ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಮ್ ಕ್ವಾರಂಟೈನ್ ಆಗಿ ಲಾಡ್ಜ್ ಬಳಕೆ

ಜಿಲ್ಲೆಯ ಲಾಡ್ಜ್ ಮಾಲೀಕರೊಂದಿಗೆ ಸಭೆ ನಡೆಸಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ
Last Updated 31 ಮಾರ್ಚ್ 2020, 13:33 IST
ಅಕ್ಷರ ಗಾತ್ರ

ದಾವಣಗೆರೆ: ಹೋಮ್ ಕ್ವಾರಂಟೈನ್‌ನಲ್ಲಿ ಇರುವವರಿಗಾಗಿ ಈಗಾಗಲೇ ಬೆಂಗಳೂರಿನಲ್ಲಿ 20 ಸಾವಿರ ಲಾಡ್ಜ್ ರೂಮ್‌ಗಳನ್ನು ಬಳಸಲು ನಿರ್ಧರಿಸಿದೆ. ಅದರಂತೆ ಇಲ್ಲಿಯೂ ಅಂತಹ ಸಂದರ್ಭ ಎದುರಾದರೆ ಜಿಲ್ಲೆಯ ಲಾಡ್ಜ್‌ಗಳಲ್ಲಿನ ರೂಮ್ ಬಳಸಿಕೊಳ್ಳಲು ತಯಾರಿ ಮಾಡಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಜಿಲ್ಲಾಡಳಿತ ಕಚೇರಿಯಲ್ಲಿ ಮಂಗಳವಾರ ಲಾಡ್ಜ್ ಮಾಲೀಕರಿಗೆ ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ 3 ಕೊರೊನಾ ಪಾಸಿಟಿವ್ ಪ್ರಕರಣಗಳು ಬಂದಿದೆ. ಮುಂದಿನ ದಿನಗಳಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಾದರೆ, ಅಂತಹ ಸಂದರ್ಭದಲ್ಲಿ ನಗರದಲ್ಲಿನ ಲಾಡ್ಜ್‌ಗಳನ್ನು ಬಳಸಿಕೊಳ್ಳಲು ಜಿಲ್ಲಾಡಳಿತ ಮುಂದಾಗಬಹುದು. ಎಸಿ ರೂಮ್‌ಗಳಿದ್ದರೆ, ಎಸಿ ಕಡಿತಗೊಳಿಸಿ ಬಳಸಲಾಗುವುದು. ಈ ಹಿನ್ನೆಲೆಯಲ್ಲಿ ಲಾಡ್ಜ್‌ ಮಾಲೀಕರು ಮಾನಸಿಕವಾಗಿ ಸನ್ನದ್ಧರಾಗಬೇಕು ಎಂದು ಸೂಚಿಸಿದರು.

ಮಾಲೀಕರಿಗೆ ಯಾವುದೇ ಭಯ ಬೇಡ. ಹೋಮ್ ಕ್ವಾರಂಟೈನ್‌ಲ್ಲಿರುವವರು ರೋಗಿಗಳಲ್ಲ, ಬದಲಾಗಿ ನಿಗಾವಣೆಯಲ್ಲಿರುವರಷ್ಟೇ. ಇವರಲ್ಲಿ ಯಾರಿಗಾದರೂ ನೆಗಡಿ, ಕೆಮ್ಮು, ಶೀತ ಕಂಡುಬಂದರೆ ಕೂಡಲೇ ಆಸ್ಪತ್ರೆಗೆ ಸೇರಿಸಲಾಗುವುದು. ಇವರನ್ನು ಕಾಳಜಿ ಮಾಡಲು ಕೊರೊನಾ ಸ್ವಯಂ ಸೇವಕರು ನಿಮ್ಮ ಜೊತೆಗಿರುವರು ಎಂದು ತಿಳಿಸಿದರು.

ಲಾಡ್ಜ್‌ಗಳಲ್ಲಿ ಅಗತ್ಯವಾದ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕು. ಉಚಿತವಾಗಿ ಬಳಸಿಕೊಳ್ಳದೇ, ಸರ್ಕಾರದಿಂದ ಹಣ ಒದಗಿಸಲಾಗುವುದು. ಊಟದ ವ್ಯವಸ್ಥೆ ಮಾಡಲು ಆಗದಿದ್ದರೆ ಅದನ್ನು ಸಹ ಜಿಲ್ಲಾಡಳಿತವೇ ನೋಡಿಕೊಳ್ಳಲಿದೆ ಎಂದರು.

ಈಗಾಗಲೇ ಜಿಲ್ಲೆಯಲ್ಲಿ 11 ಕಲ್ಯಾಣ ಮಂಟಪಗಳನ್ನು ಹಾಗೂ ಪ್ರತಿ ತಾಲ್ಲೂಕಿನಲ್ಲಿ ಒಂದರಂತೆ ಕಲ್ಯಾಣ ಮಂಟಪಗಳನ್ನು ಜಿಲ್ಲಾಡಳಿತದ ಸುಪರ್ದಿಗೆ ತೆಗೆದುಕೊಳ್ಳಲಾಗಿದೆ. ಮುಂದೆ ಅಗತ್ಯ ಬಿದ್ದರೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ವಿವಿಧ ತಾಲ್ಲೂಕು ವಲಯದಲ್ಲಿಯೂ ಕೂಡ ಕಲ್ಯಾಣ ಮಂಟಪವನ್ನು ಸುಪರ್ದಿಗೆ ತೆಗೆದುಕೊಳ್ಳಲು ತಹಶೀಲ್ದಾರ್‌ಗಳಿಗೆ ತಿಳಿಸಲಾಗಿದೆ ಎಂದು ಹೇಳಿದರು.

ಕೊರೊನಾ ವೈರಸ್ ತಡೆಯಲು ಸರ್ಕಾರದ ನೆರವಿಗೆ ಸಹಾಯಕ್ಕಾಗಿ ಪ್ರಧಾನ ಮಂತ್ರಿ ಮತ್ತು ಮುಖ್ಯಮಂತ್ರಿ ಪರಿಹಾರ ನಿಧಿ ಖಾತೆ ತೆರೆಯಲಾಗಿದೆ. ಸಾರ್ವಜನಿಕರು ಸಾಮಗ್ರಿ ಅಥವಾ ಹಣದ ರೂಪದಲ್ಲಿ ಸಹಾಯ ಮಾಡಬೇಕು ಎಂದರು.

ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಪದ್ಮ ಬಸವಂತಪ್ಪ, ‘ಮೊದಲು ವಿದ್ಯಾರ್ಥಿ ನಿಲಯಗಳಲ್ಲಿ ವ್ಯವಸ್ಥೆ ಮಾಡಲು ಚಿಂತನೆ ಮಾಡಲಾಗಿತ್ತು. ವಿದ್ಯಾರ್ಥಿ ನಿಲಯದಲ್ಲಿ ಪ್ರತ್ಯೇಕವಾದ ರೂಮ್ ಇದ್ದರೂ ಪ್ರತ್ಯೇಕ ಬಾತ್ ರೂಮ್ ವ್ಯವಸ್ಥೆ ಇರುವುದಿಲ್ಲ. ಜೊತೆಗೆ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಬೇಕಾಗುತ್ತದೆ. ಅದಕ್ಕಾಗಿ ಲಾಡ್ಜ್‌ಗಳನ್ನು ಬಳಸಲು ನಿರ್ಧರಿಸಲಾಗಿದೆ. ಲಾಡ್ಜ್‌ನಲ್ಲಿ ಒಬ್ಬೊರನ್ನು ಒಂದೊಂದು ಪ್ರತ್ಯೇಕವಾದ ರೂಮ್‌ನಲ್ಲಿ ಇರುವಂತೆ ವ್ಯವಸ್ಥೆಯನ್ನು ಮಾಡಬೇಕು. ನಿಮ್ಮ ಕೆಲಸಗಾರರು ಮಾಸ್ಕ್, ಗ್ಲೌಸ್ ಹಾಕಿಕೊಂಡು ಕೆಲಸ ಮಾಡಬೇಕು’ ಎಂದು ತಿಳಿಸಿದರು.

ಒಂದು ತಿಂಗಳಿನಿಂದ ಹೋಟೆಲ್, ರೆಸ್ಟೋರೆಂಟ್ ಲಾಡ್ಜ್‌ಗಳನ್ನು ಮುಚ್ಚಲಾಗಿದೆ. ಅವುಗಳನ್ನು ಕಾಯುವವರು ಯಾರು ಇಲ್ಲ. ಹೀಗೆ ಅವರನ್ನು ಮನೆಯವರೆ ಸರಿಯಾಗಿ ನೋಡಿಕೊಳ್ಳಲು ಆಗುತ್ತಿಲ್ಲ. ಹೋಟೆಲ್‌ನಲ್ಲಿ ನಿಗಾ ವಹಿಸುವುದು ಕಷ್ಟ. ಸದಕ್ಕೆ ಜಿಲ್ಲಾಡಳಿತ ವ್ಯವಸ್ಥೆ ಕಲ್ಪಿಸಬೇಕು ಎಂದು ಅಪೂರ್ವ ರೆಸ್ಟೊರಂಟ್ ಮಾಲೀಕ ಅಣಬೇರು ರಾಜಣ್ಣ ಮನವಿ ಮಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಪಾಲಿಕೆ ಮೇಯರ್‌ ಬಿ.ಜಿ. ಅಜಯ್‌ಕುಮಾರ್‌ , ಆಯುಕ್ತ ವಿಶ್ವನಾಥ ಮುದಜ್ಜಿ, ನಗರ ಅಭಿವೃದ್ಧಿ ಯೋಜನಾ ನಿದೇಶಕಿ ನಜ್ಮಾ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT