ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌, ಹಲವು ಬೈಕ್‌, ಕಾರುಗಳಿಗೆ ಲಾಕ್‌

Last Updated 7 ಏಪ್ರಿಲ್ 2020, 16:05 IST
ಅಕ್ಷರ ಗಾತ್ರ

ದಾವಣಗೆರೆ: ಲಾಕ್‌ಡೌನ್ ನಿಯಮ ಉಲ್ಲಂಘನೆ ಮಾಡಿ ಅನಗತ್ಯವಾಗಿ ಓಡಾಟ ಮಾಡುವುದನ್ನು ನಿಯಂತ್ರಿಸಲು ಪೊಲೀಸ್‌ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಪ್ರಮುಖ ರಸ್ತೆಗಳಲ್ಲಿ ಓಡಾಟವನ್ನು ನಿಯಂತ್ರಿಸಲಾಗಿದೆ. ಅನಗತ್ಯವಾಗಿ ಓಡಾಟ ಮಾಡುತ್ತಿದ್ ಕಾರು, ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಜಯದೇವ ಸರ್ಕಲ್‌, ಅಂಬೇಡ್ಕರ್‌ ಸರ್ಕಲ್‌, ಸಂಗೊಳ್ಳಿ ರಾಯಣ್ಣ ಸರ್ಕಲ್‌ ಸೇರಿ ಪ್ರಮುಖ ಸರ್ಕಲ್‌ಗಳಿಗೆ ವಾಹನಗಳು ಬಾರದಂತೆ ರಸ್ತೆಗಳನ್ನು ಬಂದ್ ಮಾಡಲಾಗಿತ್ತು. ಅದೇ ರೀತಿ ನಗರದಿಂದ ಹೊರ ಹೋಗುವ ರಸ್ತೆಗಳಲ್ಲಿ ಕೂಡ ನಾಕಾಬಂದಿ ಮಾಡಲಾಗಿದೆ.

ಇವೆಲ್ಲವನ್ನು ಮೀರಿ ನಗರ ಉಪ ವಿಭಾಗದಲ್ಲಿ ಸುಮ್ಮನೆ ಸುತ್ತಾಟ ನಡೆಸುತ್ತಿದ್ದ 28 ಕಾರು, 2 ಆಟೊ, 347 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು ನಗರದ ಪಿ‌.ಜೆ. ಬಡಾವಣೆಯಲ್ಲಿರುವ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಮೈದಾನದಲ್ಲಿ ಇಡಲಾಗಿದೆ. ನಗರದ ಎಲ್ಲ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ವಶಪಡಿಸಿಕೊಂಡ ವಾಹನಗಳು ಇಲ್ಲೇ ಇವೆ. ಇವಲ್ಲದೇ ಗ್ರಾಮಾಂತರ ವಿಭಾಗದಲ್ಲಿ 41 ಬೈಕ್‌ಗಳು, ಹರಪನಹಳ್ಳಿ ಉಪ ವಿಭಾಗದಲ್ಲಿ 12 ಬೈಕ್, 1 ಲಾರಿ, ಚನ್ನಗಿರಿ ಉಪ ವಿಭಾಗದಲ್ಲಿ 58 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ತೆರೆದ ಮಾಂಸದ ಅಂಗಡಿಗಳು: ಕುರಿ, ಕೋಳಿ ಮಾಂಸ ಮಾರಾಟದ ಅಂಗಡಿಗಳು ತೆರೆಯಬಹುದು ಎಂದು ಜಿಲ್ಲಾಡಳಿತ ಆದೇಶ ನೀಡಿದ್ದರಿಂದ ಭಾನುವಾರ ಅಂಗಡಿಗಳು ತೆರೆದಿದ್ದವು. ಆದರೆ ಸೋಮವಾರ ಮಹಾವೀರ ಜಯಂತಿ ಇದ್ದಿದ್ದರಿಂದ ಅವು ಮತ್ತೆ ಬಂದ್‌ ಆಗಿದ್ದವು. ಮಂಗಳವಾರ ತೆರೆಯಲಾಗಿದೆ. ಕುರಿ, ಕೋಳಿ ಮಾಂಸದ ಅಂಗಡಿಗಳ ಮುಂದೆ ಭಾನುವಾರ ಕಂಡು ಬಂದಷ್ಟು ಜನ ಮಂಗಳವಾರ ಕಾಣದಿದ್ದರೂ ಉತ್ತಮ ವ್ಯಾಪಾರ ನಡೆದಿದೆ.

₹ 500 ನಿಗದಿಗೆ ಆದೇಶ: ಕುರಿ, ಮೇಕೆ ಮಾಂಸ ಮಾರಾಟಗಾರರು ಅತೀ ಹೆಚ್ಚಿನ ಬೆಲೆಗೆ ಮಾಂಸ ಮಾರಾಟ ಮಾಡುತ್ತಿರುವುದು ಕಂಡುಬಂದಿರುತ್ತದೆ. ಆದ್ದರಿಂದ ಪ್ರತೀ ಕೆ.ಜಿಗೆ ₹ 500 ನಿಗದಿಪಡಿಸಲಾಗಿರುತ್ತದೆ. ಹೆಚ್ಚಿನ ಬೆಲೆಗೆ ಮಾರಾಟ ಮಾಡಿದಲ್ಲಿ ಅಂತಹವರ ವಿರುದ್ಧ ಈ ಪ್ರಾಧಿಕಾರದಿಂದ ನಿಯಮಾನುಸಾರ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಎಚ್ಚರಿಕೆ ನೀಡಿದೆ.

ಅಗತ್ಯ ಸೇವೆಗಳಿಗಾಗಿ ಸಹಾಯವಾಣಿ 1077 ಸಂರ್ಪಕಿಸಿ
ಲಾಕ್‌ಡೌನ್ ಆಗಿರುವ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಮತ್ತು ಬಡವರಿಗೆ ದಿನನಿತ್ಯದ ಆಹಾರ ಸಾಮಗ್ರಿಗಳು, ಔಷಧ ಮತ್ತಿತರ ಅಗತ್ಯ ಸೇವೆ, ವಸ್ತುಗಳು ಅವಶ್ಯವಿದ್ದಲ್ಲಿ ಸಾರ್ವಜನಿಕರು ಜಿಲ್ಲಾಡಳಿತದ ಸಹಾಯವಾಣಿ ಸಂಖ್ಯೆ 1077 (ಟೋಲ್‌ಫ್ರೀ) ಸಂಖ್ಯೆಯನ್ನು ಸಂಪರ್ಕಿಸಬಹುದು.

ಸಾಮೂಹಿಕ ಪ್ರಾರ್ಥನೆ ನಿಷೇಧ
ಕೊರೊನಾ ವೈರಸ್ ಸಾಂಕ್ರ್ರಾಮಿಕ ರೋಗ ತಡೆಯುವ ಉದ್ದೇಶದಿಂದ ಏಪ್ರಿಲ್‌ 9ರಂದು ರಾತ್ರಿ ನಡೆಯುವ ಷಬ್-ಎ-ಬರಾತ್ ಹಬ್ಬಕ್ಕೆ ರಾಜ್ಯದ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ (ನಮಾಜ್) ಹಾಗೂ ಖಬರಸ್ತಾನ್ ಮತ್ತು ದರ್ಗಾಗಳಿಗೆ ಭೇಟಿ ನೀಡುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾ ವಕ್ಫ್ ಅಧಿಕಾರಿ ಸೈಯದ್ ಅಜಂ ಪಾಷ ತಿಳಿಸಿದ್ದಾರೆ.

ಆಧಾರ್ ಕಾರ್ಡ್ ಪುರಾವೆ ಸಲ್ಲಿಸಿ
ಭವಿಷ್ಯನಿಧಿ ಚಂದಾದಾರರ ಜನ್ಮ ದಿನಾಂಕದ ವ್ಯತ್ಯಾಸವು ಮೂರು ವರ್ಷಗಳ ಒಳಗಿದ್ದಲ್ಲಿ ಸದಸ್ಯರು ತಮ್ಮ ಆಧಾರ್ ಕಾರ್ಡ್‌ ಅನ್ನು ಪುರಾವೆಯಾಗಿ ಆನ್‌ಲೈನ್‌ನಲ್ಲಿ ಸಲ್ಲಿಸಬಹುದು.

ಕೋವಿಡ್-19ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಆನ್‌ಲೈನ್ ಸೇವೆಗಳು ಚಂದಾದಾರರಿಗೆ ಸಿಗುವಂತೆ ಮಾಡಲು ಭವಿಷ್ಯ ನಿಧಿ ಸಂಸ್ಥೆಯು ಪರಿಷ್ಕೃತ ನಿಯಮವನ್ನು ಜಾರಿಗೊಳಿಸಿದೆ. ಅದರಂತೆ ಭವಿಷ್ಯನಿಧಿ ಸದಸ್ಯರು, ಭವಿಷ್ಯ ನಿಧಿ ದಾಖಲಾತಿಗಳಲ್ಲಿ ನೀಡಿದ ಜನ್ಮ ದಿನಾಂಕಗಳಲ್ಲಿ 3 ವರ್ಷಕ್ಕಿಂತ ಕಡಿಮೆ ವ್ಯತ್ಯಾಸವಿರುವ ಪ್ರಕರಣಗಳಲ್ಲಿ ತಿದ್ದುಪಡಿಯಾಗಿ ಆಧಾರ್ ಕಾರ್ಡ್‌ನ್ನು ಪುರಾವೆಯಾಗಿ ಆನ್‌ಲೈನ್ ಮೂಲಕ ಸಲ್ಲಿಸಬಹುದು ಎಂದು ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT