ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬಿನಿಂದ ಎಥೆನಾಲ್‌ ತಯಾರಿಸಿದರೆ ರೈತರಿಗೆ, ದೇಶಕ್ಕೆ ಲಾಭ: ಪ್ರೊ.ಹರಿಣಿ ಕುಮಾರ್‌

ಕಬ್ಬು ಬೆಳೆಗಾರರ ರಾಜ್ಯಮಟ್ಟದ ಕಾರ್ಯಾಗಾರ
Last Updated 3 ನವೆಂಬರ್ 2021, 7:10 IST
ಅಕ್ಷರ ಗಾತ್ರ

ದಾವಣಗೆರೆ: ಕಬ್ಬಿನಿಂದ ಎಥೆನಾಲ್‌ ತಯಾರಿಸಲು ರೈತರು ಮುಂದಾದರೆ ರೈತರಿಗೂ ಲಾಭವಾಗಲಿದೆ. ದೇಶದ ಅಭಿವೃದ್ಧಿಗೂ ಉಪಯೋಗವಾಗಲಿದೆ ಎಂದು ಬೆಂಗಳೂರು ಗಾಂಧಿ ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನಿ ಪ್ರೊ. ಹರಿಣಿ ಕುಮಾರ್ ಹೇಳಿದರು.

ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಇಲ್ಲಿನ ಎಪಿಎಂಸಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಅವರು ‘ಕಬ್ಬಿನಿಂದ ಎಥೆನಾಲ್‌ ಉತ್ಪಾದನೆ ಹಾಗೂ ಬಳಕೆ’ ಕುರಿತು ಅವರು ಮಾತನಾಡಿದರು.

ಕೆಲವು ವರ್ಷಗಳ ಹಿಂದೆ ಎಥೆನಾಲ್‌ ಬಗ್ಗೆ ಚರ್ಚೆ ನಡೆದಿತ್ತು. ಐಎಎಸ್‌ ಅಧಿಕಾರಿಗಳು ಭಾಗವಹಿಸಿದ್ದರು. ಆಗ ಎಥೆನಾಲ್‌ ಬಗ್ಗೆ ಹೆಚ್ಚಿನವರು ಒಲವು ತೋರಿರಲಿಲ್ಲ. ಮುಂದೆ ಪೆಟ್ರೋಲ್‌ ಉಚಿತವಾಗಿ ದೊರೆಯಲಿದೆ. ಮತ್ಯಾಕೆ ಎಥೆನಾಲ್‌ ಎಂದು ಕೆಲವರು ವಾದ ಮಂಡಿಸಿದ್ದರು. ಎಥೆನಾಲ್‌ ಅಂದರೆ ಕನ್ನಡದಲ್ಲಿ ಮದ್ಯಸಾರ ಎಂದರ್ಥ. ಮದ್ಯಸಾರವನ್ನು ಕುಡಿದುಬಿಡುತ್ತಾರೆ ಎಂದು ಅಬಕಾರಿ ಇಲಾಖೆಯವರು ಆತಂಕ ವ್ಯಕ್ತಪಡಿಸಿದ್ದರು. ಅದೆಲ್ಲ ಆಗಲ್ಲ ಎಂಬುದು ಈಗ ಅರ್ಥವಾಗಿದೆ. ಮಿಥೆನಲ್‌ ಎಂಬ ವಿಷಕಾರಿ ಅಂಶ ಇರುವುದರಿಂದ ಕುಡಿಯಲು ಆಗಲ್ಲ. ಪೆಟ್ರೋಲ್‌ ಉಚಿತವಾಗಿ ದೊರೆಯಲ್ಲ ಎಂಬುದೂ ಅರ್ಥವಾಗಿದೆ ಎಂದು ವಿವರಿಸಿದರು.

ಇನ್ನು 25 ವರ್ಷಗಳ ಬಳಿಕ ಪೆಟ್ರೋಲ್‌, ಡೀಸೆಲ್‌, ಕಲ್ಲಿದ್ದಲು ಇರುವುದಿಲ್ಲ. ಪರ್ಯಾಯ ಇಂಧನ ಅಗತ್ಯ. ಕಬ್ಬಿನಿಂದ ಸಕ್ಕರೆ ತಯಾರಿಸುವುದು ಮೊದಲ ಆದ್ಯತೆ ಆಗಬಾರದು. ಇಂಧನವಾಗಿ ಅಂದರೆ ಎಥೆನಾಲ್‌ ತಯಾರಿಸುವುದು ಮೊದಲ ಆದ್ಯತೆ ಆಗಬೇಕು. ವಿದ್ಯುತ್‌ ಉತ್ಪಾದನೆ ಎರಡನೇಯದ್ದಾಗಬೇಕು. ಸಕ್ಕರೆ ಉತ್ಪಾದನೆಗೆ ಮೂರನೇ ಸ್ಥಾನ ನೀಡಬೇಕು ಎಂದು ಅವರು ತಿಳಿಸಿದರು.

ಈಗ ಪೆಟ್ರೋಲ್‌ಗೆ ಶೇ 5ರಷ್ಟು ಎಥೆನಾಲ್ ಮಿಶ್ರಣ ಮಾಡಬೇಕು ಎಂದು ಸೂಚನೆ ಇದೆ. ಅದರಂತೆ ದೇಶದಲ್ಲಿ ವರ್ಷಕ್ಕೆ 310 ಕೋಟಿ ಲೀಟರ್‌ ಎಥೆನಲ್‌ ಬೇಕು. ಆದರೆ ಉತ್ಪಾದನೆ 170 ಕೋಟಿ ಲೀಟರ್‌ ಅಷ್ಟೇ ಇದೆ. ಇನ್ನು ಎರಡು ವರ್ಷಕ್ಕೆ ಶೇ 10 ಬೆರೆಸಲು ತಯಾರಾಗಬೇಕು. 2030ರ ಹೊತ್ತಿಗೆ ಶೇ 30ರಷ್ಟು ಎಥೆನಾಲ್‌ ಮಿಶ್ರಣ ಮಾಡುವಷ್ಟು ಎಥೆನಾಲ್‌ ಉತ್ಪಾದನೆ ಮಾಡಬೇಕು. ಅದಕ್ಕೆ ರೈತರು ತಯಾರಾಗಬೇಕು ಎಂದರು.

ಈಗ ಚೀನಾದಿಂದ ಎಥೆನಾಲ್‌ ತರಿಸಲಾಗಿತ್ತಿದೆ. ಲೀಟರ್‌ಗೆ ₹ 500 ಕೊಡಬೇಕು. ಭಾರತದಲ್ಲೇ ಉತ್ಪಾದನೆ ಮಾಡಿದರೆ ಲೀಟರ್‌ಗೆ ₹ 65 ಸಿಕ್ಕಿದರೂ ಸಾಕು ರೈತರು ಶ್ರೀಮಂತರಾಗುತ್ತಾರೆ. ಆಮದು ವೆಚ್ಚ ಉಳಿದು ದೇಶದ ಆರ್ಥಿಕತೆಯೂ ಉಳಿಯುತ್ತದೆ. ಒಂದು ಟನ್‌ ಕಬ್ಬಿನ ಹಾಲಿನಲ್ಲಿ 70 ಲೀಟರ್‌ ಉತ್ಪಾದನೆ ಮಾಡಬಹುದು. ಅದರ ಸಿಪ್ಪೆಯಲ್ಲಿ ಉತ್ಪಾದನೆ ಮಾಸಬಹುದು. ಅಲ್ಲದೇ ಮೆಕ್ಕೆಜೋಳದಿಂದಲೂ ಎಥೆನಾಲ್‌ ತಯಾರಿಸಬಹುದು ಎಂದು ವಿವರಿಸಿದರು.

ಧಾರವಾಡ ವಾಲ್ಮೀ ಸಂಸ್ಥೆಯ ನಿರ್ದೇಶಕ ಡಾ. ರಾಜೇಂದ್ರ ಪೋದ್ದಾರ ಉದ್ಘಾಟಿಸಿದರು. ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ತೇಜಸ್ವಿ ವಿ. ಪಟೇಲ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.

ಎಪಿಎಂಸಿ ಅಧ್ಯಕ್ಷ ಅಣಜಿ ಚಂದ್ರಶೇಖರ್‌, ಕಬ್ಬು ಬೆಳೆಗಾರರ ಸಂಘದ ನಾರಾಯಣ ರೆಡ್ಡಿ, ವೀರಣ್ಣ ಗೌಡ ಪಾಟೀಲ, ಸುರೇಶ್ ಪಾಟೀಲ್, ಲಕ್ಷ್ಮೀದೇವಿ, ಎನ್.ಎಚ್. ದೇವಕುಮಾರ್, ಹತ್ತಳ್ಳಿ ದೇವರಾಜ್ ಇದ್ದರು. ಭಾಗ್ಯರಾಜ್ ಕಾರ್ಯಕ್ರಮ ನಿರೂಪಿಸಿದರು.

ನೀರಿನ ಸೂಕ್ಷ್ಮ ಬಳಕೆ ಮಾಡದಿದ್ದರೆ ಗಂಡಾಂತರ: ರಾಜೇಂದ್ರ ಫೋದ್ದಾರ

ಜಗತ್ತಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿಲ್ಲ. ಆದರೆ ನೀರಿನ ಬೇಡಿಕೆ ಹೆಚ್ಚಾಗಿದೆ. ನೀರಿನ ಸೂಕ್ಷ್ಮ ಬಳಕೆ ಪದ್ಧತಿ ಜಾರಿಗೆ ತರದಿದ್ದರೆ ಮುಂದಿನ ದಿನಗಳಲ್ಲಿ ಗಂಡಾಂತರ ಕಾದಿದೆ ಎಂದು ವಾಲ್ಮೀ ಸಂಸ್ಥೆಯ ನಿರ್ದೇಶಕ ಡಾ. ರಾಜೇಂದ್ರ ಪೋದ್ದಾರ ಎಚ್ಚರಿಸಿದರು.

ನೀರಿನಲ್ಲಿ ಶೇ 97ರಷ್ಟು ಉಪ್ಪುನೀರಾಗಿದೆ. ಉಳಿದ ಶೇ 3ರಲ್ಲಿ ಬಳಕೆ ಮಾಡಲು ಸಿಗೋದು ಶೇ 0.2ರಷ್ಟು ಮಾತ್ರ. ಬಳಕೆ ಮಾಡುವ ಸಿಹಿನೀರಿನಲ್ಲಿ ಶೇ 83ರಷ್ಟು ಭಾಗ ಕೃಷಿಗೆ ಹೋಗುತ್ತದೆ. ಮತ್ತೆ ಕೃಷಿಗೆ ಹೋಗುವ ನೀರಿನಲ್ಲಿ ಶೇ 30ರಷ್ಟು ಮಾತ್ರ ಬಳಕೆಯಾಗುತ್ತದೆ. ಶೇ 70ರಷ್ಟು ಭಾಗ ಅಪವ್ಯಯವಾಗುತ್ತಿದೆ. ಈ ಅಪವ್ಯಯವನ್ನು ತಪ್ಪಿಸದೇ ಇದ್ದರೆ ಕಷ್ಟ ಎಂದು ತಿಳಿಸಿದರು.

ನೀರಿನ ಪ್ರಮಾಣ ಕಡಿಮೆಯಾದರೆ ನೆಲ ಬರಡಾಗುತ್ತದೆ. ಹೆಚ್ಚಾದರೆ ಭೂಮಿ ಜೌಗಾಗುತ್ತದೆ. ಅಗತ್ಯಕ್ಕೆ ತಕ್ಕಂತೆ ನೀರು ಬಳಸಬೇಕು. ಭಾರತಕ್ಕೆ ಸ್ವತಂತ್ರ ಬಂದಾಗ ಪ್ರತಿ ವ್ಯಕ್ತಿಗೆ ವರ್ಷಕ್ಕೆ 5000 ಘನಮೀಟರ್ ನೀರು ಲಭ್ಯ ಇತ್ತು. ಈಗ 1500ಕ್ಕೆ ಇಳಿದಿದೆ. ಮುಂದೆ ಇನ್ನೂ ಕಡಿಮೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT