ಶನಿವಾರ, ಫೆಬ್ರವರಿ 29, 2020
19 °C

ಕೋಟ್ಯಂತರ ರೂಪಾಯಿ ಅವ್ಯವಹಾರ: ಪಿಡಿಒಗಳು ಸೇರಿ 7 ಜನರ ವಿರುದ್ಧ ಕ್ರಿಮಿನಲ್ ಪ್ರಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಪನಹಳ್ಳಿ: ಕ್ರಿಯಾಯೋಜನೆ ತಯಾರಿಸದೇ ಕೋಟ್ಯಂತರ ರೂಪಾಯಿ ಅವ್ಯವಹಾರ ಮಾಡಿರುವ ಆರೋಪದ ಮೇರೆಗೆ ಪಿಡಿಒ, ಗ್ರಾಮ ಪಂಚಾಯಿತಿ ಅಧ್ಯಕ್ಷರ ಸೇರಿ 7 ಜನರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.

ಮತ್ತಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ. ಮಲ್ಲೇಶಪ್ಪ, ಹಾಲಿ ಅಧ್ಯಕ್ಷ ಕೆ. ಮಲ್ಲಿಕಾರ್ಜುನ, ಹಿಂದಿನ ಪಿಡಿಒಗಳಾದ ವೀರೇಶ, ಟಿ. ಅಂಜಿನಪ್ಪ, ಪಿಡಿಒ ಮಹೇಶ ಪಾಟೀಲ್, ಕರವಸೂಲಿಗಾರರಾದ ಕೆ.ಮಂಜುನಾಥ, ಪಿ.ಮಂಜುನಾಥ್ ಆರೋಪಿತರು.

2017-18ನೇ ಸಾಲಿನಲ್ಲಿ 14ನೇ ಹಣಕಾಸು ಯೋಜನೆಯಡಿಯಲ್ಲಿ ಕ್ರಿಯಾ ಯೋಜನೆ ತಯಾರಿಸದೇ, ನಿಯಮಬಾಹಿರವಾಗಿ ಎನ್‍.ಎಂ.ಆರ್.ಬಿಲ್‌ ತಯಾರಿಸಿ ಕೂಲಿಕಾರರಿಗೆ ಕೂಲಿಯನ್ನು ಪಾವತಿಸದೇ, ಚೆಕ್‌ಗಳನ್ನು ಬೇರೆಯವರ ಹೆಸರಿನಲ್ಲಿ ನಗದೀಕರಿಸಿ ಆರೋಪಿಗಳು ₹79,0320 ಹಣ ಬಿಡುಗಡೆ ಮಾಡಿದ್ದಾರೆ.

ಪಿಡಿಒ ಹಾಗೂ ಅಧ್ಯಕ್ಷರು ಕೆಟಿಪಿಪಿ ಅಧಿನಿಯಮ 1999 ಅನ್ನು ಹಾಗೂ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮವನ್ನು ಉಲ್ಲಂಘಿಸಿ, ₹17,15,056 ಹಣ ಪಾವತಿಸಿ 14ನೇ ಹಣಕಾಸು ಯೋಜನೆಯಡಿ ಕುಡಿಯುವ ನೀರಿನ ಸಾಮಗ್ರಿಗಳನ್ನು ಖರೀದಿಸಿದ್ದಾರೆ.

ತಾಂತ್ರಿಕ ನೆರವು ಪಡೆಯದೇ ಬೋರ್‌ವೆಲ್‍ ಕೊರೆಯಿಸಿ ದಾಖಲಾತಿ ನಿರ್ವಹಿಸದೇ ₹1,58,100, ಕುಡಿಯುವ ನೀರಿನ ಮೋಟರ್‌ಗಳನ್ನು  ದುರಸ್ತಿ ಮಾಡಿರುವ ಹಣದ ಚೆಕ್‍ ಅನ್ನು ಸಂಬಂಧಿಸಿದ ಗುತ್ತಿಗೆದಾರರಿಗೆ ಪಾವತಿಸದೆ ಬೇರೆಯವರ ಹೆಸರಿನಲ್ಲಿ ನಗದೀಕರಿಸಿ ಒಟ್ಟು ₹2,09,462 ಹಾಗೂ 2017ರಿಂದ ಮೂರು ವರ್ಷ ವೋಚರ್‌ಗಳನ್ನು ನಿರ್ವಹಿಸದೇ ₹5,84,587ಗಳನ್ನು ಬಿಡುಗಡೆ ಮಾಡಿಸಿಕೊಂಡಿದ್ದಾರೆ.

ಇಎಫ್‍ಎಂಎಸ್‍ ಮೂಲಕ ವರ್ಗಾಯಿಸಿದ ಮೊತ್ತಕ್ಕೆ ವೋಚರ್‌ಗಳನ್ನು ಲಗತ್ತಿಸದೇ ತಮ್ಮ ಉಳಿತಾಯ ಖಾತೆಗೆ ₹47,89,430 ಹಾಕಿಸಿಕೊಂಡಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯರ ಗೌರವಧನ ನೀಡದೆ ₹5,71,100, ಖಾಸಗಿ ಮುದ್ರಕರಿಂದ ರಸೀದಿ ಪುಸ್ತಕ ಖರೀದಿಸಿ ಲೆಕ್ಕಗಳನ್ನು ನಿರ್ವಹಿಸದೆ ಹಾಗೂ ತೆರಿಗೆ ಆದಾಯಕ್ಕೆ ಸಂಬಂಧಿಸಿದ ₹6,00,786 ಸೇರಿ ಒಟ್ಟು ₹1,15,58,724 ಅನ್ನು ದುುಪಯೋಗಪಡಿಸಿಕೊಂಡಿದ್ದಾರೆ ಎಂದು ಹರಪನಹಳ್ಳಿ ತಾಲ್ಲೂಕು ಪಂಚಾಯಿತಿ ಇಒ ಅನಂತ ರಾಜ್ ದೂರಿನಲ್ಲಿ ತಿಳಿಸಿದ್ದಾರೆ.

ಚಿಗಟೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು