ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ತಪ್ಪು ಮಾಡಲ್ಲ, ಈಗ ಕೈಹಿಡಿಯಿರಿ

ಆಗ್ನೇಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ವೈ.ಎ. ನಾರಾಯಣಸ್ವಾಮಿ ಮನವಿ
Last Updated 25 ಮೇ 2018, 2:40 IST
ಅಕ್ಷರ ಗಾತ್ರ

ದಾವಣಗೆರೆ: ‘ಮಧ್ಯದಲ್ಲೇ ನಿಮ್ಮನ್ನೆಲ್ಲ ಬಿಟ್ಟು ವಿಧಾನಸಭೆಗೆ ಹೋದೆ; ಈಗ ತಪ್ಪಿನ ಅರಿವು ಆಗಿದೆ. ಎರಡು ವರ್ಷ ನಾನು ಪಟ್ಟ ಯಾತನೆ ಯಾರಿಗೂ ಗೊತ್ತಿಲ್ಲ. ನಾನು ಎಂದಿಗೂ ನಿಮ್ಮವನೇ, ಈ ಸಲ ಕೈಹಿಡಿಯಿರಿ’ ಎಂದು ವಿಧಾನ ಪರಿಷತ್‌ ಆಗ್ನೇಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ವೈ.ಎ. ನಾರಾಯಣಸ್ವಾಮಿ ಶಿಕ್ಷಕರಲ್ಲಿ ಮನವಿ ಮಾಡಿದರು.

ನಗರದ ಹೋಟೆಲ್‌ ಶಾಂತಿ ಪಾರ್ಕ್‌ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ದಾವಣಗೆರೆ, ಹರಿಹರ, ಜಗಳೂರು ತಾಲ್ಲೂಕುಗಳ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಶಾಲಾ ಶಿಕ್ಷಕರು, ಮುಖ್ಯ ಶಿಕ್ಷಕರು, ಕಾಲೇಜುಗಳ ಉಪನ್ಯಾಸಕರು, ಪ್ರಾಂಶುಪಾಲರ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿಧಾನಸಭೆಗೆ ನಾನು ಬಯಸಿ ಹೋಗಿದ್ದಲ್ಲ, ಪಕ್ಷದ ವರಿಷ್ಠರು ನನ್ನ ಮೇಲೆ ವಿಶ್ವಾಸ ಇಟ್ಟು ಕಳುಹಿಸಿದರು. ಅದಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡಿದೆ. ಅತ್ಯಲ್ಪ ಅವಧಿಯಲ್ಲಿ ವಿಧಾನಸಭೆಯಲ್ಲಿ ಶಿಕ್ಷಕರ ಸಮಸ್ಯೆಗಳ ಕುರಿತು ಸಾಕಷ್ಟು ಚರ್ಚೆ ನಡೆಸಿದ್ದೇನೆ. ಬೇಕಿದ್ದರೆ ನೀವು ಕಲಾಪದ ಕಡತ ನೋಡಿ. ಶಿಕ್ಷಕರ ಸಮಸ್ಯೆಗಳ ಬಗ್ಗೆ ನನಗೆ ಸಂಪೂರ್ಣ ಅರಿವು ಇದೆ. ಒಮ್ಮೆ ಪಕ್ಷೇತರನಾಗಿ, ಮತ್ತೊಮ್ಮೆ ಪಕ್ಷದ ಅಭ್ಯರ್ಥಿಯಾಗಿ ಕೆಲಸ ಮಾಡಿದ್ದೇನೆ. ಮುಂದೆಯೂ ಕೆಲಸ ಮಾಡುತ್ತೇನೆ. ಇಲ್ಲಿಯೇ ಇರುತ್ತೇನೆ. ಅದಕ್ಕೆ ನಿಮ್ಮೆಲ್ಲರ ಬೆಂಬಲ ಬೇಕು’ ಎಂದು ಹೇಳಿದರು.

‘ನನ್ನ ಅವಧಿಯಲ್ಲಿ ಯಾರಿಂದಲೂ ಹಣ ಕೇಳಲಿಲ್ಲ. ಕೆಲಸ ಮಾಡಿಕೊಡುವಾಗ ಜಾತಿ ನೋಡಲಿಲ್ಲ. ಸಹಾಯ ಕೇಳಲು ಬಂದವರ ಎದುರಿಗೆ ದರ್ಪ ಪ್ರದರ್ಶಿಸಲಿಲ್ಲ. ಯಾರಿಗೂ ಅನ್ಯಾಯ ಮಾಡಲಿಲ್ಲ. ಆದರೆ, ವಿಧಾನಪರಿಷತ್ ಸದಸ್ಯರ ಅನುದಾನವನ್ನು ತರಗತಿಯ ಕೊಠಡಿವರೆಗೂ ಮೊದಲು ತಂದಿದ್ದು ನಾನೇ ಎಂದು ಹೆಮ್ಮೆಯಿಂದ ಹೇಳಬಲ್ಲೆ’ ಎಂದು ಹೇಳಿದರು.

‘ಎಲ್ಲಾ ಇಲಾಖೆಯನ್ನೂ ಸ್ವಚ್ಛ ಮಾಡಬಹುದು. ಆದರೆ, ಶಿಕ್ಷಣ ಇಲಾಖೆಯನ್ನು ಸ್ವಚ್ಛ ಮಾಡಲು ಸಾಧ್ಯ ಆಗುತ್ತಿಲ್ಲ. ಖಾಸಗಿ ಶಾಲೆ ಶಿಕ್ಷಕರ ಯಾತನೆಯಂತೂ ಹೇಳತೀರದು. ಬಿಜೆಪಿ ಅಧಿಕಾರಾವಧಿಯಲ್ಲಿ ಶಿಕ್ಷಕರ ಕೆಲವು ಸಮಸ್ಯೆಗಳು ಪರಿಹಾರ ಕಂಡಿದ್ದು ಬಿಟ್ಟರೆ ನಂತರದ ಸರ್ಕಾರ ಈ ಬಗ್ಗೆ ನಿರ್ಲಕ್ಷ್ಯ ತಾಳಿತು. ಬಿಜೆಪಿ ಇದ್ದಾಗಲೇ ಎರಡು ವೇತನ ಆಯೋಗಗಳನ್ನು ನೀಡಲಾಯಿತು. ಮುಂದಿನ ಆರು ತಿಂಗಳಲ್ಲಿ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರಲಿದೆ. ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದರು.

ಶಿಕ್ಷಕರ ಪರವಾಗಿ ಎಸ್‌.ಎಸ್‌. ನಂದಿಹಳ್ಳಿ, ಡಾ. ಗಂಗಾಧರ್, ಈಶ್ಯಾನಾಯ್ಕ, ಡಾ. ಮಂಜಪ್ಪ, ಪ್ರಕಾಶ್ ಮಾತನಾಡಿ, ‘ಶಿಕ್ಷಕರಿಗೆ ಕೆಲಸದ ಒತ್ತಡ ಹೆಚ್ಚಾಗಿದೆ. ಬಿ.ಪಿ, ಶುಗರ್‌ ಸಾಮಾನ್ಯವಾಗಿವೆ. ದಾಖಲಾತಿಗಾಗಿ ಮಕ್ಕಳನ್ನು ಹುಡುಕಿಕೊಂಡು ಶಿಕ್ಷಕರು ಮನೆ, ಮನೆ ತಿರುಗುವ ಸ್ಥಿತಿ ಬಂದಿದೆ. ಖಾಸಗಿ ಶಾಲಾ ಶಿಕ್ಷಕರ ಗೋಳು ಬಹಳಷ್ಟಿದೆ. ಈ ಎಲ್ಲಾ ಸಮಸ್ಯೆಗಳನ್ನು ತಕ್ಕಮಟ್ಟಿಗೆ ಪರಿಹಾರ ಮಾಡುವ ಶಕ್ತಿ ನಾರಾಯಣಸ್ವಾಮಿ ಅವರಿಗಿದೆ. ಅವರನ್ನು ಈ ಸಲ ನಾವೆಲ್ಲರೂ ಬೆಂಬಲಿಸೋಣ’ ಎಂದರು.

‘ಲೇಪಾಕ್ಷಗೆ ಟಿಕೆಟ್‌ ತಪ್ಪಿದ್ದಕ್ಕೆ ಬೇಸರ’

‘ಪಕ್ಷದ ವರಿಷ್ಠರು ವಿಶ್ವಾಸ ಇಟ್ಟು ನನ್ನನ್ನು ಅಭ್ಯರ್ಥಿ ಎಂದು ಘೋಷಿಸಿದ್ದಾರೆ. ಲೇಪಾಕ್ಷ ಅವರಿಗೆ ಟಿಕೆಟ್‌ ತಪ್ಪಿದ ಬಗ್ಗೆ ನನಗೆ ಬೇಸರವಿದೆ. ಅವರಿಗೆ ಪಕ್ಷದಲ್ಲಿ ಯಾವುದಾದರೂ ಹುದ್ದೆ ನೀಡುವ ಭರವಸೆಯನ್ನು ವರಿಷ್ಠರು ನೀಡಿದ್ದಾರೆ’ ಎಂದು ನಾರಾಯಣಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT