ಗುರುವಾರ , ಮಾರ್ಚ್ 23, 2023
30 °C

ಸುಳ್ಳು ಹೇಳಿ ಗೊಂದಲ ಮೂಡಿಸಬೇಡಿ: ಮೇಯರ್‌ ಎಸ್‌.ಟಿ. ವೀರೇಶ್‌ ತಿರುಗೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ಆವರಗೆರೆ ಗ್ರಾಮದ ಸರ್ವೆ ನಂಬರ್ 220/22ರಲ್ಲಿನ ನಿವೇಶನಗಳಿಗೆ ಅಕ್ರಮ ಡೋರ್‌ ನಂಬರ್‌ ನೀಡಲಾಗಿದೆ ಎಂದು ಕಾಂಗ್ರೆಸ್‌ ಸದಸ್ಯರು ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ಅಧಿಕಾರ ಕಳೆದುಕೊಂಡು ವಿಚಲಿತರಾಗಿರುವ ಕಾಂಗ್ರೆಸ್‌ನವರು ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಜನರಲ್ಲಿ ಗೊಂದಲ ಮೂಡಿಸುವುದನ್ನು ನಿಲ್ಲಿಸಬೇಕು’ ಎಂದು ಮೇಯರ್‌ ಎಸ್‌.ಟಿ. ವೀರೇಶ್‌ ತಿರುಗೇಟು ನೀಡಿದರು.

ಕಾಂಗ್ರೆಸ್‌ ಸದಸ್ಯರ ಆರೋಪಕ್ಕೆ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಮೇಯರ್‌, ‘ಲೇಔಟ್‌ ಅಭಿವೃದ್ಧಿಗೊಳಿಸುವುದು ಧೂಡಾ ವ್ಯಾಪ್ತಿಗೆ ಬರುತ್ತದೆ. ಬೆಸ್ಕಾಂ, ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಿರಾಕ್ಷೇಪಣಾ ಪತ್ರ ನೀಡಿದ ಬಳಿಕವೇ ಅಂತಿಮವಾಗಿ ಡೋರ್‌ ನಂಬರ್‌ ಪಡೆಯಲು ಪಾಲಿಕೆಗೆ ಬರಲಾಗುತ್ತದೆ ಎಂಬ ಸಾಮಾನ್ಯ ಜ್ಞಾನವೂ ಇಲ್ಲವೇ’ ಎಂದು ಪ್ರಶ್ನಿಸಿದರು.

‘ಎಸ್‌.ಎಸ್‌. ಬಡಾವಣೆಯ ಪಕ್ಕದ ಹೊಸ ಬಡಾವಣೆಯಲ್ಲಿ 1 ಮತ್ತು 2ನೇ ಕ್ರಾಸ್‌ ರಸ್ತೆಗಳ ನಡುವೆ ಲಿಂಕ್‌ ರಸ್ತೆ ನಿರ್ಮಿಸಬೇಕು ಎಂದು ಸ್ಥಳೀಯರು ಮನವಿ ಮಾಡಿರುವುದರಿಂದ ಆ ಭಾಗದ ಸದಸ್ಯರೂ ಆಗಿರುವ ನಗರ ಯೋಜನಾ ಸ್ಥಾಯಿ ಸಮಿತಿ ಅಧ್ಯಕ್ಷೆ ಉಮಾ ಪ್ರಕಾಶ್‌ ಅವರು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ನಮಗೆ ಪತ್ರ ಬರೆದಿದ್ದರು. ಅದರಂತೆ ಪಾಲಿಕೆ ಅಧಿಕಾರಿಗಳ ಜೊತೆ ನಾವು ಸ್ಥಳವನ್ನೂ ಪರಿಶೀಲಿಸಿದ್ದೆವು. ಎರಡು ನಿವೇಶನಗಳ ಡೋರ್‌ ನಂಬರ್‌ ರದ್ದುಗೊಳಿಸಿ ಅಲ್ಲಿ ರಸ್ತೆ ನಿರ್ಮಿಸಬೇಕು ಹಾಗೂ ಆ ಎರಡು ನಿವೇಶನಗಳಿಗೆ ಬದಲಿಯಾಗಿ ಸಿಎ ನಿವೇಶನದಲ್ಲಿ ಜಾಗ ನೀಡಬೇಕು ಎಂದು ಮನವಿ ಅವರು ಮಾಡಿದ್ದರು. ಅದರಂತೆ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಧೂಡಾಕ್ಕೆ ನಾನು ಪತ್ರವನ್ನೂ ಬರೆದಿದ್ದೆ. ನಾಗರಿಕರ ಅನುಕೂಲಕ್ಕಾಗಿ ಬಡಾವಣೆಯ ವಿನ್ಯಾಸದಲ್ಲಿ ಬದಲಾವಣೆ ಮಾಡುವಂತೆ ಕೋರಿದ್ದೇವೆಯೇ ಹೊರತು, ಅಕ್ರಮ ಆಗಿದೆ ಎಂದು ನಾವು ಹೇಳಿಲ್ಲ. ಈ ಬಗ್ಗೆ ಕಾಂಗ್ರೆಸ್‌ ಸದಸ್ಯರು ಸಾಮಾನ್ಯ ಸಭೆಯಲ್ಲಿ ಚರ್ಚಿಸುವುದನ್ನು ಬಿಟ್ಟು ಸುಳ್ಳು ಆರೋಪ ಮಾಡುವ ಮೂಲಕ ಗೊಂದಲ ಮೂಡಿಸುತ್ತಿದ್ದಾರೆ’ ಎಂದು ವೀರೇಶ್‌ ದೂರಿದರು.

‘ಕಾಂಗ್ರೆಸ್‌ ಅವಧಿಯಲ್ಲಿ ಅಕ್ರಮ ಬಡಾವಣೆ ನಿರ್ಮಿಸಿ ಡೋರ್‌ ನಂಬರ್‌ ನೀಡಿರಬಹುದು. ಆದರೆ, ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಮೇಯರ್‌, ಉಪ ಮೇಯರ್‌, ಸ್ಥಾಯಿ ಸಮಿತಿ ಅಧ್ಯಕ್ಷರು, ಪಾಲಿಕೆ ಹಾಗೂ ಧೂಡಾ ಅಧಿಕಾರಿಗಳು ಜಂಟಿಯಾಗಿ ಸ್ಥಳ ಪರಿಶೀಲಿಸಿದ ಬಳಿಕವೇ ಡೋರ್‌ ನಂಬರ್‌ ನೀಡುತ್ತಿದ್ದೇವೆ’ ಎಂದು ಸಮರ್ಥಿಸಿಕೊಂಡರು.

ಸ್ಥಾಯಿ ಸಮಿತಿ ಅಧ್ಯಕ್ಷೆ ಉಮಾ ಪ್ರಕಾಶ್‌, ‘ಸಂಪರ್ಕ ರಸ್ತೆ ಇಲ್ಲದಿರುವುದರಿಂದ ತೊಂದರೆಯಾಗುತ್ತಿರುವ ಬಗ್ಗೆ ಬಡಾವಣೆಯ ನಿವಾಸಿಗಳು ಗಮನಕ್ಕೆ ತಂದಿದ್ದರಿಂದ ಮೇಯರ್‌ಗೆ ಪತ್ರ ಬರೆದಿದ್ದೆ. ಅಕ್ರಮವಾಗಿ ಡೋರ್‌ ನಂಬರ್‌ ನೀಡಲಾಗಿದೆ ಎಂದು ಹೇಳಿಲ್ಲ. ಭವಿಷ್ಯದ ಹಿತದೃಷ್ಟಿಯಿಂದ ಬಡಾವಣೆಯ ವಿನ್ಯಾಸದಲ್ಲಿ ಮಾರ್ಪಾಡು ಮಾಡುವಂತೆ ಕೋರಿದ್ದೇನೆ’ ಎಂದು ಸ್ಪಷ್ಟಪಡಿಸಿದರು.

ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಎಲ್‌.ಡಿ. ಗೋಣೆಪ್ಪ, ಗೀತಾ ದಿಳ್ಯಪ್ಪ, ರೇಣುಕಾ ಶ್ರೀನಿವಾಸ್‌, ಸದಸ್ಯರಾದ ಪ್ರಸನ್ನಕುಮಾರ್‌ ಕೆ., ಕೆ.ಎಂ. ವೀರೇಶ್‌ ಹಾಜರಿದ್ದರು.

ಧೂಡಾದಿಂದ ಮೊದಲೇ ಆಹ್ವಾನ ಬಂದಿರಲಿಲ್ಲ

‘ಅಮರ್‌ ಜವಾನ್‌ ಸ್ಮಾರಕ ಉದ್ಯಾನ’ ಉದ್ಘಾಟನಾ ಸಮಾರಂಭ ನಡೆಯುವ ಒಂದು ಗಂಟೆ ಮೊದಲು ಧೂಡಾ ಅಧಿಕಾರಿಗಳು ಮಾಹಿತಿ ನೀಡಿದರು. ನಮ್ಮ ಕಾರಿನ ಚಾಲಕನಿಗೆ ಪಾಲಿಕೆಯ ಉಳಿದ ಚಾಲಕರು ಅಂದು ಬೀಳ್ಕೊಡುಗೆ ಸಮಾರಂಭ ಇಟ್ಟುಕೊಂಡಿದ್ದರಿಂದ ನಿಗದಿಯಂತೆ ನಾನು ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ’ ಎಂದು ಮೇಯರ್‌ ಎಸ್‌.ಟಿ. ವೀರೇಶ್‌ ಸ್ಪಷ್ಟಪಡಿಸಿದರು.

‘ನಮ್ಮ ಪಕ್ಷ ಪಾಲಿಕೆಯಲ್ಲಿ ಅಧಿಕಾರಕ್ಕೆ ಬಂದಾಗ ಅಮರ್‌ ಜವಾನ್‌ ಸ್ಮಾರಕ ಉದ್ಯಾನ ನಿರ್ಮಿಸುವ ಬಗ್ಗೆ ಮೊದಲ ಸಭೆಯಲ್ಲೇ ನಾವು ನಿರ್ಧಾರ ಕೈಗೊಂಡಿದ್ದೆವು. ನಿಜಲಿಂಗಪ್ಪ ಬಡಾವಣೆಯಲ್ಲಿರುವ ಜಾಗ ಧೂಡಾಕ್ಕೆ ಸೇರಿರುವುದರಿಂದ ಪ್ರಾಧಿಕಾರದಿಂದಲೇ ಅಭಿವೃದ್ಧಿಪಡಿಸುವುದಾಗಿ ಹೇಳಿದ್ದರು. ಕಾರ್ಯಕ್ರಮಕ್ಕೆ ಮೊದಲೇ ಆಹ್ವಾನ ನೀಡದೇ ಶಿಷ್ಟಾಚಾರ ಉಲ್ಲಂಘಿಸಿರುವ ಬಗ್ಗೆ ಧೂಡಾ ಅಧಿಕಾರಿಗಳಿಂದ ವಿವರಣೆ ಕೇಳಿದ್ದೇನೆ’ ಎಂದರು.

‘ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಏಕೆ ಉದ್ಘಾಟನೆ ಮಾಡಲಾಗುತ್ತಿದೆ ಎಂದು ಧೂಡಾ ಅಧಿಕಾರಿಗಳನ್ನು ವಿಚಾರಿಸಿದಾಗ, ಎರಡು ಹಂತಗಳಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಮೊದಲ ಹಂತದಲ್ಲಿ ಕಾಂಪೌಂಡ್‌, ವಾಕಿಂಗ್‌ ಪಾಥ್‌ಗಳನ್ನು ಮಾಡಲಾಗಿದ್ದು, ಅದನ್ನು ಮಾತ್ರ ಉದ್ಘಾಟಿಸಲಾಗುತ್ತಿದೆ ಎಂಬ ಮಾಹಿತಿ ನೀಡಿದ್ದಾರೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು