ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೇ ದಾವಣಗೆರೆಗೆ ಸುಣ್ಣ ; ಹೊಸ ದಾವಣಗೆರೆ ಬೆಣ್ಣೆ

ಈ ಭೇದ ಏತಕೆ
Last Updated 21 ಅಕ್ಟೋಬರ್ 2019, 4:25 IST
ಅಕ್ಷರ ಗಾತ್ರ

ದಾವಣಗೆರೆ: ‘ನಾವು ನತದೃಷ್ಟರು. ಅದಕ್ಕೆ ಇಲ್ಲಿ ಯಾವುದೇ ಅಭಿವೃದ್ಧಿಗಳು ನಡೆಯುವುದಿಲ್ಲ. ಅಭಿವೃದ್ಧಿ ಏನಿದ್ದರೂ ಹೊಸ ದಾವಣಗೆರೆಗೆ ಮೀಸಲು’.

ಇದು ಹಳೇ ದಾವಣಗೆರೆ ಅಹ್ಮದ್‌ ನಗರದ ಖಲೀಲ್‌ ಅವರ ನೋವಿನ ಮಾತು. ಇದು ಅವರೊಬ್ಬರ ನೋವು ಅಲ್ಲ. ಫುಟ್‌ಪಾತ್‌ ಇಲ್ಲದ, ಪಾರ್ಕಿಂಗ್‌ ಜಾಗ ಇಲ್ಲದ, ಇಕ್ಕಟ್ಟಾದ ರಸ್ತೆಗಳು, ಒತ್ತೊತ್ತಾಗಿರುವ ಅಂಗಡಿ ಕಟ್ಟಡಗಳು, ಸ್ಲಂಗಳೇ ಹೆಚ್ಚಿರುವ ನಾಡು, ಹಂದಿ, ನಾಯಿ, ಬೀಡಾಡಿ ದನಗಳ ಬೀಡು ಎಂದೆಲ್ಲ ಹಳೇ ದಾವಣಗೆರೆಯಲ್ಲಿ ವಾಸಿಸುವ ಎಲ್ಲರ ಅಳಲು.

ಸರ್ಕಾರಿ ಭಾಷೆಯಲ್ಲಿ ದಾವಣಗೆರೆ–1, ದಾವಣಗೆರೆ–2, ವಿದ್ಯಾವಂತರ ಬಾಯಲ್ಲಿ ಹಳೇ ದಾವಣಗೆರೆ, ಹೊಸ ದಾವಣಗೆರೆ, ಆಡುಮಾತಿನಲ್ಲಿ ರೈಲು ಹಳಿಯ ಆಚೆ, ಈಚೆ. ಈ ರೀತಿಯ ವಿಭಾಗ ಮಾತಿಗಷ್ಟೇ ಸೀಮಿತವಾಗದೇ ಅಭಿವೃದ್ಧಿಯಲ್ಲೂ ಈ ಭೇದ ಎದ್ದು ಕಾಣುವುದು ಅವರ ನೋವಿಗೆ ಕಾರಣ.

ಸುಸಜ್ಜಿತ ಪಾರ್ಕ್‌ಗಳು, ಜಗಮಗಿಸುವ ಬೀದಿದೀಪಗಳು, ಉತ್ತಮ ರಸ್ತೆಗಳು, ಚರಂಡಿ–ಒಳಚರಂಡಿ ವ್ಯವಸ್ಥೆಗಳು, ನಿತ್ಯ ಕುಡಿಯುವ ನೀರು ಪೂರೈಕೆ, ಸ್ವಚ್ಛತೆ, ಆಸ್ಪತ್ರೆ, ಉತ್ತಮ ಶಾಲಾ, ಕಾಲೇಜುಗಳೆಲ್ಲವೂ ಹೊಸ ದಾವಣಗೆರೆಯಲ್ಲಿ ಇರುವುದಾದರೆ ಹಳೇ ದಾವಣಗೆರೆಯವರಿಗೆ ಯಾಕೆ ಇಲ್ಲ ಎನ್ನುವುದು ಈ ಜನರ ಪ್ರಶ್ನೆ.

ಚಿಗಟೇರಿ ಆಸ್ಪತ್ರೆಯಿಂದ ಲಕ್ಷ್ಮೀ ಫ್ಲೋರ್‌ ಮಿಲ್‌ವರೆಗೆ ರಸ್ತೆಯ ಎರಡೂ ಕಡೆ ನೋಡುತ್ತಾ ಹೋಗಿ, ಎಷ್ಟೊಂದು ಪಾರ್ಕ್‌ಗಳಿವೆ ಎಂಬುದು ಗೊತ್ತಾಗುತ್ತದೆ. ಅಷ್ಟು ಸಣ್ಣ ಪ್ರದೇಶದಲ್ಲಿ ಇರುವಷ್ಟು ಪಾರ್ಕ್‌ಗಳು ಹಳೇ ದಾವಣಗೆರೆಯಲ್ಲಿ ಒಟ್ಟು ಲೆಕ್ಕ ಹಾಕಿದರೂ ಇಲ್ಲ ಎನ್ನುತ್ತಾರೆ ಅವರು.

ಒಂದೇ ಒಂದು ಕಾಲೇಜಿಲ್ಲ. ಖಾಸಗಿ ಶಾಲೆಗಳು ಇಲ್ಲಿಲ್ಲ. ಸರ್ಕಾರಿ ಶಾಲೆಗಳಷ್ಟೇ ಇವೆ. ಯಾವುದೇ ದೊಡ್ಡ ಆಸ್ಪತ್ರೆಗಳು ಈ ಭಾಗದಲ್ಲಿ ಇಲ್ಲ. ಉತ್ತಮ ಗ್ರಂಥಾಲಯಗಳಿಲ್ಲ. ಇವೆಲ್ಲ ಬೇಕಿದ್ದರೆ ಹೊಸ ದಾವಣಗೆರೆ ಕಡೆಗೆ ಹೋಗಬೇಕು. ಕೆಎಸ್‌ಆರ್‌ಟಿಸಿ ಬಸ್‌ ಕೂಡ ಎಲ್ಲ ಕಡೆ ಬರುವುದಿಲ್ಲ. ಹೊಸ ದಾವಣಗೆರೆಯಲ್ಲಿ ದೈಹಿಕ ಶ್ರಮ ವಹಿಸಿ ದುಡಿಯುವವರು ಬಹುತೇಕರು ಹಳೇ ದಾವಣಗೆರೆಯವರೇ ಆಗಿದ್ದಾರೆ. ನಗರವನ್ನು ಸ್ವಚ್ಛಗೊಳಿಸುವ ಪೌರಕಾರ್ಮಿಕರಲ್ಲಿ ಶೇ 80ರಷ್ಟು ಗಾಂಧಿನಗರದವರೇ ಆಗಿದ್ದಾರೆ. ಆದರೆ ಈ ಪೌರಕಾರ್ಮಿಕರ ಮನೆಯ ಸುತ್ತಮುತ್ತ ಸ್ವಚ್ಛವಾಗಿಡಲು ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಹೇಳುತ್ತಾರೆ ಕೆಎಸ್‌ಆರ್‌ಟಿಸಿ ನಿವೃತ್ತ ಅಧಿಕಾರಿ ಚಿದಾನಂದ.

ಪ್ರತಿ ಬಡಾವಣೆಯಲ್ಲಿ ಪಾರ್ಕ್‌ಗಳಿವೆ. ನಮ್ಮಲ್ಲಿ ಪಾರ್ಕ್‌ಗಳಿಲ್ಲ. ಮೈದಾನವಿಲ್ಲ. ಮಕ್ಕಳೆಲ್ಲ ರಸ್ತೆಯಲ್ಲೇ ಆಟವಾಡುತ್ತಾರೆ. ಹೊಸ ದಾವಣಗೆರೆಯ ನಾಲ್ಕನೇ ಒಂದು ಭಾಗದಷ್ಟು ಅಭಿವೃದ್ಧಿ ಕೂಡ ಇಲ್ಲಿಯಾಗಿಲ್ಲ. ಇಲ್ಲಿಂದ ಆಯ್ಕೆಯಾದ ಜನಪ್ರತಿನಿಧಿಗಳೂ ಇತ್ತ ಗಮನಹರಿಸುತ್ತಿಲ್ಲ. ಇನ್ನಾದರೂ ಎರಡೂ ಕಡೆ ನೋಡಿ ನಮ್ಮ ಸ್ಥಿತಿ ಹೇಗಿದೆ ಎಂಬುದನ್ನು ಅಧಿಕಾರಿಗಳು, ಶಾಸಕರು, ಸಂಸದರು ಅರ್ಥ ಮಾಡಿಕೊಳ್ಳಲಿ. ‍ಹಿಂದೆ ಪಾಲಿಕೆಯ ಸದಸ್ಯರಾಗಿದ್ದವರು ಅನುದಾನ ತರುವಲ್ಲಿ ವಿಫಲರಾದರು. ಮುಂದೆ ಆಯ್ಕೆಯಾಗುವವರಾದರೂ ಪಟ್ಟು ಹಿಡಿದು ಅನುದಾನ ತಂದು ಅಭಿವೃದ್ಧಿ ಮಾಡಬೇಕು ಎನ್ನುವುದು ಅವರ ಒತ್ತಾಯವಾಗಿದೆ.

ಕಟ್ಟಡ ಕಾರ್ಮಿಕರು, ಬೀಡಿ ಕಾರ್ಮಿಕರು, ಮಂಡಕ್ಕಿಭಟ್ಟಿ ಕಾರ್ಮಿಕರು, ಗುಜರಿ ಕಾರ್ಮಿಕರು, ಸ್ವಚ್ಛತಾ ಕಾರ್ಮಿಕರು, ಹೊರೆ ಹೊರುವವರು, ಲಾರಿಗಳಿಗೆ ಲೋಡ್‌ ಮಾಡುವವರು, ಮನೆಕೆಲಸದವರು, ಹೋಟೆಲ್‌ಗಳಲ್ಲಿ ದುಡಿಯುವವರು, ಬಟ್ಟೆ ಅಂಗಡಿಗಳಲ್ಲಿ ಕೆಲಸ ಮಾಡುವವರು, ಆಟೊ ಚಾಲಕರು ಹೀಗೆ ಎಲ್ಲ ವಿಧದ ಅಸಂಘಟಿತ ವಲಯದಲ್ಲಿ ದುಡಿಯುವ ಸಾವಿರಾರು ಕಾರ್ಮಿಕರು ಹಳೇ ದಾವಣಗೆರೆಯಲ್ಲಿಯೇ ಇದ್ದಾರೆ. ಒಂದು ಕುಟುಂಬ ಬದುಕಲು ಬೇಕಾದಷ್ಟು ದೊಡ್ಡದಾದ ಮನೆಗಳಿಲ್ಲ. 15 ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜಾಗುತ್ತದೆ. ಸರಿಯಾದ ರಸ್ತೆಗಳಿಲ್ಲ. ಚರಂಡಿಗಳೇ ಇಲ್ಲದ ಮೇಲೆ ಇನ್ನು ಒಳಚರಂಡಿ ಎಲ್ಲಿಂದಿರುತ್ತದೆ. ದಿನಗಳು ಕಳೆದ ಹಾಗೆ ಇಲ್ಲಿ ಕೊಳೆಗೇರಿಗಳು ಹೆಚ್ಚುತ್ತಿವೆ. ಇದರ ಬಗ್ಗೆ ಇಲ್ಲಿಂದ ಆಯ್ಕೆಯಾಗಿ ಹೋಗುವ ಜನಪ್ರತಿನಿಧಿಗಳಿಗೇ ಕಾಳಜಿಯೇ ಇಲ್ಲ ಎಂದು ದೂರುತ್ತಾರೆ ಬೀಡಿ ಕಾರ್ಮಿಕರ ಸಂಘಟನೆಯ ಹೋರಾಟಗಾರ್ತಿ ಜಬೀನಾ ಖಾನಂ.

ಒಂದು ದಿನ ಮಳೆ ಬಂದರೆ ಎರಡು ದಿನ ಹೊರಗೆ ಕಾಲಿಡುವ ಹಾಗಿಲ್ಲ. ಎಲ್ಲ ಕೊಳಚೆ ಮನೆ ಮುಂದೆ, ರಸ್ತೆಗಳ ಮೇಲೆ ಬಂದು ಬಿದ್ದಿರುತ್ತದೆ. ಕುಡಿಯುವ ನೀರಿನ ಸಂಪರ್ಕದ ಪೈಪುಗಳು ಕೊಳಚೆ ನೀರನ್ನು ಹಾದು ಬರುತ್ತಿವೆ. ಹಾಗಾಗಿ ಕೆಲವು ಬಾರಿ ಕೊಳಚೆ ಮಿಶ್ರಿತ ನೀರೂ ಬರುತ್ತದೆ. ಸ್ವಚ್ಛತೆ ಅನ್ನುವುದು ಇಲ್ಲವೇ ಇಲ್ಲ. ಎಲ್ಲೂ ಕಂಟೈನರ್‌ಗಳಿಲ್ಲ. ನಿತ್ಯ ಕಸ ಸಂಗ್ರಹ ಎನ್ನುವುದು ಹೊಸ ದಾವಣಗೆರೆಯಲ್ಲಷ್ಟೇ ಆಗುತ್ತದೆ ಎಂದು ಅವರು ವಿವರಿಸುತ್ತಾರೆ.

ಮಕ್ಕಳಿಗೆ ಕಚ್ಚುವ ಹಂದಿಗಳು, ನಾಯಿಗಳು, ಸಾಂಕ್ರಾಮಿಕ ರೋಗಗಳು ಎಲ್ಲವೂ ಹಳೇ ದಾವಣಗೆರೆಯಲ್ಲಿ ಜಾಸ್ತಿ. ಸ್ಮಾರ್ಟ್‌ಸಿಟಿ ಯೋಜನೆಯಡಿ ದಾವಣಗೆರೆ ಆಯ್ಕೆಯಾಗಿರುವುದು ಖುಷಿಯಾಗಿದೆ. ಇನ್ನಾದರೂ ಇಲ್ಲಿನ ಜನರ ಬದುಕನ್ನು ಬದಲಾಯಿಸುವ ಅಭಿವೃದ್ಧಿಯಾಗಬೇಕು ಎಂಬುದು ಅವರ ಒತ್ತಾಯ.

ಸ್ಮಾರ್ಟ್‌ಸಿಟಿ: ಶೇ 70 ಅನುದಾನ ಹಳೇ ದಾವಣಗೆರೆಗೆ
ಸ್ಮಾರ್ಟ್‌ಸಿಟಿ ಯೋಜನೆಯಡಿ ₹ 1000 ಕೋಟಿ ದಾವಣಗೆರೆಗೆ ಅನುದಾನ ದೊರೆಯಲಿದೆ. ಅದರಲ್ಲಿ ₹ 700 ಕೋಟಿಯನ್ನು ಹಳೇ ದಾವಣಗೆರೆಯ ಅಭಿವೃದ್ಧಿಗಾಗಿಯೇ ಮೀಸಲಿಡಲಾಗಿದೆ. ನೀರು, ಚರಂಡಿ, ಒಳಚರಂಡಿ, ರಾಜಕಾಲುವೆ, ರಸ್ತೆ ಹೀಗೆ ಬಹುತೇಕ ಸಮಸ್ಯೆಗಳು ಇದರಿಂದ ಸರಿಯಾಗಲಿವೆ. ಸ್ಮಾರ್ಟ್‌ಸಿಟಿ ಕಾಮಗಾರಿಗಳು ಮುಗಿದಾಗ ಹಳೇ ದಾವಣಗೆರೆಯೂ ಅಭಿವೃದ್ಧಿ ಕಾಣಲಿದೆ ಎನ್ನುತ್ತಾರೆ ಪಾಲಿಕೆಯ ಅಧಿಕಾರಿಗಳು.

ವ್ಯತ್ಯಾಸಕ್ಕೆ ಕಾರಣವೇನು?
ಹೊಸ ದಾವಣಗೆರೆಯಲ್ಲಿ ಖಾಸಗಿ ಲೇಔಟ್‌ಗಳೇ ಬಹಳ ಇವೆ. ಯಾವುದೇ ಲೇಔಟ್‌ ಮಾಡಬೇಕಿದ್ದರೆ ಅದರ ಒಟ್ಟು ವಿಸ್ತೀರ್ಣದಲ್ಲಿ ಶೇ 45ರಷ್ಟನ್ನು ಪಾರ್ಕ್‌, ಚರಂಡಿ, ರಸ್ತೆ ಮುಂತಾದ ಸಾರ್ವಜನಿಕ ಬಳಕೆಗೆ ಮೀಸಲಿಡಬೇಕು. ಹಾಗಾಗಿ ಪ್ರತಿ ಬಡಾವಣೆಯಲ್ಲಿ ಸುಸಜ್ಜಿತ ಪಾರ್ಕ್‌ಗಳು, ರಸ್ತೆಗಳು, ಚರಂಡಿ, ಒಳಚರಂಡಿ ವ್ಯವಸ್ಥೆ ಕಲ್ಪಸಲು ಸಾಧ್ಯವಾಗುತ್ತದೆ. ಆದರೆ ಹಳೇ ದಾವಣಗೆರೆಯಲ್ಲಿ ಖಾಸಗಿ ಲೇಔಟ್‌ಗಳು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ ಇದೆ. ಅವೆಲ್ಲ ಗ್ರಾಮಠಾಣಾ ಭೂಮಿಗಳು. ಅದರಲ್ಲಿ ಕಟ್ಟಡಗಳನ್ನು ಕಟ್ಟಲಾಗಿದೆ. 40–50 ವರ್ಷಗಳ ಹಿಂದೆ ಹೇಗೆ ಬೇಕೋ ಹಾಗೆ ಮನೆ, ಅಂಗಡಿಗಳನ್ನು ಕಟ್ಟಲಾಗಿತ್ತು. ರಸ್ತೆಗಳು ನಿರ್ಮಾಣಗೊಂಡಿದ್ದವು. ಈಗಿನ ಜನಸಂಖ್ಯೆ, ವಾಹನಸಂಖ್ಯೆ, ವ್ಯಾಪಾರ ವಹಿವಾಟುಗಳಿಗೆ ಅನುಗುಣವಾಗಿ ಅಭಿವೃದ್ಧಿ ಮಾಡಲು ಅಲ್ಲಿ ಜಾಗವಿಲ್ಲ. ಹಳೇ ದಾವಣಗೆರೆಯ ಹೊರ ಆವರಣದಲ್ಲಿ ಖಾಸಗಿ ಲೇಔಟ್‌ಗಳು ಆಗುತ್ತಿವೆ. ಅಲ್ಲಿ ಪಾರ್ಕ್‌, ರಸ್ತೆಗಳು ಚೆನ್ನಾಗಿವೆ.

ನೀರಿನ ಸರಬರಾಜಿಗೂ ಇದೇ ಸಮಸ್ಯೆಯಾಗಿದೆ. ದೊಡ್ಡ ಪೈಪ್‌ಲೈನ್‌ ಹಾಕಲು ಜಾಗವಿಲ್ಲ. ಇರುವ ಹಳೇ ಪೈಪಲ್ಲೇ ನೀರು ಹರಿಸಬೇಕಾಗುತ್ತದೆ. ಔಟ್‌ ರಿಂಗ್‌ರೋಡ್‌ ಮೂಲಕ ನೀರುವ ಪೂರೈಕೆಯ ಪೈಪ್‌ ಅಳವಡಿಸಲು ಉದ್ದೇಶಿಸಲಾಗಿದೆ. ಅದಾದರೆ ಹೊಸ ದಾವಣಗೆರೆಯ ರೀತಿಯಲ್ಲೇ ಹಳೇದಾವಣಗೆರೆಯಲ್ಲಿಯೂ ನಿತ್ಯ ನೀರು ದೊರೆಯಲಿದೆ.

ಅಂಕಿ ಅಂಶಗಳು
5,000:ಹೊಸ ದಾವಣಗೆರೆಯಲ್ಲಿ ಇರುವ ಒಟ್ಟು ಹಂದಿಗಳು ಅಂದಾಜು ಸಂಖ್ಯೆ
20,000:ಹಳೇ ದಾವಣಗೆರೆಯಲ್ಲಿರುವ ಹಂದಿಗಳ ಅಂದಾಜು ಸಂಖ್ಯೆ
6,500:ಪಾಲಿಕೆ ವ್ಯಾಪ್ತಿಯಲ್ಲಿರುವ ದನಗಳು
100:ಹೊಸ ದಾವಣಗೆರೆಯಲ್ಲಿ ಬೀಡಾಡಿಗಳಾಗಿರುವ ದನಗಳ ಅಂದಾಜು ಪ್ರಮಾಣ
500:ಹಳೇ ದಾವಣಗೆರೆಯಲ್ಲಿ ಇರುವ ಬೀಡಾಡಿ ದನಗಳು
2,000:ಹೊಸ ದಾವಣಗೆರೆಯಲ್ಲಿ ಬೀದಿನಾಯಿಗಳ ಸಂಖ್ಯೆ
10,000:ಹಳೇ ದಾವಣಗೆರೆಯಲ್ಲಿ ಇರುವ ಬೀದಿನಾಯಿಗಳ ಸಂಖ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT