ಕಾಲುವೆ ಕೊನೆ ಭಾಗಕ್ಕೆ ನೀರು ಹರಿಸಿ

7
ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ್‌ ಸೂಚನೆ

ಕಾಲುವೆ ಕೊನೆ ಭಾಗಕ್ಕೆ ನೀರು ಹರಿಸಿ

Published:
Updated:

ದಾವಣಗೆರೆ: ‘ಭದ್ರಾ ನಾಲೆಯ ಕೊನೆಯ ಭಾಗಕ್ಕೂ ನೀರನ್ನು ಹರಿಸಬೇಕು. ನೀರು ಲಭಿಸದೇ ಇರುವ ಬಗ್ಗೆ ರೈತರಿಂದ ದೂರು ಬಂದರೆ ನೀರಾವರಿ ಇಲಾಖೆ ಅಧಿಕಾರಿಗಳನ್ನೇ ಜವಾಬ್ದಾರರನ್ನಾಗಿ ಮಾಡಲಾಗುವುದು’ ಎಂದು ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಆರ್‌. ಶ್ರೀನಿವಾಸ್‌ (ವಾಸು) ಎಚ್ಚರಿಕೆ ನೀಡಿದರು.

ನಗರದಲ್ಲಿ ಗುರುವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ‘ಕೊನೆಯ ಭಾಗದವರೆಗೂ ನೀರು ಹರಿದುಹೋಗುವಂತೆ ಕಾಲುವೆಯನ್ನು ಮುಕ್ತಗೊಳಿಸಬೇಕು. ರೈತರಿಗೆ ಬೆಳೆ ಬೆಳೆಯಲು ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಬೇಕು’ ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌, ‘ಕಾಲುವೆಯುದ್ದಕ್ಕು ಸುಮಾರು 8,000 ಪಂಪ್‌ಸೆಟ್‌ಗಳಿರಬಹುದು. 50 ಎಚ್‌.ಪಿ. ಪಂಪ್‌ಸೆಟ್‌ಗಳಿಂದ ನೀರು ಎತ್ತಲಾಗುತ್ತಿದೆ. ಕಳೆದ ವರ್ಷ ಕಾರ್ಯಾಚರಣೆ ನಡೆಸುವ ಸುಮಾರು 2,000 ಪಂಪ್‌ಸೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಭಾರಿ ಮಳೆಯಾಗಿರುವುದರಿಂದ ನೀರೆತ್ತುವ ಪ್ರಮಾಣ ಕಡಿಮೆಯಾಗಲಿದೆ. ಹೀಗಾಗಿ ಕೊನೆಯ ಭಾಗದವರೆಗೆ ನೀರು ತಲುಪಬಹುದು. ಮಲೆಬೆನ್ನೂರು ಭಾಗದಲ್ಲಿ ಸರತಿ ಮೇಲೆ ನೀರು ಹರಿಸಬೇಕಾಗಿರುವುದರಿಂದ ಅಲ್ಲಿ ಸ್ವಲ್ಪ ತೊಂದರೆಯಾಗಬಹುದು’ ಎಂದು ಹೇಳಿದರು.

ಶಾಸಕ ಎಸ್‌.ಎ. ರವೀಂದ್ರನಾಥ್‌, ಕೊನೆಯ ಭಾಗದ ಹಲವು ಹಳ್ಳಿಗಳಿಗೆ ನೀರು ತಲುಪದೇ ಇರುವುದರಿಂದ ಮೆಕ್ಕೆಜೋಳ ಬೆಳೆ ಒಣಗುತ್ತಿದೆ ಎಂದು ದೂರಿದರು.

ಶಾಸಕ ಎನ್‌. ಲಿಂಗಣ್ಣ, ಕಾಲವೆಗಳಲ್ಲಿ ಹೂಳು ತೆಗೆಯದೇ ಇರುವುದರಿಂದ ನೀರು ಸರಾಗವಾಗಿ ಹರಿದುಹೋಗುತ್ತಿಲ್ಲ ಎಂದು ಆಕ್ಷೇಪಿಸಿದರು.

‘ಕಾಲುವೆ ಭಾಗದಲ್ಲಿ ಪಂಪ್‌ಸೆಟ್‌ಗಳಿಗೆ ಅನಧಿಕೃತವಾಗಿ ವಿದ್ಯುತ್‌ ನೀಡಿರುವುದನ್ನು ಪತ್ತೆ ಮಾಡಿ ಸಂಪರ್ಕ ಕಡಿತಗೊಳಿಸಬೇಕು. ಕಾಲುವೆ ಭಾಗದಲ್ಲಿ ನಿತ್ಯ ಕೇವಲ 5 ಗಂಟೆ ಥ್ರಿಫೇಸ್‌ ವಿದ್ಯುತ್‌ ಕೊಡಬೇಕು ಎಂದು ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ರವೀಂದ್ರನಾಥ್‌, ಈಗಲೂ ಹೊಸದಾಗಿ ಅನಧಿಕೃತವಾಗಿ ವಿದ್ಯುತ್‌ ಸಂಪರ್ಕ ಪಡೆಯಲಾಗುತ್ತಿದೆ ಎಂದು ದೂರಿದರು.

ವಿದ್ಯುತ್‌ ಕಡಿತಗೊಳಿಸಿದರೂ ಜನರೇಟರ್‌ ಬಳಸಿಕೊಂಡು ನೀರೆತ್ತಲಾಗುತ್ತದೆ ಎಂದು ನೀರಾವರಿ ನಿಗಮದ ಎಂಜಿನಿಯರ್‌ ಅಳಲು ತೋಡಿಕೊಂಡರು.

ಕಾಲುವೆ ಭಾಗದಲ್ಲಿ ಮತ್ತೆ ಸಂಚರಿಸಿ ಅನಧಿಕೃತ ಪಂಪ್‌ಸೆಟ್‌ ಸಂಪರ್ಕಗಳನ್ನು ಕಡಿತಗೊಳಿಸಿ ಎಂದು ಸಚಿವರು ಸೂಚಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !