ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಚೌಕಿದಾರ ಅಲ್ಲ; ಶೋಕಿದಾರ–ಆಂಜನೇಯ ವ್ಯಂಗ್ಯ

ಮೈತ್ರಿಕೂಟದ ಅಭ್ಯರ್ಥಿ ಪ್ರಚಾರ ಸಭೆಯಲ್ಲಿ ಮಾಜಿ ಸಚಿವ
Last Updated 19 ಏಪ್ರಿಲ್ 2019, 19:47 IST
ಅಕ್ಷರ ಗಾತ್ರ

ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ ದೇಶದ ‘ಚೌಕಿದಾರ’ ಅಲ್ಲ; ಅವರೊಬ್ಬ ‘ಶೋಕಿದಾರ’ ಎಂದು ಕಾಂಗ್ರೆಸ್‌ನ ಮಾಜಿ ಸಚಿವ ಎಚ್‌. ಆಂಜನೇಯ ವ್ಯಂಗ್ಯವಾಡಿದರು.

ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿ ಎಚ್‌.ಬಿ. ಮಂಜಪ್ಪ ಪರ ಶುಕ್ರವಾರ ನಗರದಲ್ಲಿ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಮೋದಿ ಹಾಸ್ಯ ನಟನಂತೆ ಅಭಿನಯಿಸುತ್ತ ತಮ್ಮನ್ನು ತಾವೇ ಚೌಕಿದಾರ ಎಂದು ಕರೆದುಕೊಳ್ಳುತ್ತಾರೆ. ಆದರೆ, ರಫೇಲ್‌ ಕಡತ ಕಳವಾದಾಗ ಇವರು ಏನು ಮಾಡುತ್ತಿದ್ದರು? ಅವರು ದೇಶ ಕಾಯಲು ನಾಲಾಯಕ್‌ ಆಗಿದ್ದಾರೆ. ಅವರೇನಿದ್ದರೂ ಮೋಸ ಮಾಡುವವರ ಹಿತ ಕಾಯುತ್ತಿದ್ದಾರೆ. ಅನ್ನ ನೀಡುವ ರೈತರನ್ನು ಕಾಪಾಡಲು ಇವರಿಂದ ಸಾಧ್ಯವಾಗುತ್ತಿಲ್ಲ. ದಿನಕ್ಕೆ ನಾಲ್ಕು ಸೂಟ್‌ ಬದಲಾಯಿಸುವ ಮೋದಿ ಒಬ್ಬ ಶೋಕಿದಾರರಾಗಿದ್ದಾರೆ. ಈ ಶೋಕಿದಾರನ ಆಡಳಿತ ಅಂತ್ಯಗೊಳಿಸಬೇಕು’ ಎಂದು ವಾಗ್ದಾಳಿ ನಡೆಸಿದರು.

‘ಮಂಡಲ ಪಂಚಾಯಿತಿ ಸದಸ್ಯೆಯಂತಿರುವ ನಿರ್ಮಲಾ ಸೀತಾರಾಮನ್‌ ಯಾರಿಗೂ ಗೊತ್ತಿರಲಿಲ್ಲ. ಈ ಹಿಂದೆ ಪ್ರದಾನಿ ಆಗುವ ಯೋಗ್ಯತೆ ಇರುವರು ರಕ್ಷಣಾ ಸಚಿವರಾಗುತ್ತಿದ್ದರು. ಆದರೆ, ಮೋದಿ ರಾಜ್ಯ ಸಭೆ ಸದಸ್ಯೆಯನ್ನು ರಕ್ಷಣಾ ಸಚಿವರನ್ನಾಗಿ ಮಾಡಿದರು. ಸರ್ವಾಧಿಕಾರಿ ಕೈಯಲ್ಲಿ ದೇಶದ ಆಡಳಿತ ಸಿಕ್ಕಿರುವುದರಿಂದ ಹೀಗಾಗುತ್ತಿದೆ’ ಎಂದು ಆರೋಪಿಸಿದರು.

‘ಮೋದಿ ಅವರು ಪ್ರಚಾರಕ್ಕೆ ಬಂದಾಗ ತಂದಿದ್ದ ಬಾಕ್ಸ್‌ ತಪಾಸಣೆ ನಡೆಸಿದ ಐಎಎಸ್‌ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಇವರಿಗೆ ಕಾನೂನಿನ ಬಗ್ಗೆ ಗೌರವ ಇಲ್ಲ’ ಎಂದು ವಾಗ್ದಾಳಿ ನಡೆಸಿದರು.

‘ರಾಜ್ಯದ ಕಾಂಗ್ರೆಸ್‌–ಜೆಡಿಎಸ್‌ ಸಮ್ಮಿಶ್ರ ಸರ್ಕಾರವನ್ನು ಅನೈತಿಕ ಮೈತ್ರಿ ಎಂದು ಮೋದಿ ಟೀಕಿಸುತ್ತಿದ್ದಾರೆ. ಹಾಗಿದ್ದರೆ ಬಿಹಾರದಲ್ಲಿ ಬಿಜೆಪಿ ಮಾಡಿಕೊಂಡಿರುವುದು ಯಾವ ಮೈತ್ರಿ’ ಎಂದು ಪ್ರಶ್ನಿಸಿದರು.

‘ಕಾಂಗ್ರೆಸ್‌ ಎಲ್ಲಾ ಜಾತಿ, ಸಮುದಾಯದ ಅಭಿವೃದ್ಧಿಯನ್ನು ಒಳಗೊಂಡಿದೆ. ಕಾರ್ಯಕರ್ತರು ಮನೆ ಮನೆಗೆ ತೆರಳಿ ಕಾಂಗ್ರೆಸ್‌ ಸರ್ಕಾರದ ಸಾಧನೆಗಳನ್ನು ಮನವರಿಕೆ ಮಾಡಿಕೊಟ್ಟರೆ ಮಂಜಪ್ಪ ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲುವ ಅವಕಾಶವಿದೆ. ಶಾಮನೂರು ಶಿವಶಂಕರಪ್ಪ ಹಾಗೂ ಎಸ್‌.ಎಸ್‌. ಮಲ್ಲಿಕಾರ್ಜುನ ಅವರ ಜೊತೆಗೆ ಎಲ್ಲರೂ ಕೈಜೋಡಿಸಿದರೆ ಗೆಲುವು ಕಟ್ಟಿಟ್ಟ ಬುತ್ತಿ’ ಎಂದು ಆಂಜನೇಯ ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಶಾಸಕ ಎಚ್‌.ಎಸ್‌. ಶಿವಶಂಕರ್‌, ‘ಬಿಜೆಪಿಯವರು ಭ್ರಷ್ಟಾಚಾರದ ಹಣದಿಂದ ಎಸ್‌.ಸಿ–ಎಸ್‌.ಟಿ ಜನರ ಮತಗಳನ್ನು ಖರೀದಿಸಬಹುದು ಎಂದುಕೊಂಡಿದ್ದಾರೆ. ಆದರೆ, ನೀವು ಸ್ವಾಭಿಮಾನಿಗಳಾಗಿದ್ದೀರಿ. ಅವರು ಹಣ ನೀಡಿದರೆ ಪಡೆದುಕೊಳ್ಳಿ. ಆದರೆ, ಬಿಜೆಪಿ ನೋಟು, ಮಂಜಪ್ಪಗೆ ವೋಟು ಆಗಲಿ’ ಎಂದು ಮಾರ್ಮಿಕವಾಗಿ ನುಡಿದರು.

ಚಿತ್ರದುರ್ಗದ ಕಾಂಗ್ರೆಸ್‌ ಮುಖಂಡ ಎಂ. ಜಯಪ್ಪ, ‘ಕೋಮುವಾದಿ ಬಿಜೆಪಿ ಸರ್ಕಾರವು ಬಡವರ, ದಲಿತರ, ಅಲ್ಪಸಂಖ್ಯಾತರ ಪರ ಯೋಜನೆಗಳನ್ನು ರೂಪಿಸಿಲ್ಲ. ಅದು ಶ್ರೀಮಂತರ ಪರ ಯೋಜನೆಗಳನ್ನು ರೂಪಿಸಿದೆ. ದೇಶದ ಆಡಳಿತವನ್ನು ಕೋಮುವಾದಿಗಳ ಕೈಗೆ ನೀಡಿದರೆ ಜಾತಿ–ಜಾತಿಗಳ ನಡುವೆ ಕಿತ್ತಾಡುವಂತೆ ಮಾಡುತ್ತಾರೆ. ದೇಶಕ್ಕೆ ಜಾತ್ಯತೀತ ಮೌಲ್ಯದ ಪಕ್ಷ ಅಗತ್ಯವಾಗಿದೆ. ಈ ಚುನಾವಣೆಯು ಮೇಲ್ವರ್ಗದವರ ಮತ್ತು ಶೋಷಿತರ, ಕೆಳವರ್ಗದವರ ನಡುವಿನ ಸಂಘರ್ಷವಾಗಿದೆ’ ಎಂದು ಪ್ರತಿಪಾದಿಸಿದರು.

ಜೆಡಿಎಸ್ ಕಾರ್ಯಾಧ್ಯಕ್ಷ ಗಣೇಶ್‌ ದಾಸಕರಿಯಪ್ಪ, ಅಧ್ಯಕ್ಷ ಬಿ. ಚಿದಾನಂದಪ್ಪ, ಕಾಂಗ್ರೆಸ್‌ ವೀಕ್ಷಕಿ ಬಲ್ಕಿಶ್‌ ಬಾನು, ಬೆಳೆಗೆರೆ ಶಿವಣ್ಣ, ಬಿ.ಎಂ. ಹನುಮಂತಪ್ಪ, ಎ.ಕೆ. ಹನುಮಂತಪ್ಪ, ಎಂ. ಹಾಲೇಶ್‌ ಅವರೂ ಇದ್ದರು.

ಒಗ್ಗಟ್ಟಿನಿಂದ ಶ್ರಮಿಸಿದರೆ ಗೆಲುವು: ಎಸ್‌ಎಸ್‌ಎಂ

‘ಸಾಮಾನ್ಯ ಕಾರ್ಯಕರ್ತ ಮಂಜಪ್ಪಗೆ ಪಕ್ಷ ಅವಕಾಶ ಮಾಡಿಕೊಟ್ಟಿದೆ. ಆತ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾನೆ ಎಂಬ ವಿಶ್ವಾಸ ಇದೆ. ಹೀಗಾಗಿ ಒಗ್ಗಟ್ಟಿನಿಂದ ಶ್ರಮಿಸಿದರೆ ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಲು ಸಾಧ್ಯವಿದೆ’ ಎಂದು ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು.

ಸಭೆಯನ್ನು ಉದ್ಘಾಟಿಸಿದ ಅವರು, ‘ನಮ್ಮದು ಬಡವರ ಪಕ್ಷ. ಆದರೆ, ನಮಗೆ ಜನ ಬೆಂಬಲ ಇದೆ. ಈ ಚುನಾವಣೆ ಜನ ಬಲ ಮತ್ತು ಹಣ ಬಲದ ನಡುವೆ ನಡೆಯುತ್ತಿದೆ. ಯಾವುದೇ ಆಮಿಷಗಳಿಗೆ ಬಲಿಯಾಗದೇ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮಿಸಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT