ಪ್ರಾಣ ತೆಗೆಯುವ ಮದ್ಯ ಭಾಗ್ಯ ತೊಲಗಿಸಿ

7
ಸಾಣೇಹಳ್ಳಿ ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಗ್ರಹ

ಪ್ರಾಣ ತೆಗೆಯುವ ಮದ್ಯ ಭಾಗ್ಯ ತೊಲಗಿಸಿ

Published:
Updated:
Deccan Herald

ದಾವಣಗೆರೆ: ಜನರಿಗೆ ಸರ್ಕಾರ ಯಾವುದೇ ರೀತಿಯ ಭಾಗ್ಯಗಳನ್ನು ನೀಡದೆ ಹೋದರೂ ಪರವಾಗಿಲ್ಲ. ಪ್ರಾಣ ತೆಗೆಯುವ ಭಾಗ್ಯವನ್ನು ನಿವಾರಣೆ ಮಾಡಬೇಕು ಎಂದು ಸಾಣೇಹಳ್ಳಿ ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಗ್ರಹಿಸಿದರು.

ನಗರದ ಕರುಣಾ ಜೀವ ಕಲ್ಯಾಣ ಟ್ರಸ್ಟ್‌ನಲ್ಲಿ ಬುಧವಾರ ನಡೆದ ಡ್ರಿಂಕ್ಸ್‌, ಡ್ರಗ್ಸ್‌, ಟೊಬ್ಯಾಕೊ ಮುಕ್ತ ದಾವಣಗೆರೆ ಜಿಲ್ಲಾ ಅಭಿಯಾನದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ‘ಸರ್ಕಾರ ಪ್ರಜೆಗಳಿಗೆ ನಾನಾ ಭಾಗ್ಯಗಳನ್ನು ಕಲ್ಪಿಸುವ ಜತೆಗೆ ಕುಡಿವ ಭಾಗ್ಯ ಕಲ್ಪಿಸಿದೆ’ ಎಂದು ಆರೋಪಿಸಿದರು.

ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕಾಗಿ ರಾಜಕಾರಣಿಗಳು ಮನಸ್ಸು ಮಾಡಬೇಕು. ಚುನಾವಣೆ ಸಮಯದಲ್ಲಿ ಮಠಾಧೀಶರ ಬಳಿ ಬಂದಾಗ ಅವರಿಗೆ ಮದ್ಯ ನಿಷೇಧ ಮಾಡಿ ಎಂದು ತಿಳಿಹೇಳುತ್ತೇವೆ. ಆದರೆ, ಅಧಿಕಾರ ಬಂದ ನಂತರ ರಾಜಕಾರಣಿಗಳು ದಪ್ಪ ಚರ್ಮದವರಂತೆ ವರ್ತಿಸುತ್ತಾರೆ ಎಂದು ಟೀಕಿಸಿದರು.

ಮದ್ಯಪಾನಮುಕ್ತ ನಿವಾರಣೆಗಾಗಿ ಮಠಾಧೀಶರು, ವಕೀಲರು ಸಜ್ಜಾಗಬೇಕು. ಸರ್ಕಾರದ ವಿರುದ್ಧ ಹೋರಾಟ ನಡೆಸಬೇಕು. ಇದಕ್ಕಾಗಿ ಸಂಘಟನೆ, ಹೋರಾಟ, ಜಾಗೃತಿ ಅಗತ್ಯ. ಈ ಹಿಂದೆ ನಡೆಸಿದ ಹೋರಾಟದ ಫಲವಾಗಿ ಯಡಿಯೂರಪ್ಪ ಸಾರಾಯಿ ನಿಷೇಧ ಮಾಡಿದರು. ಕೆಲವರು ಇದರಿಂದ ಕುಡಿತ ಹೆಚ್ಚಾಯಿತೆಂದು ವಿರೋಧಿಸಿ ಹೋರಾಟ ನಡೆಸಿದರು ಎಂದು ವಿಷಾಧಿಸಿದರು.

ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಮಾತನಾಡಿ, ‘ಇಳಕಲ್‌ ಮಹಾಂತರ ಪ್ರೇರಣೆಯಿಂದ ವ್ಯಸನಮುಕ್ತ ಸಮಾಜಕ್ಕಾಗಿ ಜಯದೇವ ಶ್ರೀಗಳ ಹೆಸರಿನಲ್ಲಿ ಜೋಳಿಗೆ ಕಾರ್ಯಕ್ರಮ ನಡೆಸಿದೆವು. ಜನರ ಬದಲಾವಣೆಗೆ ಈಗಲೂ ಶ್ರಮಿಸುತ್ತಿದ್ದೇವೆ. ಸ್ನೇಹಿತರ ಸಹವಾಸದಿಂದ ಅನೇಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ’ ಎಂದು ಹೇಳಿದರು.

ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ರಾಜ್ಯ ಸಂಚಾಲಕಿ ರಾಯಚೂರಿನ ಸ್ವರ್ಣ ಭಟ್‌, ‘ಮದ್ಯಪಾನ ಮುಕ್ತ ರಾಜ್ಯವನ್ನಾಗಿ ಮಾಡಲು ಶೀಘ್ರದಲ್ಲಿಯೇ ತುಮಕೂರಿನಿಂದ ಬೆಂಗಳೂರುವರೆಗೂ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು. 20 ಸಾವಿರಕ್ಕೂ ಹೆಚ್ಚು ಮಹಿಳೆಯರು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.

ಬಾರ್‌ ಮುಂದೆ ಬೀದಿ ನಾಟಕವಾಡಿಸಿ

ಜಮಾತ್‌ ಇಸ್ಲಾಂ ಕಾರ್ಯಕರ್ತ ಮನ್ಸೂರ್‌ ಅಹಮದ್‌, ‘ಮನೆಯ ವಾತಾವರಣ ನೋಡಿ ಮಕ್ಕಳು ಅದೇ ರೀತಿ ಮಾಡುತ್ತಿರುವುದು ವಿಷಾಧನೀಯ. ಆದ್ದರಿಂದ ಅವರಲ್ಲಿ ಸಣ್ಣ ವಯಸ್ಸಿನಿಂದಲೇ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಸರ್ಕಾರ ಮದ್ಯಪಾನದಿಂದ ಆಗುವ ತೊಂದರೆಗಳ ಬಗ್ಗೆ ಪಠ್ಯಪುಸ್ತಕಗಳಲ್ಲಿ ರಚಿಸಬೇಕು. ಮದ್ಯದ ಅಂಗಡಿಗಳ ಮುಂದೆ ಬೀದಿ ನಾಟಕಗಳನ್ನು ಪ್ರದರ್ಶಿಸಬೇಕು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಠಾಧೀಶರು, ಮೌಲ್ವಿಗಳು ಕುಡಿತದ ಅನಾಹುತಗಳ ಜಾಗೃತಿ ಮೂಡಿಸಬೇಕು’ ಎಂದು ಹೇಳಿದರು.

ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ, ಯರಗುಂಟೆಯ ಪರಮೇಶ್ವರ ಸ್ವಾಮೀಜಿ, ಜಡೇಸಿದ್ಧ ಶಿವಯೋಗೀಶ್ವರ ಶಾಂತಾಶ್ರಮದ ಶಿವಾನಂದ ಸ್ವಾಮೀಜಿ, ರಾಮಘಟ್ಟದ ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ, ಸಾಮಾಜಿಕ ಕಾರ್ಯಕರ್ತ ಆವರಗೆರೆ ರುದ್ರಮುನಿ, ಶಿವಯೋಗಿ ಹಿರೇಮಠ್‌ ಅವರೂ ಭಾಗವಹಿಸಿದ್ದರು.

ಶೇ 40 - 10 ವರ್ಷಗಳಲ್ಲಿ ಹೆಚ್ಚಾಗಿರುವ ಕುಡುಕರ ಪ್ರಮಾಣ
₹ 11,000 ಕೋಟಿ - ಅಬಕಾರಿ ಇಲಾಖೆಯ 2005ರ ಆದಾಯ ಗುರಿ
₹ 18,000 ಕೋಟಿ - ಅಬಕಾರಿ ಇಲಾಖೆಯ ಪ್ರಸ್ತುತ ಆದಾಯ ಗುರಿ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !