ಭಾನುವಾರ, ಸೆಪ್ಟೆಂಬರ್ 19, 2021
22 °C
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಂಜುನಾಥ ಕುರ್ಕಿ

ಸಾಹಿತ್ಯದ ಆಶಯ ಸತ್ಯದ ಅನ್ವೇಷಣೆಯಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಎಲ್ಲ ಕೃತಿಗಳ ಆಶಯ ಸತ್ಯದ ಅನ್ವೇಷಣೆ ಆಗಬೇಕು. ಆಗ ಮಾತ್ರ ಅದು ಸಮಾಜವನ್ನು ಸ್ಪಂದಿಸುತ್ತದೆ. ಸತ್ಯದ ಅನ್ವೇಷಣೆ ಆದಾಗ ವೈಚಾರಿಕ, ಸಾಮಾಜಿಕ ಮೌಲ್ಯಗಳ ಚಿಂತನೆ ಬೆಳೆಸಲು ಸಾಧ್ಯ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಚ್‌.ಎಸ್. ಮಂಜುನಾಥ ಕುರ್ಕಿ ಹೇಳಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಭಾವಸಿರಿ ಪ್ರಕಾಶನ ಅಣಬೇರು ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ದೊಡ್ಮನೆ ಪ್ರಕಾಶನ ಉದ್ಘಾಟನೆ, ಸವಿತಾ ಕೆ. ಗುಬ್ಬಿ ಅವರ ‘ಹುಣ್ಣಿಮೆಯ ಹೂ ನಗೆ’ ಕವನ ಸಂಕಲನ ಹಾಗೂ ‘ಅವನೊಳಗಿನ ನಾನು’ ಕಥಾಸಂಕಲನಗಳ ಲೋಕಾರ್ಪಣೆ ಮತ್ತು ರಾಜ್ಯಮಟ್ಟದ ಕವಿಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಉತ್ತಮ ಸಾಹಿತ್ಯ ಕೃತಿ ರಚನೆಗೆ ಅನುಭವ ಬೇಕು. ಅನುಭಾವದ ಅಕ್ಷರ ರೂಪವೇ ಸಾಹಿತ್ಯ. ಲೇಖಕ ಅನುಭವಗಳನ್ನು ಪಡೆದು ಅದರ ನೆಲೆಗಟ್ಟಿನಲ್ಲಿ ಸಾಹಿತ್ಯ ರಚಿಸಬೇಕು. ಕೃತಿಕಾರನ ಭಾವ ಯಾವಾಗಲೂ ಪರಿಶುದ್ಧವಾಗಿರಬೇಕು. ಸ್ಥಿರವಾಗಿರಬೇಕು. ನಿಶ್ಚಲವಾಗಿರಬೇಕು. ಲೇಖಕನ ಭಾವ ಮಲಿನವಾದರೆ ಭಾಷೆ ಮಲಿನವಾಗುತ್ತದೆ. ಭಾಷೆ ಮಲಿನವಾದರೆ ಬದುಕು ಮಲಿನವಾಗುತ್ತದೆ. ಬದುಕು ಮಲಿನವಾದರೆ ಪರಿಸರ ಹಾಳಾಗುತ್ತದೆ. ಪರಿಸರ ಹಾಳಾದರೆ ಸಮಾಜವನ್ನು ಛಿದ್ರಗೊಳಿಸುತ್ತದೆ. ಸಮಾಜ ಭಾವೈಕ್ಯದ ನೆಲೆಗಟ್ಟಿನಲ್ಲಿ ಅಭಿವ್ಯಕ್ತಿಗೊಳ್ಳಬೇಕು. ಇದಕ್ಕೆ ಭಾವ, ಬದುಕು, ಪರಿಸರ ಸಕಾರಾತ್ಮಕ ನೆಲೆಗಟ್ಟಿನಲ್ಲಿ ರೂಪುಗೊಳ್ಳಬೇಕು ಎಂದು ಆಶಿಸಿದರು.

ದೇಶ ಸ್ವಾತಂತ್ರ್ಯ ಪಡೆದಾಗ ಜವಾಹರಲಾಲ್‌ ನೆಹರೂ ಇಂದು ವಿಶ್ವ ನಿದ್ರಿಸುತ್ತಿದೆ. ಆದರೆ ಭಾರತೀಯರು ಎಚ್ಚರದಿಂದ ಇದ್ದಾರೆ. ಭಾರತೀಯರು ಎಂದಿಗೂ ಜಾಗೃತರಾಗಿ ಇರಬೇಕು. ಯಾವಾಗ ಜನರು ಜಾಗೃತರಾಗಿರುತ್ತಾರೆ ಆಗ ಸ್ವಾತಂತ್ರ್ಯಕ್ಕೆ ನಿಜವಾದ ಬೆಲೆ ಎಂದು ಹೇಳಿದ್ದರು. ಅಂತಹ ಜಾಗೃತಿ ಮೂಡಿಸುವ ಶಕ್ತಿ ಲೇಖಕನಿಗೆ ಇದೆ. ಜನರಲ್ಲಿ ಜಾಗೃತಿ ಮೂಡಿಸುವ ಕೃತಿಗಳು ಹೆಚ್ಚು ಹೆಚ್ಚು ಹೊರಬರಬೇಕು ಎಂದು ಹೇಳಿದರು.

ಇಂದು ಬದುಕು ಕೃತಕವಾಗಿದೆ. ಕೃತಕ ವಸ್ತುಗಳ ಜೊತೆಗೆ ಮಾನವನ ಸಂವೇದನೆ ಇರುವುದರಿಂದ ಕೃತಿಗಳನ್ನು ಓದುವವರ ಸಂಖ್ಯೆ ಕಡಿಮೆಯಾಗಿದೆ. ಕೃತಿಗಳು ಜನರನ್ನು ತಲುಪಬೇಕು. ಸತ್ವಯುತವಾದ ಕೃತಿಗಳನ್ನು ರಚಿಸುವ ಪ್ರಜ್ಞೆ ಕೃತಿಕಾರನಲ್ಲಿ ಇರಬೇಕು ಎಂದು ಅಭಿಪ್ರಾಯಪಟ್ಟರು.

ಕವನ ಸಂಕಲನ ಕುರಿತು ಮಾತನಾಡಿದ ಸಾಹಿತಿ ಕೆ.ಎಸ್. ವೀರಭದ್ರಪ್ಪ ತೆಲಗಿ, ‘ಅಂತರಂಗದ ತಲ್ಲಣಗಳಿಗೆ ಆಕಾರ ಕೊಡುವ ಕಾವ್ಯ ಕುಸುರಿ ಕವಿತೆಗಳಲ್ಲಿ ಎದ್ದು ಕಾಣುತ್ತದೆ. ಸಮಾಜಮುಖಿ ಸಂವೇದನಾಶೀಲವಾದ ಕವಿತೆಗಳು ಓದುಗರನ್ನು ಕೈಹಿಡಿದು ಸಾಗುತ್ತವೆ’ ಎಂದು ಅಭಿಪ್ರಾಯಪಟ್ಟರು.

ಕೃತಿಯ ವಸ್ತು, ವೈವಿಧ್ಯ, ನಿರೂಪಣಾ ಶೈಲಿಯಿಂದ ಕವಿತೆಗಳು ಓದುಗರನ್ನು ಸೆಳೆಯುತ್ತವೆ. ಕವನ ಸಂಕಲನದಲ್ಲಿನ 58 ಕವಿತೆಗಳೂ ಭಾವನಾತ್ಮಕವಾಗಿ ಮನಮುಟ್ಟುವಂತಿವೆ. ಬದುಕಿನ ತಲ್ಲಣಗಳಿಗೆ ಕವಿತೆ ಆಕಾರ ನೀಡಿವೆ ಎಂದು ಹೇಳಿದರು.

ಕಥಾ ಸಂಕಲನ ಕುರಿತು ಮಾತನಾಡಿದ ಧಾರವಾಡದ ವಿದ್ಯಾಧರ ಕನ್ನಡ ಪ್ರತಿಷ್ಠಾನದ ಅಧ್ಯಕ್ಷ ವಿದ್ಯಾಧರ ಮುತಾಲಿಕ್‌ ದೇಸಾಯಿ, ‘ಎಲ್ಲಾ ಕತೆಗಳು ಓದುಗರನ್ನು ಕಾಡುವ ಶಕ್ತಿ ಹೊಂದಿವೆ. ಸಮಾಜದ ಕಳಕಳಿ, ಕೀಳರಿಮೆ ಕುರಿತು ಚಿತ್ರಿಸಿರುವ ಕತೆಗಳು ಉತ್ತಮವಾಗಿವೆ’ ಎಂದರು.

ಲೇಖಕ ರಾಜೇಂದ್ರ ಪಾಟೀಲ ಕೃತಿಗಳನ್ನು ಲೋಕಾರ್ಪಣೆಗೊಳಿಸಿದರು. ಪತ್ರಕರ್ತ ಜಿ.ಎಂ.ಆರ್. ಆರಾಧ್ಯ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಶಿವಯೋಗಿ ಹಿರೇಮಠ, ಜಯಶ್ರೀ ಹರೀಶ್‌ರಾಜು ಇದ್ದರು. ಚಂದ್ರಿಕಾ ಜಗನ್ನಾಥ ಸ್ವಾಗತಿಸಿದರು. ಪುಷ್ಪ ಮಂಜುನಾಥ ಪರಿಚಯಿಸಿದರು. ಅರವಿಂದ್‌ ಎನ್‌.ಪಿ. ಸುನಿತಾ ಪ್ರಕಾಶ್‌ ನಿರೂಪಿಸಿದರು. ಕವಿಗೋಷ್ಠಿಯಲ್ಲಿ ವಿವಿಧೆಡೆಯಿಂದ ಬಂದ ಕವಿಗಳು ಕವನ ವಾಚಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು