ಶನಿವಾರ, ಅಕ್ಟೋಬರ್ 16, 2021
23 °C
ಆಮ್ಲಜನಕ ಕೊರತೆಯಿಂದ ಸಾವು ನೋವು ತಪ್ಪಿಸಲು ಈ ಕ್ರಮ: ಸಂಸದ ಸಿದ್ದೇಶ್ವರ

ಜಿಲ್ಲಾ ಆಸ್ಪತ್ರೆಯಲ್ಲಿ ಆಮ್ಲಜನಕ ಸ್ಥಾವರಗಳ ಲೋಕಾರ್ಪಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಆಸ್ಪತ್ರೆಗಳಲ್ಲಿ ಆಮ್ಲಜನಕ ಲಭ್ಯತೆ ಸರಾಗವಾಗಲು ಪಿಎಂ ಕೇರ್‌ ನಿಧಿಯಿಂದ ನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ನಿರ್ಮಾಣ ಮಾಡಲಾಗಿರುವ 1000 ಲೀಟರ್‌ ಪರ್‌ ಮಿನಿಟ್‌ ಸಾಮರ್ಥ್ಯದ ಮತ್ತು ಪಿಎಸ್‍ಎಯಿಂದ (ಪ್ರೆಶರ್ ಸ್ವಿಂಗ್ ಅಡ್ಸಾಪ್ರ್ಶನ್) 1000 ಎಲ್‌ಪಿಎಂ ಸಾಮರ್ಥ್ಯದ 2 ಆಮ್ಲಜನಕ ಸ್ಥಾವರಗಳನ್ನು ಗುರುವಾರ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಹಾಗೂ ನಗರಾಭಿವೃದ್ಧಿ ಸಚಿವ ಹರ್ದಿಪ್ ಸಿಂಗ್ ಪುರಿ ಹಾಗೂ ಕೇಂದ್ರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವ ರಾಮೇಶ್ವರ ತೆಲಿ ಅವರ ಉಪಸ್ಥಿತಿಯಲ್ಲಿ ವರ್ಚುವಲ್ ಮೂಲಕ ಉದ್ಘಾಟಿಸಲಾಯಿತು.

ನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿನ ಕಾರ್ಯಕ್ರಮದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ಹಾಗೂ ಮಾಯಕೊಂಡ ಶಾಸಕ ಪ್ರೊ.ಲಿಂಗಣ್ಣ ಅವರು ಆಮ್ಲಜನಕ ಘಟಕ ಲೋಕಾರ್ಪಣೆ ಮಾಡಿದರು.

‘ಇದೊಂದು ಪ್ರಮುಖ ಆರೋಗ್ಯ ಸೌಕರ್ಯವಾಗಿದ್ದು, ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ. ಕೋವಿಡ್ ಮೊದಲನೇ ಅಲೆ ಸಂದರ್ಭದಲ್ಲಿ ದೇಶದಲ್ಲಿ 1 ಲಕ್ಷ ಲೀಟರ್‌ ಉತ್ಪಾದನಾ ಸಾಮರ್ಥ್ಯ ಹೊಂದಲಾಗಿತ್ತು, ಹೀಗಾಗಿ ಹೊರದೇಶಗಳಿಂದ ಆಮ್ಲಜನಕ ಆಮದು ಮಾಡಿಕೊಳ್ಳಲಾಗಿತ್ತು. ಈಗ ಪ್ರತಿ ನಿಮಿಷಕ್ಕೆ 4 ಲಕ್ಷದಿಂದ 5 ಲಕ್ಷ ಲೀಟರ್‌ ಉತ್ಪಾದಿಸಲಾಗುತ್ತಿದೆ’ ಎಂದರು.

ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಹಾಗೂ ಹೊರದೇಶದಿಂದ ಆಮ್ಲಜನಕ ತರಿಸಬಾರದು.  ಆಮ್ಲಜನಕ ಕೊರತೆಯಿಂದ ಸಾವು ನೋವು ಉಂಟಾಗಬಾರದು ಎಂಬ ದೂರದೃಷ್ಟಿಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಘಟಕಗಳನ್ನು ಸ್ಥಾಪಿಸಲು ಆದೇಶ ನೀಡಿದ್ದರು ಎಂದು ತಿಳಿಸಿದರು.

ಈ ವೇಳೆ ಜಿಲ್ಲಾ ಆಸ್ಪತ್ರೆಯಲ್ಲಿನ 65-66ನೇ ವಾರ್ಡ್ ಮಕ್ಕಳ ತೀವ್ರ ನಿಗಾ ಚಿಕಿತ್ಸಾ ಘಟಕ ಹಾಗೂ ಸೆಲ್ಕೋ ಫೌಂಡೇಶನ್, ಬೆಂಗಳೂರು ವತಿಯಿಂದ ಕೊಡಮಾಡಿರುವ ₹ 6.50 ಲಕ್ಷ ಮೌಲ್ಯದ ಡಿ-ಡೈಮರ್ ಟೆಸ್ಟಿಂಗ್ ಉಪಕರಣವನ್ನು ವೀಕ್ಷಿಸಿದರು. ಹಾಗೂ ರಕ್ತದಾನ ಮಾಡಿದವರಿಗೆ ಪ್ರಮಾಣಪತ್ರ ವಿತರಿಸಿದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಮೇಯರ್‌ ಎಸ್.ಟಿ. ವೀರೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವಿಜಯ ಮಹಾಂತೇಶ್‌ ದಾನಮ್ಮನವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಜಿಲ್ಲಾ ಸರ್ಜನ್ ಡಾ.ಜಯಪ್ರಕಾಶ್, ಡಿಎಚ್‍ಒ ಡಾ. ನಾಗರಾಜ್, ಹಿರಿಯ ಶುಶ್ರೂಷಕಿ ಡಾ. ಆಶಾ ಕಾಂಬ್ಳೆ, ಮಕ್ಕಳ ತಜ್ಞ ಡಾ. ಸುರೇಶ್ ಅವರೂ ಇದ್ದರು.

ಡಯಾಲಿಸಿಸ್‌ಗೆ ಹೊರಗೆ ಚೀಟಿ: ಆರೋಪ

ಡಯಾಲಿಸಿಸ್‍ಗಾಗಿ ದಾಖಲಾಗುವ ರೋಗಿಗಳಿಗೆ ಅಗತ್ಯವಿರುವ ಔಷಧಗಳನ್ನು ಹೊರಗಡೆಯಿಂದ ಖರೀದಿಸಿ ತರುವಂತೆ ವೈದ್ಯರು ಚೀಟಿ ನೀಡುತ್ತಿದ್ದಾರೆ. ಇದರಿಂದ ಬಡ ರೋಗಿಗಳಿಗೆ ತೊಂದರೆಯಾಗುತ್ತಿದೆ ಎಂದು ರೋಗಿಗಳ ಸಂಬಂಧಿಗಳು ಸಂಸದರ ಬಳಿ ತಮ್ಮ ಅಳಲು ತೋಡಿಕೊಂಡರು.

ಜಿಲ್ಲಾ ಆಸ್ಪತ್ರೆ ಅಧೀಕ್ಷಕರು ಈ ಬಗ್ಗೆ ಪರಿಶೀಲಿಸಬೇಕು. ಈ ರೀತಿಯ ಆರೋಪ ಪದೇ ಪದೇ ಕೇಳಿಬರುತ್ತಿದೆ. ಮುಂದೆ ಈ ರೀತಿಯ ದೂರುಗಳು ಬಂದಲ್ಲಿ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಎಚ್ಚರಿಕೆ ನೀಡಿದರು.

ಔಷಧ ಖರೀದಿಗೆ ಸಂಬಂಧಿಸಿದಂತೆ ಅಗತ್ಯ ಅನುದಾನವನ್ನು ಒದಗಿಸಲಾಗುತ್ತಿದೆ. ಆದರೂ ಜಿಲ್ಲಾ ಆಸ್ಪತ್ರೆಯಲ್ಲಿ ಈ ರೀತಿಯ ದೂರು ಕೇಳಿಬರುತ್ತಿರುವುದು ಸರಿಯಲ್ಲ. ಇಂತಹ ದೂರು ಮತ್ತೆ ಕೇಳಿಬಂದಲ್ಲಿ, ಜಿಲ್ಲಾ ಆಸ್ಪತ್ರೆ ಅಧೀಕ್ಷಕರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.