ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ, ಹೆಂಡ ರಾಜಕಾರಣದ ರಾಸಾಯನಿಕಗಳು

ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಮಹಿಮ ಪಟೇಲ್‌ ವಿಷಾದ
Last Updated 5 ಡಿಸೆಂಬರ್ 2022, 4:48 IST
ಅಕ್ಷರ ಗಾತ್ರ

ದಾವಣಗೆರೆ: ‘ಸಾವಯವ, ನೈಸರ್ಗಿಕ ಕೃಷಿಯಂತೆ ರಾಜಕಾರಣದಲ್ಲೂ ಸಾವಯವ ಹಾಗೂ ನೈಸರ್ಗಿಕ ರಾಜಕಾರಣವಿದೆ. ಹಣ, ಹೆಂಡ, ಧರ್ಮ ಇವು ರಾಜಕಾರಣದಲ್ಲಿ ರಾಸಾಯನಿಕಗಳು ಇದ್ದಂತೆ. ಇವುಗಳು ಸಮಾಜದ ಮನಸ್ಸನ್ನು ಕೆಡಿಸುವ ಕೆಲಸ ಮಾಡುತ್ತಿವೆ’ ಎಂದು ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಮಹಿಮ ಪಟೇಲ್‌ ವಿಷಾದ ವ್ಯಕ್ತಪಡಿಸಿದರು.

ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆವತಿಯಿಂದ ದಾವಣಗೆರೆ ಜಿಲ್ಲೆ ರಜತ ಸಂಭ್ರಮ ಹಾಗೂ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇಂದಿನ ಸರ್ಕಾರಗಳು ಜನರಿಗೆ ಹಣ ನೀಡುವ ನೆಪದಲ್ಲಿ ಅವರನ್ನು ಭಿಕ್ಷುಕರನ್ನಾಗಿ ಮಾಡಲು ಹೊರಟಿವೆ. ಜನರಿಗೆ ಏನು ಬೇಕು ಎನ್ನುವುದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಜನರು ಹಣ ಕೇಳುತ್ತಾರೆ ಎಂದು ಕೊಟ್ಟು ಅವರನ್ನು ಬೇಡುವ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ. ಆದರೆ, ಸರ್ಕಾರ ಜನರ ಪ್ರತಿಭೆಯನ್ನು ಗುರುತಿಸಿ ಅವರನ್ನು ಮೇಲೆತ್ತಲು ಪೂರಕ ವಾತಾವರಣವನ್ನು ನಿರ್ಮಿಸಬೇಕು. ಈ ನಿಟ್ಟಿನಲ್ಲಿ
ನಾನು ರಾಜಕಾರಣದಲ್ಲಿ ಇದ್ದೇನೆ. ಆದರೆ ಜನ ನನ್ನನ್ನು ರಾಜಕಾರಣಿ ಎಂದು ಒಪ್ಪಲು ಸಿದ್ದರಿಲ್ಲ’ ಎಂದು ಹೇಳಿದರು.

‘ಇಂದಿನ ಎಲ್ಲ ರಾಜಕೀಯ ಪಕ್ಷಗಳ ವರಿಷ್ಠರನ್ನು ಭೇಟಿ ಮಾಡಿದ್ದೇನೆ. ಆದರೆ ಅವರು ಯಾರೂ ಭವಿಷ್ಯದ ಬಗ್ಗೆ ಮಾತನಾಡುತ್ತಿಲ್ಲ. ನಮ್ಮ ಕನಸಿನ ದಾವಣಗೆರೆ ಹೇಗೆ ಇರಬೇಕು ಎಂಬುದರ ಬಗ್ಗೆ ಚಿಂತೆ ಮಾಡಬೇಕು. ಕಲಾವಿದರು, ಸಾಹಿತಿಗಳು, ಕವಿಗಳ ಬಗ್ಗೆ ಗೌರವ ಇಟ್ಟುಕೊಂಡರೆ ಹೃದಯವಂತಿಕೆ ಜಾಸ್ತಿಯಾಗುತ್ತದೆ. ಕಲೆ, ಸಂಸ್ಕೃತಿ, ಸಾವಯವ ರಾಜಕಾರಣಕ್ಕೆ ಬೆಲೆ ಕೊಡಬೇಕು’ ಎಂದು ಸಲಹೆ ನೀಡಿದರು.

ಬಳ್ಳಾರಿ ಸಿದ್ದಮ್ಮನವರ ಮೊಮ್ಮಗ ಸಿ.ವಿ. ಶಿವಕುಮಾರ್, ಬ್ರಹ್ಮಪ್ಪ ತವನಪ್ಪ ಮನೆತನದ ಉಷಾ ಜಯಪ್ರಕಾಶ್, ಚಿಗಟೇರಿ ಮನೆತನದ ಜಯಪ್ರಕಾಶ್ ಚಿಗಟೇರಿ, ಸಾಲಿಗ್ರಾಮ ಗಣೇಶ ಶೆಣೈ, ಇತರರು ಪಾಲ್ಗೊಂಡಿದ್ದರು.

ಜಿಲ್ಲಾಡಳಿತದಿಂದ ನಡೆಯದ ಸಮಾರಂಭ: ‘ಕರ್ನಾಟಕದ ಮ್ಯಾಂಚೆಸ್ಟರ್ ಆಗಿದ್ದ ಈ ಜಿಲ್ಲೆ ಈಗ ವಿದ್ಯಾಕಾಶಿಯಾಗಿದೆ. ಆದರೆ, ಜಿಲ್ಲಾಡಳಿತದಿಂದ ಅದ್ಧೂರಿಯಾಗಿ ರಜತ ಮಹೋತ್ಸವ ಸಮಾರಂಭ ಮಾಡದೇ ಇರುವುದು ವಿಪರ್ಯಾಸ’ ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಬಿ.ವಾಮದೇವಪ್ಪ ವಿಷಾದ ವ್ಯಕ್ತಪಡಿಸಿದರು.

ಜಿಲ್ಲಾ ರಜತ ಮಹೋತ್ಸವ ಲಾಂಛನ ಲೋಕಾರ್ಪಣೆ ಹಾಗೂ ಉಚಿತ ವಿವಿಧ ಸ್ಪರ್ಧೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ‘ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ದಾವಣಗೆರೆ ಮುಂದುವರಿದಿದೆ. ಸಾಹಿತ್ಯ, ಸಾಂಸ್ಕೃತಿಕ ಈ ಜಿಲ್ಲೆ ಅಭಿವೃದ್ಧಿ ಸಾಧಿಸಿದ್ದು, ಇಲ್ಲಿನ ಮೆಡಿಕಲ್ ಹಾಗೂ ಎಂಜಿನಿಯರ್ ಕಾಲೇಜುಗಳಿಂದ ಸಾವಿರಾರು ವಿದ್ಯಾರ್ಥಿಗಳು ಹೊರಹೊಮ್ಮುತ್ತಿದ್ದಾರೆ. ಆದರೆ ಬೆಣ್ಣೆದೋಸೆ ನಗರಿಯಾಗಿ ಗುರುತಿಸಿಕೊಂಡಿರುವುದು ವಿಷಾದದ ಸಂಗತಿ’ ಎಂದರು.

‘ಜಿಲ್ಲೆಯ ರಜತ ಸಂಭ್ರಮದ ಬಗ್ಗೆ ಕಸಾಪದಿಂದ ಕಾರ್ಯಕ್ರಮ ರೂಪಿಸಿದರೆ ಇಲಾಖೆ ಸಹಕಾರ ನೀಡಲಿದೆ. ಜಿಲ್ಲಾಧಿಕಾರಿ ಜೊತೆ ಚರ್ಚಿಸಿ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ ಸಲಹೆ ನೀಡಿದರು.

ಚನ್ನಗಿರಿ ಮನೆತನದ ಭರತ್, ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷ ಹೇಮಾ ಶಾಂತಪ್ಪ ಪೂಜಾರಿ, ಚಿತ್ರಕಲಾ ಪ್ರತಿಭೆ ಕುಮಾರ ಎಚ್.ಬಿ. ವಿಷ್ಣುಪ್ರಸಾದ್, ಡಾ. ಸುಶೀಲಮ್ಮ ಹಾಜರಿದ್ದರು.

===

‘ನಿಸ್ವಾರ್ಥ ಸೇವೆ ಸಲ್ಲಿಸುವವನೇ ನಿಜವಾದ ಸುಖಿ’

ಕೋಟಿ ಹಣ ಮಾಡುವುದು ಸುಖವಲ್ಲ. ಜೀವನದಲ್ಲಿ ಸ್ವಾರ್ಥಿಯಾಗಿರದೆ, ನಿಸ್ವಾರ್ಥ ಸೇವೆ ಸಲ್ಲಿಸುವವನೇ ನಿಜವಾದ ಸುಖಿ’ ಎಂದು ‘ಎರಡ್ರುಪಾಯಿ’ ವೈದ್ಯರೆಂದೇ ಪ್ರಸಿದ್ಧಿಯಾಗಿದ್ದ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಬಸವಂತಪ್ಪ ಹೇಳಿದರು.

ನಾನು ವೃತ್ತಿ ಜೀವನದಲ್ಲಿ ಎಂದೂ ಹಣಕ್ಕೆ ಆಸೆ ಪಡಲಿಲ್ಲ. ಕೇವಲ ₹2ಕ್ಕೆ ಚಿಕಿತ್ಸೆ ನೀಡಲಾರಂಭಿಸಿದೆ. ನಂತರ ಚಿಕಿತ್ಸೆ ಪಡೆದವರೇ ₹5 ನೀಡಲು ಆರಂಭಿಸಿದರು. ಈಗ ಕನಿಷ್ಠ
₹ 100ಗಳನ್ನಾದರೂ ಪಡೆಯಿರಿ ಎನ್ನುತ್ತಾರೆ. ಆದರೆ ನಾನು ಕೊಟ್ಟಷ್ಟು ಪಡೆಯುತ್ತಿದ್ದೇನೆ. ಅದಲ್ಲಿಯೇ ನೆಮ್ಮದಿ ಕಾಣುತ್ತಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT