ಸೋಮವಾರ, ಮೇ 23, 2022
28 °C

ಅಪ್ರಾಪ್ತ ವಯಸ್ಕಳೊಂದಿಗೆ ಮದುವೆ: 10 ವರ್ಷ ಜೈಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಅಪ್ರಾಪ್ತ ವಯಸ್ಕಳನ್ನು ಮದುವೆಯಾಗಿ ಲೈಂಗಿಕ ಕಿರುಕುಳ ನೀಡಿದ ಅಪರಾಧಿಗೆ ಇಲ್ಲಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ 10 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ ₹ 35 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.

ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿನ ಉದಯ್ ಶಿಕ್ಷೆಗೆ ಒಳಗಾದವನು. 5 ವರ್ಷಗಳ ಹಿಂದೆ ದಾವಣಗೆರೆಯ ಪಿಜಿಯಲ್ಲಿ ಇದ್ದುಕೊಂಡು ಕಾಲೇಜೊಂದರಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿಯನ್ನು ಉದಯ್ ಪ್ರೀತಿಸುವುದಾಗಿ ನಂಬಿಸಿ, ಹೆದರಿಸಿ, ಪುಸಲಾಯಿಸಿ ಕರೆದುಕೊಂಡು ಹೋಗಿ, ಮಂತ್ರಾಲಯದಲ್ಲಿ ಅವಳ ಕೊರಳಿಗೆ ತಾಳಿ ಕಟ್ಟಿದ್ದ.

ಬಳಿಕ ವಿಜಯವಾಡ, ನಂತರ ಬಸವನ ಕ್ಯಾಂಪ್‍ನಲ್ಲಿನ ತಮ್ಮ
ಸಮೀಪದ ಬಂಧುಗಳ ಮನೆಗೆ ಕರೆದುಕೊಂಡು ಹೋಗಿ, ಆಕೆಯ ಇಚ್ಛೆಗೆ ವಿರುದ್ಧವಾಗಿ ಹಲವು ಬಾರಿ ಅತ್ಯಾಚಾರವೆಸಗಿದ್ದ. ಈ ಕುರಿತು ಅಪ್ರಾಪ್ತೆಯ ತಾಯಿ, ರಾಯಚೂರು ಜಿಲ್ಲೆ ಮಾನ್ವಿ
ತಾಲ್ಲೂಕಿನ ಗ್ರಾಮವೊಂದರ ಮಹಿಳೆ ದಾವಣಗೆರೆ ಮಹಿಳಾ ಪೊಲೀಸ್ ಠಾಣೆಯಲ್ಲಿ 2017ರಲ್ಲಿ ದೂರು ದಾಖಲಿಸಿದ್ದರು.

ದಾವಣಗೆರೆ ಮಹಿಳಾ ಪೊಲೀಸ್ ಠಾಣೆಯ ತನಿಖಾಧಿಕಾರಿ ನಾಗಮ್ಮ ಕೆ. ಅವರು ಪ್ರಕರಣದ ಬಗ್ಗೆ ತನಿಖೆ ನಡೆಸಿ, ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ದಾವಣಗೆರೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವೂ ಆಗಿರುವ ವಿಶೇಷ ಪೋಕ್ಸೊ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಪಾದ್ ಎನ್. ಅವರು ಶಿಕ್ಷೆ ಪ್ರಕಟಿಸಿದ್ದು, ಸಂತ್ರಸ್ತೆಗೆ ಪರಿಹಾರವಾಗಿ ₹4.33 ಲಕ್ಷವನ್ನು ಸಂತ್ರಸ್ತೆಯ
ಪರಿಹಾರ ನಿಧಿಯಿಂದ ಕೊಡಿಸುವಂತೆ ಜಿಲ್ಲಾ ಉಚಿತ ಸೇವಾ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದರು.

ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ರೇಖಾ ಎಸ್. ಕೋಟೆಗೌಡರ್ ಅವರು ವಾದ ಮಂಡಿಸಿದ್ದರು.

‘ಪೋಕ್ಸೊ ಕಾಯ್ದೆ ಜಾರಿಗೆ ಬಂದ ಸಂದರ್ಭದಲ್ಲಿ, ಆರೋಪ ಸಾಬೀತಾದ ಆರೋಪಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶವಿತ್ತು. 2019ರಲ್ಲಿ ಇದಕ್ಕೆ ತಿದ್ದುಪಡಿಯಾಗಿದ್ದು, ಪೋಕ್ಸೊ ಕಾಯ್ದೆಯಡಿ ಆರೋಪಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಲಾಗಿದೆ’ ಎಂದು ರೇಖಾ ಅವರು ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.