ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವ ಹಿಂಡುವ ಕೆಳಮಟ್ಟದ ಟ್ರಾನ್ಸ್‌ಫಾರ್ಮರ್‌

ಅಪಾಯಕಾರಿ ಸ್ಥಿತಿಯಲ್ಲಿರುವ ವಿದ್ಯುತ್‌ ಪರಿವರ್ತಕಗಳು: ಆತಂಕದಲ್ಲಿ ನಾಗರಿಕರು
Last Updated 29 ಸೆಪ್ಟೆಂಬರ್ 2019, 10:45 IST
ಅಕ್ಷರ ಗಾತ್ರ

ದಾವಣಗೆರೆ: ಕೆಳಮಟ್ಟದಲ್ಲೇ ಇರುವ ವಿದ್ಯುತ್‌ ಪರಿವರ್ತಕಗಳು, ಅಡ್ಡಾದಿಡ್ಡಿ ಬಿದ್ದ ತಂತಿಗಳು, ಅಲ್ಲೇ ಆಟವಾಡುವ ಮಕ್ಕಳು. ಇದು ನಗರದ ಬಹುತೇಕ ಕಡೆ ಕಾಣಸಿಗುವ ಚಿತ್ರಣ.

ಶುಕ್ರವಾರವಷ್ಟೇ ಇಲ್ಲಿನ ಬಾಷಾನಗರದಲ್ಲಿ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ ಸ್ವಿಚ್‌ ಬಾಕ್ಸ್‌ ತಗುಲಿ ಏಳು ವರ್ಷದ ಬಾಲಕ ಶಾಹಿದ್‌ ಮೃತಪಟ್ಟಿದ್ದಾನೆ. ಇದರಿಂದ ಸುರಕ್ಷತೆ ಇಲ್ಲದ ಟ್ರಾನ್ಸ್‌ಫಾರ್ಮರ್‌ ಇರುವ ಪ್ರದೇಶದ ಜನರಲ್ಲಿ ಆತಂಕ ಮನೆಮಾಡಿದೆ.

ಬಾಷಾನಗರ 5ನೇ ಕ್ರಾಸ್‌ ಬಳಿಯೊಂದರಲ್ಲೇ ಹತ್ತಕ್ಕೂ ಹೆಚ್ಚು ಟ್ರಾನ್ಸ್‌ಫಾರ್ಮರ್‌ಗಳು ಅಪಾಯ ಆಹ್ವಾನಿಸುವ ಸ್ಥಿತಿಯಲ್ಲಿವೆ. ಬಹುತೇಕವು ಕೆಳಮಟ್ಟದಲ್ಲಿವೆ. ಅಲ್ಲದೇ ಇದರ ಸುತ್ತ ರಕ್ಷಣಾ ಬೇಲಿ ಅಥವಾ ತಡೆಗೋಡೆ ನಿರ್ಮಿಸಿಲ್ಲ. ಇದು ಜನರ ಆತಂಕಕ್ಕೆ ಕಾರಣವಾಗಿದೆ.

ಬಾಷಾನಗರ, ಆಜಾದ್‌ನಗರ, ಜಾಲಿನಗರ, ಗಾಂಧಿನಗರ, ಹಳೆ ದಾವಣಗೆರೆ, ಮಂಡಿಪೇಟೆ, ನಿಟುವಳ್ಳಿ, ಸರಸ್ವತಿ ನಗರ, ಚಿಕ್ಕನಹಳ್ಳಿ ಬಡಾವಣೆ ಸೇರಿ ನಗರದ ಬಹುತೇಕ ಪ್ರದೇಶಗಳಲ್ಲಿ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ಗಳು ಕೆಳಮಟ್ಟದಲ್ಲಿವೆ. ಅಲ್ಲದೇ ಟಿಸಿ ಬಾಕ್ಸ್‌ಗಳು ತೆರೆದುಕೊಂಡಿವೆ. ಹಲವು ಬಡಾವಣೆಗಳಲ್ಲಿ ಮಕ್ಕಳು ಟ್ರಾನ್ಸ್‌ಫಾರ್ಮರ್‌ ಬಳಿಯೇ ಆಟವಾಡುತ್ತಾರೆ. ಇದರಿಂದ ಯಾವಾಗ ಬೇಕಾದರೂ ಅಪಾಯ ಸಂಭವಿಸಬಹುದು ಎಂಬ ಆತಂಕ ಪೋಷಕರದ್ದು.

ಎಲ್ಲ ಹೊತ್ತು ಮಕ್ಕಳ ಬಳಿಯೇ ಇರಲು ಆಗದು. ಕೆಲವೆಡೆ ಜನನಿಬಿಡ ಪ್ರದೇಶಗಳಲ್ಲೇ ಟ್ರಾನ್ಸ್‌ಫಾರ್ಮರ್‌ಗಳು ಕೆಳಮಟ್ಟದಲ್ಲಿವೆ. ಇದರಿಂದ ಅನಾಹುತ ಖಚಿತ. ಇಲ್ಲಿನ ಬಾಲಕರ ಹಾಸ್ಟೆಲ್‌ ಎದುರೇ ಟಿಸಿ ಕೆಳಮಟ್ಟದಲ್ಲಿದೆ.
ರಕ್ಷಣಾ ಬೇಲಿಯನ್ನೂ ಅಳವಡಿಸಿಲ್ಲ ಎಂದು ದೂರುತ್ತಾರೆ ಸರಸ್ವತಿ ನಗರದ ನಿವಾಸಿ ಅಶೋಕ್‌ ಎಚ್‌.ಎಂ.

‘ಅವಲಕ್ಕಿ ಮಿಲ್‌ ಹಾಗೂ ಮಂಡಕ್ಕಿ ಭಟ್ಟಿ ಇರುವ ಕಾರಣ ಹಲವು ಪರಿವರ್ತಕಗಳನ್ನು ಇಲ್ಲಿ ಅಳವಡಿಸ
ಲಾಗಿದೆ. ಮನೆಯ ಬಳಿಯೇ ಎ‌ಲ್ಲವೂ ಇವೆ. ಯಾವುದಕ್ಕೂ ತಡಗೋಡೆ ಇಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದು ಬಾಷಾನಗರದ ಮಹಮ್ಮದ್‌
ಫಯಾಜ್‌ ಆರೋಪಿಸಿದರು.

ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಶುಕ್ರವಾರ ಬಾಲಕ ಶಾಹಿದ್‌ ಮೃತಪಟ್ಟಿದ್ದಾನೆ. ಮತ್ತೆ ಅನಾಹುತ ಸಂಭವಿಸುವ ಮುನ್ನ ಶೀಘ್ರ ಟ್ರಾನ್ಸ್‌ಫಾರ್ಮರ್‌ಗಳ ಸುತ್ತ ಬೇಲಿ ಅಳವಡಿಸಬೇಕು ಎಂಬುದು ಅವರ ಒತ್ತಾಯ.

‘ನಿಟುವಳ್ಳಿಯ ಹಲವೆಡೆ ಮುಖ್ಯ ರಸ್ತೆಯಲ್ಲಿಯೇ ಕಳಮಟ್ಟದಲ್ಲಿ ಟಿಸಿ ಬಾಕ್ಸ್‌ಗಳಿವೆ. ದೊಡ್ಡ ದೊಡ್ಡ ವಿದ್ಯುತ್‌ ತಂತಿಗಳು ಹೊರಚಾಚಿಕೊಂಡಿವೆ. ಅಲ್ಲಿ ಓಡಾಡಲು ನಮಗೇ ಭಯವಾಗುತ್ತದೆ. ಇನ್ನು ಮಕ್ಕಳ ಗತಿ ಏನು ಎಂಬುದು ಚಿಂತೆಯಾಗಿದೆ’ ಎಂದು ನಿವಾಸಿ ರೇಣುಕಮ್ಮ ಆತಂಕದಿಂದ ಹೇಳಿದರು.

ಚುರುಕು ಪಡೆಯದ ಭೂಗತ ಕೇಬಲ್ ಅಳವಡಿಕೆ ಕಾರ್ಯ: ವಿದ್ಯುತ್‌ ಅವಘಗಳನ್ನು ತಪ್ಪಿಸಲು ಹಾಗೂ ನಗರದ ಸೌಂದರ್ಯೀಕರಣದ ದೃಷ್ಟಿಯಿಂದ ನಗರದಲ್ಲಿ ಐಪಿಡಿಎಸ್ ಯೋಜನೆಯಡಿ ಭೂಗತ ಕೇಬಲ್‌ ಅಳವಡಿಕೆ ಕಾರ್ಯ ನಡೆಯುತ್ತಿದೆ. ಆದರೆ, ಕಾಮಗಾರಿ ಚುರುಕು ಪಡೆದುಕೊಂಡಿಲ್ಲ. ಕೇಂದ್ರ ಮತ್ತು
ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಸಮಗ್ರ ವಿದ್ಯುತ್‌ ಅಭಿವೃದ್ಧಿ ಯೋಜನೆಯಡಿ (ಐಪಿಡಿಎಸ್‌) ₹ 100 ಕೋಟಿ, ಬೆಸ್ಕಾಂನ ಭೂಗತ ಕೇಬಲ್‌ ಅಳವಡಿಕೆ ಯೋಜನೆಯಲ್ಲಿ ರಾಜ್ಯ ಸರ್ಕಾರದಿಂದ ₹ 120 ಕೋಟಿ ಅನುದಾನ ಇದಕ್ಕಾಗಿ ಮೀಸಲಿರಿಸಲಾಗಿದೆ. ಆದರೆ ಕಾಮಗಾರಿ ಕುಂಟುತ್ತಾ ಸಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT