ಹಿಂದೂ ಧಾರ್ಮಿಕ ವಿಧಿಗಳಿಗೆ ಧಕ್ಕೆಯಾಗದಂತೆ ಕಾಯ್ದೆ ರೂಪಿಸಲಿ: ಮುತಾಲಿಕ್

7
ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ

ಹಿಂದೂ ಧಾರ್ಮಿಕ ವಿಧಿಗಳಿಗೆ ಧಕ್ಕೆಯಾಗದಂತೆ ಕಾಯ್ದೆ ರೂಪಿಸಲಿ: ಮುತಾಲಿಕ್

Published:
Updated:
Deccan Herald

ದಾವಣಗೆರೆ: ಹಿಂದೂ ಧರ್ಮದ ಧಾರ್ಮಿಕ ವಿಧಿ–ವಿಧಾನಗಳಿಗೆ ಯಾವುದೇ ರೀತಿಯ ಧಕ್ಕೆಯಾಗದಂತೆ ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಕಾಯ್ದೆಯನ್ನು ರೂಪಿಸಬೇಕು ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ಒತ್ತಾಯಿಸಿದರು.

ನಗರದಲ್ಲಿ ಭಾನುವಾರ ಶ್ರೀರಾಮ ಸೇನೆಯ ಆಂತರಿಕ ಸಭೆಯನ್ನು ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಬರಿಮಲೈ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಸಾವಿರಾರು ವರ್ಷಗಳಿಂದ ಸಂಪ್ರದಾಯವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಎಲ್ಲವೂ ಮೌಢ್ಯದಿಂದ ಕೂಡಿರುವುದಿಲ್ಲ. ಮಹಿಳೆಯರಿಗೆ ಪ್ರವೇಶವನ್ನು ಸಂಪೂರ್ಣವಾಗಿ ನಿರಾಕರಿಸಿಲ್ಲ. 50 ವರ್ಷ ಮೇಲ್ಪಟ್ಟ ಹಾಗೂ 10 ವರ್ಷದ ಕೆಳಗಿನ ಸಾವಿರಾರು ಮಹಿಳಾ ಭಕ್ತರು ಹೋಗಿ ಬರುತ್ತಿದ್ದಾರೆ. ಈ ವಿಚಾರದಲ್ಲಿ ನ್ಯಾಯಾಲಯ ಮಧ್ಯ ಪ್ರವೇಶಿಸಿದ್ದು ಸರಿಯಲ್ಲ’ ಎಂದರು.

‘ಹಿಂದೂ ಧರ್ಮದಲ್ಲಿ ದೇವತಾ ಕಾರ್ಯ ಮಾಡುವಾಗ ಪತಿ–ಪತ್ನಿಯರು ಜೊತೆಯಲ್ಲೇ ಇರಬೇಕು ಎಂಬ ನಿಯಮವಿದೆ. ಹಿಂದೂ ಧರ್ಮದಲ್ಲಿ ಮಹಿಳೆಯರಿಗೆ ಸ್ಥಾನವನ್ನು ನೀಡಿದೆ. ಹಲವು ಸಾಧ್ವಿಗಳಿದ್ದಾರೆ. ಆದರೆ, ಮುಸ್ಲಿಂ ಧರ್ಮದಲ್ಲಿ ಮಹಿಳಾ ಮೌಲ್ವಿಗಳನ್ನು ಕ್ರೈಸ್ತ ಧರ್ಮದಲ್ಲಿ ಮಹಿಳಾ ಫಾದರ್‌ಗಳನ್ನು ನೋಡಲು ಸಾಧ್ಯವಿದೆಯೇ? ಮಹಿಳೆಯರ ಸಮಾನತೆ ಬಗ್ಗೆ ಸುಪ್ರೀಂ ಕೋರ್ಟ್‌ ಮಾತನಾಡುವುದಾದರೆ ಸಮಾನ ನಾಗರಿಕ ಕಾನೂನು ಜಾರಿಗೆ ತರುವಂತೆ ನಿರ್ದೇಶಿಸಲಿ’ ಎಂದು ಮುತಾಲಿಕ ಒತ್ತಾಯಿಸಿದರು.

ಗೌರಿ ಹತ್ಯೆ ತನಿಖೆ: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ಆರೋಪಿಗಳಾದ ವಾಘ್ಮೊರೆ, ಮನೋಹರ್‌ ಅವರು ಎಸ್‌ಐಟಿ ಅಧಿಕಾರಿಗಳು ಹಿಂಸೆ ನೀಡಿ ತಪ್ಪೊಪ್ಪಿಕೊಳ್ಳುವಂತೆ ಮಾಡಿದ್ದಾರೆ. ₹ 25 ಲಕ್ಷ ನೀಡುವುದಾಗಿ ಆಮಿಷವನ್ನೂ ಒಡ್ಡಿದ್ದಾರೆ. ಒಪ್ಪಿಕೊಳ್ಳದಿದ್ದರೆ ಕುಟುಂಬದವರ ಮೇಲೂ ಪ್ರಕರಣ ದಾಖಲಿಸುವುದಾಗಿ ಬೆದರಿಸಿದ್ದಾರೆ ಎಂದು ಮಾಧ್ಯಮದವರ ಎದುರು ಹೇಳಿಕೊಂಡಿದ್ದಾರೆ. ಈ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಬೇಕು’ ಎಂದು ಮತಾಲಿಕ ಆಗ್ರಹಿಸಿದರು.

‘ಗೌರಿ ಹತ್ಯೆ ನಡೆದ ಮರುದಿನ ಬೆಳಿಗ್ಗೆಯೇ ರಾಹುಲ್‌ ಗಾಂಧಿ ‘ಹತ್ಯೆಯ ಹಿಂದೆ ಆರ್‌ಎಸ್‌ಎಸ್‌ ಕೈವಾಡ ಇದೆ’ ಎಂದು ಹೇಳಿಕೆ ನೀಡಿದ್ದಾರೆ. ಹೀಗಾಗಿ ರಾಜ್ಯದ ಆಗಿನ ಕಾಂಗ್ರೆಸ್‌ ಸರ್ಕಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಹೇಳಿಕೆ ದಿಕ್ಕಿನಲ್ಲೇ ತನಿಖೆಯನ್ನು ಒಯ್ಯುತ್ತಿದೆ. ಕೆಲವು ನಕ್ಸರನ್ನು ಮುಖ್ಯವಾಹಿನಿಗೆ ತಂದಾಗ ಗೌರಿ ಕ್ರಮದ ವಿರುದ್ಧ ಹಲವು ನಕ್ಸಲ್‌ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದರು. ಆ ನಿಟ್ಟಿಯಲ್ಲಿ ಏಕೆ ತನಿಖೆ ನಡೆಸುತ್ತಿಲ್ಲ’ ಎಂದು ಪ್ರಶ್ನಿಸಿದರು.

‘ದತ್ತಪೀಠದ ವಿವಾದದಿಂದ ಕೆಲವರು ರಾಜಕೀಯ ನಾಯಕರು ಆಸ್ತಿ ಮಾಡಿಕೊಂಡರಲ್ಲ’ ಎಂಬ ಕುರಿತ ಪ್ರಶ್ನೆಗೆ, ‘ನಾವು ಅಡುಗೆ ಮಾಡಿ ಇಡುತ್ತಿದ್ದೆವು. ಮತ್ತೆ ಯಾರೋ ಊಟ ಮಾಡಿಕೊಂಡು ಹೋಗುತ್ತಿದ್ದರು. ಇದು ನಮ್ಮ ಹೋರಾಟದ ದುರ್ದೈವದ ಸಂಗತಿ’ ಎಂದು ಉತ್ತರಿಸಿದರು.

ಶ್ರೀರಾಮ ಸೇನೆ ರಾಜ್ಯ ಘಟಕದ ಅಧ್ಯಕ್ಷ ಸಿದ್ಧಲಿಂಗಸ್ವಾಮಿ, ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ರಾಜ್ಯ ಉಪಾಧ್ಯಕ್ಷ ಮಹೇಲ್‌ ಕೊಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಲಿಂಗಪ್ಪ ಗುಂಜಗಾವಿ, ಆನಂದ ಶೆಟ್ಟಿ ಅಡಿಯಾರ್‌, ರಾಜ್ಯ ಸಂಪರ್ಕ ಪ್ರಮುಖ ಪರಶುರಾಮ ನಡುವಿನ, ಜಿಲ್ಲಾ ಘಟಕದ ಅಧ್ಯಕ್ಷ ಪ್ರಶಾಂತ ಮತ್ತೂರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !