ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂತ್ರಿಗಳ ಕಮಿಷನ್‌ ವಿವರ ಜನತಾ ನ್ಯಾಯಾಲಯದ ಮುಂದಿಡುವೆವು: ಸಲೀಂ ಅಹ್ಮದ್‌

ರಾಜ್ಯ ಸರ್ಕಾರದ ವಿರುದ್ಧ ಇಂದು ಪ್ರತಿಭಟನೆ: ಕೆಪಿಸಿಸಿ ಕಾರ್ಯಾಧ್ಯಕ್ಷ
Last Updated 18 ಏಪ್ರಿಲ್ 2022, 4:58 IST
ಅಕ್ಷರ ಗಾತ್ರ

ದಾವಣಗೆರೆ: ‘ಯಾವುದೇ ಇಲಾಖೆಯಲ್ಲಿ ಶೇ 40 ಕಮಿಷನ್‌ ನೀಡದೇ ಕೆಲಸಗಳಾಗುವುದಿಲ್ಲ. ಹಲವು ಸಚಿವರ ಕಮಿಷನ್‌ ಮಾಹಿತಿ ನಮ್ಮಲ್ಲಿದೆ. ಅದನ್ನು ಜನತಾ ನ್ಯಾಯಾಲಯದಲ್ಲಿ ಧಾರಾವಾಹಿಯಂತೆ ಸರಣಿಯಲ್ಲಿ ಬಿಚ್ಚಿಡುತ್ತೇವೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌ ಹೇಳಿದರು.

ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ‘ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಶೇ 40 ಕಮಿಷನ್‌ ತೆಗೆದುಕೊಳ್ಳುತ್ತಿರುವ ಬಗ್ಗೆ ಒಂದು ವರ್ಷದ ಹಿಂದೆಯೇ ಪ್ರಧಾನಿಗೆ ಪತ್ರ ಬರೆದಿದ್ದರು. ಅದರಲ್ಲಿ ಸಚಿವರ ಹೆಸರುಗಳನ್ನು ಉಲ್ಲೇಖಿಸಿದ್ದರು. ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

ಸಂತೋಷ್‌ ಪಾಟೀಲ ಪ್ರಕರಣದಲ್ಲಿ ರಾಜಕೀಯ ಪ್ರೇರಿತ ಎಫ್‌ಐಆರ್‌ ದಾಖಲಾಗಿದೆ. ಅದರಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುಷ್ಟೇ ಇದೆ. ಭ್ರಷ್ಟಾಚಾರದ ಬಗ್ಗೆ ದಾಖಲಾಗಿಲ್ಲ. ಹಾಗಾಗಿ ಸಂತೋಷ್‌ ಪಾಟೀಲ ಅವರ ಡೆತ್‌ನೋಟ್‌ ಆಧಾರದಲ್ಲಿ ಲಂಚ ಪ್ರಕರಣ ಎನ್ನುವುದನ್ನು ಸೇರಿಸಿ ಎಫ್‌ಐಆರ್‌ ದಾಖಲಿಸಬೇಕು. ಕೆ.ಎಸ್‌. ಈಶ್ವರಪ್ಪ ಅವರನ್ನು ಬಂಧಿಸಬೇಕು. ಪಾಟೀಲ ಕುಟುಂಬಕ್ಕೆ ₹ 1 ಕೋಟಿ ಪರಿಹಾರ, ಒಂದು ಉದ್ಯೋಗ ನೀಡಬೇಕು. ಬಾಕಿ ಇರುವ ಗುತ್ತಿಗೆಯ ಹಣ ನೀಡಬೇಕು ಎಂದು ಆಗ್ರಹಿಸಿದರು.

‘ಈಶ್ವರಪ್ಪ ರಾಜೀನಾಮೆ ನೀಡಿರುವುದೇ ಅವರು ಈ ಪ್ರಕರಣದಲ್ಲಿ ಭಾಗಿಯಾಗಿರುವುದಕ್ಕೆ ಸಾಕ್ಷಿ. ಈಶ್ವರಪ್ಪ ಮಾಡುವ ಅನಾಹುತವನ್ನೆಲ್ಲ ಮಾಡಿ ಈಗ ಡಿ.ಕೆ. ಶಿವಕುಮಾರ್‌ ಹೆಸರು ಎಳೆದು ತರುತ್ತಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಈಶ್ವರಪ್ಪ ರಾಜೀನಾಮೆ ನೀಡಿರಲಿಲ್ಲ. ನಾವು ಪ್ರತಿಭಟನೆ ಮಾಡಿದ ಮೇಲೆ ಬಿಜೆಪಿಯ ವರಿಷ್ಠರು ಎಚ್ಚೆತ್ತುಕೊಂಡು ರಾಜೀನಾಮೆ ಪಡೆದರು. ತನಿಖೆಯ ಮೊದಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಈಶ್ವರಪ್ಪ ನಿರಪರಾಧಿ ಎಂದು ಹೇಳಿಕೆ ನೀಡಿದ್ದಾರೆ. ಇದರಿಂದ ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ಮಾಡುವುದು ಕಷ್ಟ’ ಎಂದು ತಿಳಿಸಿದರು.

‘ಈ ಸರ್ಕಾರ ಶೇ 40 ಕಮಿಷನ್‌ ಪಡೆಯುತ್ತಿರುವ ಬಗ್ಗೆ ಸದನದಲ್ಲಿ ಚರ್ಚೆ ಮಾಡಲು ಅವಕಾಶ ಕೇಳಿದರೆ ಅವಕಾಶ ನೀಡಲಿಲ್ಲ. ನಾನು ತಿನ್ನಲ್ಲ, ಬೇರೆಯವರನ್ನು ತಿನ್ನಲು ಬಿಡಲ್ಲ ಎಂದು ಹೇಳುತ್ತಿದ್ದ ಮೋದಿಯೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದನ್ನು ತಿಳಿಸಲು ಜನರ ಬಳಿಗೆ ಹೋಗುತ್ತಿದ್ದೇವೆ. ಏ.18ರಂದು ದಾವಣಗೆರೆಯಲ್ಲಿಯೂ ಪ್ರತಿಭಟನೆ ನಡೆಯಲಿದೆ. ಅದರಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಭಾಗವಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ ಡಿ. ಬಸವರಾಜ್‌, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಎಸ್‌. ಬಸವಂತಪ್ಪ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT