ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜ್ಯದ ಫಲಿತಾಂಶ ಲೋಕಸಭೆಗೆ ದಿಕ್ಸೂಚಿ’

ಮಹಾಗಾಂವ: ಸಿಪಿಐ (ಎಂ) ಅಭ್ಯರ್ಥಿ ಮಾನ್ಪಡೆ ಪರ ಪ್ರಕಾಶ ಅಂಬೇಡ್ಕರ್‌ ಪ್ರಚಾರ
Last Updated 29 ಮಾರ್ಚ್ 2018, 12:18 IST
ಅಕ್ಷರ ಗಾತ್ರ

ಕಮಲಾಪುರ: ‘ರಾಜ್ಯದ ವಿಧಾನಸಭೆ ಚುನಾವಣೆ ಫಲಿತಾಂಶ ಮುಂಬರುವ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆ’ ಎಂದು ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾದ ಅಧ್ಯಕ್ಷ ಪ್ರಕಾಶ ಅಂಬೇಡ್ಕರ್‌ ತಿಳಿಸಿದರು.

ತಾಲ್ಲೂಕಿನ ಮಹಾಗಾಂವ ಕ್ರಾಸ್‌ನಲ್ಲಿ ಸಿಪಿಐ (ಎಂ) ಆಯೋಜಿಸಿದ್ದ ಸಂವಿಧಾನ ರಕ್ಷಣೆ ಹಾಗೂ ಐಕ್ಯ ಭಾರತಕ್ಕಾಗಿ ಬೃಹತ್‌ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಕರ್ನಾಟಕದಲ್ಲಿ 17 ರಾಜ್ಯಗಳ ಜನರು ವಾಸಿಸುತ್ತಾರೆ. ಈ ಎಲ್ಲ ರಾಜ್ಯಗಳ ಜನ ಮತದಾನದ ಮೂಲ ಅಭಿಪ್ರಾಯ ಸೂಚಿಸುತ್ತಾರೆ. ಈ ಅಭಿಪ್ರಾಯ ದೇಶದ ಅಭಿಪ್ರಾಯವೂ ಆಗಗದೆ. ಹೀಗಾಗಿ ಇದು ಲೋಕಸಭೆ ಚುನಾವಣೆಯ ಕೈಗನ್ನಡಿಯಾಗುತ್ತದೆ’ ಎಂದರು.

‘ಕೇಂದ್ರದ ಬಿಜೆಪಿ ಸರ್ಕಾರದಿಂದ ದಲಿತರು, ಮುಸ್ಲಿಮರು ಈಗಾಗಲೇ ಸಾಕಷ್ಟು ನೋವು ಅನುಭವಿಸುತ್ತಿದ್ದಾರೆ. ಚುನಾವಣೆಯಲ್ಲಿ ಹಣ, ಮದ್ಯ ಮತ್ತಿತರ ಆಮಿಷಗಳಿಗೆ ಮಾರು ಹೋಗದೆ ಎಚ್ಚರದಿಂದ ಮತದಾನ ಮಾಡಬೇಕು’ ಎಂದು ಸಲಹೆ ನೀಡಿದರು.

‘ಕಾಂಗ್ರೆಸ್‌, ಬಿಜೆಪಿಗೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಉತ್ತರ ಪ್ರದೇಶದಲ್ಲಿ 1 ಕೆ.ಜಿ ಗೋಧಿಗೆ ಸರ್ಕಾರ ನಿಗದಿಪಡಿಸಿದ ಬೆಲೆ ₹22. ಆದರೆ, ₹14ಕ್ಕೆ ಖರೀದಿಸಲಾಗುತ್ತಿದೆ. ನಾವು ಖರೀದಿಸಲು ಹೋದರೆ ₹40 ಕೊಡಬೇಕಾಗುತ್ತಿದೆ. ಕೇವಲ ವ್ಯಾಪಾರಿಗಳ ಏಳಿಗೆ ಬಯಸುವ ಬಿಜೆಪಿ ರೈತರನ್ನು ಸಂಕಷ್ಟಕ್ಕೆ ದೂಡುತ್ತಿದೆ’ ಎಂದು ಆಪಾದಿಸಿದರು.

‘ಮಾರುತಿ ಮಾನ್ಪಡೆ ಅವರನ್ನು ಕರ್ನಾಟಕದ ವಿಧಾನಸಭೆಗೆ ಕಳುಹಿ ಸಬೇಕು. ಅವರು ಪ್ರತಿ ಬಜೆಟ್‌ನಲ್ಲಿ ಹಣ ಕಾಯ್ದಿಟ್ಟು ಬೆಂಬಲ ಬೆಲೆಯನ್ನು ಅನುದಾನದ ರೂಪದಲ್ಲಿ ರೈತರಿಗೆ ಒದಗಿಸಲು ಹೋರಾಟ ಮಾಡಲಿದ್ದಾರೆ’ ಎಂದು ಭರವಸೆ ನೀಡಿದರು.

‘ಪರಿಶಿಷ್ಟ ಜಾತಿಯವರ ಏಳಿಗೆಗಾಗಿ ₹72 ಸಾವಿರ ಕೋಟಿ ಅನುದಾನ ಬರುತ್ತದೆ. ಇದರಲ್ಲಿ ಪ್ರತಿ ದಲಿತ ಕುಟುಂಬಕ್ಕೆ ತಿಂಗಳಿಗೆ ₹12 ಸಾವಿರ ಜಮಾ ಮಾಡಬಹುದು. ಚುನಾವಣೆಯಲ್ಲಿ ನಿಮಗೆ ಸಾವಿರ ರೂಪಾಯಿ ಕೊಟ್ಟ ಅದೆಲ್ಲವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಅದರ ಅರಿವು ದಲಿತರಿಗೆ ಇಲ್ಲ’ ಎಂದು ಹೇಳಿದರು.

‘ದಲಿತರು ಇಂದಿಗೂ ಮಾನಸಿಕ ವಾಗಿ ಶ್ರೀಮಂತರ ಗುಲಾಮರಾಗಿದ್ದಾರೆ. ಅದರಿಂದ ಹೊರ ಬಂದಾಗ ಮಾತ್ರ ಅವರ ಏಳಿಗೆಯು ಸಾಧ್ಯವಾಗಲಿದೆ’ ಎಂದು ಹೇಳಿದರು.

ಕಲಬುರ್ಗಿ ಗ್ರಾಮೀಣ ಮತಕ್ಷೇತ್ರದ ಸಿಪಿಐ (ಎಂ) ಅಭ್ಯರ್ಥಿ ಮಾರುತಿ ಮಾನ್ಪಡೆ, ಅಬ್ದುಲ್‌ ಮೌಲಾನಾ ಇದ್ದರು.

ಜೈಲಿಗೆ ಹೋಗುವುದೇ ಮಾನದಂಡ!

‘ದಲಿತರ ಮೇಲೆ ಪದೇಪದೇ ಹಲ್ಲೆಗಳು ನಡೆಯುತ್ತಿವೆ. ರಾಷ್ಟ್ರದ ಹಿತಕ್ಕಾಗಿ ರಚಿಸಿರುವ ಸಂವಿಧಾನವನ್ನು ಬಿಜೆಪಿಯವರು ತಮ್ಮ ಹಿತಕ್ಕಾಗಿ ಬದಲಿಸುವ ಹುನ್ನಾರ ನಡೆಸುತ್ತಿದ್ದಾರೆ’ ಎಂದು ಪ್ರಕಾಶ ಅಂಬೇಡ್ಕರ್‌  ಆರೋಪಿಸಿದರು.‘ಬಿ.ಎಸ್‌.ಯಡಿಯೂರಪ್ಪ, ಅಮಿತ್‌ ಶಾ ಇಬ್ಬರೂ ಜೈಲಿಗೆ ಹೋಗಿದ್ದಾರೆ. ಜೈಲಿಗೆ ಹೋಗುವುದು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಲು ಬಿಜೆಪಿಯಲ್ಲಿ ಇರುವ ಮಾನದಂಡ’ ಎಂದು ವ್ಯಂಗ್ಯ ಮಾಡಿದರು.‘ಮಾನವೀಯ ಮೌಲ್ಯಗಳನ್ನು ಬಿಟ್ಟು, ಬಿಜೆಪಿ ಕ್ರೌರ್ಯದ ಮೂಲಕ ರಾಷ್ಟ್ರದಲ್ಲಿ ದ್ವೇಷ ಬಿತ್ತುತ್ತಿದೆ. ವಾಮ ಮಾರ್ಗದಿಂದ ಅಧಿಕಾರದ ಗದ್ದುಗೆ ಹಿಡಿಯುತ್ತಿದೆ’ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

‘ದೌರ್ಜನ್ಯ ಕಾಯ್ದೆ ತಡೆ ಕಾಯ್ದೆ ನಿಷ್ಕ್ರಿಯ’

‘ದಲಿತರ ಮೇಲಿನ ದೌರ್ಜನ್ಯ ಕಾಯ್ದೆ ಕುರಿತು ಕೆಲವು ದಿನಗಳ ಹಿಂದೆ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪು ದಲಿತರನ್ನು ಹಲ್ಲು ಕಿತ್ತ ಹಾವಿನಂತೆ ಮಾಡಿದೆ. ಇದರ ವಿರುದ್ಧ ಕಾಂಗ್ರೆಸ್‌ನ ಯಾರೊಬ್ಬರೂ ಧ್ವನಿ ಎತ್ತಿಲ್ಲ’ ಎಂದು ಪ್ರಕಾಶ ಅಂಬೇಡ್ಕರ್‌ ಬೇಸರ ವ್ಯಕ್ತಪಡಿಸಿದರು. ‘ಸಂವಿಧಾನ ಬದಲಾವಣೆ ವಿರುದ್ಧ ದೊಡ್ಡ ಜಾಥಾ ಮಾಡಿ ವಿರೋಧಿಸಬೇಕಾಗಿತ್ತು. ಅದನ್ನೂ ಮಾಡಲಿಲ್ಲ. ದಲಿತರ ಮತ ಪಡೆಯುತ್ತಿರುವ ಕಾಂಗ್ರೆಸ್‌ಗೆ ಅವರ ಏಳಿಗೆಯ ಕಾಳಜಿ ಇಲ್ಲ’ ಎಂದರು.

‘ಸದಾ ಬ್ಲಾಕ್‌ಮೇಲ್‌ ತಂತ್ರ ಅನುಸರಿಸುವ ಕಾಂಗ್ರೆಸ್‌ ನಾಯಕರು ಸೋನಿಯಾ ಗಾಂಧಿಯವರ ಅಡಿಯಾಳಾಗಿದ್ದಾರೆ. ಮೇಘಾಲಯದ ಪಿ.ಎ.ಸಂಗ್ಮಾ ಅವರೊಂದಿಗೆ ಜೊತೆ ಸೋನಿಯಾ ಗಾಂಧಿ ವಿರೋಧ ಕಟ್ಟಿಕೊಂಡಿದ್ದಾರೆ. ಹೀಗಾಗಿ ಸಂಗ್ಮಾ ಪುತ್ರನ ಜತೆಗೆ ಮೈತ್ರಿ ಮಾಡಿಕೊಳ್ಳಲಿಲ್ಲ. ಅವರು ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡರು. ಗುಜರಾತ್‌, ಗೋವಾಗಳಲ್ಲಿಯೂ ಹೀಗೆಯೆ ಆಯಿತು. ದಲಿತ ವಿರೋಧಿ ಬಿಜೆಪಿ ಏಳಿಗೆಗೆ ಕಾಂಗ್ರೆಸ್‌ ಕಾರಣವಾಗುತ್ತಿದೆ’ ಎಂದರು.

‘ಸಂಸದ ಮಲ್ಲಿಕಾರ್ಜುನ ಖರ್ಗೆ ವೈಯಕ್ತಿಕವಾಗಿ ಒಳ್ಳೆಯವರು. ರಾಜಕೀಯದಲ್ಲಿ ಇಂಥವರು ನಮಗೆ ಬೇಕಾಗಿಲ್ಲ. ಸದನದಲ್ಲಿ ದಲಿತರ, ನೊಂದವರ ಪರ ಹೋರಾಡುವ ಯಟ್ಟಿ (ತಿಗಡಾ) ಮನುಷ್ಯ ಬೇಕು. ಅವರು ಮನುವಾದಿಗಳ ಜೊತೆಗೆ ಹೊಂದಾಣಿಕೆಯಾಗಿದ್ದಾರೆಯೆ ಹೊರತು ಸಂವಿಧಾನದ ಪರ ಇಲ್ಲ’ ಎಂದರು.

ಮನೆಗೆ ಬಂದರೆ ಊಟ ಹಾಕುತ್ತೀರಿ. ಚುನಾವಣೆಯಲ್ಲಿ ಓಟು ಹಾಕುವುದಿಲ್ಲ. ನಾಲ್ಕು ಬಾರಿ ಸ್ಪರ್ಧಿಸಿ ಸೋತಿದ್ದೇನೆ. ಈ ಬಾರಿಯಾದರೂ ಗೆಲ್ಲಿಸಿ – ಮಾರುತಿ ಮಾನ್ಪಡೆ, ಗ್ರಾಮೀಣ ಕ್ಷೇತ್ರದ ಸಿಪಿಐ (ಎಂ) ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT