ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ವಿರೋಧ ಪಕ್ಷಗಳು ವಿಫಲ: ರಾಹುಲ್, ದೇವೇಗೌಡರಿಗೆ ಪತ್ರ ಬರೆದ ವಕೀಲ

Last Updated 28 ಜೂನ್ 2020, 15:15 IST
ಅಕ್ಷರ ಗಾತ್ರ

ದಾವಣಗೆರೆ: ಕೇಂದ್ರ ಮತ್ತು ರಾಜ್ಯದಲ್ಲಿ ವಿರೋಧ ಪಕ್ಷಗಳು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿಲ್ಲ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿ, ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್‌.ಡಿ. ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ಗೆ ಇಲ್ಲಿನ ಹಿರಿಯ ವಕೀಲ ಅನೀಸ್‌ ಪಾಷಾ ಪತ್ರ ಬರೆದಿದ್ದಾರೆ.

‘ನಾನು ಭಾರತದ ಪ್ರಜೆ. ಆಧಾರ್‌ಕಾರ್ಡ್‌, ರೇಷನ್‌ಕಾರ್ಡ್‌, ಎಲೆಕ್ಷನ್‌ಕಾರ್ಡ್ ಹೊಂದಿರುವ, ತೆರಿಗೆ ಕಟ್ಟುವ ವಕೀಲ. ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷ ವಿಫಲವಾದಾಗ, ತಪ್ಪು ದಾರಿ ಹಿಡಿದಾಗ ಅದನ್ನು ಪ್ರಶ್ನಿಸುವ, ಪ್ರತಿಭಟಿಸುವ, ಜನರನ್ನು ಜಾಗೃತಗೊಳಿಸುವ ಕೆಲಸವನ್ನು ವಿರೋಧ ಪಕ್ಷಗಳು ಮಾಡಬೇಕು. ಆಡಳಿತ ಪಕ್ಷ ಆತುರದ ನಿರ್ಧಾರ ಕೈಗೊಳ್ಳದಂತೆ ಮಾರ್ಗದರ್ಶನ ಮಾಡಬೇಕು. ಪ್ರಜೆಗಳ ಮೂಲಭೂತ ಹಕ್ಕು ರಕ್ಷಿಸಬೇಕು, ಕರ್ತವ್ಯಗಳನ್ನು ನಿರ್ವಹಿಸಲು ವಿಘ್ನವಾಗದಂತೆ ನೋಡಿಕೊಳ್ಳಬೇಕು. ಆದರೆ ವಿರೋಧ ಪಕ್ಷಗಳು ಈಚೆಗೆ ಇಂಥ ಯಾವ ಕಾರ್ಯವನ್ನೂ ಮಾಡಿಲ್ಲ’ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಆಪತ್ಕಾಲಕ್ಕೆಂದು ಕಾಯ್ದಿರಿಸಿದ್ದ ಹಣವನ್ನು ಕೇಂದ್ರ ಸರ್ಕಾರ ಬಳಸಿಕೊಂಡಿತು. ಸಿಟಿಜನ್‌ಶಿಪ್‌ ಅಮೆಂಡ್‌ಮೆಂಟ್‌ ಕಾಯ್ದೆಯನ್ನು ಕಾರಿ ಮಾಡಿತು. ರಾಜ್ಯ ಸರ್ಕಾರ ಎಪಿಎಂಸಿ ಕಾಯ್ದೆ, ಭೂಸುಧಾರಣೆ ಕಾಯ್ದೆಯನ್ನು ಬದಲಾಯಿಸಲು (ತಿದ್ದುಪಡಿ ಮಾಡಲು) ಹೊರಟಿದೆ. ಡೀಸೆಲ್‌, ಪೆಟ್ರೋಲ್‌ ದರ ಒಂದೇ ಸಮನೆ ಏರುತ್ತಿದೆ. ಈ ಯಾವ ಸಂದರ್ಭದಲ್ಲಿಯೂ ವಿರೋಧ ಪಕ್ಷಗಳು ಗಟ್ಟಿ ಧ್ವನಿ ಎತ್ತಿಲ್ಲ ಎಂದು ದೂರಿದ್ದಾರೆ.

ವಿಶ್ವಕ್ಕೇ ವ್ಯಾಪಿಸಿರುವ ಕೊರೊನಾ ಸೋಂಕು ಭಾರತದಲ್ಲಿ ಕಾಣಿಸಿಕೊಂಡಾಗ ಅದಕ್ಕೆ ಜಾತಿ, ಧರ್ಮಗಳ ಪಟ್ಟ ಕಟ್ಟಲಾಯಿತು. ಲಾಕ್‌ಡೌನ್‌ನಿಂದ ಕಾರ್ಮಿಕರು, ಬಡವರು ಬೀದಿಗೆ ಬಿದ್ದರು. ಜನ ಉದ್ಯೋಗ ಕಳೆದುಕೊಂಡರು. ಸುಸ್ತಾಗಿ ರೈಲು ಹಳಿಯಲ್ಲಿ ಮಲಗಿದ್ದವರ ಮೇಲೆ ರೈಲು ಹೋಗಿ ಪ್ರಾಣ ಕಳೆದುಕೊಂಡರು. ಇವರಂತೆ ಬೇರೆ ಬೇರೆ ಕಡೆಗಳಲ್ಲಿ ಕಾರ್ಮಿಕರು ಪ್ರಾಣಬಿಟ್ಟರು. ಸಿಎಎ ಹೋರಾಟದಲ್ಲಿ ಭಾಗಿಯಾದ ಸಪೂರ ಎಂಬ ಗರ್ಭಿಣಿ, ದುರಾಡಳಿತವನ್ನು ಪ್ರಶ್ನಿಸುತ್ತಿದ್ದ ಆನಂದ್‌ ತೇಲ್ತುಂಬ್ಡೆ ಮುಂತಾದವರನ್ನು ಬಂಧಿಸಿದಾಗಲೂ ಧ್ವನಿ ಎತ್ತಿಲ್ಲ ಎಂದು ತಿಳಿಸಿದ್ದಾರೆ.

ಇನ್ನು ಮುಂದಾದರೂ ಧ್ವನಿ ಇಲ್ಲದ ಕಾರ್ಮಿಕರು, ರೈತರು, ಬಡವರ ಪರ ಧ್ವನಿ ಎತ್ತಬೇಕು. ಧ್ವನಿ ಎತ್ತುವವರನ್ನು ಬಂಧಿಸುವುದನ್ನು ವಿರೋಧಿಸಬೇಕು. ಈ ಕಾರ್ಯ ಮಾಡದೇ ಇದ್ದಲ್ಲಿ ನಿಮ್ಮ ಸ್ಥಾನ ತ್ಯಜಿಸಬೇಕು. ಇಲ್ಲದೇ ಹೋದರೆ ನ್ಯಾಯಾಲಯಗಳಿಗೆ ಅರ್ಜಿ ಸಲ್ಲಿಸಿ ನಿಮ್ಮ ಮೇಲೆ ಕ್ರಮ ಕೈಗೊಳ್ಳಲು ಮನವಿ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT