ಸೋಮವಾರ, ಜುಲೈ 4, 2022
21 °C

ರೈತರೇ ಬೆಳೆಗಳ ಬೆಲೆ ನಿರ್ಧರಿಸಲಿ: ಪ್ರಕಾಶ್ ಕಮ್ಮರಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೃಷಿ ವಲಯದಲ್ಲಿ ಬಿಕ್ಕಟ್ಟಿಲ್ಲ. ಬದಲಾಗಿ ಅನ್ನದಾತರಲ್ಲಿ ಮಾತ್ರ ಬಿಕ್ಕಟ್ಟಿದೆ ಎಂದು ಕೃಷಿ ಬೆಲೆ ಕರ್ನಾಟಕ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಪ್ರಕಾಶ್ ಕಮ್ಮರಡಿ ಅಭಿಪ್ರಾಯಪಟ್ಟರು.

ಇಲ್ಲಿನ ಹೋಟೆಲ್ ತಾಜ್ ಪ್ಯಾಲೇಸ್‌ನಲ್ಲಿ ಶುಕ್ರವಾರ ನಡೆದ 8ನೇ ಮೇ ಸಾಹಿತ್ಯ ಮೇಳದಲ್ಲಿ ‘ಗ್ರಾಮ ಭಾರತ’ ವಿಷಯ ಕುರಿತು ಅವರು ಮಾತನಾಡಿದರು.

‘ನ್ಯಾಷನಲ್ ಕ್ರೈಮ್ ಬ್ಯೂರೊ ಮಾಹಿತಿಯ ಪ್ರಕಾರ ಭಾರತದಲ್ಲಿ 10 ವರ್ಷಗಳಗಳಲ್ಲಿ 10 ಸಾವಿರ ಕೃಷಿಕರು, ಪ್ರತಿದಿನ 27ರಿಂದ 28 ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಈ ದೇಶದಲ್ಲಿ ರೈತರು ಹೇಗೆ ಬದುಕುತ್ತಿದ್ದಾರೆ ಎಂದು ಯಾವ ಅಂಕಿ ಅಂಶಗಳು ಹೇಳುತ್ತಿಲ್ಲ. ಶೇ 75ರಷ್ಟು ಮಂದಿ ಒಂದು ಎಕರೆಗಿಂತ ಕಡಿಮೆ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದಾರೆ’ ಎಂದು ತಿಳಿಸಿದರು. 

‘ಈ ದೇಶದಲ್ಲಿ ಕೊರೊನಾ ಸಮಯದಲ್ಲಿ ಕೈಗಾರಿಕಾ ಹಾಗೂ ಸೇವಾ ವಲಯಗಳು ಮುಚ್ಚಿಹೋದ ಸಂದರ್ಭದಲ್ಲಿಯೂ ಕೃಷಿ ವಲಯ ಪ್ರಗತಿ ಸಾಧಿಸಿತು. 100 ಮಿಲಿಯನ್ ಟನ್ ಆಹಾರ ಕೊಳೆಯುತ್ತಿದೆ. ತರಕಾರಿ, ಹಾಲು, ಹಣ್ಣುಗಳು ಸಮೃದ್ಧವಾಗಿ ಬೆಳೆದವು. ಇಲ್ಲದಿದ್ದರೆ ಬಾಯಿ ಬಡಿದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು’ ಎಂದು ಹೇಳಿದರು.

‘ಇಂದು ರೈತರು ಬೆಳೆದ ಬೆಳೆಗಳಿಗೆ ಉತ್ತಮ ದರ ಸಿಗದೇ ಭರವಸೆ ಶೂನ್ಯರಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮಾನ್ಸೂನ್ ಹಾಗೂ ಮಾರುಕಟ್ಟೆ ರೈತರ ದೊಡ್ಡ ಶತ್ರುಗಳು, ಜೀವನ ಭದ್ರತೆ ಇಲ್ಲದೇ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಬೇರೆ ಬೇರೆ ವಸ್ತುಗಳಿಗೆ ಬೆಲೆಯನ್ನು ಮಾಲೀಕರೇ ನಿರ್ಧರಿಸುತ್ತಾರೆ. ಆದರೆ ಕೃಷಿಕರು ಮಾತ್ರ ತಾವು ಬೆಳೆದ ಉತ್ಪನ್ನಗಳಿಗೆ ಬೆಲೆಯನ್ನು ನಿರ್ಧರಿಸುವ ಪರಿಸ್ಥಿತಿ ಇಲ್ಲ. ಬದಲಾಗಿ ಬೆಂಬಲ ಬೆಲೆಗೆ ಬೇಡುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ರೈತರು ಒಂದೇ ಬೆಳೆಯನ್ನು ಅವಲಂಬಿಸದೇ ಆದಾಯ ತರುವ ವಿವಿಧ ಬೆಳೆಗಳನ್ನು ಬೆಳೆಯಬೇಕು’ ಎಂದು ವಿಶ್ಲೇಷಿಸಿದರು. 

ಉಪನ್ಯಾಸಕ ಕೆ.ಪಿ.ಸುರೇಶ್ ಮಾತನಾಡಿ, ‘ಗ್ರಾಮ ಭಾರತ ಎಂದರೆ ಕೇವಲ ಕೃಷಿಕರು ಮಾತ್ರ ಎಂಬಂತಾಗಿದೆ. ಆದರೆ ಕೂಲಿಕಾರರು, ಮಹಿಳೆಯರು ಅಂಚಿಗೆ ಸರಿದಿದ್ದಾರೆ. ಮಳೆಯಾಶ್ರಿತ ಪ್ರದೇಶಗಳ ರೈತರ ಬಗ್ಗೆ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ’ ಎಂದು ಹೇಳಿದರು. ರೈತ ಮುಖಂಡರಾದ ತೇಜಸ್ವಿ ಪಟೇಲ್, ಆವರಗೆರೆ ರುದ್ರಮುನಿ, ಹೊನ್ನೂರು ಮುನಿಯಪ್ಪ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು