ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಟರ್‌ ಇದೆ, ಆದ್ರೆ ಹಾಕಲ್ಲ...

ನಿತ್ಯ ಪರಡಾಡುವ ಸಾರ್ವಜನಿಕರು, ಕಡ್ಡಾಯ ಕ್ರಮವಹಿಸದ ಅಧಿಕಾರಿಗಳು
Last Updated 10 ನವೆಂಬರ್ 2019, 19:30 IST
ಅಕ್ಷರ ಗಾತ್ರ

ದಾವಣಗೆರೆ: ವಾಣಿಜ್ಯ ನಗರಿ ದಾವಣಗೆರೆಗೆ ನಿತ್ಯ ಸಾವಿರಾರು ಜನ ಪರ ಊರು, ಜಿಲ್ಲೆಗಳಿಂದ ಬರುತ್ತಾರೆ. ‌ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಇಳಿಯುವ ಪ್ರಯಾಣಿಕರು ತಾವು ಹೋಗಬೇಕಾದಲ್ಲಿ ತೆರಳಲು ಆಟೊಗಳತ್ತ ಕಣ್ಣು ಹಾಯಿಸುತ್ತಿದ್ದಂತೆ ಆಟೊ ಚಾಲಕರು ಮುತ್ತಿಗೆ ಹಾಕುವಂತೆ ಅವರತ್ತ ನುಗ್ಗುತ್ತಾರೆ.

ಏನಪ್ಪ... ಸಿದ್ದಮ್ಮ ಪಾರ್ಕ್‌ನ ಹತ್ತಿರ ಹೋಗಬೇಕು. ಬರ್ತಿಯಾ?, ಎಷ್ಟು ಆಗುತ್ತೆ.? ಎಂದು ಕೆಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಇಳಿದ ಪ್ರಯಾಣಿಕರೊಬ್ಬರು ಆಟೊ ಚಾಲಕನನ್ನು ಕೇಳಿದಾಗ, ₹ 60 ಆಗುತ್ತದೆ ಎಂದ. ಮತ್ತೊಬ್ಬ₹ 50 ಎಂದ. ಅದಕ್ಕವರು ‘ಅಲ್ಲಯ್ಯ.. ಒಂದು ಕಿ.ಮೀ ಸಹ ದೂರವಿಲ್ಲ ₹ 50 ಕೊಡಬೇಕಾ. ₹20 ಕೊಡುವೆ ಎಂದರು. ಒಬ್ಬ ಒಪ್ಪಲಿಲ್ಲ. ಮತ್ತೊಬ್ಬ, ಇಲ್ಲ ಸರ್‌ ಮಿನಿಮಮ್‌ ಚಾರ್ಚ್‌ ₹30 ಇದೆ. ₹30 ಕೊಡಿ ಎಂದು ಕರೆದುಕೊಂಡು ಹೋದ.

ಹೀಗೆ.. ನಗರಕ್ಕೆ ಬರುವ ಪ್ರಯಾಣಿಕರು, ಅದರಲ್ಲೂ ಹೊಸಬರು ಬಂದರೆ ಆಟೊ ಚಾಲಕರು ಬಾಯಿಗೆ ಬಂದಂತೆ ದರ ಹೇಳಿ, ಪ್ರಯಾಣಿಕರನ್ನು ಸಂಕಷ್ಟಕ್ಕೀಡು ಮಾಡುತ್ತಿದ್ದಾರೆ. ಕೆಲವರು, ‘ಮೀಟರ್‌ ಹಾಕಲ್ವ’ ಎಂದು ಕೇಳಿದರೆ, ‘ಇಲ್ಲಿ ಮೀಟರ್‌ ಇದ್ದರೂ ಯಾರೂ ಮೀಟರ್‌ ಹಾಕಲ್ಲ. ಕಡ್ಡಾಯ ಆದೇಶವೂ ಇಲ್ಲ’ ಎಂದು ಆಟೊ ಚಾಲಕರು ಪ್ರತಿಕ್ರಿಯಿಸುತ್ತಾರೆ. ವಿಧಿಯಿಲ್ಲದೇ ಪ್ರಯಾಣಿಕರು, ಹಾಗೂ ಸ್ಥಳೀಯರು ಹೇಗೊ ಹೊಂದಾಣಿಕೆ ಮಾಡಿಕೊಂಡು ತೆರಳುವ ದಿನನಿತ್ಯದ ಅನಿವಾರ್ಯಕ್ಕೆ ಜನ ಬೇಸತ್ತು ಹೋಗಿದ್ದಾರೆ.

‘ಆಟೊದಲ್ಲಿ ಮೂರು ಜನಕ್ಕಿಂತ ಹೆಚ್ಚು ಮಂದಿಯನ್ನು ಕೂರಿಸಿಕೊಳ್ಳುವಂತಿಲ್ಲ ಎಂಬ ನಿಯಮವಿದ್ದರೂ ಚಾಲಕರು ಹಣದಾಸೆಗಾಗಿ ಬೇಕಾಬಿಟ್ಟೆ ಜನರನ್ನು ಕೂರಿಸಿಕೊಳ್ಳುತ್ತಾರೆ. ಇನ್ನು ಆಪೆ ಆಟೊಗಳಲ್ಲಂತು ಕುರಿ ಹಿಂಡಿನಂತೆ ಜನರನ್ನು ತುಂಬಿಕೊಂಡು ಹೋಗುತ್ತಾರೆ. ಶಾಲಾಮಕ್ಕಳನ್ನು ಕರೆದೊಯ್ಯುವ ಆಟೊಗಳೂ ಇದಕ್ಕೆ ಹೊರತಾಗಿಲ್ಲ. ಅಪಘಾತವಾದರೆ ಯಾರು ಹೊಣೆ. ಕಣ್ಣ ಮುಂದೆಯೇ ಇಂತಹ ದೃಶ್ಯಗಳು ನಿತ್ಯ ನಡೆಯುತ್ತಿದ್ದರೂ ಸಂಚಾರಿ ಪೊಲೀಸರು ಕಣ್ ಬಿಟ್ಟುಕೊಂಡು ಕೂರುತ್ತಾರೆಯೇ ಹೊರತು ಕ್ರಮವಹಿಸಲ್ಲ’ ಎಂದು ಆರ್‌ಟಿಒ ಕಚೇರಿಗೆ ಬಂದಿದ್ದ ಸಾರ್ವಜನಿಕರೊಬ್ಬರು ಆರೋಪಿಸಿದರು.

ಬೈಕ್‌ ಟ್ಯಾಕ್ಸಿ ಆರಂಭಿಸಲಿ: ‘ನಗರ ಸಂಚಾರಕ್ಕೆ ನಗರ ಬಸ್‌, ಆಟೊಗಳನ್ನು ಬಿಟ್ಟರೆ ಬೇರೆ ವ್ಯವಸ್ಥೆಯಿಲ್ಲ. ಆಟೊದಲ್ಲಿ ಒಬ್ಬರು ಹೋದರು ₹30, ಮೂರು ಜನ ಹೋದರೂ ₹ 30 ನೀಡಬೇಕಾಗುತ್ತದೆ.ಹಾಗಾಗಿ, ಗೋವಾದಲ್ಲಿ ಜಾರಿಗೊಳಿಸಿದಂತೆ ಇಲ್ಲಿಯೂ ಬೈಕ್‌ ಟ್ಯಾಕ್ಸಿ ಸೇವೆ ಜಾರಿಗೊಳಿಸಿದರೆ ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಉತ್ತಮ ಸಾರಿಗೆ ಸೇವೆ ಸಿಕ್ಕಂತಾಗುತ್ತದೆ’ ಎಂದರು ವಿದ್ಯಾರ್ಥಿನಿ ಕಾವ್ಯಾ.

ರೈಲು ನಿಲ್ದಾಣದ ಬಳಿಯಿರುವ ಪ್ರಿಪೇಯ್ಡ್‌ ಆಟೊ ಸೆಂಟರ್‌ (ಮುಂಗಡ ಹಣ ಪಾವತಿಸಿ ಆಟೊ ಸೇವೆ ಪಡೆಯುವುದು) ಸ್ಥಗಿತಗೊಂಡು ವರ್ಷಗಳೇ ಕಳೆದಿವೆ. ಬೀದಿನಾಯಿ, ಜನ ಮಲಗುವ ತಾಣವಾಗಿ ಮಾರ್ಪಟ್ಟಿದೆ. ಸ್ಮಾರ್ಟ್‌ಸಿಟಿ ಕಾಮಗಾರಿ ನಡೆಯುತ್ತಿರುವುದರಿಂದ ಇದು ಸ್ಥಗಿತಗೊಂಡಿದೆ ಎಂಬುದು ಅಧಿಕಾರಿಗಳ ಪ್ರತಿಕ್ರಿಯೆ.

‘ನಗರದಲ್ಲಿ ಒಟ್ಟು ನಾಲ್ಕು ಕಡೆ ಪ್ರಿಪೇಯ್ಡ್‌ ಆಟೊ ಕೇಂದ್ರಗಳನ್ನು ತೆರೆಯುವ ಯೋಜನೆ ಇದೆ. ರೈಲು ನಿಲ್ದಾಣದ ಬಳಿ ಈಗಾಗಲೇ ಕೇಂದ್ರ ಇದೆ. ಖಾಸಗಿ ಬಸ್‌ ನಿಲ್ದಾಣ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಗಳಲ್ಲಿ ಕೇಂದ್ರ ತೆರೆಯಲು ಮೊದಲ ಆದ್ಯತೆ ನೀಡಲಿದ್ದೇವೆ. ಸ್ಮಾರ್ಟ್‌ಸಿಟಿ ಕಾಮಗಾರಿಗಳು ನಡೆಯುತ್ತಿರುವುದರಿಂದ ಕೇಂದ್ರಗಳ ಆರಂಭಕ್ಕೆ ವಿಳಂಬವಾಗಲಿದೆ. ಆಟೊ ಚಾಲಕರ ಮೇಲೆ ನಿಗಾ ಇಡಲು ಹಾಗೂ ಅಪರಾಧಗಳನ್ನು ಕಡಿಮೆ ಮಾಡುವ, ಸಾರ್ವಜನಿಕರ ಹಿತದೃಷ್ಟಿಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ವಿಶೇಷ ಸಾಂದ್ರತೆಯುಳ್ಳ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ಕಚೇರಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿದವು.

‘ಇಲಾಖೆಯಿಂದ ಈಗಾಗಲೇ ನಗರದ 14 ಕಡೆ 52 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಸ್ಮಾರ್ಟ್‌ಸಿಟಿಯ ಮೊದಲ ಹಂತದ ಕಾಮಗಾರಿಯಡಿ 17 ಸ್ಥಳಗಳಲ್ಲಿ ಶೇ 80ರಷ್ಟು ಅಂದರೆ 226 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ’ ಎಂದು ಹೇಳಿದರು.

‘ಡಿಜಿಟಲ್‌ ಮೀಟರ್‌ ಅಳವಡಿಜಿಕೊಳ್ಳಲು ₹ 8,000 ವೆಚ್ಚವಾಗುತ್ತದೆ. ಬಾಡಿಗೆಗೆ ಆಟೊ ಓಡಿಸುವವರಿಗೆ ಇದು ಹೊರೆಯಾಗುತ್ತದೆ. ಹಳೆಯ ಆಟೊಗಳಲ್ಲಿ ಮೀಟರ್‌ಗಳಿಲ್ಲ. ಅವರೇ ಹಾಕಿಸಿಕೊಳ್ಳಬೇಕು. ಆದರೆ ಇತ್ತೀಚೆಗೆ ಆಟೊಗಳನ್ನು ಉತ್ಪಾದಿಸುವ ಬಜಾಜ್‌, ಟಿವಿಎಸ್‌ನಂತಹ ಕಂಪನಿಗಳು ಆಟೊಗಳಲ್ಲಿ ಮೀಟರ್‌ಗಳನ್ನು ಕಡ್ಡಾಯವಾಗಿ ಅಳವಡಿಸುತ್ತಿವೆ. ಇಂತಹ ಆಟೊಗಳಿಂದ ಚಾಲಕರಿಗೆ ಆನುಕೂಲ. ಎಲ್ಲರಲ್ಲೂ ಇಂಥವುಗಳನ್ನು ಖರೀಸುವ ಸಾಮರ್ಥ್ಯವಿಲ್ಲ. ಹೆಚ್ಚಿಗೆ ಹಣ ತೆತ್ತು ಮೀಟರ್‌ ಹಾಕಿಸಿಕೊಳ್ಳಲು ಚಾಲಕರೂ ಮುಂದಾಗುತ್ತಿಲ್ಲ. ವಿದ್ಯುತ್‌ಚಾಲಿತ ಆಟೊ ಖರೀದಿಗೆಶೇ 60 ಸಬ್ಸಿಡಿ ನೀಡಲಾಗುತ್ತದೆ. ಆದರೆ, ಖರೀಸುವವರ ಸಂಖ್ಯೆ ಕಡಿಮೆ ಇದೆ’ ಎಂದು ಆರ್‌ಟಿಒ ಎನ್.ಜೆ.ಬಣಕಾರ್ ತಿಳಿಸಿದರರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT