ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ಯರಿಗೆ ಹಿಂಸೆ ಏಕೆ?

Last Updated 11 ಏಪ್ರಿಲ್ 2018, 20:08 IST
ಅಕ್ಷರ ಗಾತ್ರ

ಜೈನಕಾಶಿ ಶ್ರವಣಬೆಳಗೊಳದಲ್ಲಿ ಮುಂದುವರೆದಿರುವ ಮಹಾಮಸ್ತಕಾಭಿಷೇಕವನ್ನು ಕಣ್ತುಂಬಿಕೊಳ್ಳಲು ಇತ್ತೀಚೆಗೆ ತೆರಳಿದ್ದೆ. ವಿಂಧ್ಯಗಿರಿಯನ್ನು ಹಿಂಭಾಗದಿಂದ ಏರುವಾಗ, ಅಲ್ಲಿನ ಸ್ವಯಂ ಸೇವಕರು ಪಾದರಕ್ಷೆಗಳನ್ನು ಧರಿಸಿಕೊಂಡು ಬೆಟ್ಟವೇರದಂತೆ ತಿಳಿಸುತ್ತ, ಮೇಲೇರದಂತೆ ತಡೆಯೊಡ್ಡುತ್ತಿದ್ದರು. ರಣಬಿಸಿಲಿನಲ್ಲಿ, ಸಂಪೂರ್ಣ ಕಲ್ಲಿನಿಂದಲೇ ಆವೃತವಾಗಿರುವ ಆ ಹೆಬ್ಬಂಡೆಯ ಮೆಟ್ಟಿಲುಗಳನ್ನು ಪಾದರಕ್ಷೆ ಧರಿಸಿ ಏರುವುದೇ ದುಸ್ತರ, ಅಂತಹುದರಲ್ಲಿ ಬರಿಗಾಲಲ್ಲಿ ನಡೆಯುವುದು ಹೇಗೆಂದು ತಿಳಿಯಲಿಲ್ಲ. ಸ್ವಯಂಸೇವಕರೂ ಅದಕ್ಕೆ ಪರ್ಯಾಯವನ್ನು ಸೂಚಿಸಲಿಲ್ಲ!
ಹಾಗೂ ಹೀಗೂ ಕಷ್ಟಪಟ್ಟು ಮೇಲೇರಿ ಬಂದಾಗ ಬಾಹುಬಲಿ ಮೂರ್ತಿಯ ಸುತ್ತಲಿನ ಪೌಳಿಯ ಸನಿಹದಲ್ಲಿಯೇ ತಾತ್ಕಾಲಿಕ ಶೌಚಾಲಯಗಳನ್ನು ನಿರ್ಮಿಸಿರುವುದು ಕಣ್ಣಿಗೆ ಬಿತ್ತು. ಅಲ್ಲಿಗೆ ಹೋದ ಮಹಿಳೆಯರು ಅಲ್ಲಿನ ದುರ್ವಾಸನೆ, ಅವ್ಯವಸ್ಥೆ, ಗಲೀಜು ನೋಡಿ ಹಾಗೆಯೇ ಹಿಂದಿರುಗಿ ಬರುತ್ತಿದ್ದರು. ಪಾದರಕ್ಷೆ ಧರಿಸಿ ಬೆಟ್ಟವೇರುವುದು ಅಪರಾಧವೆಂದಾದರೆ, ಬಾಹುಬಲಿಯ ಸನಿಹವೇ ಶೌಚಾಲಯ ನಿರ್ಮಾಣ ಮಾಡಿದ್ದು ಸಮರ್ಥನೀಯವೇ? ಅನಿವಾರ್ಯಕ್ಕೆಂದು ನಿರ್ಮಿಸಿದ್ದಾದಲ್ಲಿ, ಸ್ವಚ್ಛತೆಯನ್ನು ನಿರ್ವಹಿಸಬೇಕಲ್ಲವೇ?
ಜೈನ ಧರ್ಮ ಅಹಿಂಸೆಯನ್ನು ಸಾರುತ್ತದೆ ಎಂಬುದು ನನ್ನ ತಿಳಿವಳಿಕೆ. ಆ ಧರ್ಮೀಯರು ತಮ್ಮ ಧರ್ಮವನ್ನು ಹೇಗಾದರೂ ಆಚರಿಸಿಕೊಳ್ಳಲಿ, ಅದು ಅವರವರ ಭಕ್ತಿ, ಭಾವ, ಶ್ರದ್ಧೆಯ ಸಂಗತಿ. ಆದರೆ ಐತಿಹಾಸಿಕ- ಪಾರಂಪರಿಕ ಸಂಗತಿಗಳನ್ನು ಕಣ್ತುಂಬಿಕೊಳ್ಳಲು ಬರುವ ಆಸಕ್ತ ಜನಸಾಮಾನ್ಯರಿಗೆ ಬರಿಗಾಲಿನಲ್ಲಿ ಬೆಟ್ಟವೇರುವಂತೆ ಮಾಡುವುದು ಎಷ್ಟು ಸೂಕ್ತ?
ಮಹಾಮಸ್ತಕಾಭಿಷೇಕಕ್ಕೆ ಜೈನ ಸಮುದಾಯದವರೇ ಎಲ್ಲ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಂಡಿದ್ದರೆ ಅಥವಾ ವಿಂಧ್ಯಗಿರಿಯು ಅವರ ಖಾಸಗಿ ಸ್ವತ್ತಾಗಿದ್ದರೆ ಇವೆಲ್ಲ ಪ್ರಶ್ನೆಗಳು ಅನವಶ್ಯಕವಾಗಿದ್ದವು. ಆದರೆ ನಮ್ಮಂಥ ಜನಸಾಮಾನ್ಯರ ತೆರಿಗೆ ಹಣದಲ್ಲಿಯೇ ರಸ್ತೆ, ನೀರು, ವಿದ್ಯುತ್, ಅಭಿಷೇಕಕ್ಕಾಗಿ ಅಟ್ಟಣಿಗೆಯಂಥ ಅನುಕೂಲಗಳನ್ನು ಪಡೆದುಕೊಂಡು, ಇಂಥ ಅವಾಸ್ತವಿಕ, ಅನವಶ್ಯಕ ಕಟ್ಟುಪಾಡುಗಳನ್ನು ವಿಧಿಸುವುದು ನ್ಯಾಯಸಮ್ಮತವಲ್ಲ. ಲಕ್ಷಾಂತರ ಜನ ಪಾಲ್ಗೊಳ್ಳುವ ಇಲ್ಲಿ, ಒಂದು ಮಸ್ತಕಾಭಿಷೇಕಕ್ಕೆ ಭಕ್ತರಿಂದ ಕನಿಷ್ಠ ₹ 2000 ಪಡೆಯುವ ಆಯೋಜಕರು, ಇಂಥ ಸಮಸ್ಯೆಗಳೆಡೆಯೂ ಗಮನಹರಿಸಬೇಕು.


ಡಾ. ಚನ್ನು ಅ. ಹಿರೇಮಠ, ರಾಣೆಬೆನ್ನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT