ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನ ಜಾಗೃತಿಗೆ ಮಾದರಿ ಮತಗಟ್ಟೆ ಕೇಂದ್ರ ಆರಂಭ

ಅಣಕು ಮತದಾನ ಮಾಡಿದ ಪತ್ರಕರ್ತರು
Last Updated 7 ಫೆಬ್ರುವರಿ 2023, 3:05 IST
ಅಕ್ಷರ ಗಾತ್ರ

ದಾವಣಗೆರೆ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ದಾವಣಗೆರೆ ಉತ್ತರ (ಮತಗಟ್ಟೆ ಸಂಖ್ಯೆ 106) ಹಾಗೂ ದಾವಣಗೆರೆ ದಕ್ಷಿಣ (ಮತಗಟ್ಟೆ ಸಂಖ್ಯೆ 107) ವಿದ್ಯುನ್ಮಾನ ಮತಯಂತ್ರ ಬಳಕೆ ಹಾಗೂ ವಿ.ವಿ. ಪ್ಯಾಟ್‌ಗಳ ಬಗ್ಗೆ ಅರಿವು ಮೂಡಿಸಲು ಮಾದರಿ ಮತಗಟ್ಟೆಯನ್ನು (ಪ್ರಾತ್ಯಕ್ಷಿಕ ಕೇಂದ್ರ) ಆರಂಭಿಸಲಾಗಿದೆ.

ಇಲ್ಲಿನ ಮಹಾನಗರಪಾಲಿಕೆ ಆವರಣದ ಆರೋಗ್ಯ ಶಾಖೆಯ ಹಿಂದೆ ಇರುವ ನೌಕರರ ಸಂಘದ ಕಟ್ಟಡದಲ್ಲಿ ಪ್ರಾತ್ಯಕ್ಷಿಕ ಕೇಂದ್ರವನ್ನು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಸೋಮವಾರ ಉದ್ಘಾಟಿಸಿದರು. ಆರಂಭದಲ್ಲಿ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಪತ್ರಕರ್ತರು ಅಣಕು ಮತದಾನ ಮಾಡಿದರು.

‘ನಗರದಲ್ಲಿ ಎಲ್ಲರೂ ಮತದಾನ ಮಾಡಬೇಕು ಎನ್ನುವ ಉದ್ದೇಶದಿಂದ ಈ ಪ್ರಾತ್ಯಕ್ಷಿಕೆ ಕೇಂದ್ರಗಳನ್ನು ಆರಂಭಿಸಿದ್ದು, ಫೆ.7ರಿಂದ 10 ದಿನಗಳ ಕಾಲ ಮತದಾನ ಮಾಡುವ ಬಗ್ಗೆ ತರಬೇತಿ ನೀಡಲಾಗುವುದು’ ಎಂದು ಮಹಾನಗರಪಾಲಿಕೆ ಆಯುಕ್ತೆ ರೇಣುಕಾ ಪತ್ರಕರ್ತರಿಗೆ ಮಾಹಿತಿ ನೀಡಿದರು.

‘ನಾಗರಿಕರು, ರಾಜಕೀಯ ಪಕ್ಷಗಳ ಮುಖಂಡರು, ಮಹಾನಗರ ಪಾಲಿಕೆ ಸಿಬ್ಬಂದಿ, ವಕೀಲರು ಹಾಗೂ ಮಾಧ್ಯಮದ ಸಿಬ್ಬಂದಿ, ಸಂಘ–ಸಂಸ್ಥೆಗಳಿಗೆ ತರಬೇತಿ ನೀಡುವ ಉದ್ದೇಶದಿಂದ ಮಾದರಿ ಮತಗಟ್ಟೆ ಕೇಂದ್ರಗಳನ್ನು ಆರಂಭಿಸಿದ್ದು, ಚುನಾವಣಾಧಿಕಾರಿಗಳು, ಬೂತ್‌ ಏಜೆಂಟರು ಸೇರಿದಂತೆ ಮತಗಟ್ಟೆಯನ್ನು ಸಿದ್ಧಪಡಿಸಿದ್ದು, ನಗರಪಾಲಿಕೆಗೆ ಬರುವ ನಾಗರಿಕರು ಅಣಕು ಮತದಾನ ಮಾಡಬಹುದು’ ಎಂದು ಹೇಳಿದರು.

‘ದಾವಣಗೆರೆ ಉತ್ತರ ಕ್ಷೇತ್ರಕ್ಕೆ 24 ಹಾಗೂ ದಕ್ಷಿಣ ಕ್ಷೇತ್ರಕ್ಕೆ 21 ಅಣಕು ಮತ ಯಂತ್ರಗಳನ್ನು ನೀಡಿದ್ದು, ಅವುಗಳನ್ನು ಸ್ಟ್ರಾಂಗ್ ರೂಂನಲ್ಲಿ ಇಡಲಾಗುವುದು. ಸಿಸಿಟಿವಿ ಕ್ಯಾಮೆರಾ ಅಳವಡಿಸುವುದರ ಜೊತೆಗೆ ಪೊಲೀಸ್ ಸಿಬ್ಬಂದಿ ಭದ್ರತೆ ಕಲ್ಪಿಸಲಾಗುವುದು. ಮಾಸ್ಟರ್‌ ಟ್ರೈನರ್‌ಗಳು ಮತದಾನ ಮಾಡಿದವರ ವಿವರಗಳನ್ನು ದಾಖಲು ಮಾಡಿಕೊಳ್ಳಲಿದ್ದು, ಸಂಜೆ 5.30ಗೆ ಸ್ಟ್ರಾಂಗ್ ರೂಂನ ನೋಡಲ್ ಅಧಿಕಾರಿಗಳಿಗೆ ನೀಡಲಿದ್ದಾರೆ. ನೋಡೆಲ್ ಅಧಿಕಾರಿಗಳು ಜಿಲ್ಲಾ ಚುನಾವಣಾಧಿಕಾರಿಗಳಿಗೆ ನೀಡಲಿದ್ದು, ಜಿಲ್ಲಾಧಿಕಾರಿಗಳು ರಾಜ್ಯ ಚುನಾವಣಾಧಿಕಾರಿಗಳಿಗೆ ಮಾಹಿತಿಯನ್ನು ರವಾನಿಸಲಿದ್ದಾರೆ’ ಎಂದು ಹೇಳಿದರು.

‘ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ 136, ದಕ್ಷಿಣ ಕ್ಷೇತ್ರದಲ್ಲಿ 132 ಮತಗಟ್ಟೆ ಕೇಂದ್ರಗಳಲ್ಲಿ ಮತದಾನದ ಬಗ್ಗೆ ತರಬೇತಿ ನೀಡಲಿದ್ದು, ಒಂದು ದಿನಕ್ಕೆ 4ರಿಂದ 5 ಶಾಲೆಗಳಲ್ಲಿ ತರಬೇತಿ ನೀಡಲಾಗುವುದು. ಮತದಾನದ ಬಗ್ಗೆ ಒಂದು ದಿವಸ ಮುಂಚಿತವಾಗಿ ಧ್ವನಿವರ್ಧಕಗಳ ಮೂಲಕ ಪ್ರಚಾರ ಮಾಡಲಾಗುವುದು’ ಎಂದರು.

ಕೌನ್ಸಿಲ್ ಕಾರ್ಯದರ್ಶಿ ಕೆ.ಜಯಣ್ಣ, ಪಿಆರ್‌ಒ ಸುನಿಲ್, ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಗೋವಿಂದರಾಜು ಇದ್ದರು.

***

ಮೇಯರ್ ಚುನಾವಣೆ ಮತದಾರರ ಪಟ್ಟಿಯಲ್ಲಿ ವಿಧಾನ ಪರಿಷತ್ ಸದಸ್ಯರ ಹೆಸರನ್ನು ಸೇರ್ಪಡೆ ಸಂಬಂಧ ನಿಯಮದ ಪ್ರಕಾರ ಕ್ರಮ ಕೈಗೊಳ್ಳುತ್ತೇನೆ. ಈ ಮೊದಲು ಏನು ಆಗಿದೆ ಎಂಬುದು ಗೊತ್ತಿಲ್ಲ. ಮೇಯರ್ ಚುನಾವಣಾ ವೇಳಾಪಟ್ಟಿಯೂ ಬಂದಿಲ್ಲ.

- ರೇಣುಕಾ, ಮಹಾನಗರ‍ಪಾಲಿಕೆ ಆಯುಕ್ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT