ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಮಾಧ್ಯಮಗಳಿಂದ ಸೃಷ್ಟಿಯಾಯಿತು ಮಾರುಕಟ್ಟೆ

ಮನೆ ಬಾಗಿಲಿಗೆ ಕ್ಯಾಪ್ಸಿಕಂ ತಲುಪಿಸುವ ಆದರ್ಶ ಕುಮ್ಮೂರು; ಈವರೆಗೆ ಎರಡು ಕ್ವಿಂಟಲ್‌ ಮಾರಾಟ
Last Updated 5 ಮೇ 2021, 5:51 IST
ಅಕ್ಷರ ಗಾತ್ರ

ದಾವಣಗೆರೆ: ಲಾಕ್‌ಡೌನ್ ವೇಳೆ ರೈತರು ಬೆಳೆದ ಬೆಳೆಗೆ ಮಾರುಕಟ್ಟೆ ಸಿಗದೇ ಬೆಳೆಗಳನ್ನು ನಾಶ ಮಾಡಿರುವ ನಿದರ್ಶನಗಳು ನಮ್ಮ ಮುಂದಿವೆ. ಆದರೆ ಇಲ್ಲೊಬ್ಬ ರೈತರು ಧೃತಿಗೆಡದೇ ಸಾಮಾಜಿಕ ಮಾಧ್ಯಮಗಳ ಮೂಲಕ ಬೆಳೆಗೆ ಮಾರುಕಟ್ಟೆ ಕಂಡುಕೊಂಡಿದ್ದಾರೆ.

ತಾಲ್ಲೂಕಿನ ಮಿಟ್ಲಕಟ್ಟೆ ಸಮೀಪದ ಸತ್ಯನಾರಾಯಣ ಕ್ಯಾಂಪ್‌ ನಿವಾಸಿ ಆದರ್ಶ ಕುಮ್ಮೂರು ಅವರು ಒಂದು ಎಕರೆ ಪ್ರದೇಶದಲ್ಲಿ ಪಾಲಿಹೌಸ್ ನಿರ್ಮಿಸಿ ದೊಣ್ಣೆ ಮೆಣಸಿನಕಾಯಿ (ಕ್ಯಾಪ್ಸಿಕಂ) ಬೆಳೆದಿದ್ದಾರೆ. ಮಾರುಕಟ್ಟೆಗೆ ತಂದರೂ ಕೊಂಡುಕೊಳ್ಳುವವರು ಇಲ್ಲ. ಕೆಲವರು ಕೊಂಡುಕೊಳ್ಳಲು ಮುಂದೆ ಬಂದರೂ ಕಡಿಮೆ ಬೆಲೆಗೆ ಕೇಳುತ್ತಿದ್ದರು.

ಇದರಿಂದ ಬೇಸತ್ತ ಆದರ್ಶ್‌, ಬೆಂಗಳೂರಿನ ಕಂಪನಿಯೊಂದರ ಜೊತೆ ಮಾತುಕತೆ ನಡೆಸಿದ್ದರು. ಆ ಕಂಪನಿಯವರು ಒಂದು ಕೆ.ಜಿಗೆ ₹ 15ರಿಂದ ₹20 ಬೆಲೆಗೆ ಕೊಂಡುಕೊಳ್ಳುವುದಾಗಿ ಹೇಳಿದ್ದಾರೆ. ಬಳಿಕ ಹೊಸಕೋಟೆ ಮಾರುಕಟ್ಟೆಗೆ ಕೊಂಡೊಯ್ಯಲು ನಿರ್ಧರಿಸಿದರೂ ಒಂದು ಕೆ.ಜಿಗೆ ₹10 ಇರುವುದು ಗೊತ್ತಾಗಿದೆ. ಇಷ್ಟು ಬೆಲೆಗೆ ಮಾರಾಟ ಮಾಡಿದರೆ ಸಾರಿಗೆ ವೆಚ್ಚಕ್ಕೂ ಸಾಲುವುದಿಲ್ಲ ಎಂದು ನಿರ್ಧರಿಸಿ‘ಕ್ಯಾಪ್ಸಿಕಂ ಡೋರ್ ಡೆಲಿವರಿ ಸಿಗಲಿದೆ’ ಎಂಬ ಮಾಹಿತಿಯನ್ನು ಮೊಬೈಲ್ ನಂಬರ್ ಸಮೇತ ತಮ್ಮ ಸ್ನೇಹಿತರ ನಂಬರ್‌ಗಳಿಗೆ ಫಾರ್ವಡ್ ಮಾಡಿದ್ದಾರೆ.

ಆ ನಂಬರ್‌ಗೆ ಕರೆ ಮಾಡಿದ ವಿವಿಧ ಬಡಾವಣೆಗಳ ನಿವಾಸಿಗಳು ಕರೆ ಮಾಡಿ ದೊಣ್ಣೆ ಮೆಣಸಿಗೆ ಬೇಡಿಕೆ ಇಟ್ಟಿದ್ದಾರೆ. ಬಡಾವಣೆಯಲ್ಲಿ ಒಂದು ಜಾಗ ನಿಗದಿ ಮಾಡಿ ಸ್ವಂತ ವಾಹನದಲ್ಲಿ ಸ್ನೇಹಿತರಾದ ಶ್ರೀಧರ್, ಆದರ್ಶ ಹಾಗೂ ಅಮರ್ ಅವರ ಜೊತೆ ಸೇರಿ ಅಲ್ಲಿಗೆ ತಲುಪಿಸುತ್ತಿದ್ದಾರೆ. ಒಂದು ಕೆ.ಜಿಗೆ ₹50ರಂತೆ ಈವರೆಗೆ ಎರಡು ಕ್ವಿಂಟಲ್‌ನಷ್ಟು ಮಾರಾಟ ಮಾಡಿದ್ದಾರೆ.

ಮೂಲತಃ ಎಂಜಿನಿಯರ್ ಆಗಿರುವ ಆದರ್ಶ ಕುಮ್ಮೂರು ಅವರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿ ಕಳೆದ ಲಾಕ್‌ಡೌನ್ ವೇಳೆ ಕೆಲಸಕ್ಕೆ ರಾಜೀನಾಮೆ ನೀಡಿ ಜಮೀನನ್ನು ಗುತ್ತಿಗೆಗೆ ಪಡೆದು ಕ್ಯಾಪ್ಸಿಕಂ ಬೆಳೆದಿದ್ದಾರೆ. ₹ 5 ಲಕ್ಷ ವೆಚ್ಚ ಮಾಡಿ ಕ್ಯಾಪ್ಸಿಕಂ ಬೆಳೆದಿದ್ದು, ಕಾರ್ಮಿಕರಿಗಾಗಿಯೇ ₹ 1ಲಕ್ಷ ಖರ್ಚು ಮಾಡಿದ್ದಾರೆ.

‘ಒಂದು ಕೆ.ಜಿಗೆ ₹ 50ರಿಂದ ₹60 ಬೆಲೆ ಸಿಕ್ಕರೆ ಮಾತ್ರ ನಾನು ಮಾಡಿದ ಖರ್ಚು ಸಿಗುತ್ತದೆ. ವಾರಕ್ಕೊಮ್ಮೆ ಒಂದು ಕ್ವಿಂಟಲ್ ಕ್ಯಾಪ್ಸಿಕಂ ಅನ್ನು ಮಾರಾಟ ಮಾಡುವ ಆಲೋಚನೆ ಇದೆ ಎಂದು ಹೇಳುವ ಆದರ್ಶ್, ‘ನಮ್ಮಂತೆಯೇ ತರಕಾರಿ ಬೆಳೆದಿರುವ ಹಲವು ರೈತರು ಮಾರುಕಟ್ಟೆ ಸಮಸ್ಯೆ ಎದುರಿಸುತ್ತಿದ್ದು, ಅವರೆಲ್ಲ ತೋಟಗಾರಿಕೆ ಇಲಾಖೆ ಅವರ ನೆರವಿಗೆ ಬರಬೇಕು’ ಎಂದು ಮನವಿ ಮಾಡುತ್ತಾರೆ. ಆದರ್ಶಕುಮಾರ್ ಅವರ ಸಂಪರ್ಕಕ್ಕೆ 8867637316.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT