ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಯ ಸಾವು ದುರದೃಷ್ಟಕರ: ಮಾನವ–ಪ್ರಾಣಿ ಸಂಘರ್ಷ ತಪ್ಪಿಸಿ

Last Updated 6 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ನಾಗರಹೊಳೆ ರಕ್ಷಿತಾರಣ್ಯದಲ್ಲಿ ಹುಲಿ ಯೋಜನೆಯ ನಿರ್ದೇಶಕರಾಗಿದ್ದ ಅರಣ್ಯ ಸಂರಕ್ಷಣಾಧಿಕಾರಿ ಮಣಿಕಂಠನ್, ಡಿ.ಬಿ.ಕುಪ್ಪೆ ಅರಣ್ಯ ವಲಯದ ಕುತ್ತುನಾಳಕೊಲ್ಲಿಪ್ರದೇಶದಲ್ಲಿ ಕಾಡಾನೆ ದಾಳಿಯಿಂದ ಮೃತಪಟ್ಟಿರುವುದು ದುರದೃಷ್ಟಕರ. ಕಾಳ್ಗಿಚ್ಚು ನಂದಿಸಲು ಸಿಬ್ಬಂದಿ ನಡೆಸುತ್ತಿದ್ದ ‘ಫೈರ್‌ಲೈನ್‌’ ಕಾಮಗಾರಿಯ ಪರಿಶೀಲನೆಗಾಗಿ ಅವರು ಕಾಲುದಾರಿಯಲ್ಲಿ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಸದಾ ಕ್ಷೇತ್ರಕಾರ್ಯದಲ್ಲಿ ತೊಡಗಿರುತ್ತಿದ್ದ ಇಂತಹ ಅಧಿಕಾರಿಯ ಸಾವು ನಿಜಕ್ಕೂ ಅರಣ್ಯ ಇಲಾಖೆಗೆ ಒಂದು ದೊಡ್ಡ ನಷ್ಟವೇ. ದಟ್ಟ ಅರಣ್ಯದಲ್ಲಿ ಹೀಗೆ ಕಾರ್ಯಾಚರಣೆಗೆ ಹೋಗುವ ಸಿಬ್ಬಂದಿಗೆ ಸಂಘರ್ಷದ ಸನ್ನಿವೇಶವನ್ನು ನಿಭಾಯಿಸಲು ಸೂಕ್ತ ತರಬೇತಿ ನೀಡಿರಬೇಕು, ಆತ್ಮರಕ್ಷಣೆಗಾಗಿ ಬಂದೂಕನ್ನೂ ಜತೆಗೆ ಒಯ್ಯುವಂತೆ ಸೂಚಿಸಿರಬೇಕು ಎನ್ನುತ್ತದೆ ನಿಯಮಾವಳಿ. ಮಣಿಕಂಠನ್‌ ಅವರು ತರಬೇತಿ ಹೊಂದಿದ್ದ ಅಧಿಕಾರಿಯಾದರೂ ಕಾಲುದಾರಿಯಲ್ಲಿ ಏಕಾಏಕಿ ಮೇಲೆರಗಿದ ಒಂಟಿ ಸಲಗದಿಂದ ತಪ್ಪಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ಬಂದೂಕನ್ನು ಜತೆಯಲ್ಲಿ ಒಯ್ದಿದ್ದರೆ ಗಾಳಿಯಲ್ಲಿ ಗುಂಡು ಹಾರಿಸಿ, ಆ ಸಲಗವನ್ನು ಹಿಮ್ಮೆಟ್ಟಿಸಬಹುದಿತ್ತೇನೋ. ಈ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅವರ ತಂಡ ಕಾಡಿಗೆ ತೆರಳುವಾಗ ನಿರ್ಲಕ್ಷ್ಯ ತೋರದೆ ಸುರಕ್ಷತಾ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದರೆ ಅಪಾಯದಿಂದ ತಪ್ಪಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿರುತ್ತಿದ್ದವು.

ಮಾನವ–ಪ್ರಾಣಿ ಸಂಘರ್ಷದ ಪ್ರಶ್ನೆ ಇತ್ತೀಚಿನ ದಿನಗಳಲ್ಲಿ ಬಹುವಾಗಿ ಚರ್ಚೆಯಾಗುತ್ತಿದೆ. ರಾಜ್ಯದ ಮಟ್ಟಿಗೆ ಅದು ಬಹುಮಟ್ಟಿಗೆ ಮಾನವ–ಆನೆ ಸಂಘರ್ಷದ ಪ್ರಶ್ನೆಯೇ ಆಗಿದೆ. ಒಂದೆಡೆ ಆನೆಗಳ ಸಂತತಿ ಹೆಚ್ಚಿದೆ. ಇನ್ನೊಂದೆಡೆ ಗುಣಮಟ್ಟದ ಕಾಡಿನ ಪ್ರಮಾಣ ಕಡಿಮೆ ಆಗಿದೆ. ಹೀಗಾಗಿ ಆನೆಗಳ ಗೃಹ ವಲಯಗಳು ಒತ್ತಡದಲ್ಲಿ ಸಿಲುಕಿವೆ. ಆಹಾರ ಹಾಗೂ ನೀರಿನ ಅಭಾವ ಎದುರಾದಾಗ, ಪ್ರತಿಕೂಲ ಹವಾಮಾನ ಕಾಡಿದಾಗ, ಋತುಮಾನ ಬದಲಾದಾಗ, ಅದಕ್ಕೆ ಅನುಗುಣವಾಗಿ ಈ ಆನೆಗಳು, ತಮ್ಮ ಗೃಹ ವಲಯದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ನಿರ್ದಿಷ್ಟ ಪಥದಲ್ಲಿ ಚಲಿಸುತ್ತವೆ. ಅದೇ ‘ಆನೆ ಮೊಗಸಾಲೆ’ ಅಥವಾ ‘ಆನೆಪಥ’. ಆದರೆ, ಇತ್ತೀಚಿನ ವರ್ಷಗಳಲ್ಲಿ ಬಹುತೇಕ ಆನೆಪಥಗಳು ತುಂಡರಿಸಿಹೋಗಿವೆ. ಗಜಸಂತತಿ ತುಂಬಾ ಹೆಚ್ಚಾಗಿರುವ ಕರಡಿಕಲ್‌–ಮಹಾದೇಶ್ವರ, ಎಡೆಯರಹಳ್ಳಿ–ದೊಡ್ಡಸಂಪಿಗೆ, ಚಾಮರಾಜನಗರ–ತಲಮಲೈ, ಚಾಮರಾಜನಗರ–ಮೂಡಳ್ಳಿ ಪ್ರದೇಶಗಳಲ್ಲಿ ಎಷ್ಟೋ ಸಲ ಆನೆಗಳ ಹಿಂಡು ರಸ್ತೆ ದಾಟಲು ದಿನಗಟ್ಟಲೆ ಒದ್ದಾಡಿ, ರೋಸಿಹೋದ ಪ್ರಕರಣಗಳೂ ವರದಿಯಾಗಿವೆ. ಅರಣ್ಯದ ಒತ್ತುವರಿ, ತುಂಡಾದ ಮೊಗಸಾಲೆ, ಕಾಡಿನಲ್ಲಿ ಹೆಚ್ಚುತ್ತಿರುವ ಕೃಷಿಭೂಮಿಯ ಪ್ರಮಾಣ, ಅಕ್ರಮ ಗಣಿಗಾರಿಕೆ– ಇಂತಹ ಕಾರಣಗಳಿಂದ ಮಾನವನ ನೆಲೆ ಮತ್ತು ಕಾಡಿನ ನಡುವಣ ನಿಶ್ಚಿತ ಗಡಿ ಮಸುಕಾಗಿದ್ದು ಮಾನವ–ಆನೆ ಸಂಘರ್ಷ ಹೆಚ್ಚಾಗಲು ದಾರಿ ತೆಗೆದಿದೆ. ಈ ಸಂಘರ್ಷವನ್ನು ತಪ್ಪಿಸಲು ಗಜಪಥವನ್ನೂ ರಕ್ಷಿತಾರಣ್ಯ ಎಂದು ಘೋಷಿಸಿ, ಅದನ್ನು ಸಂರಕ್ಷಿಸಬೇಕು. ಅರಣ್ಯದಲ್ಲಿ ನಡೆಸುವ ಅಭಿವೃದ್ಧಿ ಚಟುವಟಿಕೆಗಳ ಮೇಲೆ ಸಂಪೂರ್ಣವಾಗಿ ನಿಯಂತ್ರಣ ವಿಧಿಸಬೇಕು. ಇದರೊಟ್ಟಿಗೆ ಸಿಬ್ಬಂದಿ ಸುರಕ್ಷತೆಗೂ ಒತ್ತು ನೀಡಬೇಕು. ಕಾಡಿನ ಹಾದಿಯ ಪಕ್ಕದಲ್ಲೇ ಬೆಳೆದಿರುವ ಲಂಟಾನ ಪೊದೆ, ಕ್ಷೇತ್ರಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿಗೆ ಕಂಟಕ ಎನ್ನುವುದು ಹಲವು ಅರಣ್ಯ ಸಂರಕ್ಷಣಾಧಿಕಾರಿಗಳ ಒಕ್ಕೊರಲ ಅಭಿಪ್ರಾಯವಾಗಿದೆ. ಗೋಡೆಯಂತೆ ಬೆಳೆದು ನಿಲ್ಲುವ ಈ ಪೊದೆ, ಪಕ್ಕದಲ್ಲೇ ಇರುವ ಅಪಾಯಕಾರಿ ಪ್ರಾಣಿಗಳನ್ನು ಮರೆಮಾಚಿಸುತ್ತದೆ. ಅಲ್ಲದೆ, ಅದು ಹುಲ್ಲನ್ನು ಸಹ ಬೆಳೆಯಲು ಬಿಡುವುದಿಲ್ಲ ಎನ್ನುವ ವಾದ ಕೇಳಿಬಂದಿದೆ. ಕಾಡಿನ ಹಾದಿಯ ಎರಡೂ ಬದಿಗಳಲ್ಲಿ 50 ಮೀಟರ್‌ನಷ್ಟು ದೂರದ ಲಂಟಾನ ಪೊದೆಯನ್ನು ತೆಗೆದುಹಾಕಬೇಕು ಎಂಬ ಅವರ ಸಲಹೆ ಪರಿಶೀಲನೆಗೆ ಯೋಗ್ಯ. ಕಾಡುಪ್ರಾಣಿಗಳನ್ನು ಬೆದರಿಸಿ ಓಡಿಸಲು ಪಂಪ್‌ ಆ್ಯಕ್ಷನ್‌ ರೈಫಲ್‌ಗಳಂತಹ ಸಾಧನಗಳನ್ನು ಅರಣ್ಯದಲ್ಲಿ ಕಾರ್ಯನಿರ್ವಹಿಸುವ ಎಲ್ಲ ಸಿಬ್ಬಂದಿಗೂ ಒದಗಿಸಬೇಕು. ಕಾಡಿನ ಈ ಸಂಘರ್ಷ ತಪ್ಪಿಸುವ ಹಾದಿಯಲ್ಲಿ ಗಿರಿಜನರ ಸಾಂಪ್ರದಾಯಿಕ ಜ್ಞಾನದ ಜತೆಗೆ ಆಧುನಿಕ ತಂತ್ರಜ್ಞಾನವನ್ನೂ ಸಮರ್ಥವಾಗಿ ಬಳಸಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT