ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೇಬೆನ್ನೂರು: ದೇಶಿ ತಳಿಯ ಪುಷ್ಟಿ.. ಸ್ವಂತ ಮಾರುಕಟ್ಟೆ ಸೃಷ್ಟಿ...

ಮಾದರಿಯಾದ ವೆಂಕಟೇಶ್ವರ ಕ್ಯಾಂಪ್‌ನ ಮಂಜುಳಾ
Last Updated 28 ಡಿಸೆಂಬರ್ 2022, 2:59 IST
ಅಕ್ಷರ ಗಾತ್ರ

ಸಂತೇಬೆನ್ನೂರು: ಸಾವಯವ ಕೃಷಿ ಪದ್ಧತಿಯಲ್ಲಿ ದೇಶಿ ತಳಿಯ ವೈವಿಧ್ಯಮಯವಾದ ಭತ್ತ ಬೆಳೆದು ಸ್ವಂತ ಮಾರುಕಟ್ಟೆ ಸೃಷ್ಟಿಸಿಕೊಳ್ಳುವ ಮೂಲಕ ಯಶಸ್ಸು ಗಳಿಸುತ್ತಿರುವ ವೆಂಕಟೇಶ್ವರ ಕ್ಯಾಂಪ್‌ನ ರೈತ ಮಹಿಳೆ ಮಂಜುಳಾ ಅವರ ಕಾರ್ಯ ಅನುಕರಣೀಯ.

ಈ ಬಾರಿ ‘ಮೈಸೂರು ಮಲ್ಲಿಗೆ’, ‘ಬಹುರೂಪಿ’ ಹಾಗೂ ‘ಕಾಳಭಟ್ಟಿ’ ಎಂಬ ಮೂರು ವಿಧದ ದೇಶಿ ತಳಿ ಭತ್ತ ಬೆಳೆದಿರುವ ಅವರು, ಈಗಾಗಲೇ ಒಕ್ಕಣೆ ನಡೆಸುತ್ತಿದ್ದಾರೆ. ತಲಾ ಒಂದು ಎಕರೆಯಲ್ಲಿ ‘ಮೈಸೂರು ಮಲ್ಲಿಗೆ’ ಮತ್ತು ‘ಬಹುರೂಪಿ’ ಹಾಗೂ ಅರ್ಧ ಎಕರೆಯಲ್ಲಿ ‘ಕಾಳಭಟ್ಟಿ’ ತಳಿಯ ಭತ್ತ ಸಮೃದ್ಧವಾಗಿ ಬಂದಿದೆ. ಕಳೆದ ಹಂಗಾಮಿನಲ್ಲಿ ‘ನವರ’, ‘ಕುಲಾಕಾರ್’ ಹಾಗೂ ‘ಚಿತ್ತಿ ಮುತ್ಯಾಲ’ ತಳಿಯ ಭತ್ತವನ್ನೂ ಬೆಳೆದು ಲಾಭ ಗಳಿಸಿದ್ದರು.

‘ಮೈಸೂರು ಮಲ್ಲಿಗೆ ಎಕರೆಗೆ 23 ಚೀಲ, ಬಹುರೂಪಿ ಎಕರೆಗೆ 24 ಚೀಲ ಹಾಗೂ ಕಾಳಭಟ್ಟಿ 20 ಚೀಲ ಇಳುವರಿ ಬಂದಿದೆ. ಮೈಸೂರು ಮಲ್ಲಿಗೆ, ಬಹುರೂಪಿ ಅಕ್ಕಿ ಕೆ.ಜಿ.ಗೆ ₹ 70 ದರ ಇದ್ದರೆ, ಕಾಳಭಟ್ಟಿ ಅಕ್ಕಿ ಕೆ.ಜಿ.ಗೆ ₹ 250ರಿಂದ ₹ 400ವರೆಗೆ ಇದೆ. ಆಂಧ್ರಪ್ರದೇಶ ಹಾಗೂ ಕೇರಳ ರಾಜ್ಯಗಳ ಗ್ರಾಹಕರಿಗೆ ನೇರ ಮಾರಾಟ ಮಾಡುತ್ತೇವೆ. ಪ್ರತಿ ಎಕರೆಗೆ ₹ 20,000 ಖರ್ಚು ಉಳುಮೆಗೆ ಹಾಗೂ ಕೊಯ್ಲಿಗೆ ತಗುಲುತ್ತದೆ’ ಎಂದು ಮಂಜುಳಾ ಮಾಹಿತಿ ನೀಡಿದರು.

‘ಎರಡು ಬೆಳೆಯ ಅಂತರದಲ್ಲಿ ‘ಡಯಂಚ’ ಬೆಳೆಯುವುದರಿಂದ ಹಸಿರೆಲೆ ಗೊಬ್ಬರ ಮಣ್ಣಿಗೆ ಸೇರುತ್ತದೆ. ಸಾವಯವ ಗೊಬ್ಬರ ಹಾಗೂ ಜೀವಾಮೃತಗಳು ಬೆಳೆಯ ಪೋಷಕಾಂಶಗಳು. ರಾಸಾಯನಿಕ ಗೊಬ್ಬರ ಬಳಕೆ ಮಾಡುವುದಿಲ್ಲ. ಮೈಸೂರು ಮಲ್ಲಿಗೆ ಸಣ್ಣ ಅಕ್ಕಿ. ಲಘು ಪೋಷಕಾಂಶಗಳನ್ನು ಹೊಂದಿದೆ. ಮಕ್ಕಳಿಗೆ ಇದು ಪೌಷ್ಟಿಕ ಆಹಾರ. ಬಹುರೂಪಿ ಸ್ವಲ್ಪ ದಪ್ಪ ಅಕ್ಕಿ. ಮೊಣಕಾಲು ನೋವು ಹಾಗೂ ಗ್ಯಾಸ್ಟ್ರಿಕ್ ನಿವಾರಕ. ಕಾಳಭಟ್ಟಿ ಕಪ್ಪು ಅಕ್ಕಿ. ಇದು ಕ್ಯಾನ್ಸರ್‌ನಂತಹ ಕಾಯಿಲೆ ನಿರೋಧಕ’ ಎನ್ನುತ್ತಾರೆ ಅವರು.

ಮಾರುಕಟ್ಟೆ ಸೃಷ್ಟಿ: ವಾಟ್ಸ್‌ ಆ್ಯಪ್, ಫೇಸ್‌ಬುಕ್ ಮೂಲಕ ಭತ್ತ ಕೊಳ್ಳುವವರ ಸಂಪರ್ಕ ಸಿಗುತ್ತದೆ. ಆನಂತರ ಅವರು ತಮಗೆ ಬೇಕಾದ ಅಕ್ಕಿಗಾಗಿ ಬೇಡಿಕೆ ಸಲ್ಲಿಸುತ್ತಾರೆ. ಖಾಸಗಿ ಹಾಗೂ ಕೆಎಸ್ಆರ್‌ಟಿಸಿ ಬಸ್ ಮೂಲಕ ಸಂಬಂಧಪಟ್ಟ ಗ್ರಾಹಕರಿಗೆ ತಲುಪಿಸಲಾಗುವುದು.

ಮಂಜುಳಾ ಅವರ ಸಂಪರ್ಕ ಸಂಖ್ಯೆ: 94801 80821

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT