ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಸ್ವರಾಜ್‌ ಸಮಾವೇಶ: ಮತ ಅಸಿಂಧು ಆಗದಂತೆ ನೋಡಿಕೊಳ್ಳಿ; ಜಗದೀಶ ಶೆಟ್ಟರ್‌ ಸಲಹೆ

Last Updated 19 ನವೆಂಬರ್ 2021, 6:07 IST
ಅಕ್ಷರ ಗಾತ್ರ

ದಾವಣಗೆರೆ: ‘ಕಳೆದ ಬಾರಿ ವಿಧಾನ ಪರಿಷತ್‌ ಚುನಾವಣೆಯಲ್ಲಿ ದಾವಣಗೆರೆ–ಚಿತ್ರದುರ್ಗದಲ್ಲಿ ಬಿಜೆಪಿ ಅಭ್ಯರ್ಥಿ 200 ಮತಗಳ ಅಂತರದಿಂದ ಸೋತಿದ್ದರು. 400 ಮತಗಳು ಅಸಿಂಧುವಾಗಿದ್ದವು. ಅಸಿಂಧು ಆಗಿದ್ದ ಮತಗಳಲ್ಲಿ ಅತಿ ಹೆಚ್ಚು ನಮ್ಮ ಅಭ್ಯರ್ಥಿಗೆ ಬಿದ್ದವುಗಳಾಗಿದ್ದವು. ಹಾಗಾಗಿ ಈ ಬಾರಿ ಅಸಿಂಧು ಆಗದಂತೆ ಎಚ್ಚರವಹಿಸಿ’ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಹೇಳಿದರು.

ನಗರದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸಮುದಾಯ ಭವನದಲ್ಲಿ ಗುರುವಾರ ನಡೆದ ಬಿಜೆಪಿ ಜನಸ್ವರಾಜ್ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಜನರ ಉತ್ಸಾಹ, ನಮಗೆ ಸಿಗುತ್ತಿರುವ ಪ್ರೋತ್ಸಾಹ ಗಮನಿಸಿದರೆ ಇದು ಜನಸ್ವರಾಜ್‌ ಯಾತ್ರೆಯಲ್ಲ, ವಿಜಯಿಯಾತ್ರೆ ಎಂದನ್ನಿಸುತ್ತಿದೆ. ಯಾರೂ ಮೈಮರೆಯಬಾರದು. ನೀವು ಮತ ಎಚ್ಚರದಿಂದ ಮತಹಾಕಬೇಕು. ಹಾಗೇ ನಿಮ್ಮ ಜತೆ ಇರುವವರನ್ನೂ ಮತ ಹಾಕಿಸಬೇಕು’ ಎಂದು ತಿಳಿಸಿದರು.

ವಿಧಾನಸಭೆಯಲ್ಲಿ ನಾವು ಬಹುಮತ ಪಡೆದಿದ್ದೇವೆ. ಯಾವುದೇ ಕಾನೂನು ಕಾಯ್ದೆ ಅಲ್ಲಿ ಅಂಗೀಕಾರವಾಗುತ್ತದೆ. ಆದರೆ ವಿಧಾನಪರಿಷತ್ತಿನಲ್ಲಿ ನಾವು ಅಧಿಕ ಸ್ಥಾನಗಳನ್ನು ಹೊಂದಿದ್ದರೂ ಬಹುಮತ ಇಲ್ಲ. ಈ ಕೊರತೆಯನ್ನು ನೀಗಿಸಲು ಈ ಚುನಾವಣೆ ಉಪಯೋಗವಾಗಲಿದೆ ಎಂದರು.

‘ಬಿ.ಎಸ್‌. ಯಡಿಯೂರಪ್ಪ, ನಳಿನ್‌ ಕುಮಾರ್‌ ಕಟೀಲ್‌, ಕೆ.ಎಸ್‌. ಈಶ್ವರಪ್ಪ ನೇತೃತ್ವದಲ್ಲಿ ಕೊಪ್ಪಳ, ಕಾರವಾರ, ಶಿವಮೊಗ್ಗದಲ್ಲಿ ಈ ಯಾತ್ರೆ ಆರಂಭಗೊಂಡಿದೆ. ದಾವಣಗೆರೆಯಿಂದ ಆರಂಭಗೊಂಡಿರುವ ಈ ಯಾತ್ರೆಯ ಜವಾಬ್ದಾರಿ ನನಗೆ ನೀಡಿದ್ದಾರೆ. ದಾವಣಗೆರೆಯಿಂದ ಯಾವುದೇ ಕೆಲಸ ಆರಂಭಗೊಂಡರೂ ಅದು ಶುಭ ಶಕುನ. ಹಾಗಾಗಿ ಗೆಲುವು ನಮ್ಮದೇ’ ಎಂದು ಪ್ರತಿಪಾದಿಸಿದರು.

ಬಿಜೆಪಿ ಅತಿ ಹೆಚ್ಚು ಸದಸ್ಯತ್ವ ಹೊಂದಿರುವ ವಿಶ್ವದ ಏಕೈಕ ಪಕ್ಷ. ನಮ್ಮ ಸದಸ್ಯತ್ವ ನೋಡಿ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್‌ ಈಗ ಸದಸ್ಯತ್ವ ನೋಂದಣಿ ಅಭಿಯಾನ ಕೈಗೊಂಡಿದೆ. ಆದರೆ ಸದಸ್ಯತ್ವ ಮಾಡಲು ಯಾರೂ ಮುಂದೆ ಬರುತ್ತಿಲ್ಲ. ಅಂಥ ಶೋಚನೀಯ ಸ್ಥಿತಿ ಉಂಟಾಗಿದೆ ಎಂದು ಟೀಕಿಸಿದರು.

ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದ, ಭಷ್ಟ್ರಾಚಾರ ರಹಿತ ಆಡಳಿತ ನೀಡುತ್ತಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಜನರಪರ, ಗ್ರಾಮೀಣ ಭಾರತದ ಪರ, ರೈತರ ಪರ, ದಲಿತರ ಪರ, ಅಲ್ಪ ಸಂಖ್ಯಾತರ ಪರ ಕೆಲಸ ಮಾಡುತ್ತಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ, ‘ಈ ಬಾರಿಯ ಚುನಾವಣೆ ಪ್ರತಿಷ್ಠೆಯ ವಿಷಯವಾಗಿದ್ದು, ಒಂದು ಮತವೂನಮ್ಮ ಕೈ ತಪ್ಪಬಾರದು. ಸ್ಥಳೀಯ ಸಂಸ್ಥೆಗಳ ಸದಸ್ಯರು ಬಿಜೆಪಿ ಅಭ್ಯರ್ಥಿಗೆ ಮತ ನೀಡಬೇಕು’ ಎಂದುಕೋರಿದರು.

‘ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಎಂಆರ್‌ಐ ಸ್ಕ್ಯಾನಿಂಗ್ ವ್ಯವಸ್ಥೆಗೆ ಆರೋಗ್ಯ ಸಚಿವರು ಭರವಸೆ ನೀಡಿದ್ದಾರೆ. ಇನ್ನು 15 ದಿನಗಳಲ್ಲಿ ಹೆಚ್ಚುವರಿ ಡಯಾಲಿಸಿಸ್ ಕೇಂದ್ರಕ್ಕೂ ವ್ಯವಸ್ಥೆಯಾಗಲಿದೆ’ ಎಂದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ, ‘ಹಿಂದೆ ರಾಜ್ಯದಲ್ಲಿ ಬೀದರ್‌, ತುಮಕೂರು, ದಾವಣಗೆರೆಯಲ್ಲಿ ಮಾತ್ರ ಬಿಜೆಪಿ ಅಭ್ಯರ್ಥಿಗಳು ಸಂಸದರಾಗುತ್ತಿದ್ದರು. ಇಲ್ಲಿ ದಿವಂಗತ ಮಲ್ಲಿಕಾರ್ಜುನಪ್ಪ ಬಿಜೆಪಿಯ ಧ್ವಜ ಎತ್ತಿ ಹಿಡಿದಿದ್ದರು’ ಎಂದು ನೆನಪಿಸಿಕೊಂಡರು.

ಇದು ಕೇವಲ ಪರಿಷತ್ತಿಗೆ ನಡೆಯುವ ಚುನಾವಣೆ ಅಲ್ಲ. ಗ್ರಾಮಗಳು ಅಭಿವೃದ್ಧಿ ಆಗಬೇಕಾದರೆ ಸರಿಯಾದ ಅಭ್ಯರ್ಥಿಗಳ ಆಯ್ಕೆ ಆಗಬೇಕು. ಅದಕ್ಕಾಗಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಕೋರಿದರು.

ಅಬಕಾರಿ ಸಚಿವ ಗೋಪಾಲಯ್ಯ, ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರಾದ ಎಸ್.ಎ. ರವೀಂದ್ರನಾಥ, ಪ್ರೊ.ಎನ್. ಲಿಂಗಣ್ಣ, ಎಸ್.ವಿ.ರಾಮಚಂದ್ರ, ಮಾಜಿ ಶಾಸಕರಾದ ಬಸವರಾಜ ನಾಯ್ಕ, ಬಿ.ಪಿ. ಹರೀಶ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಎಂ. ವೀರೇಶ್‌ ಹನಗವಾಡಿ, ಮುಖಂಡರಾದ ಮಹೇಶ ಟೆಂಗಿನಕಾಯಿ, ಲಿಂಗರಾಜ, ರಾಜೇಂದ್ರ, ನವೀನ್, ಬಿ.ಎಸ್. ಜಗದೀಶ, ಶ್ರೀನಿವಾಸ ದಾಸಕರಿಯಪ್ಪ, ಮಂಜಾನಾಯ್ಕ, ಕಲ್ಲೇಶ, ಸುಧಾ ಜಯರುದ್ರೇಶ್, ಯಶವಂತರಾವ್ ಜಾಧವ್, ಮೇಯರ್ ಎಸ್.ಟಿ.ವೀರೇಶ, ಧೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ ಅವರೂ ಇದ್ದರು.

‘ಮೋದಿಗಿಂತ ದೊಡ್ಡ ಅಹಿಂದ ನಾಯಕ ಯಾರಿದ್ದಾರೆ?’

‘ನೆಹರೂ, ಶಾಸ್ತ್ರೀಜಿ, ಇಂದಿರಾಗಾಂಧಿ ಸಹಿತ ಕಾಂಗ್ರೆಸ್‌ನ ಹಿಂದಿನ ನಾಯಕರು ಜೈ ಹಿಂದ್‌ ಅನ್ನುತ್ತಿದ್ದರು. ಇತ್ತೀಚಿನ ಕೆಲವು ನಾಯಕರು ಜೈ ಹಿಂದ್‌ ಬದಲು ಅಹಿಂದ ಎನ್ನಲು ಆರಂಭಿಸಿದ್ದಾರೆ. ಇವರ ಇತಿಹಾಸವೇ ಒಡೆದಾಳುವುದಾಗಿದೆ. ದಲಿತರನ್ನು, ಹಿಂದುಳಿದವರನ್ನು ಅಲ್ಪ ಸಂಖ್ಯಾತರನ್ನು ಒಡೆಯುವುದೇ ಇವರ ಕೆಲಸ’ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಟೀಕಿಸಿದರು.

ಇವರ ರೀತಿ ಅಹಿಂದ ಎಂದು ಹೇಳುವುದಾದರೆ ನರೇಂದ್ರ ಮೋದಿಗಿಂತ ದೊಡ್ಡ ಅಹಿಂದ ನಾಯಕ ಬೇರೆ ಯಾರಿದ್ದಾರೆ ಎಂದು ಪ್ರಶ್ನಿಸಿದರು.

ನವೀನ್‌ ಬಿಜೆಪಿ ಅಭ್ಯರ್ಥಿ

ಬಿಜೆಪಿಯಿಂದ ಅಧಿಕೃತವಾಗಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗಿಲ್ಲ. ಆದರೆ ಜಗಳೂರು ಶಾಸಕ ಎಸ್‌.ವಿ. ರಾಮಚಂದ್ರ ಮಾತನಾಡುತ್ತಾ ಬಾಯಿ ತಪ್ಪಿ ಹೆಸರು ಬಹಿರಂಗಗೊಂಡಿತು. ‘ಹಿಂದಿನ ಎರಡು ಬಾರಿ ಸೋತಿರುವ ನವೀನ್‌ ಈ ಬಾರಿ ಖಂಡಿತಾ ಗೆಲ್ಲುತ್ತಾರೆ. ನಿಮ್ಮೆಲ್ಲರ ಮತ ಅವರಿಗೆ ನೀಡಬೇಕು’ ಎಂದು ಕೋರಿದರು. ಕೂಡಲೇ ವೇದಿಕೆಯಲ್ಲಿದ್ದವರು, ‘ಅಧಿಕೃತ ಘೋಷಣೆಯಾಗಿಲ್ಲ’ ಎಂದು ನೆನಪಿಸಿದರು. ಬಾಯಿ ತಪ್ಪಿ ಹೇಳಿರುವುದಕ್ಕೆ ಕ್ಷಮೆ ಇರಲಿ ಎಂದು ಶಾಸಕರು ಕೋರಿದರು.

ಬಳಿಕ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಮಾತನಾಡುವಾಗ, ‘ರಾಮಚಂದ್ರ ಅಭ್ಯರ್ಥಿಯ ಹೆಸರು ಹೇಳಿರುವುದರಲ್ಲಿ ತಪ್ಪಿಲ್ಲ. ನವೀನ್‌ ಹೆಸರನ್ನೇ ಕೋರ್‌ ಕಮಿಟಿ ಕೇಂದ್ರಕ್ಕೆ ಕಳುಹಿಸಿದೆ. ಕೇಂದ್ರ ನಾಯಕರು ಅಧಿಕೃತವಾಗಿ ಘೋಷಣೆ ಮಾಡುವವರೆಗೆ ನಾವು ಹೇಳುವಂತಿಲ್ಲ ಅಷ್ಟೇ’ ಎಂದು ಕೆ.ಎಸ್‌. ನವೀನ್‌ ಅಭ್ಯರ್ಥಿ ಎಂಬುದನ್ನು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT