ಬುಧವಾರ, ಡಿಸೆಂಬರ್ 8, 2021
21 °C

ಹಣ ದುರುಪಯೋಗ ಮಾಡಿರುವ ವಾಲ್ಮೀಕಿ ಶ್ರೀ ಪೀಠ ತ್ಯಜಿಸಲಿ: ಮಲ್ಲಿಕಾರ್ಜುನಪ್ಪ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಮಠದ ಜಮೀನನ್ನು ಸ್ವಂತ ಹೆಸರಿಗೆ ಮಾಡಿಕೊಂಡಿರುವ, ಪರಿಶಿಷ್ಟ ಪಂಗಡ ಇಲಾಖೆಯ ಹಣವನ್ನು ಜಾತ್ರೆಗೆ ಬಳಸಿಕೊಂಡಿರುವ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಕೂಡಲೇ ಪೀಠ ತ್ಯಾಗ ಮಾಡಬೇಕು ಎಂದು ನಾಯಕ ಸಮಾಜದ ಮುಖಂಡ, ವಕೀಲ ಗುಮ್ಮನೂರು ಕೆ.ಎಂ. ಮಲ್ಲಿಕಾರ್ಜುನಪ್ಪ ಒತ್ತಾಯಿಸಿದ್ದಾರೆ.

ರಾಜನಹಳ್ಳಿ ಮಠ ಮತ್ತು ಸುತ್ತಮುತ್ತಲಿನ ಜಮೀನು ಮಹರ್ಷಿ ವಾಲ್ಮೀಕಿ ಗುರುಪೀಠ ಟ್ರಸ್ಟ್‌ ಹೆಸರಿಗಿದೆ. ಟ್ರಸ್ಟ್‌ ಹೆಸರಿಗೆ ಇರುವುದು ನ್ಯಾಯಯುತವಾದುದು. ಆದರೆ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಬಂಡೋಲಿ ಗ್ರಾಮದಲ್ಲಿ 17 ಎಕರೆ, ಹೊಸಪೇಟೆಯಲ್ಲಿ 3 ಎಕರೆ ಹಾಗೂ ಹರಿಹರದಲ್ಲಿನ ಇನ್ನಷ್ಟು ಜಮೀನನ್ನು ಟ್ರಸ್ಟ್‌ ಹೆಸರಿನ ಬದಲು ಸ್ವಾಮೀಜಿ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಮೂರು ವರ್ಷಗಳಿಂದ ವಾಲ್ಮೀಕಿ ಜಾತ್ರಾ ಮಹೋತ್ಸವ ಮಾಡಿಕೊಂಡು ಬಂದಿದ್ದಾರೆ. ಇದಕ್ಕೆ ಸರ್ಕಾರದ ಪರಿಶಿಷ್ಟ ವರ್ಗಗಳ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದ ಹಣದಲ್ಲಿ ಮೂರು ವರ್ಷಗಳಲ್ಲಿ ₹ 14.47 ಕೋಟಿಯನ್ನು ಬಳಕೆ ಮಾಡಲಾಗಿದೆ. ಸಮುದಾಯದ ಅಭಿವೃದ್ಧಿಯ ಹಣವನ್ನು ಜಾತ್ರೆಗೆ ಬಿಡುಗಡೆ ಮಾಡಿರುವ ಸರ್ಕಾರದ ಅಧಿಕಾರಿಗಳ ಮೇಲೂ ಕ್ರಮ ಕೈಗೊಳ್ಳಬೇಕು. ಈ ಬಾರಿ ಮತ್ತೆ ಜಾತ್ರೆ ಮಾಡುತ್ತಿದ್ದಾರೆ. ಅದಕ್ಕೆ ಹಣ ಬಿಡುಗಡೆ ಮಾಡಬಾರದು ಎಂದು ಒತ್ತಾಯಿಸಿದರು. ತಮ್ಮ ಆರೋಪಕ್ಕೆ ಪೂರಕವಾದ ದಾಖಲೆಗಳ ಪ್ರತಿ ನೀಡಿದರು.

‘ಪರಿಶಿಷ್ಟ ವರ್ಗಗಳ ಅಭಿವೃದ್ಧಿಗೆ ಇರುವ ಅನುದಾನಗಳನ್ನು ಸಮುದಾಯದ ಶಿಕ್ಷಣ, ಉದ್ಯೋಗ ಇನ್ನಿತರ ಮೂಲ ಅಗತ್ಯಗಳನ್ನು ಒದಗಿಸಲು ಬಳಸಬೇಕೇ ಹೊರತು ಜಾತ್ರೆಗಲ್ಲ. ಈ ಬಗ್ಗೆ ಲೆಕ್ಕವನ್ನೂ ನೀಡಿಲ್ಲ. ನಾನು ಪ್ರಶ್ನಿಸಿದರೆ ಕೆಲವರು ನನಗೇ ಬೆದರಿಕೆ ಒಡ್ಡಿದ್ದಾರೆ. ಹಾಗಾಗಿ ಪೊಲೀಸ್‌ ರಕ್ಷಣೆ ತೆಗೆದುಕೊಂಡಿದ್ದೇನೆ’ ಎಂದು
ತಿಳಿಸಿದರು.

ಸ್ವಾಮೀಜಿ ಸಲಹೆ ನೀಡಬೇಕು. ಆಶೀರ್ವಚನ ನೀಡಬೇಕು. ಲೆಕ್ಕಗಳೆಲ್ಲ ಟ್ರಸ್ಟ್‌ ಕೈಯಲ್ಲಿರಬೇಕು. ಆದರೆ ಇಲ್ಲಿ ಎಲ್ಲವೂ ತಿರುವುಮುರುವು ಆಗಿವೆ ಎಂದರು.

ಈ ಆರೋಪಗಳ ಬಗ್ಗೆ ಪ್ರತಿಕ್ರಿಯೆಗಾಗಿ ಫೋನ್‌ ಮಾಡಿದರೆ ಸ್ವಾಮೀಜಿ ಕರೆ ಸ್ವೀಕರಿಸಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು