ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ತಿಂಗಳಿಗೆ ₹ 14 ಕೋಟಿ ನಷ್ಟ

ಹಸಿರು ವಲಯಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರಕ್ಕೆ ಸಿಕ್ಕೀತೆ ಅವಕಾಶ?
Last Updated 26 ಏಪ್ರಿಲ್ 2020, 10:26 IST
ಅಕ್ಷರ ಗಾತ್ರ

ದಾವಣಗೆರೆ: ಕೊರೊನಾ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಜಾರಿಯಾಗಿದ್ದರಿಂದ ಮಾರ್ಚ್‌ 22ರಿಂದ ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸಿದ್ದರಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆ.ಎಸ್‌.ಆರ್‌.ಟಿ.ಸಿ) ದಾವಣಗೆರೆ ವಿಭಾಗಕ್ಕೆ ಒಂದು ತಿಂಗಳ ಅವಧಿಯಲ್ಲಿ ₹ 14 ಕೋಟಿ ನಷ್ಟವಾಗಿದೆ.

ದಾವಣಗೆರೆಯ ಎರಡು ಡಿಪೊ ಹಾಗೂ ಹರಿಹರದ ಒಂದು ಡಿಪೊ ಸೇರಿ ಒಟ್ಟು 337 ಶೆಡ್ಯೂಲ್‌ಗಳಲ್ಲಿ ಬಸ್‌ಗಳನ್ನು ಓಡಿಸುವುದರಿಂದ ಈ ವಿಭಾಗಕ್ಕೆ ಪ್ರತಿ ದಿನ ಸರಾಸರಿ ₹ 45 ಲಕ್ಷದಿಂದ ₹ 50 ಲಕ್ಷ ಆದಾಯ ಬರುತ್ತಿತ್ತು. ಕೊರೊನಾ ಹಿನ್ನೆಲೆಯಲ್ಲಿ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಿದ ಪರಿಣಾಮ ಸಂಸ್ಥೆಯ ಆದಾಯಕ್ಕೆ ಭಾರಿ ಹೊಡೆತ ಬಿದ್ದಿದೆ.

ಮಾರ್ಚ್‌ 13ರಿಂದಲೇ ಎಸಿ ಬಸ್‌ಗಳ ಸೇವೆಯನ್ನು ರದ್ದುಗೊಳಿಸಲಾಗಿತ್ತು. ಮಾರ್ಚ್‌ 22ರಿಂದ ಎಲ್ಲಾ ಬಸ್‌ಗಳ ಸಂಚಾರವನ್ನು ನಿಲ್ಲಿಸಲಾಗಿತ್ತು.

ಸಡಿಲಿಕೆಯ ಲಾಭ ಸಿಕ್ಕೀತೇ?: ಕೋವಿಡ್‌–19 ರೋಗ ಹೊಸದಾಗಿ ಕಾಣಿಸಿಕೊಳ್ಳದ ‘ಹಸಿರು ವಲಯ’ಗಳಲ್ಲಿ ಲಾಕ್‌ಡೌನ್‌ ಅನ್ನು ಹೆಚ್ಚು ಸಡಿಲಗೊಳಿಸಲಾಗುತ್ತಿದೆ. ದಾವಣಗೆರೆ ಜಿಲ್ಲೆಯಲ್ಲೂ ಹೊಸದಾಗಿ ಕೋವಿಡ್‌ ಪ್ರಕರಣ ಪತ್ತೆಯಾಗದೇ ಇರುವುದರಿಂದ ‘ಹಸಿರು ವಲಯ’ಕ್ಕೆ ಹೋಗುತ್ತಿದ್ದು, ಬಸ್‌ಗಳ ಸಂಚಾರಕ್ಕೆ ಅವಕಾಶ ಸಿಕ್ಕೀತೆ ಎಂಬ ನಿರೀಕ್ಷೆಯಲ್ಲಿ ಸಾರಿಗೆ ಸಂಸ್ಥೆಯ ಅಧಿಕಾರಿಗಳಿದ್ದಾರೆ.

‘ಖಾಸಗಿ ಕಂಪನಿಗಳಿಗೆ ನೌಕರರನ್ನು ಕಚೇರಿಗೆ ಕರೆದುಕೊಂಡು ಹೋಗಲು ಗುತ್ತಿಗೆ ಆಧಾರದಲ್ಲಿ ಬಸ್‌ ಓಡಿಸಲು ಸರ್ಕಾರ ಅವಕಾಶ ನೀಡಿದೆ. ಬೆಂಗಳೂರಿನಂತಹ ಬೃಹತ್‌ ನಗರದಲ್ಲಿ ಮಾತ್ರ ನೌಕರರನ್ನು ಕರೆದುಕೊಂಡು ಹೋಗಲು ಬಸ್‌ ಸೇವೆಯನ್ನು ಪಡೆಯಲಾಗುತ್ತಿದೆ. ಜಿಲ್ಲೆಯಲ್ಲಿ ಅಂತಹ ಯಾವುದೇ ಬೇಡಿಕೆ ಬಂದಿಲ್ಲ’ ಎಂದು ಕೆ.ಎಸ್‌.ಆರ್‌.ಟಿ.ಸಿ ದಾವಣಗೆರೆ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಹೆಬ್ಬಾಳ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಅಂತರ ಕಾಯ್ದುಕೊಳ್ಳಬೇಕಾಗಿರುವುದರಿಂದ 3+2 ಆಸನಗಳಿರುವ ಸಾಮಾನ್ಯ ಬಸ್‌ಗಳಲ್ಲಿ ಗರಿಷ್ಠ 30 ಪ್ರಯಾಣಿಕರು ಹಾಗೂ 2+2 ಆಸನಗಳಿರುವ ರಾಜಹಂಸದಂತಹ ಬಸ್‌ಗಳಲ್ಲಿ ಗರಿಷ್ಠ 16 ಜನರನ್ನು ಕರೆದುಕೊಂಡು ಹೋಗಬಹುದು ಎಂದು ನಿಗಮದಿಂದ ಆದೇಶ ಬಂದಿದೆ’ ಎಂದು ಹೇಳಿದರು.

‘ನಮ್ಮ ವಿಭಾಗದಲ್ಲಿ ಚಾಲಕರು, ನಿರ್ವಾಹಕರು ಹಾಗೂ ಮ್ಯಾಕೆನಿಕಲ್‌ ಸೇರಿ 1,200 ಸಿಬ್ಬಂದಿ ಇದ್ದಾರೆ. ಬಸ್‌ ಸಂಚಾರ ಆರಂಭಿಸುವುದಾದರೆ ದಾವಣಗೆರೆ ಹಾಗೂ ಹರಿಹರ ಡಿಪೊ ವ್ಯಾಪ್ತಿಯಲ್ಲಿ ಸುಮಾರು 800 ನೌಕರರು ತಕ್ಷಣಕ್ಕೆ ಲಭ್ಯರಿದ್ದಾರೆ. ಜಿಲ್ಲೆಯಲ್ಲಿ ಬಸ್‌ ಓಡಿಸಲು ಅವಕಾಶ ನೀಡಿದರೆ 100 ಬಸ್‌ಗಳನ್ನು ಓಡಿಸಬಹುದಾಗಿದೆ. ಮಧ್ಯ ಕರ್ನಾಟಕದ ‘ಹಸಿರು ವಲಯ’ವಾಗಿ ಗುರುತಿಸಿಕೊಳ್ಳುತ್ತಿರುವ ಶಿವಮೊಗ್ಗ, ಹಾವೇರಿ, ಚಿತ್ರದುರ್ಗ ಜಿಲ್ಲೆಗಳಲ್ಲೂ ಬಸ್‌ ಓಡಿಸಲು ಪರವಾನಗಿ ನೀಡಿದರೆ 200 ಬಸ್‌ಗಳ ಸಂಚಾರ ಆರಂಭಿಸಲು ಸಾಧ್ಯವಾಗಲಿದೆ’ ಎಂದು ಹೆಬ್ಬಾಳ್‌ ಮಾಹಿತಿ ನೀಡಿದರು.

‘ಬೆಂಗಳೂರಿಗೆ 35 ಶೆಡ್ಯೂಲ್‌ ಹಾಗೂ ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ, ತಮಿಳುನಾಡು ಸೇರಿ ಅಂತರ ರಾಜ್ಯಗಳಿಗೆ 34 ಶೆಡ್ಯೂಲ್‌ ಗಳಿದ್ದವು. ಕೆಂಪು ವಲಯಗಳಿಗೆ ಬಸ್‌ ಸಂಚಾರ ವಿಳಂಬವಾಗಬಹುದು. ಹಸಿರು ವಲಯಗಳಲ್ಲಿ ಬಸ್‌ ಓಡಿಸಲು ಕೆಲ ದಿನಗಳಲ್ಲೇ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಇದೆ’ ಎನ್ನುತ್ತಾರೆ ಹೆಬ್ಬಾಳ್‌.

ವೈದ್ಯಕೀಯ ಪರೀಕ್ಷೆಗೆ ಸೂಚನೆ

‘ಲಾಕ್‌ಡೌನ್‌ನಿಂದಾಗಿ ವಿಭಾಗದ ಹಲವು ಸಿಬ್ಬಂದಿ ಬೇರೆ ಬೇರೆ ಜಿಲ್ಲೆಗಳಲ್ಲೇ ಉಳಿದುಕೊಂಡಿದ್ದಾರೆ. ಕೆಲವರು ಕೆಂಪು ವಲಯ ಜಿಲ್ಲೆಗಳಲ್ಲೂ ನೆಲೆಸಿದ್ದಾರೆ. ಬಸ್‌ಗಳ ಸಂಚಾರ ಆರಂಭಗೊಂಡರೆ ಕೆಲಸಕ್ಕೆ ಹಾಜರಾಗುವ ಮೊದಲು ಮುನ್ನೆಚ್ಚರಿಕಾ ಕ್ರಮವಾಗಿ ವೈದ್ಯರಿಂದ ತಪಾಸಣೆ ಮಾಡಿಸಿಕೊಂಡು ಪ್ರಮಾಣಪತ್ರ ತರುವಂತೆ ಹೊರ ಜಿಲ್ಲೆಗಳಲ್ಲೇ ಉಳಿದುಕೊಂಡಿರುವ ಸಿಬ್ಬಂದಿಗೆ ಸೂಚಿಸಲಾಗಿದೆ’ ಎಂದು ಸಿದ್ದೇಶ್ವರ ಹೆಬ್ಬಾಳ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT