ರದರ್ಶನಗಳು ಕಾಣುತ್ತಿದ್ದವು. ಆನ್‌ಲೈನ್‌ಗಿಂತ ನೇರವಾಗಿ ಕಲಾ ಪ್ರದರ್ಶನಗಳು ನಡೆದರೆ ಹೆಚ್ಚು ಆಪ್ತ ಹಾಗೂ ಮನಮುಟ್ಟುತ್ತವೆ’ ಎಂದು ಅಭಿಪ್ರಾಯಪಟ್ಟರು.

ದಾಕ್ಷಾಯಿಣಿ ಅವರಲ್ಲಿ ಪ್ರತಿಭೆ ಇದೆ. ಕಲಾಕೃತಿಗಳಲ್ಲಿ ಹೊಸತನ ಹಾಗೂ ವೈವಿಧ್ಯತೆ ಇದೆ ಅದನ್ನು ಮುಂದುವರಿಸಲಿ ಎಂದು ಹೇಳಿದರು.

ಮುಖ್ಯ ಅತಿಥಿ ಲತಿಕಾ ದಿನೇಶ್‌ ಶೆಟ್ಟಿ, ‘ಪ್ರತಿಯೊಬ್ಬರಲ್ಲೂ ಒಬ್ಬ ಕಲಾವಿದ ಇರುತ್ತಾನೆ. ಅದನ್ನು ಗುರುತಿಸುವ ಮನೋಭಾವ ಇರಬೇಕು. ಕಲಾವಿದರನ್ನು ಪ್ರೋತ್ಸಾಹಿಸುವ ದೃಶ್ಯಕಲಾ ಮಹಾವಿದ್ಯಾಲಯದ ಕಾರ್ಯ ಶ್ಲಾಘನೀಯ’ ಎಂದರು.

ದಾಕ್ಷಾಯಿಣಿ ಅವರ ಶೈಲಿ ಬಿಂಬಿಸುವ ಮೂರ್ತರೂಪದ 30‌ಕ್ಕೂ ಹೆಚ್ಚು ಕಲಾತ್ಮಕ ಕೃತಿಗಳು ಪ್ರದರ್ಶನಗೊಂಡವು.ಪ್ರಕೃತಿಯ ಸೊಬಗನಗನು ಸೆರೆಹಿಡಿದ ಕಲಾಕೃತಿಗಳು ನೋಡುಗರ ಗಮನ ಸೆಳೆದವು.

ಮಹಾವಿದ್ಯಾಲಯದ ಪ್ರಾಧ್ಯಾಪಕ ದತ್ತಾತ್ರೇಯ ಎಂ. ಭಟ್‌ ನಿರೂಪಿಸಿದರು. ಪ್ರಾಧ್ಯಾಪಕ ಶರಣಪ್ಪ ಸ್ವಾಗತಿಸಿದರು. ಹೇಮಲತಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT