ಶುಕ್ರವಾರ, ನವೆಂಬರ್ 22, 2019
23 °C

ವಿದ್ಯಾರ್ಥಿನಿ ಮೇಲೆ ಮಂಗಗಳ ದಾಳಿ

Published:
Updated:

ಸಿರಿಗೆರೆ: ಸಮೀಪದ ಚಿಕ್ಕೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಹಾಲು ಕುಡಿಯುವ ವೇಳೆಯಲ್ಲಿ 10ಕ್ಕಿಂತ ಹೆಚ್ಚು ಮಂಗಗಳು ದಾಳಿ ಮಾಡಿ, ಒಬ್ಬ ವಿದ್ಯಾರ್ಥಿನಿಯ ಕಾಲಿನ ಮಂಡಿ ಭಾಗ ಪರಚಿ ಗಾಯಮಾಡಿವೆ.

ಎಸ್‌ಡಿಎಂಸಿ ಅಧ್ಯಕ್ಷ ಎನ್‌. ನಾಗರಾಜು ಅವರ ಪುತ್ರಿ, ಎರಡನೇ ತರಗತಿಯ ಎಸ್‌.ಎನ್‌. ಸಿಂಧುಪ್ರಿಯಾ ಗಾಯಗೊಂಡ ವಿದ್ಯಾರ್ಥಿನಿ.

‘ಪ್ರಾರ್ಥನೆ ಮುಗಿಸಿದ ಮಕ್ಕಳಿಗೆ ಹಾಲು ವಿತರಣೆ ಮಾಡುತ್ತಿದ್ದೆವು. ಸಿಂಧುಪ್ರಿಯಾ ಲೋಟದಲ್ಲಿ ಹಾಲು ಹಾಕಿಸಿಕೊಂಡು ಹೋಗುವಾಗ ಕಾಲು ಜಾರಿ ಬಿದ್ದಳು. ಆಗ ಮರದ ಮೇಲಿದ್ದ ಮಂಗಗಳು ಅವಳ ಕೈಯಲ್ಲಿದ್ದ ಲೋಟವನ್ನು ಕಸಿದುಕೊಳ್ಳಲು ಮುಂದಾಗಿವೆ. ವಿದ್ಯಾರ್ಥಿನಿ ಗಟ್ಟಿಯಾಗಿ ಲೋಟ ಹಿಡಿದುಕೊಂಡಿದ್ದಾಳೆ. ಮಂಗಗಳು ಮೊಣಕಾಲಿನಲ್ಲಿ ರಕ್ತ ಬರುವಂತೆ ಉಗುರಿನಿಂದ ಕಿತ್ತಿವೆ. ಅಲ್ಲಿದ್ದ ವಿದ್ಯಾರ್ಥಿಗಳು ಭಯದಿಂದ ಓಡಿದ್ದಾರೆ. ನಂತರ ಗ್ರಾಮಸ್ಥರು, ಶಿಕ್ಷಕರು ಮಂಗಗಳನ್ನು ಓಡಿಸಿದ್ದಾರೆ. ವಿದ್ಯಾರ್ಥಿನಿಗೆ ಸಮೀಪದ ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿದ್ದು, ಮೂರು ಹೊಲಿಗೆ ಹಾಕಲಾಗಿದೆ’ ಎಂದು ಮುಖ್ಯಶಿಕ್ಷಕ ಚಂದ್ರಪ್ಪ ತಿಳಿಸಿದರು.

ಆ. 15ರಂದು ಮಂಗವೊಂದು ಬಾವುಟದ ಹಗ್ಗವನ್ನು ಎಳೆದು ಗಾಂಧೀಜಿ ಮತ್ತು ಇತರೆ ಫೋಟೊ ಮುಂದಿದ್ದ ಹಣ್ಣುಗಳನ್ನು ತೆಗೆದುಕೊಂಡು ಹೋಗಿತ್ತು ಎಂದು ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು ತಿಳಿಸಿದರು.

ಪ್ರತಿಕ್ರಿಯಿಸಿ (+)