ಶನಿವಾರ, ಮೇ 28, 2022
24 °C

ಅಕ್ರಮ ಮ್ಯಾಂಗನೀಸ್ ಗಣಿಗಾರಿಕೆಗೆ ನಲುಗಿದ ಜಮ್ಮಾಪುರ ಗುಡ್ಡ

ಡಿ. ಶ್ರೀನಿವಾಸ್ Updated:

ಅಕ್ಷರ ಗಾತ್ರ : | |

Prajavani

ಜಗಳೂರು: ತಾಲ್ಲೂಕಿನ ಜಮ್ಮಾಪುರ ಗ್ರಾಮದ ಸಮೀಪದ ಗುಡ್ಡದಲ್ಲಿ ರಾತ್ರಿ ಅಕ್ರಮ ಮ್ಯಾಂಗನೀಸ್ ಗಣಿಗಾರಿಕೆ ನಡೆಯುತ್ತಿದ್ದು, ಭಾರಿ ಪ್ರಮಾಣದಲ್ಲಿ ಮ್ಯಾಂಗನೀಸ್ ಅದಿರನ್ನು ಬೇರೆಡೆ ಸಾಗಣೆ ಮಾಡಲಾಗಿದೆ.

ಜಮ್ಮಾಪುರ ಗುಡ್ಡದ 560 ಹೆಕ್ಟೇರ್ ಪ್ರದೇಶ ಅರಣ್ಯ ಇಲಾಖೆಗೆ ಸೇರಿದ್ದು, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಸೇರಿದಂತೆ ಯಾವುದೇ ಇಲಾಖೆಗಳ ಪರವಾನಗಿ ಇಲ್ಲದೆ ಎರಡು ತಿಂಗಳುಗಳಿಂದ ಭಾರಿ ಯಂತ್ರಗಳನ್ನು ಬಳಸಿಕೊಂಡು ರಾತ್ರಿ ಸಮಯದಲ್ಲಿ ಗಣಿಗಾರಿಕೆ ಮಾಡಲಾಗುತ್ತಿದೆ. ನಿರಂತರ ಅಕ್ರಮ ಗಣಿಗಾರಿಕೆಯಿಂದ ಗುಡ್ಡದ ಪ್ರದೇಶ ರಾತ್ರೋರಾತ್ರಿ ಕರಗಿಹೋಗಿದ್ದು, ಅರಣ್ಯ ಪ್ರದೇಶದಲ್ಲಿರುವ ಸಾವಿರಾರು ಗಿಡಮರಗಳನ್ನು ನಾಶ ಮಾಡಲಾಗಿದೆ. ಗಣಿಗಾರಿಕೆಯಿಂದ ಕುರುಚಲು ಅರಣ್ಯದಲ್ಲಿ ನೆಲೆ ಕಂಡುಕೊಂಡ ವನ್ಯಪ್ರಾಣಿಗಳ ಆವಾಸ ಸ್ಥಾನಕ್ಕೆ ಧಕ್ಕೆಯಾಗಿದೆ.

1,500 ಎಕರೆಗೂ ಹೆಚ್ಚು ವಿಸ್ತೀರ್ಣದ ಗುಡ್ಡದ ಪ್ರದೇಶ ಉತ್ಕೃಷ್ಟ ಗುಣಮಟ್ಟದ ಮ್ಯಾಂಗನೀಸ್ ಮತ್ತು ಕಬ್ಬಿಣದ ಅದಿರಿನ ಕಣಜವಾಗಿದೆ. ಅಕ್ಕಪಕ್ಕದ ಗ್ರಾಮಸ್ಥರಿಗೆ ತಿಳಿಯದಂತೆ ರಾತ್ರಿಯ ಸಮಯದಲ್ಲಿ ಎರಡು ತಿಂಗಳಿಂದ ಆಗಾಗ ಹತ್ತಾರು ದೈತ್ಯ ಹಿಟಾಚಿ, ಜೆಸಿಬಿ ಹಾಗೂ ಟ್ರ್ಯಾಕ್ಟರ್ ಬಳಸಿ ಸಾವಿರಾರು ಟನ್‌ಗಳಷ್ಟು ಅದಿರು ಮತ್ತು ಫಲವತ್ತಾದ ಮಣ್ಣನ್ನು ಗುಡ್ಡದಿಂದ ಬಗೆದು ಹೊರ ತೆಗೆಯಲಾಗಿದೆ. ಹೊರ ತೆಗೆದು ಸಾಗಿಸಿ ಉಳಿದ ಮಣ್ಣನ್ನು ಅಲ್ಲಿಯೇ ಪಕ್ಕದ ಹಳ್ಳದಲ್ಲಿ ಹಾಕಿ
ಮುಚ್ಚಲಾಗಿದೆ.

‘ಆಸುಪಾಸಿನ ಹತ್ತಾರು ಹಳ್ಳಿಗಳ ಅಂತರ್ಜಲದ ಮೂಲವಾಗಿರುವ ಜಮ್ಮಾಪುರ ಗುಡ್ಡದಲ್ಲಿ ಅಕ್ರಮ ಗಣಿಗಾರಿಕೆಯಿಂದ ಅಂತರ್ಜಲದ ಮೂಲಗಳು ಬರಿದಾಗುವ ಅಪಾಯವಿದೆ. ಸರ್ಕಾರದಿಂದ ಪರವಾನಗಿ ಇಲ್ಲದೇ ಅಕ್ರಮ ಗಣಿಗಾರಿಕೆ ರಾತ್ರಿ ಸಮಯದಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಮೌಖಿಕವಾಗಿ ದೂರು ಸಲ್ಲಿಸಿದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಅಕ್ರಮ ಗಣಿಗಾರಿಕೆ ತಡೆಯದೇ ಇದ್ದಲ್ಲಿ ಪ್ರತಿಭಟನೆ ನಡೆಸಲಾಗುವುದು’ ಎಂದು ಜಮ್ಮಾಪುರ ಗ್ರಾಮದ ಬಾಲರಾಜ್ ಎಚ್ಚರಿಸಿದರು.

ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ದೂರು ಕೇಳಿ ಬಂದ ಕಾರಣ ತಹಶೀಲ್ದಾರ್ ಸಂತೋಷ್ ಅವರು ಅಕ್ರಮ ಗಣಿಗಾರಿಕೆ ನಡೆದ ಜಮ್ಮಾಪುರ ಗುಡ್ಡಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.

ವರದಿ ಬಂದ ನಂತರ ಸೂಕ್ತ ಕ್ರಮ

‘ಜಮ್ಮಾಪುರ ಗುಡ್ಡದಲ್ಲಿ ಮ್ಯಾಂಗನೀಸ್ ಹಾಗೂ ಕಬ್ಬಿಣದ ಅದಿರು ಲಭ್ಯತೆ ಇದೆ. ಈ ಪ್ರದೇಶ ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರಿದ್ದು, ಇಲ್ಲಿ ಈಚೆಗೆ ಅಕ್ರಮವಾಗಿ ಗಣಿಗಾರಿಕೆ ನಡೆದಿದೆ. ಗಣಿಗಾರಿಕೆಗೆ ಇಲಾಖೆಗಳಿಂದ ಪರವಾನಗಿ ಪಡೆದಿಲ್ಲ. ನಾಳೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ. ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ತಹಶೀಲ್ದಾರ್ ಸಂತೋಷ್ ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು