ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಮಾರ್ಗಸೂಚಿ ಅನುಷ್ಠಾನಕ್ಕೆ ಮಾರ್ಷಲ್ಸ್‌ ತಂಡ: ಡಿಸಿ ಮಹಾಂತೇಶ ಬೀಳಗಿ

ಕೋವಿಡ್ ಮಾರ್ಗಸೂಚಿ ಅನುಸರಣೆ ತಿಳಿಸುವ ಸಭೆ
Last Updated 2 ಏಪ್ರಿಲ್ 2021, 5:09 IST
ಅಕ್ಷರ ಗಾತ್ರ

ದಾವಣಗೆರೆ: ಕೊರೊನಾ ಬಗ್ಗೆ ಜನರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಮಾಸ್ಕ್‌ ಧರಿಸುತ್ತಿಲ್ಲ. ಅಂತರ ಕಾಪಾಡಿಕೊಳ್ಳುತ್ತಿಲ್ಲ. ಕೋವಿಡ್‌ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವುದಕ್ಕಾಗಿ ಮಾಜಿ ಸೈನಿಕರನ್ನು ಕೊರೊನಾ ವಾರಿಯರ್‌ಗಳನ್ನಾಗಿ ಮಾಡಲಾಗುವುದು. ನಿಯಮ ಉಲ್ಲಂಘಿಸುವವರನ್ನು ಹಿಡಿದು ದಂಡ ವಿಧಿಸುವ ಕಾರ್ಯವನ್ನು ಈ ಮಾರ್ಷಲ್‌ಗಳು ಪೊಲೀಸರ ಸಹಕಾರದೊಂದಿಗೆ ಮಾಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ವ್ಯಾಪಾರ ವಹಿವಾಟು, ಕಲ್ಯಾಣ ಮಂಟಪ, ಶೈಕ್ಷಣಿಕ ಸಂಸ್ಥೆ, ಆರ್ಥಿಕ ಚಟುವಟಿಕೆ ನಡೆಸುವವರಿಗೆ ಕೋವಿಡ್ ಮಾರ್ಗಸೂಚಿ ಅನುಸರಣೆ ತಿಳಿಸಲು ಗುರುವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.

ದೊಡ್ಡ ಅಂಗಡಿಗಳು, ವ್ಯಾಪಾರ ವಹಿವಾಟು ಕೇಂದ್ರಗಳು, ಮದುವೆ ಮಂಟಪಗಳು, ಎಪಿಎಂಸಿ ಮಾರುಕಟ್ಟೆ, ಥಿಯೇಟರ್, ವಸತಿ ಶಾಲೆಗಳು ಹೀಗೆ ಹೆಚ್ಚು ಜನ ಸೇರುವ ಸ್ಥಳಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಇಲ್ಲದೇ ಇದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಪ್ರಸ್ತುತ 156 ಪ್ರಕರಣಗಳಿದ್ದರೂ ಜನರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಮತ್ತೆ ಲಾಕ್‌ಡೌನ್‌ ಆಗುವ ಸಂಭವ ಇಲ್ಲ. ನಿಯಮ ಮೀರುವವರ ಮೇಲೆ ದಂಡ ವಿಧಿಸುವುದು ಅನಿವಾರ್ಯ. ಕಲ್ಯಾಣ ಮಂಟಪಗಳಲ್ಲಿ 200ಕ್ಕಿಂತ ಅಧಿಕ ಜನ ಇದ್ದರೆ, ಮಾಲೀಕರಿಗೆ, ಹೆಣ್ಣಿನ ಕಡೆಯವರಿಗೆ, ಗಂಡಿನ ಕಡೆಯವರಿಗೆ ದಂಡ ವಿಧಿಸಲಾಗುವುದು’ ಎಂದು ತಿಳಿಸಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ. ರಾಘವನ್, ‘ಕೊರೊನಾ ಪ್ರಕರಣಗಳು ಕಡಿಮೆಯಾಗಿದ್ದವು. ಮಾರ್ಚ್‌ನಲ್ಲಿ ಮತ್ತೆ ಹೆಚ್ಚಳವಾಗಿದೆ. ಒಂದು ತಿಂಗಳಲ್ಲಿ 156 ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲಿ 124 ದಾವಣಗೆರೆ ತಾಲ್ಲೂಕು ಒಂದರಲ್ಲಿಯೇ ಇವೆ. ಆ 124ರಲ್ಲಿ 106 ಪ್ರಕರಣಗಳು ದಾವಣಗೆರೆ ನಗರದಲ್ಲೇ ಪತ್ತೆಯಾಗಿವೆ’ ಎಂದು ಮಾಹಿತಿ ನೀಡಿದರು.

ಶೀತಜ್ವರ ಅಷ್ಟೇ ಇದ್ದರೆ ಅವುಗಳನ್ನು ಐಎಲ್‌ಐ ಎಂದು ಪರಿಗಣಿಸಲಾಗುತ್ತದೆ. ಅದರ ಜತೆಗೆ ಉಸಿರಾಟದ ಸಮಸ್ಯೆಯೂ ಇದ್ದರೆ ಆಗ ಅದು ಸಾರಿ ಪ್ರಕರಣ ಎಂದು ಪರಿಗಣಿಸಲಾಗುತ್ತದೆ. ಎಲ್ಲ ಖಾಸಗಿ ಆಸ್ಪತ್ರೆ, ಕ್ಲಿನಿಕ್‍ಗಳು ಐಎಲ್‍ಐ ಮತ್ತು ಸಾರಿ ಪ್ರಕರಣಗಳನ್ನು ಸರ್ಕಾರಿ ಆಸ್ಪತ್ರೆಗಳಿಗೆ ಕಳುಹಿಸಬೇಕು. ಅಂಗಡಿ, ಹೋಟೆಲ್, ಶಾಲೆಗಳಲ್ಲಿ 15 ದಿನಗಳಿಗೊಮ್ಮೆ ಕೋವಿಡ್ ಪರೀಕ್ಷೆ ಮಾಡಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ, ‘ಮಾಸ್ಕ್ ಧರಿಸದಿದ್ದರೆ ₹ 250, ನಿಗದಿತ ಜನರಿಗಿಂತ ಹೆಚ್ಚು ಸೇರಿದರೆ ಸಭಾಂಗಣ, ಮಂದಿರಗಳ ಮಾಲೀಕರಿಗೆ, ಆಯೋಜಕರಿಗೆ ₹ 5 ಸಾವಿರದಿಂದ ₹ 10 ಸಾವಿರವರೆಗೆ ದಂಡ ವಿಧಿಸಲಾಗುವುದು. ದಂಡದ ಪ್ರಶ್ನೆಯಲ್ಲ. ನಿಮ್ಮ ಜೀವದ ಪ್ರಶ್ನೆ. ನಿಮ್ಮ ಜೀವ ಉಳಿಸಿಕೊಳ್ಳಲು ನಿಯಮಗಳನ್ನು ಪಾಲನೆ ಮಾಡಿ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ.ವಿಜಯ ಮಹಾಂತೇಶ ದಾನಮ್ಮನವರ್, ‘ಗಡಿ ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ ಹಾಗೂ ಸಾವುಗಳೂ ಸಂಭವಿಸುತ್ತಿವೆ. ಮಧ್ಯ ಕರ್ನಾಟಕದಲ್ಲಿ ಇನ್ನೂ ಅಷ್ಟು ಪ್ರಕರಣ ಇಲ್ಲ. ಕೊರೊನಾ ಅಲೆ ಹಬ್ಬುತ್ತಿರುವ ಬಗ್ಗೆ ಸೂಚನೆ ದೊರೆತಿದೆ. ಕಳೆದ ವರ್ಷದ ವೈರಸ್‌ಗಿಂತ ಈಗಿನ ರೂಪಾಂತರಿ ವೈರಸ್‌ ವೇಗವಾಗಿ ಹರಡುತ್ತಿದೆ’ ಎಂದು ಎಚ್ಚರಿಸಿದರು.

ಎಡಿಸಿ ಪೂಜಾರ ವೀರಮಲ್ಲಪ್ಪ, ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಡಿಎಚ್‍ಒ ಡಾ.ನಾಗರಾಜ್, ಸರ್ಜನ್‌ ಡಾ. ಜಯಪ್ರಕಾಶ್‌ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT