ಗುರುವಾರ , ಅಕ್ಟೋಬರ್ 22, 2020
24 °C
ಬದಲಾವಣೆ ಮೊದಲು ನಮ್ಮಿಂದ ಆಗಲಿ: ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸಲಹೆ

ದಾವಣಗೆರೆಯಲ್ಲಿ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತ್ಯುತ್ಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ನೀವು ಮತ್ತೊಬ್ಬರಲ್ಲಿ ಏನು ಬದಲಾವಣೆ ಕಾಣಬಯಸುತ್ತೀರೋ ಆ ಬದಲಾವಣೆ ಮೊದಲು ನಿಮ್ಮಿಂದ ಆಗಬೇಕು ಎಂಬ ಗಾಂಧೀಜಿಯವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಇಂದೇ ಸಂಕಲ್ಪ ಮಾಡಿ’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸಲಹೆ ನೀಡಿದರು.

ಜಿಲ್ಲಾಡಳಿತದಿಂದ ಮಹಾನಗರಪಾಲಿಕೆ ಆವರಣದಲ್ಲಿ ಶುಕ್ರವಾರ ನಡೆದ ಮಹಾತ್ಮಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತ್ಯುತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೇರೆಯವರು ಸ್ವಚ್ಛವಾಗಿರಬೇಕು ಎಂಬ ಭಾವನೆ ನಿಮ್ಮಲ್ಲಿ ಬಂದರೆ ಮೊದಲು ನೀವು ಸ್ವಚ್ಛವಾಗಿರಬೇಕು. ಸತ್ಯ ಹೇಳಬೇಕು ಅಂದರೆ ನೀವು ಮೊದಲು ಸತ್ಯ ಹೇಳುವುದನ್ನು ಕಲಿಯಬೇಕು. ಇದರಿಂದಾಗಿ ಸಮಾಜದಲ್ಲಿ ಶಾಂತಿ, ನೆಮ್ಮದಿ ಮತ್ತು ಸುಧಾರಣೆ ಸಾಧ್ಯವಾಗಲಿದೆ‘  ಎಂದರು.

ಗಾಂಧೀಜಿಯವರ ಕಲ್ಪನೆಗಳಾದ ಸತ್ಯ, ಅಹಿಂಸೆ ಸಮಾನತೆ, ಗ್ರಾಮ ಸ್ವರಾಜ್ಯ, ಸ್ವಚ್ಛಭಾರತ ಇವುಗಳನ್ನು ಸಾಕಾರಗೊಳಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.

ಜಗ ಮೆಚ್ಚಿದ ಪ್ರಧಾನಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಸರಳ, ಸಜ್ಜನಿಕೆ ನಮಗೆ ಮಾದರಿ. ಸರಳತೆ ಅವರ ಜೀವನ ಸಂದೇಶವಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಸವಂತಪ್ಪ ಮಾತನಾಡಿ, ‘ಗಾಂಧೀಜಿಯವರ ಮೈ ಎಕ್ಸಿಪೆರಿಮೆಂಟ್ ವಿಥ್ ಟ್ರೂಥ್ ಕೃತಿಯಲ್ಲಿರುವಂತೆ ಗಾಂಧೀಜಿಯವರು ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಒಂದು ಹೆಜ್ಜೆ ಮುಂದೆ ಇದ್ದರು. ಅವರ ಆ ಧೈರ್ಯ ಮತ್ತು ನಿಷ್ಠೆ ಮಹಾತ್ಮರಾಗಲು ಕಾರಣವಾಯಿತು. ಒಬ್ಬ ಸಾಮಾನ್ಯ ವ್ಯಕ್ತಿ ಮಹಾತ್ಮನಾಗಬೇಕು ಎಂದರೆ ಒಂದು ಹೆಜ್ಜೆ ಮುಂದೆ ಹೋಗಬೇಕು‘ ಎಂದು ಸಲಹೆ ನೀಡಿದರು.

ಗಾಂದೀಜಿಯವರ ಬಗ್ಗೆ ತಿಳಿದುಕೊಳ್ಳದೇ ಕೆಲವರು ಹಗುರವಾಗಿ ಮಾತನಾಡುತ್ತಾರೆ. ಹರಿಜನ ಉದ್ದಾರಕರಾದ ಅವರು ಹೆಣ್ಣುಮಕ್ಕಳು ಮಧ್ಯರಾತ್ರಿಯಲ್ಲಿ ಸ್ವತಂತ್ರವಾಗಿ ಓಡಾಡುವ ಸ್ಥಿತಿ ಬಂದಾಗ ನಮಗೆ ನಿಜವಾದ ಸ್ವಾತಂತ್ರ್ಯ ಎಂದಿದ್ದರು. ಈ ಕನಸು ನನಸಾಗುವ ದಾರಿ ತುಂಬಾ ದೂರವಾಗಿದೆ ನಾವೆಲ್ಲ ಸೇರಿ ಅವರ ಕನಸನ್ನು ನನಸು ಮಾಡುವ ಪ್ರಯತ್ನ ಮಾಡಬೇಕೆಂದರು.

ಸುಶ್ರಾವ್ಯ ಗಾಯನ: ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರೌಢಶಾಲಾ ಶಿಕ್ಷಕರು ಗಾಂಧೀಜಿಯವರಿಗೆ ಪ್ರಿಯವಾಗಿದ್ದ ‘ವೈಷ್ಣವಜನತೋ’ ‘ರಘುಪತಿ ರಾಜಾರಾಂ’ ಸೇರಿ ಹಲವು ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು. ಅಲ್ಲದೇ ಸುಶ್ರಾವ್ಯವಾಗಿ ಸರ್ವಧರ್ಮ ಪ್ರಾರ್ಥನೆಯನ್ನು ಮಾಡಿದರು.

ಸ್ಥಾಯಿ ಸಮಿತಿ ಅಧ್ಯಕ್ಷರಾದ ವೀರೇಶ್, ಪ್ರಸನ್ನ ಕುಮಾರ್, ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್, ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ದೂಢಾ ಆಯುಕ್ತ ಕುಮಾರಸ್ವಾಮಿ, ನಗರಾಭಿವೃದ್ದಿಕೋಶದ ಯೋಜನಾ ನಿರ್ದೇಶಕಿ ನಜ್ಮಾ, ವಿಶೇಷ ಭೂಸ್ವಾಧೀನಾಧಿಕಾರಿ ರೇಷ್ಮಾ ಹಾನಗಲ್, ದಾವಣಗೆರೆ ತಹಶೀಲ್ದಾರ್ ಗಿರೀಶ್, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು