ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ಜೀವನ, ಸಮಾಜಕ್ಕೆ ಹಿಡಿದ ಕನ್ನಡಿ

ಕವನ ಸಂಕಲ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ
Last Updated 27 ಫೆಬ್ರುವರಿ 2020, 15:40 IST
ಅಕ್ಷರ ಗಾತ್ರ

ದಾವಣಗೆರೆ: ಸಾಹಿತ್ಯ ಜೀವನ, ಸಮಾಜಕ್ಕೆ ಹಿಡಿದ ಕನ್ನಡಿ. ಜೀವನದ ಬಗೆಗಿನ ಲೋಕಾನುಭವ ಹೇಳಲು ಸಾಹಿತಿ ತನ್ನದೇ ಆದ ಶೈಲಿ ಬಳಸುತ್ತಾರೆ. ಇದು ಓದುಗರನ್ನು ಸೆಳೆಯಲು ಸಹಕಾರಿ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಎ.ವಿ. ಪ್ರಕಾಶನ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಅನುಪಮ ವಿರೂಪಾಕ್ಷಪ್ಪ ಅವರ ‘ಬೆಳಕಿನೆಡೆಗೆ’ ಕವನ ಸಂಕಲನವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.

ಜೀವನದಲ್ಲಿ ಎಲ್ಲರಿಗೂ ಒಮ್ಮೆಯಾದರೂ ಹಾಡಬೇಕು ಅನಿಸಿರುತ್ತದೆ. ಹಾಗೆಯೇ ಏನಾದರೂ ಬರೆಯಬೇಕು ಎಂದು ಅನಿಸಿರುತ್ತದೆ. ಪಕ್ಷತೆ ಬಂದಾಗ ಹೊರಗಿನಿಂದ ಒಳ ಮನಸ್ಸನ್ನು ನೋಡಲು ಶುರುವಾದಾಗ ಉತ್ಕೃಷ್ಟ ಸಾಹಿತ್ಯ ರಚನೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಈಗ ಸಾಹಿತ್ಯ ರಚಿಸಲು ಹಿಂದಿನಂತೆ ಹೆಚ್ಚು ಹೆಚ್ಚು ಹೊಸ ವಸ್ತು ಸಿಗುತ್ತಿಲ್ಲ. ಹಾಗಾಗಿ ವಿಭಿನ್ನ ಶೈಲಿಯಲ್ಲಿ ಲೇಖಕರು ಸಾಹಿತ್ಯ ರಚಿಸುವತ್ತ ಚಿತ್ತ ಹರಿಸಿದ್ದಾರೆ. ಪ್ರೀತಿ ಬಗ್ಗೆ ಹೇಳುವಾಗ ಪ್ರತಿಮೆ ಬದಲಾಗುತ್ತದೆ. ಅದೇ ರೀತಿ ಸಾಹಿತ್ಯ ನಿರಂತರ ಪ್ರತಿಮೆ. ನಿರೂಪಣಾ ಶೈಲಿ ಬದಲಾಗುತ್ತದೆ ಎಂದು ವಿಶ್ಲೇಷಿಸಿದರು.

ಅನುಪಮ ಅವರು ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ಕೃಷಿ ಮಾಡಿ ಸಾಧನೆ ಮಾಡಲಿ ಎಂದು ಆಶಿಸಿದರು.

ಕವನ ಸಂಕಲನ ಕುರಿತು ಮಾತನಾಡಿದ ಸಾಹಿತಿ ಎಸ್‌.ಟಿ. ಶಾಂತಗಂಗಾಧರ್‌, ‘ಸಾಹಿತ್ಯದ ಮೂಲ ಹುಟ್ಟು ಆಗಿದ್ದು ಹೆಣ್ಣು ಮಕ್ಕಳಿಂದ. ನೋಡುವ ಕಣ್ಣು, ಮಿಡಿಯುವ ಹೃದಯ ಇದ್ದಾಗ ಅಪರೂಪದ ವ್ಯಂಜಕ ಸಾಹಿತ್ಯ ರಚನೆಯಾಗಲು ಸಾಧ್ಯ. ಅನುಪಮ ಅವರು ಉತ್ತಮವಾದ ಕವನ ಸಂಕಲನ ರಚಿಸಿದ್ದಾರೆ. ಅಚ್ಚುಕಟ್ಟುತನ ಕಾವ್ಯದ ದೊಡ್ಡ ಗುಣ. ಅದನ್ನು ಇಲ್ಲಿ ಕಾಣಬಹುದು’ ಎಂದು ಹೇಳಿದರು.

ಕವನ ಸಂಕಲನದ ಉದ್ದಕ್ಕೂ ವ್ಯಕ್ತಿ ಚಿತ್ರವನ್ನು ಸರಳವಾದ ಓದುಗರಿಗೆ ಮನಮುಟ್ಟುವ ಭಾಷೆಯಲ್ಲಿ, ಉದ್ವೇಗವಿಲ್ಲದೆ ಚಿತ್ರಿಸಿದ್ದಾರೆ. ಕವಿಗೆ ನಿರ್ಭಾವುಕ ಗುಣ ಮುಖ್ಯ. ಇಂದು ನಡೆಯುತ್ತಿರುವ ಹೆಣ್ಣಿನ ಮೇಲಿನ ದೌರ್ಜನ್ಯವನ್ನೂ ನಿರ್ಭಾವುಕವಾಗಿ ಕಟ್ಟಿಕೊಟ್ಟಿದ್ದಾರೆ. ರಾಜಕಾರಣ, ಅತ್ಯಾಚಾರ, ಹಿರಿಯ ಮಹಿಳೆಯೊಬ್ಬರು ಕನ್ನಡಿ ಮುಂದೆ ನಿಂತು ತನ್ನ ಇಡೀ ಜೀವನವನ್ನು ಒಮ್ಮೆ ಮೆಲುಕು ಹಾಕುವ ಚಿತ್ರಣವನ್ನೂ ಉತ್ತಮವಾಗಿ ಕಟ್ಟಿಕೊಟ್ಟಿದ್ದಾರೆ ಎಂದು ವಿಮರ್ಷಿಸಿದರು.

ಕವಯಿತ್ರಿ ಅನುಪಮ, ‘ವಿದ್ಯಾರ್ಥಿ ದಿಸೆಯಲ್ಲಿಯೇ ಬರೆಯುವ ಹವ್ಯಾಸ ಇತ್ತು. ಸ್ನೇಹಿತರ ಒತ್ತಾಸೆಯಿಂದ ಕವನ ರಚಿಸಿದ್ದೇನೆ. ನೈತಿಕ ಮೌಲ್ಯಗಳು ಇಂದು ಕುಸಿಯುತ್ತಿರುವುದು ನನ್ನನ್ನು ಬಹಳ ಕಾಡಿದ ಕಾರಣ ಅದನ್ನು ಇಲ್ಲಿ ಅಭಿವ್ಯಕ್ತಿಸಿದ್ದೇನೆ’ ಎಂದು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಎಚ್‌.ಎಸ್‌. ಮಂಜುನಾಥ ಕುರ್ಕಿ ಅಧ್ಯಕ್ಷತೆ ವಹಿಸಿದ್ದರು. ಜನಪದ ಸಾಹಿತಿ ಕತ್ತಿಗೆ ಚನ್ನಪ್ಪ, ಪತ್ರಕರ್ತ ಬಿ.ಎನ್‌. ಮಲ್ಲೇಶ್‌ ಇದ್ದರು. ಪ್ರಾಧ್ಯಾಪಕ ಡಾ. ಅಶೋಕ್‌ಕುಮಾರ್‌ ಪಾಳೇದ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಈ. ವಿರೂಪಾಕ್ಷಪ್ಪ ಸ್ವಾಗತಿಸಿದರು. ಡಾ. ಮಂಜುನಾಥ್‌ ಕೆ.ಎಂ. ನಿರೂಪಿಸಿದರು. ವಿವೇಕಾನಂದ ಪಾಟೀಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT