ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಸಣ್ಣದಾದ ಪೊಲೀಸ್‌ ವೃತ್ತಗಳು; ಹಲವು ಪೊಲೀಸ್‌ ಠಾಣೆಗಳು ಮೇಲ್ದರ್ಜೆಗೆ

ಇನ್‌ಸ್ಪೆಕ್ಟರ್‌ಗಳೇ ಅಲ್ಲಿ ಠಾಣಾಧಿಕಾರಿಗಳು
Last Updated 6 ಜೂನ್ 2021, 3:37 IST
ಅಕ್ಷರ ಗಾತ್ರ

ದಾವಣಗೆರೆ: ಪಿಎಸ್‌ಐಗಳು ಠಾಣಾಧಿಕಾರಿಗಳಾಗಿ ಇದ್ದ ಹಲವು ಪೊಲೀಸ್‌ ಠಾಣೆಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಇನ್‌ಸ್ಪೆಕ್ಟರ್‌ಗಳೇ ಠಾಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ವೃತ್ತಗಳನ್ನು ಚಿಕ್ಕದಾಗಿ ಮಾಡಲಾಗಿದೆ.

ಬಿಳಿಚೋಡು, ಜಗಳೂರು, ದಾವಣಗೆರೆ ಗ್ರಾಮಾಂತರ, ಹೊನ್ನಾಳಿ, ನ್ಯಾಮತಿ, ಚನ್ನಗಿರಿ, ಬಸವಾನಗರ, ಬಡಾವಣೆ ಪೊಲೀಸ್‌ ಠಾಣೆಗಳು ಮೇಲ್ದರ್ಜೆಗೆ ಏರಿವೆ. ಅಲ್ಲದೇ ಇನ್ನು ಮುಂದೆ ದಾವಣಗೆರೆ ದಕ್ಷಿಣ, ದಾವಣಗೆರೆ ಉತ್ತರ ಎಂಬ ವೃತ್ತಗಳು ಇರುವುದಿಲ್ಲ. ಆಜಾದ್‌ನಗರ, ಗಾಂಧಿನಗರ, ಆರ್‌ಎಂಸಿ ಈ ಮೂರು ಠಾಣೆಗಳನ್ನು ಸೇರಿಸಿ ಆಜಾದ್‌ನಗರ ವೃತ್ತ ಎಂದು ಮಾಡಲಾಗಿದೆ. ಕೆಟಿಜೆ ನಗರ ಮತ್ತು ವಿದ್ಯಾನಗರ ಎರಡು ಠಾಣೆಗಳನ್ನು ಸೇರಿಸಿ ಕೆಟಿಜೆ ನಗರ ವೃತ್ತ ಎಂದು ಪರಿವರ್ತನೆ ಮಾಡಲಾಗಿದೆ.

ಜಗಳೂರು ವೃತ್ತ ಇನ್ನು ಮುಂದೆ ಇರುವುದಿಲ್ಲ. ಅಲ್ಲಿಯ ಪ್ರತಿ ಠಾಣೆಗಳಲ್ಲಿಯೇ ಇನ್‌ಸ್ಪೆಕ್ಟರ್‌ಗಳು ಇರಲಿದ್ದಾರೆ. ಚನ್ನಗಿರಿ ವೃತ್ತದಿಂದ ಚನ್ನಗಿರಿ ಠಾಣೆಯೇ ಹೊರಗೆ ಬಂದಿದೆ. ಹಾಗಾಗಿ ಬಸವಾಪಟ್ಟಣ ಮತ್ತು ಸಂತೇಬೆನ್ನೂರು ಮಾತ್ರ ಒಂದು ವೃತ್ತವಾಗಿದೆ. ದಾವಣಗೆರೆ ಸಂಚಾರ ಪೊಲೀಸ್‌ ಠಾಣೆಗೆ ಇನ್‌ಸ್ಪೆಕ್ಟರ್‌ ಹುದ್ದೆಯನ್ನು ಸೃಜಿಸಲಾಗಿದೆ.

‘ಆಡಳಿತಾತ್ಮಕವಾಗಿ ಎಲ್ಲ ಪೊಲೀಸ್‌ ಠಾಣೆಗಳನ್ನು ಚುರುಕುಗೊಳಿಸಲು ಕಾರ್ಯನಿರ್ವಾಹಕ ಹುದ್ದೆಗಳನ್ನು ಹೆಚ್ಚಿಸಲಾಗಿದೆ. ಈಗಿನ ಡಿ.ಜಿ. ಅವರ ಕನಸು ಇದು. ಯಾವುದೇ ಹಂತದಲ್ಲಿ ತನಿಖೆ ವಿಳಂಬಗೊಳ್ಳಬಾರದು. ಪರಿಣಾಮಕಾರಿಯಾಗಿರಬೇಕು. ಸಿಬ್ಬಂದಿಯ ಕೊರತೆಯಾಗಬಾರದು ಎಂಬ ಕಾರಣಕ್ಕೆ ಮೇಲ್ದರ್ಜೆಗೆ ಏರಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಈಗ ಪ್ರತಿ ತಿಂಗಳು ಮೂರ್ನಾಲ್ಕು ಜನರಿಗೆ ಪ್ರಮೋಶನ್‌ ನೀಡುತ್ತಿದ್ದೇನೆ. ಕೆಳ ಹಂತದ ಸಿಬ್ಬಂದಿ ಖಾಲಿಯಾದಾಗ ಅಲ್ಲಿಗೆ ನೇರ ನೇಮಕಾತಿ ಪ್ರಕ್ರಿಯೆ ನಡೆಯುತ್ತದೆ. ಇದರಿಂದ ಪ್ರಮೋಶನ್‌ ಮತ್ತು ಸಿಬ್ಬಂದಿ ನೇಮಕಾತಿ ನಿರಂತರವಾಗಿ ನಡೆಯಲು ಅವಕಾಶವಾಗುತ್ತದೆ. ಇಬ್ಬರು ಪಿಎಸ್‌ಐಗಳು ಇರುವ ಬಹುತೇಕ ಠಾಣೆಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಇನ್‌ಸ್ಪೆಕ್ಟರ್‌ಗಳೇ ಠಾಣಾಧಿಕಾರಿಗಳಾದಾಗ ಹಲವು ತನಿಖೆಗಳಿಗೆ ಮೇಲಧಿಕಾರಿಗಳನ್ನು ಕಾಯಬೇಕಾಗಿಲ್ಲ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT