ದಾವಣಗೆರೆ: ಲಿಂಗಾಯತ–ಅಹಿಂದ ನಡುವೆ ತಿಕ್ಕಾಟಕ್ಕೆ ನಾಂದಿ

ಶುಕ್ರವಾರ, ಮೇ 24, 2019
33 °C
ಜಿ.ಪಂ. ಮಾಜಿ ಅಧ್ಯಕ್ಷ ಡಾ. ರಾಮಪ್ಪ ವಿಡಿಯೊ ವೈರಲ್‌

ದಾವಣಗೆರೆ: ಲಿಂಗಾಯತ–ಅಹಿಂದ ನಡುವೆ ತಿಕ್ಕಾಟಕ್ಕೆ ನಾಂದಿ

Published:
Updated:
Prajavani

ದಾವಣಗೆರೆ: ನೇರ್ಲಗಿ ಗ್ರಾಮದಲ್ಲಿ ಲೋಕಸಭಾ ಚುನಾವಣೆಯ ಮತದಾನದ ದಿನ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಡಾ. ವೈ.ರಾಮಪ್ಪ ಅವರ ಹೇಳಿಕೆಯು ವೀರಶೈವ ಲಿಂಗಾಯತ ಮತ್ತು ‘ಅಹಿಂದ’ ಸಮಾಜಗಳ ನಡುವೆ ಮುಸುಕಿನ ಗುದ್ದಾಟಕ್ಕೆ ಎಡೆಮಾಡಿಕೊಟ್ಟಿದೆ.

ವೈರಲ್‌ ಆಗಿರುವ ವಿಡಿಯೊದಲ್ಲಿ ರಾಮಪ್ಪ ಅವರು ತಮ್ಮ ಸಮುದಾಯ ಹಾಗೂ ಈಶ್ವರ ದೇವರನ್ನು ನಿಂದಿಸಿದ್ದಾರೆ ಎಂದು ಆರೋಪಿಸಿ ಲಿಂಗಾಯತ ವೀರಶೈವ ಸಮಾನ ಮನಸ್ಕರ ವೇದಿಕೆ ಆಶ್ರಯದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಲಿಂಗಾಯತರು ಗುರುವಾರ ನಗರದಲ್ಲಿ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಹಿರಂಗವಾಗಿ ಅವರು ಸಮುದಾಯದ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳ ಲಿಂಗಾಯತ ಮುಖಂಡರು ಪಕ್ಷಾತೀತವಾಗಿ ಹೋರಾಟದಲ್ಲಿ ಪಾಲ್ಗೊಳ್ಳುವ ಮೂಲಕ ಸಮುದಾಯದ ಒಗ್ಗಟ್ಟು ಪ್ರದರ್ಶಿಸಿದರು. ಜಾತಿ ನಿಂದಿಸಿದ ರಾಮಪ್ಪ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಯಾಗಿ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೈ. ರಾಮಪ್ಪ, ‘ನಾನು ಎಲ್ಲಿಯೂ ಲಿಂಗಾಯತ–ವೀರಶೈವ ಪದವನ್ನು ಬಳಸಿಲ್ಲ. ಹೀಗಾಗಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ರೂಪಿಸಲಾಗುತ್ತಿದೆ. ಪ್ರತಿಭಟನೆ ವೇಳೆ ಜಾತಿ ನಿಂದನೆ ಮಾಡಿದ್ದಾರೆ. ಹೀಗಾಗಿ ಅವರೇ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ವಾರದೊಳಗೆ ‘ಅಹಿಂದ’ ಸಮಾಜದ ಮುಖಂಡರ ಸಭೆ ಕರೆದು ಅವರ ವಿರುದ್ಧವೇ ಹೋರಾಟ ಕೈಗೊಳ್ಳಲಾಗುವುದು. ಅಹಿಂದ ಸಮಾಜದ ಶಕ್ತಿಯನ್ನು ನಾವೂ ತೋರಿಸುತ್ತೇವೆ’ ಎಂದು ಎದುರೇಟು ನೀಡಿದರು.

ಚುನಾವಣೆಯ ಸಂದರ್ಭದಲ್ಲಿ ನಡೆದ ರಾಜಕೀಯ ಸಂಘರ್ಷವು ಇದೀಗ ‘ಜಾತಿ’ಯ ಬಣ್ಣ ಪಡೆದುಕೊಂಡಿದೆ. ಜಿಲ್ಲೆಯ ಪ್ರಬಲ ಸಮುದಾಯವಾದ ಲಿಂಗಾಯತ ಹಾಗೂ ‘ಅಹಿಂದ’ದ ನಡುವಿನ ತಿಕ್ಕಾಟಕ್ಕೆ ಲೋಕಸಭಾ ಚುನಾವಣೆ ನಾಂದಿ ಹಾಡಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !