ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರ ನಿರ್ಬಂಧಕ್ಕೆ ಸೇನೆ ನಿಯೋಜನೆ ಎಚ್ಚರಿಕೆ

ಲಾಕ್‌ಡೌನ್‌ ಉಲ್ಲಂಘಿಸಿ ತಿರುತ್ತಿರುವ ಜನ: ಕೇಂದ್ರ ಸರ್ಕಾರ ಅಸಮಾಧಾನ
Last Updated 30 ಮಾರ್ಚ್ 2020, 13:30 IST
ಅಕ್ಷರ ಗಾತ್ರ

ದಾವಣಗೆರೆ: ಕೊರೊನಾ ಸೋಂಕು ಹರಡುವುದನ್ನು ತಡೆಯಲು ಹಾಕಿರುವ ಲಾಕ್‌ಡೌನ್‌ ಆದೇಶವನ್ನು ಉಲ್ಲಂಘಿಸಿ ಜನರು ತಿರುಗಾಡುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರವು, ಜನರ ಓಡಾಟಕ್ಕೆ ಕಡಿವಾಣ ಹಾಕಲು ದಾವಣಗೆರೆ ಜಿಲ್ಲೆಯಲ್ಲೂ ಸೇನೆಯನ್ನು ನಿಯೋಜಿಸುವ ಎಚ್ಚರಿಕೆಯನ್ನು ನೀಡಿದೆ.

‘ಕೋವಿಡ್‌–19’ ಕುರಿತು ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ ಈ ಬಗ್ಗೆ ಮಾಹಿತಿ ನೀಡಿದರು.

‘ಸಭೆ ನಡೆಸುತ್ತಿರುವಾಗಲೇ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕರೆ ಮಾಡಿ ದಾವಣಗೆರೆ ಜಿಲ್ಲೆಯಲ್ಲಿ ನಿರ್ಬಂಧವನ್ನು ಲೆಕ್ಕಿಸದೇ ಜನ ಸಂಚರಿಸುತ್ತಿರುವುದು ಕೇಂದ್ರ ಸರ್ಕಾರದ ಗಮನಕ್ಕೆ ಬಂದಿದೆ. ಹೀಗಾಗಿ ಉಳಿದ ಕೆಲ ಜಿಲ್ಲೆಗಳ ಜೊತೆಗೆ ದಾವಣಗೆರೆಗೂ ಸೇನೆಯವರನ್ನು ಕಳುಹಿಸಬೇಕಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಸೇನೆಯನ್ನು ಕರೆಸಿಕೊಳ್ಳುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

‘ಕೊರೊನಾ ಹರಡುವುದನ್ನು ನಿಯಂತ್ರಿಸಲು ಅಧಿಕಾರಿಗಳು ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ. ಶೇ 90ರಷ್ಟು ಜನ ಮನೆಯಲ್ಲೇ ಉಳಿದು ಸರ್ಕಾರದೊಂದಿಗೆ ಸಹಕಾರ ನೀಡುತ್ತಿದ್ದಾರೆ. ಆದರೆ, ಶೇ 10 ಜನ ಹೊರಗೆ ಬಂದು ಬೇಕಾಬಿಟ್ಟಿ ತಿರುಗಾಡಿ ತೊಂದರೆ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಜೂಜಾಟ ಆಡುವುದು, ಮದ್ಯ ಸೇವಿಸುತ್ತಿರುವ ಪ್ರಕರಣಗಳೂ ವರದಿಯಾಗುತ್ತಿದೆ. ಜಿಲ್ಲಾಡಳಿತ ನೀಡಿರುವ ಪಾಸ್‌ ಅನ್ನೂ ದುರುಪಯೋಗ ಪಡಿಸಿಕೊಂಡು ಪೆಟ್ರೋಲ್‌ ಹಾಕಿಸಿಕೊಳ್ಳುತ್ತಿದ್ದಾರೆ. ವಿನಾಕಾರಣ ಹೊರಗೆ ಬರುವ ಮೂಲಕ ಸಮಾಜಕ್ಕೆ ದ್ರೋಹ ಬರೆಯುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್‌ ನಿಯಂತ್ರಕ್ಕಾಗಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೂ ಸೂಚನೆ ನೀಡಲಾಗಿದೆ. ಟಾಕ್ಸ್‌ಪೋರ್ಸ್‌ ಕಮಿಟಿ ರಚಿಸಲಾಗಿದೆ. ಇದಕ್ಕಾಗಿ ₹ 15 ಕೋಟಿ ಬಿಡುಗಡೆ ಮಾಡಲಾಗಿದೆ. ಈ ಹಣ ಬಳಕೆಗೆ ಜಿಲ್ಲಾ ಪಂಚಾಯಿತಿ ಸಿಇಒಗೆ ಅಧಿಕಾರ ನೀಡಲಾಗಿದೆ’ ಎಂದು ಸಚಿವರು ತಿಳಿಸಿದರು.

ಹಕ್ಕಿಜ್ಞರ–ವರದಿ ಬಂದ ಬಳಿಕ ಕ್ರಮ: ‘ಹಕ್ಕಿಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಕೋಳಿ ಮಾಂಸ ಹಾಗೂ ಮೊಟ್ಟೆ ಮಾರಾಟವನ್ನು ನಿಷೇಧಿಸಲಾಗಿದೆ. ಕೋಳಿ ಮಾಂಸ ಹಾಗೂ ಮೊಟ್ಟೆಯನ್ನು ತಿನ್ನಬಹುದೇ ಎಂಬ ಬಗ್ಗೆ ಪರಿಶೀಲಿಸಲು ತಜ್ಞರ ಸಮಿತಿಯನ್ನು ರಚಿಸಲಾಗಿದೆ. ಎರಡು ದಿನಗಳಲ್ಲಿ ವರದಿ ಬರಲಿದ್ದು, ಆ ಬಳಿಕ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕೊರೊನಾ ಕಿಟ್‌ ಶೀಘ್ರವೇ ಪೂರೈಕೆ:‘ಜಿಲ್ಲೆಯಲ್ಲಿ ಕೋವಿಡ್‌–19 ರೋಗಕ್ಕೆ ಚಿಕಿತ್ಸೆ ನೀಡಲು ಜಿಲ್ಲಾ ಆಸ್ಪತ್ರೆಯ ಜೊತೆಗೆ ಎಸ್‌.ಎಸ್‌. ಆಸ್ಪತ್ರೆ ಹಾಗೂ ಬಾಪೂಜಿ ಆಸ್ಪತ್ರೆಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಖಾಸಗಿ ಆಸ್ಪತ್ರೆಯ ಪ್ರಯೋಗಾಲಯದಲ್ಲೂ ಕೊರೊನಾ ವೈರಸ್‌ ‍ಪರೀಕ್ಷೆ ಮಾಡಲು ಕಿಟ್‌ ಕೊಡಿಸುವಂತೆ ಮನವಿ ಮಾಡಲಾಗಿತ್ತು. ರಾಜ್ಯ ಸರ್ಕಾರದಿಂದ ಒಪ್ಪಿಗೆ ಬಂದಿದೆ. ಕೇಂದ್ರ ಸಚಿವರೂ ಶೀಘ್ರದಲ್ಲೇ ಕೊರೊನಾ ಪರೀಕ್ಷಾ ಕಿಟ್‌ ಪೂರೈಕೆಗೆ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ’ ಎಂದು ಈಶ್ವರಪ್ಪ ಮಾಹಿತಿ ನೀಡಿದರು.

ಇಂದಿನಿಂದ ಪಡಿತರ ವಿತರಣೆಗೆ ಕ್ರಮ: ಡಿಸಿ

ಕೊರೊನಾ ಹಿನ್ನೆಲೆಯಲ್ಲಿ ಎರಡು ತಿಂಗಳ ಕಾಲ ಪಡಿತರ ವಿತರಿಸಲು ಜಿಲ್ಲೆಗೆ ಈಗಾಗಲೇ ಅಗತ್ಯ ಪ್ರಮಾಣದ ಆಹಾರ ಧಾನ್ಯಗಳು ಬಂದಿವೆ. ಮಂಗಳವಾರದಿಂದಲೇ ಪಡಿತರ ವಿತರಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿ, ‘ಒಟಿಪಿ ಸಮಸ್ಯೆ ಸೇರಿದಂತೆ ಯಾವುದೇ ರೀತಿಯ ತಾಂತ್ರಿಕ ಸಮಸ್ಯೆಗಳನ್ನು ಪರಿಗಣನೆಗೆ ತೆಗೆದುಕೊಳ್ಳದೇ ನ್ಯಾಯಬೆಲೆ ಅಂಗಡಿಯವರು ಪಡಿತರ ಚೀಟಿದಾರರಿಗೆ 2 ತಿಂಗಳಿಗೆ ಆಗುಷ್ಟು ಆಹಾರಧಾನ್ಯಗಳನ್ನು ವಿತರಿಸುವಂತೆ ಸೂಚಿಸಲಾಗಿದೆ’ ಎಂದು ತಿಳಿಸಿದರು.

ಅಲೆಮಾರಿಗಳ ಸಂಘದ ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದ್ದು, ಅಲೆಮಾರಿಗಳಿಗೂ ಫುಡ್‌ ಕಿಟ್‌ ಕೊಡುವ ವ್ಯವಸ್ಥೆ ಮಾಡಲಾಗಿದೆ. ಮಂಗಳವಾರವೇ ಜಿಲ್ಲೆಯಲ್ಲಿರುವ ಅಲೆಮಾರಿಗಳ ಪಟ್ಟಿಯನ್ನು ಪಡೆದು ಆಹಾರಧಾನ್ಯ ಪೂರೈಕೆ ಮಾಡಲಾಗುವುದು ಎಂದೂ ಜಿಲ್ಲಾಧಿಕಾರಿ ತಿಳಿಸಿದರು.

ಅಂತರ ಕಾಯ್ದುಕೊಳ್ಳದ ಸಚಿವರು

ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮದವರಿಗೆ ಮಾಹಿತಿ ನೀಡಲು ಹೊರ ಬಂದ ಸಚಿವ ಕೆ.ಎಸ್‌. ಈಶ್ವರಪ್ಪ ಅವರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಿಲ್ಲ. ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಚಿವರಿಗೆ ತಾಗಿಕೊಂಡೇ ಶಾಸಕರು ನಿಂತುಕೊಂಡಿದ್ದು ಚರ್ಚೆಗೆ ಗ್ರಾಸವಾಯಿತು.

ಉಪ ಮೇಯರ್‌ ಸೌಮ್ಯಾ ನರೇಂದ್ರ, ಶಾಸಕರಾದ ಪ್ರೊ. ಲಿಂಗಣ್ಣ, ಮಾಡಾಳ ವಿರೂಪಾಕ್ಷಪ್ಪ, ಎಂ.ಪಿ. ರೇಣುಕಾಚಾರ್ಯ, ಮೇಯರ್‌ ಬಿ.ಜಿ. ಅಜಯಕುಮಾರ್‌, ಎಸ್‌.ಎ. ರವೀಂದ್ರನಾಥ್‌, ಎಸ್‌.ವಿ. ರಾಮಚಂದ್ರ ಅವರು ಸಚಿವರ ಅಕ್ಕ–ಪಕ್ಕ ನಿಂತುಕೊಂಡಿದ್ದರು.

ಇಕ್ಕಟ್ಟಾದ ಜಾಗದಲ್ಲಿ ಸಚಿವರು ಮಾತನಾಡಿದ್ದರಿಂದ ಸುದ್ದಿಗಾರರು ಒಟ್ಟಿಗೆ ನಿಂತುಕೊಳ್ಳುವಂತಾಯಿತು.

ಸಭೆಯಲ್ಲೂ ವೇದಿಕೆ ಮೇಲೆ ಜನಪ್ರತಿನಿಧಿಗಳ ಹಾಗೂ ಜಿಲ್ಲಾ ಮಟ್ಟದ ಪ್ರಮುಖ ಅಧಿಕಾರಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ನಿಗದಿತ ಪ್ರಮಾಣದಲ್ಲಿ ಸಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT