ಬುಧವಾರ, ಸೆಪ್ಟೆಂಬರ್ 18, 2019
25 °C
ಜಲಶಕ್ತಿ ಮೇಳ ಉದ್ಘಾಟಿಸಿದ ಸಂಸದ ಜಿ.ಎಂ. ಸಿದ್ದೇಶ್ವರ ಸಲಹೆ

ಕಡಿಮೆ ಜಲ ಹೆಚ್ಚು ಬೆಳೆ ಕಡೆ ನೋಡಿ

Published:
Updated:
Prajavani

ದಾವಣಗೆರೆ: ಕಡಿಮೆ ನೀರಿನಲ್ಲಿ ಅಧಿಕ ಇಳುವರಿ ಪಡೆಯುವ ಬೆಳೆಗಳತ್ತ ಕೃಷಿಕರು ಗಮನ ಹರಿಸಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಸಲಹೆ ನೀಡಿದರು.

ಐಸಿಆರ್‌ ತಳರಬಾಳು ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ, ಜಿಲ್ಲಾ ಕೃಷಿಕ ಸಮಾಜ ಮಂಗಳವಾರ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕೃಷಿ ವಸ್ತು ಪ್ರದರ್ಶನ, ಜಲಶಕ್ತಿ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮಹಾರಾಷ್ಟ್ರದಲ್ಲಿ ಚೆನ್ನಾಗಿ ಮಳೆ ಬಂದಿದ್ದರಿಂದ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ನದಿಯಲ್ಲಿ ಪ್ರವಾಹ ಉಂಟಾಗಿದೆ. ಆದರೆ ನದಿಯಿಂದ 10 ಕಿಲೋಮೀಟರ್‌ ದೂರದಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೇ ಇದೆ. ನಮ್ಮಲ್ಲೂ ಚೆನ್ನಾಗಿ ಮಳೆ ಬಂದು ನದಿಯಲ್ಲಿ ನೀರು ಹರಿದು ಹೋಗಿದೆ. ಆದರೆ ನಮ್ಮ ಕೆರೆಗಳನ್ನು ತುಂಬಿಸಲು ಆಗಿಲ್ಲ ಎನ್ನಲು ನಾಚಿಕೆಯಾಗುತ್ತದೆ’ ಎಂದು ವಿಷಾದ ವ್ಯಕ್ತಪಡಿಸಿದರು.

ಜಗಳೂರು ತಾಲ್ಲೂಕಿನ ಕೆರೆಗಳನ್ನು ತುಂಬಿಸಲು ರಾಜ್ಯ ಸರ್ಕಾರ ₹ 250 ಕೋಟಿ ಬಿಡುಗಡೆ ಮಾಡಿದೆ. ಉಳಿದ ತಾಲ್ಲೂಕುಗಳ ಕೆರೆ ತುಂಬಿಸುವ ಕಾರ್ಯ ನಡೆಯುತ್ತಿದೆ. ಕಳಪೆ ಪೈಪ್‌ ಅಳವಡಿಸಿದ್ದರಿಂದ ಕೆರೆಗಳು ತುಂಬಿಲ್ಲ. ಗುತ್ತಿಗೆ ಪಡೆದ ಎಲ್‌ ಆ್ಯಂಡ್‌ ಟಿ ಕಂಪನಿ ಹೊಸ ಪೈಪ್‌ಲೈನ್‌ ಹಾಕಬೇಕು. ಇಲ್ಲದಿದ್ದರೆ ಆ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಎಚ್ಚರಿಸಿದರು.

ಭೂಮಿಯಲ್ಲಿ ನೀರು ನಿಲ್ಲದಿರಲು ನಾವೇ ಕಾರಣ. ಬಗರ್‌ಹುಕುಂ ಎಂದು ಮರಗಳನ್ನು ಕಡಿದಿದ್ದೇವೆ. ಚೆಕ್‌ಡ್ಯಾಂ ಮಾಡಿದರೆ ಅದರನ್ನು ಕಡಿದು ಬಿಡುತ್ತೇವೆ. ನಾವು ಮಜಾ ಮಾಡಲು ಭೂಮಿ ಹಾಳು ಮಾಡುತ್ತಿದ್ದೇವೆ. ಆದರೆ ಮುಂದಿನ ಪೀಳಿಗೆಗೆ ನಾವೇನು ಬಿಟ್ಟು ಹೋಗುತ್ತೇವೆ ಎಂಬುದು ಯೋಚಿಸುತ್ತಿಲ್ಲ ಎಂದು ತಿಳಿಸಿದರು.

ಚೀನಾ, ಇಸ್ರೇಲ್‌ ಮಾದರಿಯಲ್ಲಿ ಇಲ್ಲೂ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು. ಪ್ರತಿ ಗ್ರಾಮದವರು ಆಯಾ ಗ್ರಾಮಕ್ಕೆ ಹೊಂದುವ ಬೆಳೆಯನ್ನು ಎಲ್ಲರೂ ಒಟ್ಟಾಗಿ ಮಾಡಬೇಕು ಎಂದು ಸಲಹೆ ನೀಡಿದರು.

ಶಾಸಕ ಎಸ್‌.ಎ. ರವೀಂದ್ರನಾಥ್ ಮಾತನಾಡಿ, ‘ನಮ್ಮ ಜಿಲ್ಲೆಗಿಂತ ಕಡಿಮೆ ಮಳೆ ಬೀಳವು ಜಿಲ್ಲೆಗಳಲ್ಲಿ ಹೈನುಗಾರಿಕೆ ಚೆನ್ನಾಗಿದೆ. ಅವರು ಹೇಗೆ ದನಕರುಗಳನ್ನು ಸಾಕುತ್ತಾರೆ, ಹೇಗೆ ಕೃಷಿ ಮಾಡುತ್ತಾರೆ ಎಂಬುದನ್ನು ನೋಡಬೇಕು’ ಎಂದು ತಿಳಿಸಿದರು.

ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ರೈತರನ್ನು ವಿದೇಶಕ್ಕೆ ಕರೆದುಕೊಂಡು ಹೋಗಲಾಗಿತ್ತು. ಈಗ ಮತ್ತೆ ಯಡಿಯೂರಪ್ಪ ಅವರ ಮನವೊಲಿಸಿ ಒಂದು ಸಾವಿರ ರೈತರನ್ನು ಇಸ್ರೇಲ್‌ಗೆ ಕರೆದೊಯ್ಯಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಐಸಿಎಆರ್‌–ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಟಿ.ಎನ್‌. ದೇವರಾಜ್‌ ಪ್ರಾಸ್ತಾವಿಕವಾಗಿ ಮಾತನಾಡಿ, ‘ಜೀವ ವಿಕಾಸವೇ ನೀರಿನಿಂದ ಆರಂಭಗೊಂಡಿತು. ಉಪ್ಪು ನೀರು ಮತ್ತು ಸಿಹಿ ನೀರು ಎರಡೂ ಜೀವಜಲಗಳೇ ಆಗಿವೆ. ಜಲ ಸಂರಕ್ಷಣೆ, ಜಲಕೃಷಿಯೇ ಭವಿಷ್ಯಕ್ಕೆ ಜೀವಾಳ’ ಎಂದು ಹೇಳಿದರು.

ಮಾಯಕೊಂಡ ಶಾಸಕ ಪ್ರೊ. ಎನ್‌. ಲಿಂಗಣ್ಣ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಬಸವರಾಜ್‌, ನೋಡಲ್‌ ಅಧಿಕಾರಿ ಡಾ. ಗಿರೀಶ್‌, ಜಂಟಿ ಕೃಷಿ ನಿರ್ದೇಶಕ ಡಾ. ಶರಣಪ್ಪ ಮುದಗಲ್‌, ಉಪನಿರ್ದೇಶಕಿ ಹಂಸವೇಣಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಜಿ. ಹನುಮಂತಪ್ಪ, ಸುಜಲಾ ಉಪನಿರ್ದೇಶಕ ಡಾ. ರಾಘವೇಂದ್ರ ಪ್ರಸಾದ್‌, ಪಶುಪಾಲನೆ ಇಲಾಖೆಯ ಉಪನಿರ್ದೇಶಕ ಡಾ. ಸಿ. ಭಾಸ್ಕರ ನಾಯ್ಕ್‌, ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಡಾ. ಡಿ. ಉಮೇಶ್‌, ರೇಷ್ಮಾ ‍ಪರ್ವಿನ್‌, ಸಿದ್ಧಲಿಂಗಪ್ಪ, ಎಸಿ. ದಿವಾಕರ್‌, ಹನುಮಂತಪ್ಪ, ಮುರುಗೇಂದ್ರಪ್ಪ, ಸರೀಶ್‌, ಶಿವಯೋಗಿ, ಮಲ್ಲಿಕಾರ್ಜುನ ಇದ್ದರು.

ಎಚ್‌.ಡಿ ಮಹೇಶ್ವರ‍ಪ್ಪ ಅಧ್ಯಕ್ಷತೆ ವಹಿಸಿದ್ದರು. ಚನ್ನಬಸಪ್ಪ ಎಸ್‌. ಕೊಂಬಳಿ, ಮಲ್ಲಿಕಾರ್ಜುನ ಹೊಸಪಾಳ್ಯ ವಿಷಯ ಮಂಡಿಸಿದರು. ವಿಷಯ ತಜ್ಞರಾದ ಎಂ.ಜಿ. ಬಸವನ ಗೌಡ ಸ್ವಾಗತಿಸಿದರು. ಮಲ್ಲಿಕಾರ್ಜುನ ವಂದಿಸಿದರು. ರಘುರಾಜ ಕಾರ್ಯಕ್ರಮ ನಿರೂಪಿಸಿದರು.

Post Comments (+)