ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೌಹಾರ್ದ ಸಂದೇಶ ಸಾರಿದ ಮಸೀದಿ

ಎಲ್ಲ ಧರ್ಮೀಯರಿಗೂ ಮುಕ್ತ ಪ್ರವೇಶ, ತಪ್ಪು ಭಾವನೆ ಹೋಗಲಾಡಿಸುವ ಪ್ರಯತ್ನ
Published : 14 ಸೆಪ್ಟೆಂಬರ್ 2024, 15:44 IST
Last Updated : 14 ಸೆಪ್ಟೆಂಬರ್ 2024, 15:44 IST
ಫಾಲೋ ಮಾಡಿ
Comments

ದಾವಣಗೆರೆ: ಮುಸ್ಲಿಮರ ಶ್ರದ್ಧಾಕೇಂದ್ರಕ್ಕೆ ಭೇಟಿ ನೀಡಿದವರ ಕಣ್ಣುಗಳಲ್ಲಿ ಕುತೂಹಲವಿತ್ತು. ಕೈಕಾಲುಗಳನ್ನು ಶುದ್ದೀಕರಿಸಿ ಮಸೀದಿ ಪ್ರವೇಶಿಸುವಾಗ ಮೊಗ ಅರಳಿತ್ತು. ಕನ್ನಡದಲ್ಲಿಯೇ ಸ್ವಾಗತಿಸುತ್ತ ಪ್ರಾರ್ಥನೆಯ ಪ್ರತಿ ಹಂತಗಳನ್ನು ವಿವರಿಸುವಾಗ ಧಾರ್ಮಿಕ ಭಾವನೆ ಇಣುಕುತ್ತಿತ್ತು.

ಇಂತಹದೊಂದು ಅಪರೂಪದ ದೃಶ್ಯ ಇಲ್ಲಿನ ಬಾರ್‌ಲೈನ್‌ ರಸ್ತೆಯ ‘ಮರ್ಕಜಿ ಎ ಮಹಮ್ಮದಿಯ’ ಮಸೀದಿಯಲ್ಲಿ ಶನಿವಾರ ಕಂಡುಬಂದಿತು. ಮಸೀದಿಯ ಆಡಳಿತ ಮಂಡಳಿ ನೀಡಿದ ‘ನಮ್ಮೂರ ಮಸೀದಿ ನೋಡ ಬನ್ನಿ’ ಆಹ್ವಾನ ಸೌಹಾರ್ದ ಸಂದೇಶ ಸಾರಿತು.

ಮಸೀದಿಯ ಬಗೆಗಿನ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವ ಉದ್ದೇಶದಿಂದ ಇಂತಹದೊಂದು ಕಾರ್ಯಕ್ರಮ ರೂಪಿಸಲಾಗಿತ್ತು. ಶನಿವಾರ ಬೆಳಿಗ್ಗೆ 10ರಿಂದ ಸಂಜೆ 7ಗಂಟೆಯವರೆಗೆ ಮಸೀದಿ ವೀಕ್ಷಣೆಗೆ ಎಲ್ಲ ಧರ್ಮಿಯರಿಗೂ ಮುಕ್ತ ಅವಕಾಶ ಕಲ್ಪಿಸಲಾಗಿತ್ತು. ಮಹಿಳೆಯರು ಸೇರಿ ಹಲವರು ಮಸೀದಿಯ ದರ್ಶನ ಪಡೆದರು. ಮಸೀದಿ ಪ್ರವೇಶಕ್ಕೂ ಮುನ್ನ ಹಿಂದೂ ಧರ್ಮೀಯರು ಕೈಕಾಲುಗಳನ್ನು ಶುದ್ಧೀಕರಿಸಿಕೊಂಡ ರೀತಿ ಗಮನ ಸೆಳೆಯಿತು.

ಮಸೀದಿಯಲ್ಲಿ ನಿತ್ಯ ನಡೆಯುವ ಧಾರ್ಮಿಕ ಕೈಂಕರ್ಯಗಳ ಬಗ್ಗೆ ಜನರಿಗೆ ಮಾಹಿತಿ ನೀಡಲಾಯಿತು. ಅಲ್ಲಲ್ಲಿ, ಧಾರ್ಮಿಕ ಸಂದೇಶಗಳನ್ನು ಸಾರುವ ಭಿತ್ತಿಪತ್ರಗಳನ್ನು ಪ್ರದರ್ಶಿಸಲಾಗಿತ್ತು. ಕುರಾನ್‌, ನಮಾಜ್‌, ಆಜಾನ್‌ ಬಗೆಗೆ ಕನ್ನಡದಲ್ಲಿ ವಿವರಿಸಲಾಯಿತು. ಎಲ್ಲ ಧಾರ್ಮಿಕ ಕೇಂದ್ರಗಳಂತೆ ಮಸೀದಿ ಕೂಡ ಪವಿತ್ರ ಸ್ಥಳವಾಗಿದ್ದು, ಮನಶಾಂತಿ ಅರಸಿ ಭಕ್ತರು ಬರುವ ರೀತಿಯನ್ನು ಮನವರಿಕೆ ಮಾಡಿಕೊಡಲಾಯಿತು.

‘ಜಾತ್ಯತೀತ ರಾಷ್ಟ್ರದಲ್ಲಿ ಎಲ್ಲ ಧರ್ಮದ ಆಚಾರ–ವಿಚಾರಗಳನ್ನು ಅರಿಯಲು ಅವಕಾಶವಿದೆ. ಮಸೀದಿಯ ಧಾರ್ಮಿಕ ವಿಧಾನಗಳ ಬಗ್ಗೆ ಅನೇಕರು ಮಾಹಿತಿ ಪಡೆದು. ಆಹ್ವಾನ ಪರಿಗಣಿಸಿ ಜನರು ಮಸೀದಿಗೆ ಬಂದಿದ್ದು ಖುಷಿ ಕೊಟ್ಟಿತು’ ಎಂದು ಮಸೀದಿಯ ಮೊಹಮ್ಮದ್ ಹಯಾತ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT