ಮಂಗಳವಾರ, ಅಕ್ಟೋಬರ್ 15, 2019
29 °C
ವಜಾಗೊಂಡಿರುವ ದಿನಗೂಲಿ ನೌಕರರ ಮರುನೇಮಕಕ್ಕೆ ಆಗ್ರಹ

ಪೂಜ್ಯಾಯ ಏಜೆನ್ಸಿಯನ್ನು ಕಪ್ಪು ಪಟ್ಟಿಗೆ ಸೇರಿಸಲು ಆಗ್ರಹ

Published:
Updated:

ದಾವಣಗೆರೆ: ಚಿಗಟೇರಿ ಆಸ್ಪತ್ರೆಯ ದಿನಗೂಲಿ ನೌಕರರನ್ನು ಕೆಲಸದಿಂದ ತೆಗೆದು ಹಾಕಿರುವ ಪೂಜ್ಯಾಯ ಸೆಕ್ಯುರಿಟಿ ಏಜೆನ್ಸಿಯನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಹಾಗೂ ಕೆಲಸದಿಂದ ತೆಗೆದು ಹಾಕಿರುವ ನೌಕರರನ್ನು ಮರು ನೇಮಕ ಮಾಡಿಕೊಳ್ಳಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಡಿ. ಹನುಮಂತಪ್ಪ ಆಗ್ರಹಿಸಿದರು.

‘ಪೂಜ್ಯಾಯ ಸೆಕ್ಯುರಿಟಿ ಏಜೆನ್ಸಿಯ ಮಾಲೀಕ ರಾಘವೇಂದ್ರ ರೆಡ್ಡಿ ಹಾಗೂ ಮ್ಯಾನೇಜರ್‌ ಮಂಜುನಾಥ್‌ ಎನ್‌. ಅರುಣ, ರಾಜಪ್ಪ ಹಾಗೂ ಮಂಜುನಾಥ ಗೋಣಿವಾಡ ಅವರ ಕಿರುಕುಳದಿಂದ ನೌಕರರು ಆತ್ಮಹತ್ಯೆಗೆ ಯತ್ನಿಸಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

‘ಕಾರ್ಮಿಕರು 27 ದಿನ ಕೆಲಸ ಮಾಡಿದರೆ ಅವರಿಗೆ 25 ದಿನದ ವೇತನ ಮಾತ್ರ ನೀಡಿ ಏಜೆನ್ಸಿಯವರು ಸರ್ಕಾರದಿಂದ  27 ದಿನದ ಬಿಲ್‌ ತೆಗೆದುಕೊಂಡಿದ್ದಾರೆ. 283 ನೌಕರರಿಗೆ ಇದೇ ರೀತಿ ಮಾಡಿದ್ದಾರೆ. ಅಲ್ಲದೇ 50 ಕಾರ್ಮಿಕರಿಗೆ ಬ್ಯಾಂಕ್‌ ಮೂಲಕ ವೇತನ ನೀಡದೇ ₹5ಸಾವಿರದಿಂದ ₹6ಸಾವಿರ ಕಡಿಮೆ ವೇತನವನ್ನು ಕೈಯಲ್ಲಿ ನೀಡಿದ್ದಾರೆ’ ಎಂದು ಆರೋಪಿಸಿದರು.

‘ಕಳೆದ ವರ್ಷ ಹೊಸದಾಗಿ ಕೆಲಸಕ್ಕೆ ತೆಗೆದುಕೊಳ್ಳುವಾಗ ಪೂಜ್ಯಾಯ ಸೆಕ್ಯುರಿಟಿಯವರು ಒಬ್ಬರಿಂದ ₹30 ಸಾವಿರದಿಂದ ₹40 ಸಾವಿರ ಪಡೆದಿದ್ದು, ಇದನ್ನು ತನಿಖೆ ಮಾಡಬೇಕು. ಈ ಕುರಿತು ಸಿಜಿ ಆಸ್ಪತ್ರೆಯ ಅಧೀಕ್ಷಕರು ವೈದ್ಯಾಧಿಕಾರಿ, ಕಾರ್ಮಿಕ ಇಲಾಖೆಯ ಕಮೀಷನರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ’ ಎಂದು ಆರೋಪಿಸಿದರು.

‘ಒಂದೂವರೆ ವರ್ಷಗಳಿಂದ ಗುತ್ತಿಗೆ ಏಜೆನ್ಸಿ ನಡೆಸುತ್ತಿರುವ ಪೂಜ್ಯಾಯ ಸೆಕ್ಯುರಿಟಿಯವರು ನೌಕರರನ್ನು ಬಿಡಿಸುವ ಉದ್ದೇಶದಿಂದ ಹೊಸದಾಗಿ ಹಲವರನ್ನು ನೇಮಿಸಿಕೊಂಡಿದ್ದು, ಅವರು ಯಾವತ್ತೂ ಕೆಲಸಕ್ಕೆ ಹಾಜರಾಗಿಲ್ಲ. 15 ವರ್ಷಗಳಿಂದ ಕೆಲಸ ಮಾಡುತ್ತಿರುವ 54 ಮಂದಿಯನ್ನು ಕೆಲಸದಿಂದ ತೆಗೆದುಹಾಕಿದ್ದಾರೆ. ಕೆಲವರು ಅನಾರೋಗ್ಯದಿಂದ ಮನೆಯಲ್ಲೇ ಇದ್ದು, ಅವರಿಗೆ ಪರಿಹಾರ ನೀಡಿಲ್ಲ. ಕೆಲಸಗಾರರಿಗೆ ಭದ್ರತೆ ನೀಡಬೇಕು’ ಎಂದು ಆಗ್ರಹಿಸಿದರು.

‘ಹಳಬರನ್ನು ಕೆಲಸದಿಂದ ಬಿಡಿಸಬಾರದು ಎಂದು ಆಸ್ಪತ್ರೆಯ ಅಧೀಕ್ಷಕರು ಹಾಗೂ ಗುತ್ತಿಗೆದಾರರಿಗೆ ಜಿಲ್ಲಾಧಿಕಾರಿ ಸೂಚಿಸಿದರೂ ಅವರ ಆದೇಶವನ್ನು ಉಲ್ಲಂಘಿಸಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗೆ ಮತ್ತೆ ಮನವಿ ಮಾಡಿದಾಗ ನಮ್ಮನ್ನು ಕೆಲಸಕ್ಕೆ ಬರಮಾಡಿಕೊಂಡು ಅ.10ರವರೆಗೆ ಕೆಲಸ ಮಾಡಿದ್ದೇವೆ. ಆದರೆ 7ರಿಂದ 8 ಜನರನ್ನು ಮಾತ್ರ ರಿಲೀವರ್ ಆಗಿ ತೆಗೆದುಕೊಳ್ಳುತ್ತೇವೆ. ಉಳಿದವರನ್ನು ತೆಗೆದುಕೊಳ್ಳುವುದಿಲ್ಲ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ. ಇದರಿಂದ ದಿನಗೂಲಿ ನೌಕರರು ಆತಂಕಗೊಂಡಿದ್ದಾರೆ’ ಎಂದು ಹೇಳಿದರು.

‘ಹೊಸಬರನ್ನು ನೇಮಕ ಮಾಡಿಕೊಳ್ಳುವಾಗ ಹಣವನ್ನು ಪಡೆದಿರುವುದರಿಂದ ಅವರನ್ನು ಕೆಲಸದಿಂದ ತೆಗೆದುಹಾಕಲು ಸಾಧ್ಯವಿಲ್ಲ ಎಂಬುದನ್ನು ಅರಿತು ಹಳಬರನ್ನು ಕೆಲಸದಿಂದ ವಜಾ ಮಾಡಲು ಗುತ್ತಿಗೆದಾರರು ಯತ್ನಿಸುತ್ತಿದ್ದಾರೆ. ಇವರು ಮಾಡಿರುವ ಅಕ್ರಮಗಳಿಗೆ ನಮ್ಮಲ್ಲಿ ಸಾಕ್ಷ್ಯಗಳಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಬಡಾವಣೆ ಠಾಣೆಗೆ ದೂರು ನೀಡಿದ್ದೇವೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ಎರಡು ದಿವಸದಲ್ಲಿ ಕ್ರಮ ಕೈಗೊಳ್ಳದೇ ಇದ್ದಲ್ಲಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದಿ) ಸರ್ಕಾರಿ ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ದಿನಗೂಲಿ ನೌಕರರ ಸಂಘ, ವಿವಿಧ ದಲಿತಪರ ಸಂಘಟನೆಗಳ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತೇವೆ’ ಎಂದು ಎಚ್ಚರಿಸಿದರು.

ಸಂಘಟನೆಯ ಎನ್.ಶಂಕರ್‌, ಅವಳಪ್ಪ, ವಾಸುದೇವ್‌, ಮಹಾಂತೇಶ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

Post Comments (+)