ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊನ್ನಾಳಿ: ರೇಣುಕಾಚಾರ್ಯ ವಿರುದ್ಧ ಬೃಹತ್ ಪ್ರತಿಭಟನೆ

ದಲಿತರ ನೋವು, ಕಣ್ಣೀರು ನಿಮ್ಮನ್ನು ನಿರ್ನಾಮ ಮಾಡುತ್ತದೆ: ಡಾ. ಈಶ್ವರನಾಯ್ಕ ಎಚ್ಚರಿಕೆ
Last Updated 7 ಏಪ್ರಿಲ್ 2022, 2:21 IST
ಅಕ್ಷರ ಗಾತ್ರ

ಹೊನ್ನಾಳಿ: ವೀರಶೈವ ಜಂಗಮ ಅಥವಾ ಬೇಡ ಜಂಗಮ ಜಾತಿಯ ಸಮುದಾಯದವರು ಪರಿಶಿಷ್ಟ ಜಾತಿಯ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದುಕೊಂಡರೆ ದಲಿತರ ನೋವು, ಕಾವು ಮತ್ತು ಕಣ್ಣೀರು ನಿಮ್ಮನ್ನು ನಿರ್ನಾಮ ಮಾಡುತ್ತದೆ ಎಂದು ಪರಿಶಿಷ್ಟ ಜಾತಿ, ಪಂಗಡಗಳ ಮೀಸಲಾತಿ ಸಂರಕ್ಷಣಾ ಮಹಾ ಒಕ್ಕೂಟದ ಅಧ್ಯಕ್ಷ ಡಾ. ಎಲ್. ಈಶ್ವರನಾಯ್ಕ ಅವರು ಶಾಸಕ ಎಂ.ಪಿ. ರೇಣುಕಾಚಾರ್ಯ ಅವರಿಗೆ ಎಚ್ಚರಿಕೆ ನೀಡಿದರು.

ಮೀಸಲಾತಿ ಸಂರಕ್ಷಣಾ ಮಹಾ ಒಕ್ಕೂಟ ಬುಧವಾರ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಎಂ.ಪಿ. ರೇಣುಕಾಚಾರ್ಯ ಅವರು ತಮ್ಮ ಪ್ರಭಾವ ಬೀರಿ ಸಹೋದರ ಅವರ ಮಕ್ಕಳು ಮತ್ತು ತಮ್ಮ ಮಕ್ಕಳಿಗೆ ಸುಳ್ಳು ಜಾತಿ ಪ್ರಮಾಣ ಪತ್ರ ಕೊಡಿಸಿದ್ದಾರೆ. ಅವರಿಗೆ ಸಂವಿಧಾನದ ಬಗ್ಗೆ ಗೌರವವಿದ್ದರೆ ತಕ್ಷಣವೇ ಅವರು ರಾಜೀನಾಮೆ ನೀಡಬೇಕು. ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದ ಶಿಕ್ಷಕರು, ತಹಶೀಲ್ದಾರ್ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಇಡೀ ರಾಜ್ಯದಲ್ಲಿ ಬಿಜೆಪಿ ವಿರುದ್ಧ ದಲಿತರು ಮತ ಚಲಾಯಿಸುವ ನಿರ್ಣಯ ಕೈಗೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಬಿಜೆಪಿಯಲ್ಲಿರುವ ದಲಿತರು ಮೀರ್ ಸಾಧಿಕ್‌ಗಳು: ‘ನಮ್ಮ ಅನ್ನದ ತಟ್ಟೆಗೆ ಕೈಹಾಕಿರುವವರ ವಿರುದ್ಧ ಹೋರಾಟ ಮಾಡೋಣ ಬನ್ನಿ ಎಂದು ಬಿಜೆಪಿಯಲ್ಲಿರುವ ದಲಿತರನ್ನು ನಾನು ಕರೆದರೆ ಅವರು ಬರಲಿಲ್ಲ. ಆದ್ದರಿಂದ ಅವರು ಮೀರ್ ಸಾಧಿಕ್‌ಗಳು ಎಂದು ವ್ಯಂಗ್ಯವಾಡಿದರು.

‘ರಾಜ್ಯದಲ್ಲಿ ಸುಮಾರು 1.50 ಲಕ್ಷ ಜನ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿದ್ದು, ಎಷ್ಟೋ ಜನ ಸರ್ಕಾರಿ ಕೆಲಸವನ್ನು ಗಿಟ್ಟಿಸಿಕೊಂಡಿದ್ದಾರೆ. ಅವರಿಗೆಲ್ಲಾ ಎಂ.ಪಿ. ದಾರಕೇಶ್ವರಯ್ಯ ಅವರು ಅಖಿಲ ಕರ್ನಾಟಕ ಡಾ. ಬಿ.ಆರ್. ಅಂಬೇಡ್ಕರ್ ಬೇಡ ಜಂಗಮ ಹಿತ ರಕ್ಷಣಾ ಸಮಿತಿಯಿಂದ ಗುರುತಿನ ಚೀಟಿ ಕೊಡುವ ಮೂಲಕ ಸುಳ್ಳು ಜಾತಿ ಪ್ರಮಾಣ ಪತ್ರ ಕೊಡಿಸುವಲ್ಲಿ ಕುಮ್ಮಕ್ಕು ನೀಡುತ್ತಿದ್ದಾರೆ. ದಾರಕೇಶ್ವರಯ್ಯ ಅವರಿಗೆ ಧೈರ್ಯವಿದ್ದರೆ ಅವರು ಯಾವ ದಾಖಲಾತಿ ತೆಗೆದುಕೊಂಡು ಬರುತ್ತಾರೋ ಹೊನ್ನಾಳಿಗೆ ಬರಲಿ, ಸಾರ್ವಜನಿಕವಾಗಿ ಚರ್ಚೆಗೆ ನಾವು ಸಿದ್ಧರಾಗಿದ್ದೇವೆ’ ಎಂದು ಹೇಳಿದರು.

ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಶಿವಮೊಗ್ಗ ಎಂ. ಗುರುಮೂರ್ತಿ ಮಾತನಾಡಿ, ‘ದಾರಕೇಶ್ವರಯ್ಯ ಅವರು ಬೇಡ ಜಂಗಮ ಸಂಘಟನೆಯ ಹೆಸರಿನಲ್ಲಿ ಗುರುತಿನ ಪತ್ರ ಪಡೆದುಕೊಳ್ಳುವಂತೆ ಮತ್ತು ಎಸ್ಸಿ ಜಾತಿ ಪ್ರಮಾಣ ಪತ್ರ ಕೊಡುವಂತೆ ಸರ್ಕಾರದೊಂದಿಗೆ ಪತ್ರ ವ್ಯವಹಾರ ಮಾಡುತ್ತಿದ್ದಾರೆ. ಅವರು ಕಟ್ಟಿಕೊಂಡಿರುವ ಅಖಿಲ ಕರ್ನಾಟಕ ಡಾ. ಬಿ.ಆರ್. ಅಂಬೇಡ್ಕರ್ ಬೇಡ ಜಂಗಮ ಹಿತ ರಕ್ಷಣಾ ಸಮಿತಿಯನ್ನು ಸರ್ಕಾರ ಕೂಡಲೇ ವಜಾಗೊಳಿಸಬೇಕು. ಎಂ.ಪಿ. ರೇಣುಕಾಚಾರ್ಯ ಮತ್ತು ದಾರಕೇಶ್ವರಯ್ಯ ಅವರಿಗೆ ಹೋದಲ್ಲೆಲ್ಲಾ ಘೇರಾವ್ ಹಾಕಬೇಕು’ ಎಂದು ಕರೆ ನೀಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಆರ್. ನಾಗಪ್ಪ, ಪ್ರಜಾ ಪರಿವರ್ತನಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಎ.ಡಿ. ಈಶ್ವರಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಡಾ.ವೈ. ರಾಮಪ್ಪ ಹಾಗೂ ಕೊಡತಾಳ್ ರುದ್ರೇಶ್ ಮಾತನಾಡಿ, ‘ನಿಮ್ಮನ್ನು (ರೇಣುಕಾಚಾರ್ಯ) ಮುಂದಿನ ಚುನಾವಣೆಯಲ್ಲಿ ಸೋಲಿ ಸುವವರೆಗೂ ಈ ಹೋರಾಟ ಮುಂದು ವರಿಯುತ್ತದೆ’ ಎಂದು ಹೇಳಿದರು.

ಉಪನ್ಯಾಸಕ ಮೋಹನ್ ಕುಮಾರ್ ಮಾತನಾಡಿ, ‘ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ದಲಿತ ಮುಖಂಡ ಆರ್. ನಾಗಪ್ಪ ಅವರ ಮಗನಿಗೆ ಮಗಳು ಕೊಟ್ಟು ಸಂಬಂಧ ಬೆಳೆಸಬೇಕು. ಇದಕ್ಕೆ ಅವರು ತಯಾರಿದ್ದಾರಾ?’ ಎಂದು ಪ್ರಶ್ನಿಸಿದರು.

ಚಿನ್ನಸಮುದ್ರ ಶೇಖರ್‌ನಾಯ್ಕ, ಜಿಲ್ಲಾ ಬಣಜಾರ್ ಸಮಾಜದ ಅಧ್ಯಕ್ಷ ರಾಘವೇಂದ್ರನಾಯ್ಕ ಮಾತನಾಡಿದರು.

ಸಮಾರಂಭದಲ್ಲಿ ಹೆಗ್ಗೆರೆ ರಂಗಪ್ಪ, ಕುಂದುವಾಡ ಮಂಜುನಾಥ್, ಜಿ.ಪಂ. ಮಾಜಿ ಸದಸ್ಯರಾದ ಶಿವರಾಂ ನಾಯ್ಕ, ಜೀವೇಶಪ್ಪ, ಬಿಎಸ್‍ಪಿ ಜಿಲ್ಲಾಧ್ಯಕ್ಷ ಹನುಮಂತಪ್ಪ, ಪರಮೇಶ ಬೆನಕನಹಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT