ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವರ್ಗ 1ರ ಜಾತಿಗಳ ಕುಲಶಾಸ್ತ್ರ ಅಧ್ಯಯನವಾಗಲಿ

ಜಾಗೃತಿ ಸಭೆಯಲ್ಲಿ ಪ್ರವರ್ಗ-1 ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಿ.ಟಿ. ಶ್ರೀನಿವಾಸ್ ಒತ್ತಾಯ
Last Updated 25 ಅಕ್ಟೋಬರ್ 2021, 4:11 IST
ಅಕ್ಷರ ಗಾತ್ರ

ದಾವಣಗೆರೆ: ಪ್ರವರ್ಗ 1ರ ಅಡಿಯಲ್ಲಿ ಬರುವ 95 ಜಾತಿಗಳು, 171 ಉಪಜಾತಿಗಳ ಕುಲಶಾಸ್ತ್ರ ಅಧ್ಯಯನ ನಡೆಸಬೇಕು. ಅದಕ್ಕಾಗಿ ₹ 5 ಕೋಟಿ ಮೀಸಲಿಡಬೇಕು. ಈಗಿರುವ ಶೇ 4 ಮೀಸಲಾತಿಯನ್ನು ಶೇ 10ಕ್ಕೆ ಹೆಚ್ಚಿಸಬೇಕು ಎಂದು ಕರ್ನಾಟಕ ಪ್ರವರ್ಗ-1 ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಿ.ಟಿ. ಶ್ರೀನಿವಾಸ್ ಒತ್ತಾಯಿಸಿದರು.

ರಾಜ್ಯ ಪ್ರವರ್ಗ-1 ಜಾತಿಗಳ ಒಕ್ಕೂಟ ಹಾಗೂ ಜಿಲ್ಲಾ ಒಕ್ಕೂಟದ ಆಶ್ರಯದಲ್ಲಿ ಭಾನುವಾರ ನಗರದ ಉದಯಮಾಲ್ ಕನ್ವೆನ್ಷನ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ಜಾಗೃತ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಅನೇಕ ಪ್ರಬಲ ಜಾತಿಗಳು ಮೀಸಲಾತಿಗಾಗಿ ಹೋರಾಟ ನಡೆಸುತ್ತಿವೆ. ಪ್ರವರ್ಗ 1ಕ್ಕೆ ಪ್ರತ್ಯೇಕವಾಗಿ ಮೀಸಲಾತಿ ನೀಡಿದರೆ ನಮ್ಮ ಅಸ್ತಿತ್ವ ಉಳಿಸಿಕೊಳ್ಳಬಹುದು. ಇಲ್ಲದೇ ಇದ್ದರೆ ಇನ್ನಷ್ಟು ತುಳಿತಕ್ಕೆ ಒಳಗಾಗಬೇಕಾಗುತ್ತದೆ. ಎಲ್ಲರೂ ಎಚ್ಚೆತ್ತುಕೊಳ್ಳಬೇಕು. ಮೀಸಲಾತಿ ಹೆಚ್ಚಳದ ಹೋರಾಟಕ್ಕಾಗಿ ಗ್ರಾಮ, ಹೋಬಳಿ, ತಾಲ್ಲೂಕು ಹಾಗೂ ಜಿಲ್ಲಾ ಹಂತಗಳಲ್ಲಿ ಸಂಘಟನೆ ನಡೆಸಿ, ಬೃಹತ್ ಶಕ್ತಿ ಪ್ರದರ್ಶನ ನಡೆಸುವ ಅಗತ್ಯವಿದೆ ಎಂದು ಹೇಳಿದರು.

ಪ್ರವರ್ಗ 1ಕ್ಕೆ ಮೀಸಲಾತಿ ಹೆಚ್ಚಿಸಿದರೆ ಪ್ರಬಲ ಜಾತಿಗಳ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂಬ ಕಾರಣಕ್ಕೆ ನಮ್ಮದೇ ಸಮುದಾಯಗಳಿಂದ ಬಂದ ಶಾಸಕರು, ಸಂಸದರು ದನಿ ಎತ್ತುತ್ತಿಲ್ಲ. ಜಾತಿಗಳ ಸೇರ್ಪಡೆ, ಮಾರ್ಪಾಡು, ಬದಲಾವಣೆ ಮಾಡಿ ನಮ್ಮ ಸಮಾಜ ಮುಂದೆ ತರಲು ಯಾರೂ ಧೈರ್ಯ ಮಾಡುತ್ತಿಲ್ಲ. ಆದ್ದರಿಂದ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 224 ಸ್ಥಾನಗಳ ಪೈಕಿ ಕನಿಷ್ಟ 15 ಸ್ಥಾನಗಳಿಂದಾದರೂ ನಮ್ಮ ಜನರು ಚುನಾಯಿತರಾಗಬೇಕಿದೆ. ಆಗ ಮೀಸಲಾತಿ ಹೋರಾಟಕ್ಕೆ ಶಕ್ತಿ ಬರಲಿದೆ ಎಂದು ತಿಳಿಸಿದರು.

ಚಿನ್ನಪ್ಪ ರೆಡ್ಡಿ ವರದಿ ವಿರುದ್ಧ 375 ಜಾತಿಗಳು ಎಚ್ಚೆತ್ತು, ಬೀದಿಗಿಳಿದು ಹೋರಾಟ ನಡೆಸದೇ ಇದ್ದಿದ್ದರೆ ನಮ್ಮ ಸಮುದಾಯಗಳ ಪರಿಸ್ಥಿತಿ ಚಿಂತಾಜನಕವಾಗುತ್ತಿತ್ತು. ಮತ್ತೆ ಉಪ್ಪಾರ, ಗೊಲ್ಲ, ಗಂಗಾಮತ, ಹೆಳವ, ದೊಂಬಿದಾಸ, ಗೂರ್ಖಾ ಸೇರಿ 95 ಜಾತಿ, 375 ಉಪಜಾತಿಗಳು ಎಚ್ಚೆತ್ತುಕೊಳ್ಳಬೇಕು. ಕುಲಶಾಸ್ತ್ರ ಅಧ್ಯಯನಕ್ಕೆ ₹ 5 ಕೋಟಿ ಮೀಸಲಿಡಲು ಒತ್ತಾಯಿಸಬೇಕು ಎಂದು ಹೇಳಿದರು.

ದೇವರಾಜ ಅರಸು ಬಿಟ್ಟರೆ ಆಡಳಿತದಲ್ಲಿದ್ದ ಮತ್ಯಾರು ನಮ್ಮ ನೆರವಿಗೆ ಬಂದಿಲ್ಲ. ಕಡಿಮೆ ಸಂಖ್ಯೆ ಜನ ಹೊಂದಿರುವ ಯಾವುದೇ ಜಾತಿ ಪ್ರತ್ಯೇಕವಾಗಿ ಹೋರಾಟ ನಡೆಸಿ ಮೀಸಲಾತಿ ಪಡೆಯಲು ಸಾಧ್ಯವಿಲ್ಲ. ಜನ ಸಂಖ್ಯೆ ನೋಡಿ ರಾಜಕಾರಣಿಗಳು ಜಾತಿಗಳಿಗೆ ಪ್ರಾಧನ್ಯ ನೀಡುತ್ತಾರೆ. ಈ ಹಿನ್ನೆಲೆಯಲ್ಲಿ ಸತತ 1 ವರ್ಷಗಳ ಕಾಲ ಸುತ್ತಾಡಿ ಪ್ರವರ್ಗ1 ಒಕ್ಕೂಟ ರಚನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸಂಘಟಿತರಾಗಿ ಹೋರಾಟಕ್ಕೆ ಅಣಿಯಾಗಬೇಕು ಎಂದು ಹೇಳಿದರು.

ಶೋಷಿತ ಸಮುದಾಯದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ ಆರಂಭಿಸಲು ಚಿಂತನೆ ನಡೆಸಿದೆ. ಉತ್ತಮ ಹುದ್ದೆಗಳನ್ನು ಪಡೆಯಬೇಕು ಎಂದು ಕಿವಿ ಮಾತು ಹೇಳಿದರು.

ಶೋಷಿತ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಾಡದ ಆನಂದರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ‘ಮುಂದುವರಿದ ಜಾತಿಯ ಜನರಿಗೆ ಉಪ್ಪು ಬೇಕಿದೆ. ಆದರೆ ಉಪ್ಪಾರರು ಬೇಕಿಲ್ಲ. ಹಾಲು, ಮೊಸರು ಬೇಕಿದೆ ಆದರೆ ಗೊಲ್ಲರು ಬೇಕಿಲ್ಲ. ಇತಿಹಾಸವಿರುವ ಇಂತಹ ಸಮುದಾಯಗಳು ಇಂದು ಮೀಸಲಾತಿಗಾಗಿ ಭಿಕ್ಷೆ ಬೇಡುತ್ತಿರುವುದು ದುರಂತ. ಪ್ರವರ್ಗ 1ರಡಿ ಬರುವ ಎಲ್ಲ ಜಾತಿಗಳು ಸಂಘಟಿತರಾದರೆ ಮಾತ್ರ ನಮ್ಮ ಬಲಾಬಲ ತೋರಿಸಲು ಸಾಧ್ಯ’ ಎಂದರು.

ಒಕ್ಕೂಟದ ಕಾರ್ಯಾಧ್ಯಕ್ಷ ಡಾ.ಎಚ್.ಬಿ. ಬಂಡಿ, ಪ್ರಧಾನ ಕಾರ್ಯದರ್ಶಿ ಎ.ವಿ.ಲೋಕೇಶ, ಉಪ್ಪಾರ ಸಮಾಜದ ತುರ್ಚಘಟ್ಟ ಎಸ್.ಬಸವರಾಜಪ್ಪ, ಹೆಳವ ಸಮಾಜದ ಹೊಲಗೋರಪ್ಪ, ಯಾದವ ಸಮಾಜದ ತಿಪ್ಪೇಸ್ವಾಮಿ, ಜೋಗಿ ಸಮಾಜದ ಪೂರ್ಣಿಮಾ, ಹಿರಿಯ ವಕೀಲ ಎ.ವೈ. ಪ್ರಕಾಶ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಉಮಾ ಪ್ರಕಾಶ, ಸದಸ್ಯ ಪಿ.ಎಸ್. ಬಸವರಾಜ, ನಲ್ಕುಂದ ಹಾಲೇಶ, ಬಸವರಾಜ ಸಾಗರ, ತುರ್ಚಘಟ್ಟ ಶ್ರೀನಿವಾಸ, ತುರ್ಚಘಟ್ಟ ಲೋಕೇಶ, ಮುರಳಿ ಯಾದವ, ಮಹೇಂದ್ರ ಹೆಬ್ಬಾಳ್, ಜಗದೀಶ್, ವಿಠಲ ಯಾದವ್, ಉಮಾಶಂಕರ್, ಮುರುಗಣ್ಣ. ಜಯರಾಂ, ಮಣಿಕಂಠ, ನರಸಿಂಹಮೂರ್ತಿ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT