ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವ್ಯವಹಾರ: ಅಧಿಕಾರಿಗಳಿಗೆ ನೋಟಿಸ್

100 ಕ್ವಿಂಟಲ್ ಅಕ್ಕಿ ಕಳವು l ಅನಾಮಿಕರಿಗೆ ಭಾರಿ ಮೊತ್ತ ಪಾವತಿ
Last Updated 19 ಸೆಪ್ಟೆಂಬರ್ 2022, 2:29 IST
ಅಕ್ಷರ ಗಾತ್ರ

ಜಗಳೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ 100 ಕ್ವಿಂಟಲ್‌ಗೂ ಹೆಚ್ಚು ಅಕ್ಕಿ ಕಳವು, ಅನಾಮಿಕ ವ್ಯಕ್ತಿ ಹೆಸರಿಗೆ ಲಕ್ಷಗಟ್ಟಲೆ ಹಣ ಪಾವತಿ ಸೇರಿದಂತೆ ಭಾರಿ ಪ್ರಮಾಣದಲ್ಲಿ ಹಣ ದುರುಪಯೋಗ ಪ್ರಕರಣ ಬೆಳಕಿಗೆ ಬಂದಿದ್ದು, ಇಬ್ಬರು ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ.

ದಾವಣಗೆರೆ ಜಿಲ್ಲಾ ಪಂಚಾಯಿತಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಬೆಂಗಳೂರಿನ ಪ್ರಧಾನ ಕಚೇರಿಯಿಂದ ತನಿಖೆ ನಡೆಯುತ್ತಿದ್ದು, ಈ ಹಿಂದೆ ಕಾರ್ಯ ನಿರ್ವಹಿಸಿದ ಸಿಡಿಪಿಒ ರೇಖಾ ನಾಡಿಗೇರ್ ಹಾಗೂ ಈಗಿನ ಸಿಡಿಪಿಒ ಬೀರೇಂದ್ರ ಅವರಿಗೆ ನೋಟಿಸ್ ನೀಡಲಾಗಿದೆ.

ಸಿಡಿಪಿಒಗೆ ಸೇರಿದ ಪಟ್ಟಣದ ಎಪಿಎಂಸಿ ಗೋದಾಮಿ ನಲ್ಲಿರುವ ಅಕ್ಕಿ ಮತ್ತು ಗೋಧಿಯನ್ನು ಇಲಾಖೆಯ ಅಧಿಕಾರಿಗಳೇ ಕಳವು ಮಾಡಿರುವ ಬಗ್ಗೆ ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದ್ದು, ಜಿ.ಪಂ. ಅಧಿಕಾರಿಗಳು ಈಚೆಗೆ ಇಲ್ಲಿನ ಕಚೇರಿಗೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.

ಕಳೆದ ಜೂನ್‌ನಲ್ಲಿ ಪ್ರಭಾರಿ ಸಿಡಿಪಿಒ ಆಗಿದ್ದ ಬಿ.ಎಸ್. ಶಿವಕುಮಾರ್ ಗೋದಾಮಿನ ದಾಸ್ತಾನು ನಿರ್ವಹಣೆ ನೋಡಿಕೊಳ್ಳುತ್ತಿದ್ದರು. ಜುಲೈ 11ರಂದು ಕರ್ತವ್ಯದಿಂದ ಅವರು ಬಿಡುಗಡೆಯಾಗಿದ್ದು, ಪ್ರಭಾರಿ ಸಿಡಿಪಿಒ ಎಚ್.ವಿ. ಶಾಂತಮ್ಮ ಅವರಿಗೆ ಗೋದಾಮಿನ ಬೀಗವನ್ನು ಹಸ್ತಾಂತರಿಸಿದ್ದರು. ಶಾಂತಮ್ಮ ಅವರು ಅಕ್ಕಿ ಮತ್ತು ಗೋಧಿಯ ಸಂಪೂರ್ಣ ದಾಸ್ತಾನನ್ನು ತೂಕ ಮಾಡಿಸಿದಾಗ ಭಾರಿ ವ್ಯತ್ಯಾಸ ಕಂಡುಬಂದಿತ್ತು.

ಗೋದಾಮಿನಲ್ಲಿ 1,750 ಕ್ವಿಂಟಲ್ ಅಕ್ಕಿ ಹಾಗೂ 26,900 ಕೆ.ಜಿ ಗೋಧಿ ಉಳಿಕೆಯಾಗಿರುವ ಬಗ್ಗೆ ದಾಸ್ತಾನು ವಹಿಯಲ್ಲಿ ನಮೂದಾಗಿದ್ದು, ತೂಕ ಮಾಡಿಸಿದಾಗ 1,650 ಕ್ವಿಂಟಲ್‌ನಷ್ಟು ಇದ್ದು, 103 ಕ್ವಿಂಟಲ್‌ನಷ್ಟು ಅಕ್ಕಿ ಕಡಿಮೆಯಾಗಿತ್ತು. ಗೋಧಿ 353 ಕ್ವಿಂಟಲ್ ದಾಸ್ತಾನು ಇದ್ದು, 84 ಕ್ವಿಂಟಲ್ ಕೆ.ಜಿ ಹೆಚ್ಚಿನ ಉಳಿಕೆ ಕಂಡುಬಂದಿತ್ತು. ದಾಸ್ತಾನು ವಹಿಯಲ್ಲಿನ ಪ್ರಮಾಣ ಹಾಗೂ ತೂಕದ ಸಮಯದಲ್ಲಿ ಭಾರಿ ವ್ಯತ್ಯಾಸ ಕಂಡು ಬಂದಿರುವ ಬಗ್ಗೆ ಪ್ರಭಾರ ಸಿಡಿಪಿಒ ಶಾಂತಮ್ಮ ಅವರು ಜುಲೈ 30ರಂದು ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಿಗೆ ವರದಿ ಸಲ್ಲಿಸಿದ್ದಾರೆ. ಈ ದಾಖಲೆಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ.

ಅನಾಮಿಕರಿಗೆ ₹ 7 ಲಕ್ಷ ಪಾವತಿ: ತಾಲ್ಲೂಕಿನ 259 ಅಂಗನವಾಡಿ ಕೇಂದ್ರಗಳಿಗೆ ಮಹಿಳಾ ಪೂರಕ ಪೌಷ್ಟಿಕ ಆಹಾರ ಪೂರೈಕೆ ಘಟಕ (ಎಂ.ಎಸ್.ಪಿ.ಸಿ.)ದಿಂದ ಆಹಾರ ಪೂರೈಕೆಯಾಗುವ ಸಾಗಣೆ ವೆಚ್ಚ ಪ್ರತಿ ತಿಂಗಳು ₹ 55,000 ಇದ್ದು, ಜುಲೈ ತಿಂಗಳೊಂದರಲ್ಲೇ 3 ಬಾರಿ ₹ 7ಲಕ್ಷವನ್ನು ಸಾಗಣೆ ವೆಚ್ಚದ ಬಾಬ್ತು ದಾವಣಗೆರೆಯ ನವೀನ್ ಜೈನ್ ಎಂಬ ವ್ಯಕ್ತಿಗೆ ಎಂ.ಎಸ್.ಪಿ.ಸಿ ಖಾತೆಯಿಂದ ಜಮಾ ಮಾಡಲಾಗಿದೆ ಎಂಬ ದೂರು ಇದೆ. ಆ ಸಮಯದಲ್ಲಿ ಬಿ.ಎಸ್. ಶಿವಕುಮಾರ್ ಅವರೇ ಪ್ರಭಾರ ಸಿಡಿಪಿಒ ಆಗಿದ್ದರು.

ಕವರ್ ಖರೀದಿಯಲ್ಲಿ ₹ 14 ಲಕ್ಷ ಅವ್ಯವಹಾರ: ತಾಲ್ಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಆಹಾರ ಸಾಮಗ್ರಿಗಳನ್ನು ಪೂರೈಸುವ ಪ್ಲಾಸ್ಟಿಕ್ ಕವರ್ ಖರೀದಿಗೆ ಸಂಬಂಧಿಸಿದಂತೆ ಏಪ್ರಿಲ್ 2021ರಿಂದ ಜುಲೈ 2022ರವರೆಗಿನ ವೆಚ್ಚ ₹ 14 ಲಕ್ಷವನ್ನು ಪ್ಲಾಸ್ಟಿಕ್ ಕವರ್ ಪೂರೈಕೆದಾರರಿಗೆ ಪಾವತಿಸದೆ ಕೆಲವು ಅಧಿಕಾರಿಗಳು ಸ್ವಂತಕ್ಕೆ ಬಳಸಿಕೊಂಡಿದ್ದು, ಎಂ.ಎಸ್.ಪಿ.ಸಿ.ಗೆ ಭಾರಿ ನಷ್ಟವಾಗಿದೆ. ಪಟ್ಟಣದ ಎಂ.ಎಸ್.ಪಿ.ಸಿ ಘಟಕದಲ್ಲಿ 21 ಸಿಬ್ಬಂದಿ ಕೆಲಸ ಮಾಡುತ್ತಿದ್ದು, 4 ತಿಂಗಳಿಂದ ವೇತನ ಪಾವತಿಯಾಗಿರುವುದಿಲ್ಲ ಎನ್ನಲಾಗಿದೆ.

ಒಂದೂವರೆ ವರ್ಷ ಕಾಲ ತಾಲ್ಲೂಕು ಕಚೇರಿಯಲ್ಲಿ ಅನಧಿಕೃತವಾಗಿ ಎಫ್.ಡಿ.ಎ ಹಾಗೂ ಪ್ರಭಾರಿ ಸಿಡಿಪಿಓ ಆಗಿ ಕಾರ್ಯನಿರ್ವಹಿಸಿದ ವ್ಯಕ್ತಿಯೊಬ್ಬರು ಬೇರೆ ಅಧಿಕಾರಿಗಳ ಹೆಸರಿನಲ್ಲಿರುವ ಡಿಜಿಟಲ್ ಕೀಯನ್ನು ದುರುಪಯೋಗಪಡಿಸಿಕೊಂಡು ಖಜಾನೆ ಯಿಂದ ವಿವಿಧ ಯೋಜನೆಗಳಡಿ ಹಣವನ್ನು ಡ್ರಾ ಮಾಡಿ ಗಂಭೀರ ಅಪರಾಧ ಎಸಗಿದ್ದಾರೆ. ಈ ಎಲ್ಲಾ ಅವ್ಯವಹಾರಗಳು ನಡೆದ ಸಂದರ್ಭ ಕೆ.ಎಚ್. ವಿಜಯ್ ಕುಮಾರ್ ಅವರು ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಉಪ ನಿರ್ದೇಶಕರಾಗಿದ್ದರು.

ಸಿಡಿಪಿಒ ಇಲಾಖೆಯಲ್ಲಿನ ಹಗರಣಗಳಿಂದಾಗಿ 259 ಕೇಂದ್ರಗಳ ಸುಮಾರು 20 ಸಾವಿರ ಫಲಾನುಭವಿಗಳಿಗೆ ಸಮಸ್ಯೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT