ಸೋಮವಾರ, ಜನವರಿ 20, 2020
27 °C
ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಬಿ. ಮಂಜಪ್ಪ ಆರೋಪ

ರೇಣುಕಾಚಾರ್ಯರಿಂದ ಪರಿಹಾರ ನಿಧಿಯ ಹಣ ದುರ್ಬಳಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಮುಖ್ಯಮಂತ್ರಿ ಪರಿಹಾರ ನಿಧಿ ಹೆಸರಿನಲ್ಲಿ ಹಣ ದುರ್ಬಳಕೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಬಿ. ಮಂಜಪ್ಪ ಆರೋಪಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನೆರೆ ಸಂತ್ರಸ್ತರಿಗಾಗಿ ಜನ ನೀಡಿರುವ ದವಸ ಧಾನ್ಯ ಹಾಗೂ ಬಟ್ಟೆಗಳನ್ನು ಶಾಸಕರ ಸಂಪರ್ಕ ಕಚೇರಿಯಲ್ಲಿ ಶೇಖರಿಸಿ ಇಡುವ ಮೂಲಕ ಜನರಿಗೆ ಅನ್ಯಾಯ ಮಾಡಿದ್ದಾರೆ. ದವಸ ಧಾನ್ಯಗಳನ್ನು ರೇಣುಕಾಚಾರ್ಯ ಅವರು ಸಂಗ್ರಹಿಸಿದ್ದಲ್ಲ. ಬದಲಾಗಿ ಜನರೇ ನೀಡಿರುವುದು. ತಹಶೀಲ್ದಾರ್ ಮುಖಾಂತರ ಅದನ್ನು ಸಂತ್ರಸ್ತರಿಗೆ ತಲುಪಿಸಬೇಕಿತ್ತು. ಆದರೆ ಅಧಿಕಾರ, ಮಂತ್ರಿಮಂಡಲ ಹಾಗೂ ಉಪಚುನಾವಣೆಯ ನೆಪದಲ್ಲಿ ಅದನ್ನು ಕಳುಹಿಸಲು ಬಿಟ್ಟಿಲ್ಲ’ ಎಂದು ಆರೋಪಿಸಿದರು.

‘ಹೊಳೆಗಳಲ್ಲಿ ನೀರು ಕಡಿಮೆಯಾಗಿದ್ದು, ಮರಳು ತೆಗೆಯಲು ಪರ್ಮಿಟ್‌ ನೀಡಬೇಕಿತ್ತು. ಆದರೆ ರೇಣುಕಾಚಾರ್ಯ ಅವರು ಕ್ವಾರಿ ಮಾಲೀಕರಿಗೆ ‍ಪರ್ಮಿಟ್ ಕೊಡಲು ಬಿಡುತ್ತಿಲ್ಲ. ಮಾಲೀಕರಿಂದ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಸಂತ್ರಸ್ತರ ಹೆಸರಿನಲ್ಲಿ ಒಂದು ಟ್ರಾಕ್ಟರ್‌ಗೆ ₹10 ಸಾವಿರ ಹಾಗೂ ಎತ್ತಿನಗಾಡಿಗೆ ₹2 ಸಾವಿರ ಹಣ ಸಂಗ್ರಹಿಸುತ್ತಿದ್ದಾರೆ. ಬಡವರಿಗೆ ಮನೆ ಕಟ್ಟಲು ಮರಳು ಕೊಡಿಸುವ ಕೆಲಸ ಮಾಡದೇ ವಾಮಮಾರ್ಗದಲ್ಲಿ ಹಣ ಸಂಗ್ರಹಿಸುತ್ತಿದ್ದಾರೆ. ಇದನ್ನು ಜನ ಅರ್ಥಮಾಡಿಕೊಳ್ಳಬೇಕು’ ಎಂದರು.

ನಳಿನ್‌ ಹೇಳಿಕೆಗೆ ಸೊಪ್ಪು ಹಾಕಲ್ಲ:

ಕಾಂಗ್ರೆಸ್‌ ದಿವಾಳಿಯಾಗುತ್ತಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಮಂಜಪ್ಪ ‘ನಳಿನ್‌ಕುಮಾರ್ ಕಟೀಲ್ ಪ್ರಬುದ್ಧ ಶಕ್ತಿ ಇರುವ ವ್ಯಕ್ತಿ ಅಲ್ಲ. ಬರೀ ಉಡಾಫೆ ಮಾತುಗಳಿಂದ ಪ್ರಚಾರದಿಂದ ಅಧಿಕಾರಕ್ಕೆ ಬಂದವರು. ಅವರ ಮಾತಿಗೆ ಕಾಂಗ್ರೆಸ್‌ ಸೊಪ್ಪು ಹಾಕುವುದಿಲ್ಲ. ಕಾಂಗ್ರೆಸ್‌ಗೆ ಸೋಲು–ಗೆಲುವು ಹೊಸದಲ್ಲ, ಪಕ್ಷ ಸುಭದ್ರವಾಗಿದೆ. ಮುಂದಿನ ದಿನಗಳಲ್ಲಿ ದೇಶ ಹಾಗೂ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ’ ಎಂದರು.

ಆಪರೇಷನ್ ಕಮಲಕ್ಕೆ ಒಳಗಾಗುವುದಿಲ್ಲ:

ದಾವಣಗೆರೆ ಮಹಾನಗರಪಾಲಿಕೆ ಸದಸ್ಯರು ಆಪರೇಷನ್ ಕಮಲಕ್ಕೆ ಒಳಗಾಗುವುದಿಲ್ಲ. ಪಾಲಿಕೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಮಂಜಪ್ಪ ಹೇಳಿದರು.

ಬಿಜೆಪಿಯವರಿಗೆ ಅಧಿಕಾರಕ್ಕೆ ಬರುವಷ್ಟು ಸಂಖ್ಯಾಬಲ ಇಲ್ಲ. 17 ಸದಸ್ಯರು, ಒಬ್ಬರು ಸಂಸದರು ಹಾಗೂ ಒಬ್ಬರು ಶಾಸಕರು ಹಾಗೂ ನಾಲ್ವರು ಪಕ್ಷೇತರರು ಸೇರಿದರೆ ಅವರ ಸಂಖ್ಯಾ ಬಲ 23 ಆಗುತ್ತದೆ. ಆದರೆ ಕಾಂಗ್ರೆಸ್‌ನ 22 ಸದಸ್ಯರು, ಒಬ್ಬರು ಶಾಸಕರು, ಒಬ್ಬರು ವಿಧಾನ ಪರಿಷತ್ ಸದಸ್ಯರು ಹಾಗೂ ಕಾಂಗ್ರೆಸ್‌ ಸೇರ್ಪಡೆಗೊಂಡ ಪಕ್ಷೇತರ ಶಾಸಕ ಸೇರಿ 25 ಆಗುತ್ತದೆ. ಜೆಡಿಎಸ್‌ ಸದಸ್ಯರ ಜೊತೆ ಮಾತನಾಡಿದ್ದು, ಅವರ ಬೆಂಬಲವು ನಮಗೆ ಸಿಗುತ್ತದೆ. ಯಾವ ಆಧಾರದ ಮೇಲೆ ಅಧಿಕಾರ ಹಿಡಿಯುತ್ತಾರೆ ಎಂದು ಪ್ರಶ್ನಿಸಿದರು.

‘ದಾವಣಗೆರೆ ಹೈಕಮ್ಯಾಂಡ್‌ ನಿರ್ಲಕ್ಷ್ಯದಿಂದ ಮೇಯರ್ ಸ್ಥಾನ ತಪ್ಪುತ್ತದೆ ಎಂಬ ಆರೋಪವಿದೆಯಲ್ಲಾ’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು. ‘ಪಕ್ಷಕ್ಕೆ ಆಗದೇ ಇರುವವರು ಹಬ್ಬಿಸುತ್ತಿರುವ ಗಾಳಿ ಸುದ್ದಿ. ಶಾಮನೂರು ಶಿವಶಂಕರಪ್ಪ ಹಾಗೂ ಎಸ್‌.ಎಸ್‌.ಮಲ್ಲಿಕಾರ್ಜುನ ಅವರ ನಾಯಕತ್ವದಲ್ಲಿ 22 ಸ್ಥಾನಗಳನ್ನು ಗೆದ್ದಿದ್ದೇವೆ’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು